ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಸಿಎಂ ಬಿಎಸ್ ವೈಗೆ ಸಚಿವ ಕೆಸಿ ನಾರಾಯಣಗೌಡ  ಮನವಿ..

Promotion

ಬೆಂಗಳೂರು,ಆಗಸ್ಟ್,25,2020(www.justkannada.in):  ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಬೇಕೆ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಂದು ತೋಟಗಾರಿಕೆ ಇಲಾಖೆ ಸಚಿವ ಡಾ| ನಾರಾಯಣ ಗೌಡ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ, ಅಭಿಪ್ರಾಯ ಪಡೆದುಕೊಂಡಿದ್ದಾರೆ.jk-logo-justkannada-logo

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸಹ ಕಬ್ಬನ್ ಉದ್ಯಾನವನದಲ್ಲಿ ವಾಹನ ಸಂಚಾರ ನಿಷೇಧಿಸಬೇಕೆಂಬ ನಿರ್ಣಯವನ್ನ ಜೂನ್ 30 ರಂದು ನಡೆದ ಸಭೆಯಲ್ಲಿ ತೆಗೆದುಕೊಂಡಿದೆ. ಜೂನ್ 3 ರಂದು ನಡೆದ ಭರವಸೆಗಳ ಸಮಿತಿ ಸಭೆಯಲ್ಲೂ ವಾಹನ ಸಂಚಾರ ನಿಷೇಧಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಚಿವ ಡಾ| ನಾರಾಯಣ ಗೌಡ ಅವರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಾಹನ ಸಂಚಾರ ನಿಷೇಧಿಸುವ ನಿರ್ಣಯ ತೆಗೆದುಕೊಂಡು ಅಂತಿಮ ತೀರ್ಮಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ರಾಜಧಾನಿಯ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಎಂದು ಪರಿಸರ ಪ್ರೇಮಿಗಳಿಂದ ಒತ್ತಾಯ ಬಂದಿತ್ತು. ಅಲ್ಲದೆ ಕಬ್ಬನ್ ಉದ್ಯಾನವನ ಕರ್ನಾಟಕ ಸರ್ಕಾರಿ ಉದೈಆನವನಗಳ (ಸಂರಕ್ಷಿಣೆ) ಅಧಿನಿಯಮ 1975 ರ ವ್ಯಾಪ್ತಿಗೆ ಒಳಪಟ್ಟಿದೆ. ಹೀಗಾಗಿ ವಾಹನ ಸಂಚಾರ ನಿಷೇಧಿಸುವುದು ಅತಿ ಅವಶ್ಯವಾಗಿದೆ. ಈ ಹಿಂದೆ ಪ್ರತಿ ಭಾನುವಾರ, ಸರ್ಕಾರಿ ರಜಾದಿನಗಳಂದು ಕಬ್ಬನ್ ಪಾರ್ಕ್‍ನಲ್ಲಿ ವಾಹನ ಸಂಚಾರ ಸ್ಥಗಿತ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 8 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು.

ಕಬ್ಬನ್ ಪಾರ್ಕ್‍ಗೆ ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ವಾಯು ವಿಹಾರಕ್ಕಾಗಿ 4 ರಿಂದ 5 ಸಾವಿರ ಜನ ಬರುತ್ತಾರೆ. 5 ರಿಂದ 6 ಸಾವಿರ ಜನ ಪ್ರತಿ ನಿತ್ಯ ಪಾರ್ಕ್ ವೀಕ್ಷಣೆಗಾಗಿ ಬರುತ್ತಿದ್ದಾರೆ. ಇಂತಹ ಸ್ಥಳವನ್ನ ಪರಿಸರ ಸ್ನೇಹಿಯಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಲಾಲ್‍ಭಾಗ್‍ನಂತೆ ಕಬ್ಬನ್ ಪಾರ್ಕ್‍ನಲ್ಲೂ ಪಕ್ಷಿಗಳ ಕಲರವ ಹೆಚ್ಚಾಗಬೇಕೆಂದರೆ ಸ್ವಚ್ಚ ವಾತಾವರಣ ನಿರ್ಮಿಸಲೇಬೇಕಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.minister-kc-narayana-gowda-appeals-cm-bs-yeddyurappa-traffic-cubbon-park

ಈ ಎಲ್ಲ ವಿಚಾರವನ್ನ ಚರ್ಚಿಸಿದ ಸಚಿವ ನಾರಾಯಣ ಗೌಡ ಅವರು ಪಾರ್ಕ್ ಅಭಿವೃದ್ಧಿಗೆ ಇದು ಪೂರಕ ಎಂಬುದನ್ನು ಮನಗಂಡು, ಸುಮಾರು 197 ಎಕರೆ ಪ್ರದೇಶದಲ್ಲಿರುವ ಕಬ್ಬನ್ ಪಾರ್ಕ್ ವಾಹನ ಸಂಚಾರ ಮುಕ್ತವಾಗುವುದು ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಹೀಗಾಗಿ ಸಚಿವ ಕೆ.ಸಿ ನಾರಾಯಣಗೌಡ ಈ ಎಲ್ಲ ಅಂಶಗಳನ್ನ ಸೇರಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಸಿಎಂ ಅತಿಶೀಘ್ರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ.

Key words: Minister- KC Narayana Gowda -appeals -CM BS yeddyurappa- traffic – Cubbon Park