Saturday, August 15, 2026

BDA Apartments

Home Front Page ವಿದ್ಯುತ್ ದರ ಏರಿಕೆ: ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ.

ವಿದ್ಯುತ್ ದರ ಏರಿಕೆ: ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ.

ಬೆಂಗಳೂರು,ಏಪ್ರಿಲ್,4,2022(www.justkannada.in):  ನಿರಂತರವಾಗಿ ಪೆಟ್ರೋಲ್ ಡೀಸೆಲ್ , ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೆ ಇದೀಗ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದ್ದು ಈ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಬೆಲೆ ಏರಿಕೆಯ ಮಾರಣಕಾಂಡ ಮುಂದುವರೆದಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯ ಜತೆ ಜತೆಗೇ, ಈಗ ಕರೆಂಟ್ ಶಾಕ್ ಅನ್ನೂ ಕೊಟ್ಟಿದೆ. ಆತ್ಮಸಾಕ್ಷಿ ಇಲ್ಲದ ಸರಕಾರಕ್ಕೆ ಹಣ ಮಾಡುವುದೇ ದಂಧೆ ಆಗಿಬಿಟ್ಟಿದೆ ಎಂದು ಟೀಕಿಸಿದ್ದಾರೆ.

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಿ, ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಸರಕಾರ, ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಿದೆ. ಗುಣಮಟ್ಟದ ವಿದ್ಯುತ್ ಕೊಡಲು ಕೈಲಾಗದ ಸರಕಾರವು ಬೆಲೆ ಏರಿಕೆಯಲ್ಲಿ ಮಾತ್ರ ರಾಕೆಟ್ ವೇಗದಲ್ಲಿದೆ. ಬಡವರು ಮನೆ ಕಟ್ಟುವ ಹಾಗಿಲ್ಲ, ಹೊಟ್ಟೆ ತುಂಬಾ ಊಟ ಮಾಡುವಂತಿಲ್ಲ, ಬಡವ ಈಗ ಬೆಳಕಲ್ಲಿಯೂ ಇರುವಂತಿಲ್ಲ. ಬಡವರ ವಿರುದ್ಧ ಬಿಜೆಪಿ ಬೆಲೆ ಏರಿಕೆ ಸಮರ ಹೂಡಿದೆಯಾ ಎನ್ನುವ ಅನುಮಾನ ನನ್ನದು ಎಂದು ಹೆಚ್.ಡಿಕೆ ಕಿಡಿಕಾರಿದ್ದಾರೆ.

ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಇಲ್ಲದೆ ಬೀದಿಯಲ್ಲಿದ್ದಾರೆ. ರಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಜನರನ್ನು ಬೆಲೆ ಏರಿಕೆ ಬಿಸಿಗೆ ಸಿಲುಕಿಸಿ ಬೆಲೆ ಬಾರುಕೋಲು ಅಭಿಯಾನವನ್ನು ಬಿಜೆಪಿ ಸರಕಾರ ಶುರು ಮಾಡಿದೆ. ಲೋಡ್ ಶೆಡ್ಡಿಂಗ್ ತೆಗೆದು ಗುಣಮಟ್ಟದ ವಿದ್ಯುತ್ ಪೂರೈಕೆ ಸರಕಾರದ ಕರ್ತವ್ಯ.

ವಿದ್ಯುತ್ ಕೊರತೆಯೇ ಇಲ್ಲ ಎನ್ನುವ ಸರಕಾರ, ಈಗ ದರ ಏರಿಕೆ ಮಾಡಿದ್ದು ಏಕೆ? ಜನರ ಮೇಲೆ ಭಾರ ಹೊರೆಸಿ ವಿದ್ಯುತ್ ಅನ್ನು ಸರಕಾರ ಕಳ್ಳ ಮಾರ್ಗದಲ್ಲಿ ಮಾರಿಕೊಳ್ಳುತ್ತಿದೆಯಾ? ಇಲ್ಲ ಎನ್ನುವುದಾದರೆ ದರ  ಏರಿಕೆ ಹಿಂಪಡೆಯಲಿ ಎಂದು ಕುಟುಕಿದ್ದಾರೆ.

Key words: Former CM -HD Kumaraswamy- outrage -against -govt.