ಸಾಹಿತಿ ಪ್ರೊ. ಎಲ್‌. ವಿ. ಶಾಂತಕುಮಾರಿ ಅವರಿಗೆ ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’

ಬೆಂಗಳೂರು,ಫೆಬ್ರವರಿ,15,2023(www.justkannada.in): ವಿಮರ್ಶಕರು, ಅನುವಾದಕರು ಮತ್ತು ಸಾಹಿತಿ ಪ್ರೊ. ಎಲ್. ವಿ. ಶಾಂತಕುಮಾರಿ ಅವರಿಗೆ 2023ನೇ ಸಾಲಿನ `ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ಯು ಲಭ್ಯವಾಗಿದೆ. ಅವರು ಈ ಪ್ರಶಸ್ತಿಯ ಮೊದಲ ಪುರಸ್ಕೃತರಾಗಿದ್ದಾರೆ.

ಈ ಪ್ರಶಸ್ತಿಯನ್ನು ಇದೇ ಫೆಬ್ರವರಿ 19. 2023 ರಂದು ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಅವರಿಗೆ ನೀಡಲಾಗುವುದು. ಲೇಖಕರು ಹಾಗೂ ಪತ್ರಕರ್ತರಾದ ಎಸ್. ಆರ್. ರಾಮಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರೊ. ಶಾಂತಕುಮಾರಿ ಅವರ ಸಾಹಿತ್ಯ ಕೃತಿಗಳ ಕುರಿತು ಡಾ. ಎಸ್. ಎಲ್. ಭೈರಪ್ಪ, ಶತಾವಧಾನಿ ಡಾ. ಗಣೇಶ್, ಲೇಖಕಿ ಸಹನಾ ವಿಜಯಕುಮಾರ್, ಪ್ರೇಕ್ಷಾ ಪತ್ರಿಕೆಯ ಉಪ-ಸಂಪಾದಕ ಬಿ.ಎನ್. ಶಶಿಕಿರಣ್ ಮಾತನಾಡಲಿದ್ದಾರೆ. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಚೆಕ್‌ ಮತ್ತು ಡಾ. ಎಸ್.ಎಲ್. ಭೈರಪ್ಪ ಅವರ ಸಹಿ ಇರುವ ಪ್ರಶಸ್ತಿ ಪತ್ರವನ್ನು ಹೊಂದಿದೆ.

ಪ್ರೊ. ಶಾಂತಕುಮಾರಿ ಅವರು ನಮ್ಮ ನಡುವೆ ಇರುವ ಶ್ರೇಷ್ಠ ವಿಮರ್ಶಕರು, ಅನುವಾದಕರು ಮತ್ತು ಪರಿಪಕ್ವ ಹೃದಯದ ಹಿರಿಯರು. ಇವರು ತಮ್ಮ ಅನೇಕ ವೈಭವದ ಸಾಹಿತ್ಯ ಕೃತಿಗಳ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ವಾಲ್ಮೀಕಿ, ಸಾಕ್ರಟೀಸ್, ಮಾರ್ಕಸ್ ಆರೆ‌ಲಿಯಸ್, ಎಪಿಕ್ವಿಟಿಸ್, ಓಮರ್ ಖಯ್ಯಾಮ್, ವಚನಕಾರರು, ಡಿ.ವಿ.ಗುಂಡಪ್ಪ, ಪು.ತಿ.ನರಸಿಂಹಾಚಾರ್, ಶಿವರಾಮಕಾರಂತ, ಎಸ್.ಎಲ್.ಭೈರಪ್ಪ ಮತ್ತು ಇತರ ಅನೇಕ ಕವಿಗಳ ಮತ್ತು ದಾರ್ಶನಿಕರನ್ನು ತಮ್ಮ ಕೃತಿಗಳಲ್ಲಿ ಜೀವಂತಗೊಳಿಸಿದ್ದಾರೆ.

ಅವರು ವಿಲ್ ಡ್ಯುರಾಂಟ್ ಮತ್ತು ಪನ್ನಾಲಾಲ್‌ ಪಟೇಲ್ ಅವರಂತಹ ಪ್ರಸಿದ್ಧ ಸಾಹಿತಿಗಳ ಕೃತಿಗಳ ಅನುವಾದಗಳನ್ನು ಪ್ರಕಟಿಸಿದ್ದಾರೆ. ಎಸ್. ಎಲ್. ಭೈರಪ್ಪ ಅವರ ಕಾದಂಬರಿಗಳ ಒಳನೋಟದ ವಿಶ್ಲೇಷಣೆಯನ್ನು ಒಳಗೊಂಡಿರುವ ‘ಯುಗಸಾಕ್ಷಿ’ ಮತ್ತು ‘ಪ್ರತಿಭಾನ ಕೃತಿಗಳನ್ನು ಪ್ರೊ. ಶಾಂತಕುಮಾರಿ ಅವರು ಬರೆದಿದ್ದಾರೆ. ಅವರು ಸ್ವತಂತ್ರವಾಗಿ ಮತ್ತು ಇತರರೊಂದಿಗೆ ಗೃಹಭಂಗ’, ‘ಮಂದ್ರ’, ‘ಸಾಕ್ಷಿ’ ಮತ್ತು ‘ದಾಟು’ನಂತಹ ಕಾದಂಬರಿಗಳನ್ನು ಅನುವಾದಿಸಿದ್ದಾರೆ ಎಂದು ‘ಎಸ್. ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಪ್ರೊ.ಜಿಎಲ್ ಶೇಖರ್ ತಿಳಿಸಿದ್ದಾರೆ.

Key words: Literature -Prof. L. V. Shantakumari -‘S. L. Bhairappa -Literature –Foundation- Award