ಪಿಎಸ್‌ ಐ ನೇಮಕಾತಿ ಅಕ್ರಮದ ಹಿಂದಿರುವ ವ್ಯಕ್ತಿಗಳ ಬಂಧನಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆಗ್ರಹ.

ಮೈಸೂರು,ಜುಲೈ,5,2022(www.justkannada.in): ಪಿಎಸ್‌ ಐ ನೇಮಕಾತಿ ಅಕ್ರಮದ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕು. ಅಕ್ರಮದಲ್ಲಿ ಆಡಳಿತಪಕ್ಷದ ಸಚಿವರು, ಶಾಸಕರು ಸೇರಿದಂತೆ ಪ್ರಭಾವಿಗಳು ಇರುವ ಕಾರಣ ಸತ್ಯಾಂಶವನ್ನು ಬಯಲಿಗೆ ತಂದು ಬಂಧಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಚ್.ಎ ವೆಂಕಟೇಶ್, ಅಕ್ರಮಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್‌ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇಷ್ಟು ದಿನಗಳ ಕಾಲ ಇವರ ಬಂಧನಕ್ಕೆ ಕಾಣದ ಕೈಗಳು ತಡೆಯಾಕುತ್ತಲೇ ಬಂದಿದ್ದರು. ಕೆಲವರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ಆರೋಪಿಸಿದರು.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಚಿವರು, ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಿಎಸ್‌ಐ ನೇಮಕಾತಿಯಲ್ಲಿ ಆಗಿರುವ ಅಕ್ರಮದ ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರು ಪ್ರಸ್ತಾಪಿಸಿರುವ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳನ್ನು ರಕ್ಷಿಸಲು ಮುಂದಾಗಿರುವುದು ಕಾಣಿಸುತ್ತದೆ. ಹೈಕೋರ್ಟ್ ನ್ಯಾಯಾಧೀಶರು ಕೇಳುವ ಮಾಹಿತಿಯನ್ನು ಕೊಡದೆ ಸತಾಯಿಸುತ್ತಿರುವುದನ್ನು ನೋಡಿದರೆ ಸಿಐಡಿ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಕ್ರಮದಲ್ಲಿ ಸಚಿವರು ಭಾಗಿಯಾಗಿದ್ದಾರೆಂದು ಪಕ್ಷದ ಹಿರಿಯ ನಾಯಕರು ಕೆಲವು ಸಾಕ್ಷ್ಯಾಧಾರಗಳನ್ನು ನೀಡುತ್ತಲೇ ಬಂದಿದ್ದರೂ ಸರ್ಕಾರ ಅದನ್ನು ನಿರಾಕರಿಸುವ ಕೆಲಸ ಮಾಡಿತ್ತು. ಗೃಹಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

Key words: KPCC- spokesperson- HA Venkatesh -demand -arrest – PSI recruitment -scam