ಕಾಸರಗೋಡಿನ ದೇವಾಲಯದಲ್ಲಿ ವಾಸವಿದ್ದ ಮೊಸಳೆ ಇನ್ನಿಲ್ಲ.

ಕಾಸರಗೋಡು, ಅಕ್ಟೋಬರ್ 10, 2022(www.justkannada.in): ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದ ಮೊಸಳೆ ‘ಬಬಿಯಾ’ ಭಾನುವಾರ ರಾತ್ರಿ ಮೃಪಟ್ಟಿತು.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿರುವ ಒಂಬತ್ತನೇ ಶತಮಾನದ ದೇವಾಲಯದ ಮೂಲಗಳ ಪ್ರಕಾರ ಬಬಿಯಾಗೆ ಸುಮಾರು 75 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಆರು ಅಡಿ ಉದ್ದವಿದ್ದ ಬಬಿಯಾವನ್ನು ಅನಂತಪುರ ಸರೋವರ ದೇವಾಲಯದ ರಕ್ಷಕನೆಂದೇ ಭಾವಿಸಿ ಪೂಜಿಸಲಾಗುತಿತ್ತು. ಅಕ್ಟೋಬರ್ ೨೦೨೦ರಂದು, ಮುಜರಾಯಿ ಇಲಾಖೆಗೆ ಸೇರಿದ, ಮಂಗಳೂರಿನಿಂದ ಸುಮಾರು ೪೫ ಕಿ.ಮೀಗಳಷ್ಟು ದೂರದಲ್ಲಿರುವ ಈ ದೇವಾಲಯದ ಸರೋವರದಲ್ಲಿ ಬೆಳಗಿನ ವೇಳೆ ಕೆಲವು ಕ್ಷಣಗಳ ಕಾಲ ಬಬಿಯಾ ಗೋಚರಿಸಿತ್ತು. ಬಬಿಯಾದ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬಬಿಯಾಗಿಂತ ಮೊದಲು ಇಲ್ಲಿದ್ದಂತಹ ಮೊಸಳೆಯೊಂದನ್ನು, ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕನೊಬ್ಬ ಗುಂಡೇಟಿನಿಂದ ಸಾಯಿಸಿದ್ದ. ಅದೇ ದಿನದಂದು ಆ ಸೈನಿಕ ಹಾವು ಕಡಿತದಿಂದ ಮೃತಪಟ್ಟ ಎನ್ನಲಾಗಿದೆ. ಈ ದೇವಾಲಯದಲ್ಲಿರುವ ದೇವರಿಗೆ ಅನ್ನ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಇದೇ ನೈವೇದ್ಯವನ್ನು ಈ ಮೊಸಳೆಗೆ ದಿನದಲ್ಲಿ ಎರಡು ಬಾರಿ ನೀಡಲಾಗುತಿತ್ತು.

ವನ್ಯಜೀವಿ ತಜ್ಞರು ಈ ಮೊಸಳೆಯನ್ನು ಫ್ರೆಶ್‌ ವಾಟರ್ ಮಗ್ಗರ್ ಕ್ರೊಕೊಡೈಲ್ ಎಂದು ಗುರುತಿಸಿದ್ದರು. ಈ ತಳಿ ಬಹಳ ವೇಗವಾಗಿ ನಶಿಸುತ್ತಿರುವ ಪ್ರಾಣಿಗಳಲ್ಲಿ ಸೇರಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  Kasaragod- temple- crocodile – no more