1200 ಶವಗಳ ಭಸ್ಮ ಕಾವೇರಿ-ಕಪಿಲಾದಲ್ಲಿ ವಿಸರ್ಜಿನೆ: ಸಚಿವ ಆರ್.ಅಶೋಕ್ ಕಾರ್ಯವನ್ನ ಟೀಕಿಸಿದ ಎಚ್.ಎ ವೆಂಕಟೇಶ್.

ಮೈಸೂರು,ಜೂನ್,3,2021(www.justkannada.in): ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ಅವರು ಕೋವಿಡ್ 19 ರೋಗಕ್ಕೆ ತುತ್ತಾದ 1200 ಶವಗಳ ಭಸ್ಮವನ್ನು ಕಪಿಲ ಮತ್ತು ಕಾವೇರಿ ನದಿಯಲ್ಲಿ ವಿಸರ್ಜಿಸುವ ಮೂಲಕ ಸರ್ಕಾರ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.jk

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಚ್.ಎ ವೆಂಕಟೇಶ್,  ಒಬ್ಬ ಕಂದಾಯ ಸಚಿವರಾಗಿ ಮಾಡುವ ಕೆಲಸವೇ ಇದು? ಕೋವಿಡ್ ನಿಂದ ನರಳುತ್ತಿದ್ದವರಿಗೆ ಸರಿಯಾದ ಆಸ್ಪತ್ರೆ ಸೌಲಭ್ಯ ಕಲ್ಪಿಸದ, ಮೃತರ ಅಂತ್ಯಕ್ರಿಯೆಗೂ ಸ್ಥಳ ಒದಗಿಸಲಾಗದೆ ಕೈಚೆಲ್ಲಿದ ಈ ಸರ್ಕಾರದ ಹೀನಕೃತ್ಯವನ್ನು ನಾಡಿನ ಜನ ಕ್ಷಮಿಸುವುದಿಲ್ಲ. ಸಾವಿಗೆ ಸರ್ಕಾರವೇ ಹೊಣೆಯಾಗಿ ಈಗ ಅನಾಥ ಶವಗಳಿಗೆ ಮುಕ್ತಿ ಕೊಡಿಸುವ ಧಾರ್ಮಿಕ ನಾಟಕ ಮಾಡುತ್ತಿರುವುದು ದುರಂತ. ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ, ಅವುಗಳ ಮೂಲಕ ಮಾಡಿದ ತಪ್ಪಿಗೆ ಸಕಾರಾತ್ಮಕ ಪ್ರಚಾರ ಪಡೆಯುವ ಬಿಜೆಪಿ ತಂತ್ರ ಇದು. ಉತ್ತರದ ಗಂಗಾ ನದಿಯಂತೆ ದಕ್ಷಿಣದ ಕಪಿಲಾ – ಕಾವೇರಿಯನ್ನು ಸ್ವತಃ ಕಂದಾಯ ಸಚಿವರೇ ಕಲುಷಿತ ಗೊಳಿಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದ್ದಾರೆ.

ಯಾವ ಅನಾಥ ಶವದ ಆತ್ಮ ಇವರನ್ನು ತನ್ನ ಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸುವಂತೆ ಕೇಳಿಕೊಂಡಿತ್ತೋ ಗೊತ್ತಿಲ್ಲ. ಪ್ರಕೃತಿಯ ಮೇಲೆ ಅಪಾರ ಕಾಳಜಿ ಹೊಂದಿದ್ದ ಮೇರು ವ್ಯಕ್ತಿತ್ವದ ,ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ , ಎಚ್ ಎಸ್ ದೊರೆಸ್ವಾಮಿ ಅವರ ಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸದೆ, ಗಿಡ-ಮರಗಳಿಗೆ ಹಾಕಿ ಗೌರವ ಸಲ್ಲಿಸಲಾಯಿತು. ಅಂತದ್ದರಲ್ಲಿ ಆರ್ ಅಶೋಕ್ ಅವರು ಧಾರ್ಮಿಕ ಭಾವನೆಗಳ ಮೂಲಕ ಮೃತರ ಭಸ್ಮ ವಿಸರ್ಜನೆಯಿಂದ ಮೌಢ್ಯತೆಯನ್ನು ಮೂಡಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಹೇಳಿ? ಜವಾಬ್ದಾರಿಯುತ ಸಚಿವರಾಗಿದ್ದಾರೆ.  ಈ ರೀತಿ ಕೀಳುಮಟ್ಟದ ಧಾರ್ಮಿಕ ಮನೋ ಭಾವನೆಗಳ ಮೂಲಕ ವರ್ತಿಸುತ್ತಿರಲಿಲ್ಲ. ನದಿ, ನದಿ ಮೂಲಗಳನ್ನು ಕಲುಷಿತಗೊಳ್ಳದಂತೆ ಕಾಪಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಮೂಢನಂಬಿಕೆಯ ಮೂಲಕ ಜನರಿಂದ ಪ್ರಶಂಸೆ ಪಡೆಯಲು ಹೊರಟಿದ್ದಾರೆ ಎಂದು ಎಚ್.ಎ ವೆಂಕಟೇಶ್ ಹರಿಹಾಯ್ದರು.

ಬಿಜೆಪಿ ಸರ್ಕಾರ ಕೋವಿಡ್ ವಿಚಾರದಲ್ಲಿ ನಡೆದುಕೊಂಡ- ನಡೆದುಕೊಳ್ಳುತ್ತಿರುವ ಬೇಜವಾಬ್ದಾರಿ ನಡೆಯನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ. ನಾಡಿನ ಜನತೆಯ ಹೃದಯದ ಮೇಲೆ ಇವರು ಅಧಿಕಾರದಾಹದಿಂದ ಎಳೆದಿರುವ ಬರೆ ಮಾಯುವುದು ಅಷ್ಟು ಸುಲಭವಲ್ಲ. ಯಾವ ಆತ್ಮ, ಪ್ರೇತಾತ್ಮವು ಇವರನ್ನು ಕ್ಷಮಿಸುವುದಿಲ್ಲ ಎಂದು ಎಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.

Key words: KPCC-spokeperson-  HA Venkatesh- criticized – Minister -R. Ashok