ಕುದ್ಮಲ್ ರಂಗರಾವ್ ಅವರು ಪ್ರಗತಿಗೆ ವಿದ್ಯೆಯೇ ಮೂಲ ಎಂದು ನಂಬಿದ್ದರು- ಪ್ರೊ. ಜಿ.ಹೇಮಂತ್ ಕುಮಾರ್

ಮೈಸೂರು,ಜೂನ್,29,2022(www.justkannada.in):  ಕುದ್ಮಲ್ ರಂಗರಾವ್ ಅವರು, ‘ಪ್ರಗತಿಗೆ ವಿದ್ಯೆಯೇ ಮೂಲ’ ಎಂದು ನಂಬಿ ಶೋಷಿತ ವರ್ಗದ ಸಮುದಾಯದ ಮಕ್ಕಳಿಗೆ ವಿದ್ಯೆ ನೀಡುವ ಕುರಿತು ಚಿಂತಿಸಿದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯ ವೇದಿಕೆ, ಸಾಮರಸ್ಯ ವೇದಿಕೆ ಇವರ ಸಹಯೋಗದಲ್ಲಿ ಕುದ್ಮುಲ್ ರಂಗರಾವ್ ಅವರ 163ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ರಂಗರಾವ್‌ ಅವರು, ಡಿ.ಸಿ.ಎಂ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ದಾಟುಗುಡ್ಡೆ, ದಡ್ಡ‌ ಕಾಡು ಈ ಸ್ಥಳಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಆ ಶಾಲೆಗಳನ್ನು ‘ಪಂಚಮ ಶಾಲೆ’ಗಳೆಂದು ಕರೆಯುತಿದ್ದರು ಎಂದರು.

ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ತಾವು ಸ್ಥಾಪಿಸಿದ ಡಿ.ಸಿ.ಎಂ, ಮಿಶನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಷ್ಮೆ ಹುಳು ಸಾಕಾಣಿಕೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ಕೊಡಿಸಿದಂತಹ ಧೀಮಂತ ವ್ಯಕ್ತಿ, ಹಾಗೂ ಅವರುಗಳ ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದವರು.‌ ಅನ್ಯರ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ದದೆಂದು ತೋರಿಸಿಕೊಟ್ಟಂತಹ ಮಹಾನ್ ವ್ಯಕ್ತಿ ಕುಲ್ಕುಲ್ ರಂಗರಾವ್‌ ಅವರಾಗಿದ್ದರು ಎಂದು ಬಣ್ಣಿಸಿದರು.

ಕುದ್ಮಲ್ ರಂಗರಾವ್ ಅವರು ಒಬ್ಬ ಸಮಾಜ ಸೇವಕ.‌‌ ಕಾಸರಗೋಡಿನ ಕುದ್ಮಲ್ ಎಂಬ ಸಣ್ಣ ಗ್ರಾಮದಲ್ಲಿ  ಜನಿಸಿದರು. ಬಹಳ ಕಷ್ಟದಿಂದಲೇ ಬಾಲ್ಯ ಶಿಕ್ಷಣವನ್ನು ಕಾಸರಗೋಡಿನಲ್ಲಿಯೇ ಮುಗಿಸಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದು, ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿದರು. ಬ್ರಿಟೀಷರ ಆಡಳಿತ ಕಾಲದಲ್ಲಿ ಶೋಷಣೆಗೊಳಪಟ್ಟವರ ಪರವಾಗಿ ಹೋರಾಡಿದವರು.

ಇಂತಹ ಒಂದು ಸಂದಿಗ್ಧ ಕಾಲದಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ ತಲೆ ಎತ್ತಿ ನಡೆಯಬೇಕು, ಬದುಕಬೇಕು ಎನ್ನುವ ಕಲ್ಪನೆಯು ಸುಳಿಯದ, ಸುಳಿಯಲು ಅವಕಾಶವನ್ನು ನೀಡದ ಒಂದು ಸಾಮಾಜಿಕ ವ್ಯವಸ್ಥೆಯೊಳಗೆ ಬಂದಂತಹ ಆಶಾಕಿರಣದ ಒಂದು ಬೆಳಕೇ ಶ್ರೀ ಕುದ್ಮಲ್ ರಂಗರಾವ್ ಎಂದರು.

ಕುಲ್ಕುಲ್ ರಂಗರಾವ್‌’ ಒಬ್ಬ ಮಹಾನ್ ಸಮಾಜ ಸುಧಾರಕರು, ಅವರು ತಮ್ಮ ಸ್ವಂತ ವೆಚ್ಚದಲ್ಲಿಯೇ ದಲಿತರ ಯೋಗಕ್ಷೇಮಕ್ಕಾಗಿ ದುಡಿದು ಗುರುತರವಾದ ಕೆಲಸ, ದಕ್ಷಿಣ ಕನ್ನಡದಲ್ಲಿ ದಲಿತರ ಜೀವನದಲ್ಲಿ ಅವರ ಹಸ್ತಕ್ಷೇಪವು ಒಂದು ಪ್ರಮುಖ ಘಟನೆಯಾಗಿದೆ, ಅವರ ಗ್ರಹಿಕೆಗಳು ಮತ್ತು ಉಪದೇಶಗಳ ನಡುವೆ ಗಮನಾರ್ಹವಾದ ಏಕತೆ ಇತ್ತು. ಸೃಷ್ಟಿಯು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಅದರಂತೆ ಎಲ್ಲರೂ ಸಮಾನತೆಯ ಮನೋಭಾವದಿ೦ದ ಬದುಕಬೇಕೆಂಬ ಮಹಾದಾಸೆಯನ್ನು ಹೊಂದಿದ್ದವರು ಎಂದರು.

ಸಂಸದ ಶ್ರೀನಿವಾಸ್ ಪ್ರಸಾದ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಬಿ. ಗಂಗಾಧರ್, ಪರಮಾನಂದ ಎಂ.ಎಸ್‌. ಸೇರಿದಂತೆ ಇತರರು ಇದ್ದರು.

Key words: Kudmal Rangarao-believed -progress –mysore University- Pro. G. Hemanth Kumar