ಹೌದು. ನಾನು ಲಕ್ಕಿಡಿಪ್‌ ಸಿಎಂ, ಏನೀಗ?: ಬಿಜೆಪಿ ಕುಟುಂಬ ರಾಜಕಾರಣ ಉಲ್ಲೇಖಿಸಿ ಟಾಂಗ್ ಕೊಟ್ಟ ಹೆಚ್.ಡಿಕೆ.

ಬೆಂಗಳೂರು,ಜುಲೈ,6,2022(www.justkannada.in):  ತಮ್ಮನ್ನ ಲಕ್ಕಿಡಿಪ್ ಸಿಎಂ ಎಂದು ಟೀಕಿಸಿದ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿ ಕುಟುಕಿದ ಹೆಚ್.ಡಿಕೆ, ಹೌದು. ನಾನು ಲಕ್ಕಿಡಿಪ್‌ ಸಿಎಂ, ಏನೀಗ? ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯಾ? ಅವರೂ ಲಕ್ಕಿಡಿಪ್ಪು ಎಂಬುದನ್ನು ಮರೆತರೆ ಹೇಗೆ? ಅಧಿಕಾರದ ನೆರಳೂ ಕಾಣದೆ ಬೆಂಗೆಟ್ಟಿದ್ದ ಬಿಜೆಪಿಗೆ ರಾಜ್ಯದಲ್ಲಿ ಕುರ್ಚಿ ರುಚಿ ತೋರಿಸಿದ ಅಂದಿನ 20:20 ಸರಕಾರದ ಡಿಸಿಎಂ ಆಗಿದ್ದ ನಿಮ್ಮವರನ್ನೇ ಕೇಳಿ. ನಿಮ್ಮಲ್ಲೆಷ್ಟು ಲಕ್ಕಿಡಿಪ್‌ʼಗಳಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ, ಸತ್ಯ ಸಾಕ್ಷಾತ್ಕಾರ ಮಾಡಿಸುತ್ತಾರೆ ಎಂದು ತಿರುಗೇಟು ನೀಡಿದರು.

ಲಕ್ಕಡಿಪ್‌ ಸಿಎಂ ಎಂದರೆ ಅಪಮಾನವೇನೂ ಅಲ್ಲ ನನಗೆ. ಆಕಸ್ಮಿಕ ಮುಖ್ಯಮಂತ್ರಿ ಎಂದು ಅನೇಕ ಸಲ ಹೇಳಿದ್ದೇನೆ. ಆದರೆ, ʼಆಪರೇಷನ್‌ ಕಮಲದ ಸಿಎಂʼ ಎನ್ನುವುದಕ್ಕಿಂತಾ ಕೀಳಾ ಅದು? ಯಾವುದು ಮೇಲು? ಯಾವುದು ಕೀಳು? ಸ್ವಲ್ಪ ಹೇಳಿ? ಇನ್ನು, ಜಗತ್ತಿನ ಅಂಕುಡೊಂಕಿನ ಮಾತು ಹಾಗಿರಲಿ. ಪ್ರಧಾನಿಮಂತ್ರಿ ಸಂಚರಿಸಿದ ರಸ್ತೆಯನ್ನೇ ನೋಡಿದರೆ ಸಾಕು, ಅರಿವಾಗುತ್ತದೆ ನಿಮ್ಮ ಅಂಕೆಷ್ಟು, ಡೊಂಕೆಷ್ಟು!!

ʼಮಿಷನ್‌ ದಕ್ಷಿಣ್‌ʼ ಮೂಲ ತಾತ್ಪರ್ಯ ಏನು? ಮೈಸೂರಿನಲ್ಲಿ ಯೋಗಾಸನ, ಹೈದರಾಬಾದ್‌ʼನಲ್ಲಿ ಮಂಥನ. ಅದರ ಮರ್ಮ ಅರಿಯದವರು ಯಾರೂ ಇಲ್ಲ.ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್‌ ಕೃಪೆಯಿಂದ. ಸ್ವಪಕ್ಷವನ್ನೇ ಒಡೆದು ನನ್ನ ಜತೆ ಬರಲು ರೆಡಿ ಇದ್ದ ಆ ನಿಮ್ಮ ನಾಯಕರನ್ನು ನಾನೇ ತಡೆಯದೇ ಇದ್ದಿದ್ದರೆ, ನೀವು ಮತ್ತು ನಿಮ್ಮ ಪಕ್ಷ ಆವತ್ತೇ ನಡುನೀರಿನಲ್ಲಿ ಮುಳುಗಿಹೋಗುತ್ತಿದ್ದಿರಿ. ಅನುಮಾನ ಇದ್ದರೆ ಒಮ್ಮೆ ಅವರನ್ನೇ ಕೇಳಿ. ನನ್ನ ನಡುಕದ ಬಗ್ಗೆ ಆಮೇಲೆ ಮಾತನಾಡಿ ಎಂದು ಟಾಂಗ್ ನೀಡಿದರು.

