ಕಾಡುಗಳನ್ನು ಅವುಗಳ ಪಾಡಿಗೆ ಬಿಡಿ: ಪರಿಸರವಾದಿಗಳಿಂದ ಮುಖ್ಯಮಂತ್ರಿಗಳಿಗೆ ಪತ್ರ.

Promotion

ಬೆಂಗಳೂರು, ಅಕ್ಟೋಬರ್ 19, 2021 (www.justkannada.in): ಬೆಂಗಳೂರಿನ ಮೀಸಲು ಅರಣ್ಯ ಪ್ರದೇಶವೊಂದನ್ನು ಕಬ್ಬನ್ ಪಾರ್ಕ್ ಹಾಗೂ ಲಾಲ್‌ ಬಾಗ್‌ ಗಿಂತ ದೊಡ್ಡ ಉದ್ಯಾನವನ್ನಾಗಿ ಪರಿವರ್ತಿಸುವ ತೋಟಗಾರಿಕಾ ಇಲಾಖೆಯ ಯೋಜನೆಗೆ ಕಾನೂನು ಅಡಚಣೆಗಳ ಬಿಕ್ಕಟ್ಟು ಎದುರಾಗುವ ಸಂಭವವಿದೆ. ಇಲಾಖೆಯು ನಗರಕ್ಕಾಗಿ ‘ಏನಾದರೂ ದೊಡ್ಡ’ದನ್ನು ಮಾಡಬೇಕೆಂದು ಆಲೋಚಿಸಿ ಈ ಯೋಜನೆಗೆ ಕೈ ಹಾಕಿತು. ಆದರೆ ಈ ಯೋಜನೆಯಿಂದ ಉತ್ತರ ಬೆಂಗಳೂರು ಭಾಗದ ನೈಸರ್ಗಿಕ ಸಂಪನ್ಮೂಲಗಳು ಸಂಪೂರ್ಣವಾಗಿ ನಾಶವಾಗುತ್ತದೆ ಎನ್ನುವುದು ಪರಿಸರವಾದಿಗಳ ವಾದವಾಗಿದೆ.

ತೋಟಗಾರಿಕಾ ಇಲಾಖೆಯು ಯಲಹಂಕದಲ್ಲಿರುವ ಒಟ್ಟು ೪೪೪ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿರುವ ಜರಕಬಂಡೆ ಮೀಸಲು ಅರಣ್ಯ ಪ್ರದೇಶದ ಸಮೀಕ್ಷೆ ನಡೆಸಲು ಸಮೀಕ್ಷಕರ ತಂಡವನ್ನು ಸಿದ್ಧಪಡಿಸಿರುವುದು ತಿಳಿದು ಬಂದಿದೆ. ಈ ಮೀಸಲು ಅರಣ್ಯ ಪ್ರದೇಶದ ಒಂದು ಭಾಗವನ್ನು ಉದ್ಯಾನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿಲಾಗಿದೆ. ಇಲಾಖೆಯು ಈ ಯೋಜನೆಯನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಬರುವ ‘ಅರಣ್ಯೇತರ ಉದ್ದೇಶ’ದ ಅಡಿ ಕೈಗೆತ್ತಿಕೊಳ್ಳಲು ಇಚ್ಛಿಸಿದೆ.

ಆದರೆ, ಈ ಯೋಜನೆ ಮೀಸಲು ಅರಣ್ಯ ಪ್ರದೇಶವನ್ನು ರಕ್ಷಿಸುವ ತತ್ವಕ್ಕೆ ವಿರುದ್ಧವಾಗಿದೆ ಎನ್ನುವುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಈ ಸಂಬಂಧ ಪರಿಸರವಾದಿಗಳು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಒಂದು ಪತ್ರವನ್ನು ಬರೆದಿದ್ದು, ಆ ಪತ್ರದಲ್ಲಿ ವನ್ಯಜೀವಿಗಳ ಲಾಭಕ್ಕಾಗಿ ಈ ಮೀಸಲು ಅರಣ್ಯ ಪ್ರದೇಶವನ್ನು ಅದರ ಪಾಡಿಗೆ ಬಿಡುವಂತೆ ಕೋರಿದ್ದಾರೆ.

“ಈಗಾಗಲೇ ಅಲ್ಲಿ ಜೆಬಿ ಕಾವಲ್ ಟ್ರೀ ಪಾರ್ಕ್ ಹಾಗೂ ಜೆಬಿ ಕಾವಲ್ ಬಟರ್‌ ಫ್ಲೇ ಗಾರ್ಡನ್‌ ಗಳಿವೆ. ಜೊತೆಗೆ ನಡಿಗೆ ಪಥ ಹಾಗೂ ಸೈಕಲ್ ಸಂಚಾರದ ಪಥಗಳೂ ಇವೆ. ಈಗಾಗಲೇ ಸುತ್ತಮುತ್ತಲೂ ಹಾಗೂ ದೂರದ ಅನೇಕ ಜನರನ್ನು ಆಕರ್ಷಿಸುತ್ತಿದೆ,” ಎಂದು ಪತ್ರದಲ್ಲಿ ಬರೆಯಲಾಗಿದ್ದು ಕೂಡಲೇ ಈ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಯು.ವಿ. ಸಿಂಗ್ ಎಂಬ ಓರ್ವ ನಿವೃತ್ತ ಐಎಫ್‌ಎಸ್ ಅಧಿಕಾರಿಯೊಬ್ಬರ ಪ್ರಕಾರ ಈ ಪ್ರಸ್ತಾವನೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ೧೯೯೬ರ ತೀರ್ಪನ್ನು ಉಲ್ಲಂಘಿಸುತ್ತದಂತೆ. ಕರ್ನಾಟಕ ರಾಜ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನವನ್ನು ಆಧರಿಸಿ ಜೆಬಿ ಕಾವಲ್ ಒಳಗೊಂಡಂತೆ ಎಲ್ಲಾ ಅರಣ್ಯಗಳಿಗೂ ಅನ್ವಯಿಸುವಂತೆ ಒಂದು ಕಾರ್ಯ ಯೋಜನೆಯನ್ನು ರೂಪಿಸಿದೆ. “ಈ ಕಾರ್ಯ ಯೋಜನೆಯನ್ನು ಬದಲಾಯಿಸಬೇಕಾದರೆ ಅದಕ್ಕೆ ಕೇಂದ್ರದ ಅನುಮೋದನೆ ಪಡೆಯಬೇಕು,” ಎಂದು ವಿವರಿಸಿದರು.

