ದ್ವೇಷ ರಾಜಕಾರಣಕ್ಕೆ ನಿಖಿಲ್ ರನ್ನು ಅಸ್ತ್ರದಂತೆ ಬಳಸಿಕೊಂಡರೇ ಈ ಸಚಿವರು….!

Promotion

 

ಬೆಂಗಳೂರು, ಮೇ 25, 2019 : (www.justkannada.in news) : ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿವರೊಬ್ಬರ ಕುತಂತ್ರ ರಾಜಕಾರಣದಿಂದ ಗೌಡರ ಕುಟುಂಬಕ್ಕೆ ಈ ಸ್ಥಿತಿ ಬಂದಿದೆ ಎಂದು ಇದೀಗ ಆಪ್ತ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಆರಂಭದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಬಗ್ಗೆ ಕುಟುಂಬ ವರ್ಗ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆಗಲೇ ಈ ಆಪ್ತ ಸಚಿವ ಎಚ್.ಡಿ.ಕೆ. ತಲೆಗೆ ಮಗನ ರಾಜಕೀಯ ಎಂಟ್ರಿ ಬಗ್ಗೆ ತುಂಬಿದ್ದು, ಪುತ್ರ ನಿಖಿಲ್ ನನ್ನು ಸಿನಿಮಾ ರಂಗದಲ್ಲಿ ಬೆಳೆಸುವ ಉದ್ದೇಶ ಹೊಂದಿದ್ದ ಕುಮಾರಸ್ವಾಮಿ, ಈ ನಿಟ್ಟಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಸಹ ಆಸಕ್ತಿಯಿಂದ ಇದ್ದರು. ಅಷ್ಟರಲ್ಲಿ ಮಂಡ್ಯ ಲೋಕಸಭಾ ಕಣಕ್ಕಿಂದ ನಿಖಿಲ್ ಹೊರತು ಬೇರೆ ಯಾರನ್ನೇ ಕಣಕ್ಕಿಳಿಸಿದರು ಗೆಲ್ಲಲಾಗದು ಎಂಬ ಪುಕಾರು ಹಬ್ಬಿಸಿದರು.

ರಾಜಕೀಯ ಜಂಟಾಟದಿಂದ ಹಾಗೂ ಆರೋಗ್ಯದ ಸಮಸ್ಯೆಯಿಂದ ಸಿಎಂ ಕುಮಾರಸ್ವಾಮಿ ವಿಶ್ರಾಂತಿಗೆಂದು ಆಗಾಗ್ಗೆ ಪ್ರವಾಸ ತೆರಳುವ ವೇಳೆಯಲ್ಲೆಲ್ಲ ಜತೆಯಲ್ಲೇ ಇರುತ್ತಿದ್ದ ಈ ಸಚಿವರು, ಕುಮಾರಸ್ವಾಮಿಗೆ ದುಂಬಾಲು ಬಿದ್ದು ನಿಖಿಲ್ ಸ್ಪರ್ಧಿಸಿದರೆ ಗೆಲ್ಲಿಸಿಕೊಂಡು ಬರುವ ಹೊಣೆ ನನ್ನದು ಎಂದು ಆಣೆ ಸಹ ಮಾಡಿ ಅವರನ್ನು ನಂಬಿಸಿದರು. ಪರಿಣಾಮ ನಿಖಿಲ್ ಸ್ಪರ್ಧಿಸುವುದು ಖಚಿತವಾಯ್ತು. ಆ ಮೂಲಕ ಯಾರದೋ ಮೇಲಿನ ರಾಜಕೀಯ ದ್ವೇಷದಿಂದ, ನಿಖಿಲ್ ಕುಮಾರಸ್ವಾಮಿಯನ್ನು ಅಸ್ತ್ರದಂತೆ ಈ ಸಚಿವರು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು ಎನ್ನಲಾಗುತ್ತಿದೆ.
ಈ ಸಂಗತಿ ಇದೀಗ ದೇವೇಗೌಡರ ಕುಟುಂಬ ವರ್ಗದವರಿಗೂ ಮನವರಿಕೆಯಾಗಿದೆ. ಆದರೆ ಏನು ಪ್ರಯೋಜನ. ಕಾಲ ಮಿಂಚಿ ಹೋಗಿದೆ.

ಅಯೋಗ್ಯರನ್ನು ದೂರವಿಡಿ :

ಮುಖ್ಯಮಂತ್ರಿ ಎಚ್,ಡಿ, ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ಸದಾನಂದ, ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿರುವ ಸ್ಟೇಟಸ್ ಸಹ ಕುತೂಹಲಕಾರಿಯಾಗಿದೆ. ಕುಮಾರಸ್ವಾಮಿ ಅವರನ್ನು ಅವರ ಸುತ್ತಮುತ್ತಲಿದ್ದವರೇ ದುರುಪಯೋಗ ಪಡಿಸಿಕೊಂಡರು. ಆದ್ದರಿಂದಲೇ ಈ ಸ್ಥಿತಿ ಬಂದಿದೆ. ಆದ್ದರಿಂದ ದಯವಿಟ್ಟು ಅಯೋಗ್ಯರನ್ನು ದೂರವಿಡಿ ಎಂದು ನೇರವಾಗಿ ಮನವಿ ಮಾಡಿಕೊಂಡಿದ್ದಾರೆ.

key words : kumaraswamy-nikhil-cm-karnataka-politics