ಹಾಗೆಯೇ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಚಾಟಿ ಬೀಸಿರುವ ಹೆಚ್.ಡಿಕೆ , ಕುಟುಂಬ ರಾಜಕಾರಣದ ಕೊಂಡಿಗಳ ಬಗ್ಗೆ ಹೇಳಿದ್ದೀರಿ. ಈಗಾಗಲೇ ಪಟ್ಟಿ ಕೊಟ್ಟಿದ್ದೇನೆ. ಮತ್ತೆ ನಿಮ್ಮ ಅವಗಾಹನೆಗೆ;

1.ಯಡಿಯೂರಪ್ಪ & ಸನ್ಸ್‌

2.ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ

3.ಅಶೋಕ್-ರವಿ

4.ವಿ.ಸೋಮಣ್ಣ-ಅರುಣ್‌ ಸೋಮಣ್ಣ

5.ಅರವಿಂದ ಲಿಂಬಾಳಿ-ರಘು

6.ಎಸ್.ಆರ್.ವಿಶ್ವನಾಥ್-ವಾಣಿ ವಿಶ್ವನಾಥ್‌

7.ಜಗದೀಶ ಶೆಟ್ಟರ್-ಪ್ರದೀಪ್‌ ಶೆಟ್ಟರ್‌

8.ಮುರುಗೇಶ ನಿರಾಣಿ-ಹನುಮಂತ ನಿರಾಣಿ

9.ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್

10.ಜಾರಕಿಹೊಳಿ ಕುಟುಂಬ

11.ಕತ್ತಿ ಕುಟುಂಬ

12.ಜೊಲ್ಲೆ ಕುಟುಂಬ

13.ಅಂಗಡಿ ಕುಟುಂಬ

14.ಉದಾಸಿ ಕುಟುಂಬ

15.ಶ್ರೀರಾಮುಲು ಕುಟುಂಬ

16.ರೆಡ್ಡಿ ಬ್ರದರ್ಸ್‌

ನಿಮ್ಮ ಪರಿವಾರ ಪುರಾಣ ಇನ್ನೂ ಇದೆ. ‘ಬಿಜೆಪಿ ಕುಟುಂಬ ಕೊಂಡಿಗಳ ಆಡಂಬೋಲ’ ಎನ್ನುವುದೂ ಗೊತ್ತಿದೆ. ರಾಷ್ಟ್ರವ್ಯಾಪಿ ವ್ಯಾಪಿಸಿರುವ ಕಮಲದ ಕುಟುಂಬವ್ಯಾಧಿ ಕೊಂಡಿಗಳನ್ನು ಬಿಚ್ಚಬೇಕೆ? ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೌರಿಶಂಕರದಷ್ಟು ಎತ್ತರ ಕಾಣುವ ʼಬಿಜೆಪಿ ಪರಿವಾರ ಪರ್ವತʼಗಳ ಬಗ್ಗೆ ಹೇಳಬೇಕಾದರೆ ‘ಪರಿವಾರಕೋಟಿ’ಯನ್ನೇ ಬರೆಯಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

Key words: Luckydeep CM-HD Kumaraswamy- BJP- family politics.

ENGLISH SUMMARY…

Yes, I am a lucky dip CM, so What?! HDK questions BJP’s family based politics
Bengaluru, July 6, 2022 (www.justkannada.in): Former Chief Minister H.D. Kumaraswamy criticized the BJP for calling him a ‘lucky dip CM.’
The former CMs tweet read: Yes, I am a lucky dip CM. So what?! Has the CM who is in power now elected by the people? Has he forgotten that he is also a lucky dip CM? Ask your person who was the DCM during the 20:20 alliance government, he became the DCM at a time when BJP didn’t even have a proper status in the state.
There is nothing wrong in becoming a lucky dip CM. I have told the words ‘Accidental CM,’ several times. Is it lower than ‘Operation Lotus CM?’ Which is better? Which is lower? Please tell me, his tweet read.
Keywords: Former CM H.D. Kumaraswamy/ lucky dip CM/ BJP