ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ ಜಿಲ್ಲಾಮಟ್ಟದ ಭವನ ನಿರ್ಮಾಣ ಹಾಗೂ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ  ಕ್ರಮ- ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ,ಏಪ್ರಿಲ್,4,2022(www.justkannada.in):  ಸಂವಿಧಾನ ಶಿಲ್ಪಿ, ಭಾರತ  ರತ್ನ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ  ಉಪ ಪ್ರಧಾನಿ, ಹಸಿರು  ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ರಂತಹ ಮಹಾನ್ ನಾಯಕರ ಭವನಗಳನ್ನು ಜಿಲ್ಲಾ ಮಟ್ಟದಲ್ಲಿ ನಿರ್ಮಿಸಿ, ಅವರ ಹೆಸರಿನಲ್ಲಿ ಪ್ರತ್ಯೇಕವಾಗಿ  ಅಧ್ಯಯನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಜೈ ಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ದಲಿತ ಮುಖಂಡರೊಂದಿಗೆ ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನ್ ರಾಮ್ ರವರ ಜಯಂತಿ ಆಚರಣೆ ಕುರಿತು ಜಿಲ್ಲೆಯ ದಲಿತ ಮುಖಂಡರೊಂದಿಗೆ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ರವರ ಹೆಸರಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆಯುವ ಮೂಲಕ ಅವರ ಆದರ್ಶಗಳು,  ಆಶಯಗಳು ಮುಂದಿನ ಪೀಳಿಗೆಯವರಿಗೂ  ಚಿರಸ್ಥಾಯಿಯಾಗಿ ಉಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇವರುಗಳ ಅಧ್ಯಯನ ಮಾಡುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ. ಅವರ ವಿಚಾರಧಾರೆಗಳನ್ನು  ಅಳವಡಿಸಿಕೊಂಡು  ಅವರ  ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಜಿಲ್ಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭವನ ನಿರ್ಮಾಣಕ್ಕಾಗಿ ಕನಿಷ್ಠ ಒಂದು ಎಕರೆ ಜಮೀನನ್ನು ನೀಡಬೇಕೆಂದು ಜಿಲ್ಲಾಡಳಿತಕ್ಕೆ ಈಗಾಗಲೇ ನಿರ್ದೇಶನ  ನೀಡಲಾಗಿದ್ದು, ಅದರಂತೆ  ಏಪ್ರಿಲ್ 14 ರಂದು ನಡೆಯುವ ಅಂಬೇಡ್ಕರ್ ಜಯಂತಿಯಂದು ಜಿಲ್ಲಾಡಳಿತವು ಜಮೀನನ್ನು ಗುರ್ತಿಸಿ  ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುತ್ತದೆ  ಎಂದರು.

ಜೊತೆಗೆ ಡಾ.ಬಾಬು ಜಗಜೀವನ ರಾಮ್ ರವರ ಜಿಲ್ಲಾಮಟ್ಟದ ಭವನ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಸುಮಾರು 3.50 ಕೋಟಿ ರೂಗಳು ಅನುದಾನ ಬಿಡುಗಡೆಗೊಳಿಸಿದೆ. ಏಪ್ರಿಲ್ 05 ರಂದು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಅತ್ಯಂತ ವಿಭಿನ್ನ ಹಾಗೂ ವಿನೂತನವಾಗಿ  ಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ಏಪ್ರಿಲ್ 05 ರಂದು ಡಾ.ಬಾಬು ಜಗಜೀವನ ರಾಮ್ ಜಯಂತಿ

ದಿ. ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಏಪ್ರಿಲ್ 05 ರಂದು ಬೆಳಿಗ್ಗೆ 10:30 ಗಂಟೆಗೆ ನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಂದಿನಂತೆ ಸಾಂಕೇತಿಕವಾಗಿ ಸರಳವಾಗಿ  ಆಚರಿಸಿ, ಏಪ್ರಿಲ್ 14 ರಂದು  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ  ದಿನದಂದು ಎರಡು ಜಯಂತಿಗಳನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ  ಆಚರಿಸಲಾಗುವುದು ಎಂದು ತಿಳಿಸಿದರು.

ಸಭೆಗೆ ಮುನ್ನಾ ಜೈ ಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸ್ವಚ್ಚತೆ  ಕುರಿತು ಸ್ಥಳ ಪರಿಶೀಲನೆ ನಡೆಸಿ ಆವರಣದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು  ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್,  ಜಿಲ್ಲೆಯ ದಲಿತ ಮುಖಂಡರು, ವಿವಿಧ  ಇಲಾಖೆಯ  ಅಧಿಕಾರಿಗಳು  ಮತ್ತು  ಸಿಬ್ಬಂದಿ  ಹಾಜರಿದ್ದರು.

Key words: minister -Sudhakar-Babu jagajeevan ram-Dr.BR Ambedkar