ಗೃಹಬಳಕೆ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಮೈಸೂರಿನಲ್ಲಿ ಕೆಪಿಸಿಸಿ ಮಹಿಳಾ ಘಟಕದಿಂದ ಪ್ರತಿಭಟನೆ.

Promotion

ಮೈಸೂರು,ಮೇ,10,2022(www.justkannada.in): ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕಾಂಗ್ರೆಸ್ ಕಚೇರಿ ಎದುರು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಡಾ. ಪುಷ್ಪ ಅಮರನಾಥ್, ಮೋದಿಯವರ ಅಚ್ಚೇ ದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಕೇಂದ್ರದ ಉಜ್ವಲಾ ಯೋಜನೆಯ‌‌ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡಪಾಯಿ ಬಡವರು ಅದರಲ್ಲೂ ಕೂಲಿ ಕಾರ್ಮಿಕ, ಬಡ ಹಾಗೂ ಮಾಧ್ಯಮ ವರ್ಗದ ಮಹಿಳೆಯರು ಗ್ಯಾಸ್ ಬೆಲೆಯೇರಿಕೆಯ ಶಾಕ್‌ ಗೆ ತತ್ತರಿಸಿ ಹೋಗಿದ್ದಾರೆ.‌ ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದ ‌ ಮಹಿಳೆಯರಿಗೆ ದರ ಏರಿಕೆಯಿಂದ ಹಳೆ ಗಂಡನ ಪಾದವೇ ಗತಿ ಎಂಬಂತೆ ಸೌದೆಯೇ ಆಸರೆಯಾಗಿದೆ ಎಂದು ಕಿಡಿಕಾರಿದರು.

ಹೊಗೆ ರಹಿತ ಅಡುಗೆ ಮನೆ ಉಜ್ವಲಾ ಯೋಜನೆಯ ಮೂಲ‌ ಉದ್ದೇಶ. ಆದರೆ ಕೇಂದ್ರ ಸಿಲಿಂಡರ್ ಬೆಲೆಯನ್ನು ಬೇಕಾಬಿಟ್ಟಿ ಏರಿಸಿದರೆ ಬಡವರಿಗೆ ಕೊಳ್ಳುವ ಶಕ್ತಿಯೆಲ್ಲಿದೆ? ಬಡವರು ಈ ದರದಲ್ಲಿ ಸಿಲಿಂಡರ್ ಖರೀದಿಸಿ ಅನ್ನ ಬೇಯಿಸಲು ಸಾಧ್ಯವೆ?  ಎಂದು ಪುಷ್ಪ ಅಮರನಾಥ್ ಪ್ರಶ್ನಿಸಿದರು.

UPA ಸರ್ಕಾರವಿದ್ದಾಗ ಗ್ಯಾಸ್‌ ಗೆ ಸಬ್ಸಿಡಿ ದೊರೆಯುತಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ UPA ಸರ್ಕಾರ ನೋಡಿಕೊಂಡಿತ್ತು. ಆದರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ  ಕೊಡದೆ ರದ್ದು ಮಾಡಿದೆ. ಬಡವರು ಬದುಕಬಾರದು ಎನ್ನುವುದು ಮೋದಿ ಸರ್ಕಾರದ ಉದ್ದೇಶವೇ ? ಎಂದು ಪುಷ್ಪ ಅಮರನಾಥ್ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ,  ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್, ರಾಜ್ಯ ಪದಾಧಿಕಾರಿಗಳಾದ ಪುಷ್ಪವಲ್ಲಿ, ಲತಾ ಮೋಹನ್, ರಾಧಾಮಣಿ, ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿದ್ಯಾ, ಸುಶೀಲಾ ಮರಿಗೌಡ, ಚಿನ್ನತಾಯಮ್ಮ, ಭವ್ಯಾ, ಮಂಜುಳಾ ವಾರ್ಡ್ ಅಧ್ಯಕ್ಷರುಗಳಾದ ಮಂಜುಳಾ ಇಂದ್ರ ಶಾಂತ ಮಂಗಳ, ಕಮಲಾ ಪಿರಿಯಾಪಟ್ಟಣ ಬ್ಲಾಕ್ ಅಧ್ಯಕ್ಷರಾದ ಮುತ್ತುರಾಣಿ, ಸೌಮ್ಯ, ಗಾಯತ್ರಿ ನಾರಾಯಣ್ ಗೌಡ, ಶೋಭಾ ಉಪಸ್ಥಿತರಿದ್ದರು.

Key words: KPCC –women- unit -Mysore -protests