ಡಿಕೆಶಿ, ಸಿದ್ದರಾಮಯ್ಯ ಅವರ ಕುತಂತ್ರ ನಡೆಯಲ್ಲ- ಸಚಿವ ಡಾ.ನಾರಾಯಣಗೌಡ ತಿರುಗೇಟು

Promotion

ಶಿವಮೊಗ್ಗ,ಜನವರಿ,26,2022(www.justkannada.in): ಬಿಜೆಪಿಯಿಂದ ಕಾಂಗ್ರೆಸ್‌ ಗೆ ಹಲವು ಶಾಸಕರು ಬರ್ತಾರೆ ಎಂಬ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಹೇಳಿಕೆ ಕುರಿತು  ಪ್ರತಿಕ್ರಿಯಿಸಿದ ಸಚಿವ ಡಾ.ನಾರಾಯಣಗೌಡ, ಯಾರೋಬ್ಬರು ಕೂಡ ಕಾಂಗ್ರೆಸ್‌ ಗೆ ಹೋಗಲ್ಲ. ಅವರಿಬ್ಬರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ಆ ರೀತಿ ಹೇಳುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಕುತಂತ್ರ ನಡೆಯಲ್ಲ ಎಂದು ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ಧ್ವಜಾರೋಹಣದ ಬಳಿಕ ಡಿಎಆರ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ  ಡಾ.ನಾರಾಯಣಗೌಡ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದಕ್ಕೆ ಅವಕಾಶ ಮಾಡಿಕೊಟ್ಟ ನಮ್ಮ ನಾಯಕರಾದ ಬಿಎಸ್ ಯಡಿಯೂರಪ್ಪನವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.  ಶಿವಮೊಗ್ಗ ಇಡೀ ರಾಜ್ಯದಲ್ಲಿ ಹೆಸರುವಾಸಿ ಆಗಿದೆ. ಕೆಆರ್ ಪೇಟೆ ಹಾಗೂ ಶಿವಮೊಗ್ಗ ಅವಿನಾಭವ ಸಂಬಂಧ ಇದೆ ಅನ್ಸುತ್ತೆ. ಯಡಿಯೂರಪ್ಪನವರು ಕೆಆರ್ ಪೇಟೆಯಿಂದ ಬಂದವರು. ನಾನು ಕೆಆರ್ ಪೇಟೆಯವನಾಗಿ ಇಲ್ಲಿ  ಬಂದು ಧ್ವಜಾರೋಹಣ ಮಾಡಿರುವುದಕ್ಕೆ ಖುಷಿ ಕೊಟ್ಟಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಕ್ರೀಡಾ ಸಚಿವರ ಜೊತೆ ಚರ್ಚಿಸಿ ಖೇಲೋ ಇಂಡಿಯಾ ಕಾರ್ಯಕ್ರಮ ಸೇರಿದಂತೆ ಕೇಂದ್ರ ಕ್ರೀಡಾ ಇಲಾಖೆ ಜೊತೆ ಹಲವು ಕೆಲಸಗಳನ್ನು ಮಾಡಲು ಸಂಸದರಾದ ರಾಘವೇಂದ್ರ ಅವರು ಕೊಂಡಿಯಾಗಿ ನಿಂತಿದ್ರು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಹಲವು ಸಲ ಜಿಲ್ಲೆಯನ್ನು ನೋಡೋಕೆ ಬರ್ತಿದ್ದೆ, ಆದ್ರೇ ಏನ್ ಅದೃಷ್ಟನೋ ಇವತ್ತು ಉಸ್ತುವಾರಿ ಸಚಿವನಾಗಿ ಬಂದಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ಈಶ್ವರಪ್ಪನವರು, ಆರಗ ಜ್ಞಾನೇಂದ್ರ ಸೇರಿದಂತೆ ಎಲ್ಲರ ಜೊತೆಗೂಡಿ ಕೆಲಸ ಮಾಡುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ನಮ್ಮದು ಸರ್ಕಾರ ಇದೆ, ನಮಗೆ ಸಾಕಷ್ಟು ಕೆಲಸ ಇದೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

Key words: Minister -Dr. Narayana Gowda – DK Shivakumar-Siddaramaiah