ನಾಲ್ಕು ವರ್ಷದ ಹೆತ್ತಮಗನನ್ನೇ ಕೊಚ್ಚಿ ಕೊಲೆಗೈದ ತಾಯಿ.

Promotion

ಮೈಸೂರು,ಜನವರಿ,11,2022(www.justkannada.in): ತನ್ನ ಕರುಳ ಕುಡಿಯನ್ನು ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು  ಕೊಚ್ಚಿ ಕೊಲೆಗೈದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಶ್ರೀನಿವಾಸ್ ತಾಯಿಯಿಂದಲೇ ಭೀಕರ ಕೊಲೆಯಾದ ನಾಲ್ಕು ವರ್ಷದ ಬಾಲಕ. ತಾಯಿ ಭವಾನಿ ಕೊಲೆಗೈದ ಆರೋಪಿ. ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಬೂದನೂರಿನ ಶಂಕರ್ ಮತ್ತು ಭವಾನಿ 5 ವರ್ಷದ ಹಿಂದೆ ಮದುವೆ ಆಗಿದ್ದರು.

ಭವಾನಿ ಮೈಮೇಲೆ ದೇವರು ಬರುತ್ತೆ ಅನ್ನುತ್ತಿದ್ದಳು. ಇತ್ತೀಚೆಗೆ ಮಾನಸಿಕ ಅಸ್ವತ್ಥತೆಯಿಂದ ಬಳಲುತ್ತಿದ್ದ ಭವಾನಿ, ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗು ಸಹಿತ ತವರು ಮನೆ ಸೇರಿದ್ದಳು. ಪತಿ ಶಂಕರ್ ಸಮಾಧಾನಪಡಿಸಿ ವಾಪಸ್ ಕರೆತಂದಿದ್ದರು. ಕೆಲಸದ ನಿಮಿತ್ತ ಪತಿ ಶಂಕರ್ ಹೊರಗಡೆ ಹೋಗಿದ್ದಾಗ  ಭವಾನಿ ತನ್ನ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ಮಚ್ಚಿನಿಂದ ತಲೆಗೆ ನಾಲ್ಕೈದು ಬಾರಿ ಹೊಡೆದಿದ್ದಾಳೆ ಎನ್ನಲಾಗಿದೆ.

ಇನ್ನು ಹಲ್ಲೆಗೊಳಗಾದ ಶ್ರೀನಿವಾಸ್ ನನ್ನು ತಂದೆ ಶಂಕರ್  ಗ್ರಾಮಸ್ಥರ ನೆರವಿನಿಂದ ಎಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ಸೇರಿಸಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶ್ರೀನಿವಾಸ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mother murder-son-mysore