ರಾಜ್ಯ ಸರ್ಕಾರವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು. “ಸರ್ಕಾರ ಮನಸ್ಸು ಮಾಡಿದರೆ ದಾರಿ ಕಂಡು ಬರುತ್ತದೆ,” ಎನ್ನುವುದು ಸಿಂಗ್ ಅವರ ಅಭಿಪ್ರಾಯವಾಗಿದೆ.

“ಯೋಜನೆ ರೂಪಿಸುವವರು ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು, ಮನಸೋ ಇಚ್ಛೆ ನಡೆದುಕೊಳ್ಳಬಾರದು. ಅತ್ಯಂತ ಮಾಲಿನ್ಯ ತುಂಬಿರುವ ಬೆಂಗಳೂರಿನಂತಹ ಒಂದು ಮಹಾನಗರದ ಇಂಗಾಲವನ್ನು ಹೀರಿಕೊಳ್ಳುವ ಪ್ರದೇಶವಾಗಿರುವ ನೈಸರ್ಗಿಕ ಅರಣ್ಯವನ್ನು ಪರಿವರ್ತಿಸುವುದು ನ್ಯಾಯವೇ? ಸರ್ಕಾರ ಈ ರೀತಿ ಅರಣ್ಯಗಳನ್ನು ಉದ್ಯಾನವನಗಳನ್ನಾಗಿ ಪರಿವರ್ತಿಸುತ್ತಾ ಹೋದರೆ, ನಿಯಮಗಳು ಹಾಗೂ ನಿರ್ಬಂಧಗಳಿಗೆ ಅರ್ಥವೇನಿದೆ?,” ಎಂದರು.

ಪರಿಸರತಜ್ಞ ಕೃಷ್ಣ ದತ್ತಾ ಎನ್‌ಸಿ ಅವರು, ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ಬೆಂಗಳೂರು ಮಹಾನಗರ ಈಗಾಗಲೇ ಸುಮಾರು ೬,೦೦೦ ಎಕರೆಗಳಷ್ಟು ಅರಣ್ಯ ಭೂಮಿಯನ್ನು, ಪಶುವೈದ್ಯಕೀಯ ಗ್ರಾಮಗಳ ಸ್ಥಾಪನೆ, ಗೃಹ ಬಡಾವಣೆಗಳ ನಿರ್ಮಾಣ, ಜಕ್ಕೂರು ವಿಮಾನ ಚಾಲನಾ ತರಬೇತಿ ಶಾಲೆ, ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆ, ಇತ್ಯಾದಿಗಳಂತಹ ವಿವಿಧ ಕಾರಣಗಳಿಂದಾಗಿ ಕಳದುಕೊಂಡಿದೆ.

“ಅರಣ್ಯಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡಿ. ನಗರ ಪ್ರದೇಶದ ವನ್ಯಜೀವಿಗಳು ಅಲ್ಲಿ ವಾಸವಿರುವುದಕ್ಕೆ ಬಿಡಿ. ಅರಣ್ಯಕ್ಕೆ ನಮ್ಮ ಅಗತ್ಯವಿಲ್ಲ. ನಮಗೆ ಅರಣ್ಯಗಳಿಂದ ಲಭ್ಯವಾಗುವ ಆಮ್ಲಜನಕ, ನೀರು ಹಾಗೂ ಇತ್ಯಾದಿಗಳ ಅತ್ಯಂತ ಅಗತ್ಯವಿದೆ,” ಎಂದು ತಿಳಿಸಿದ್ದಾರೆ.

ಈ ನಡುವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸಂಜಯ್ ಮೋಹನ್ ಅವರು ಮೀಸಲು ಅರಣ್ಯವನ್ನು ಉದ್ಯಾನವನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸಚಿವರಿಗೆ ನೀಡಿದ ಕೇವಲ ಒಂದು ಕಲ್ಪನೆ ಅಷ್ಟೆ. ಈ ಸಂಬಂಧ ಇನ್ನೂ ಔಪಚಾರಿಕ ಚರ್ಚೆಗಳು ಆಗಿಲ್ಲ. “ಸರ್ಕಾರದ ಮಟ್ಟದಲ್ಲಿ ಈ ರೀತಿಯ ಅನೇಕ ಕಲ್ಪನೆಗಳು ಚರ್ಚೆಗೆ ಬರುತ್ತವೆ. ನಾವು ಈ ಮೀಸಲು ಅರಣ್ಯವನ್ನು ಉದ್ಯಾನವನ್ನಾಗಿ ಪರಿವರ್ತಿಸುವ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ಅದು ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಅಷ್ಟು ಸುಲಭವೂ ಅಲ್ಲ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Leave – forests -their -Letter – environmentalists –CM basavaraj bommai