ಬಿಜೆಪಿ ಮತ್ತು ಆರ್ ಎಸ್ ಎಸ್ ಮೀಸಲಾತಿ ವಿರೋಧಿಗಳು-ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ.

ಮೈಸೂರು,ಅಕ್ಟೋಬರ್,10,2022(www.justkannada.in):  ಸರ್ಕಾರ ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯನ್ನು ಒಪ್ಪಿದ್ದೇವೆ ಎಂದಷ್ಟೇ ಹೇಳಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಮೀಸಲಾತಿ ವಿರೋಧಿಗಳು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್,  ಮೀಸಲಾತಿ ಹೆಚ್ಚಳ ಸಂಬಂಧ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನ ವಿಚಾರ, ಇದಕ್ಕೆ ಪ್ರಮುಖ ಕಾರಣರು ಯಾರು ಎಂಬುದನ್ನು ಸರ್ಕಾರ ತಿಳಿಸಬೇಕು. 2011ರ ಜನಗಣತಿ ಪ್ರಕಾರ. ಶೇ 17.15 ರಷ್ಟು ಎಸ್ಸಿ ಜನಸಂಖ್ಯೆ ಇದೆ. ಎಸ್ ಟಿ ಕೆಟಗರಿಯಲ್ಲಿ 56 ಉಪ ಜಾತಿಗಳು ಬರುತ್ತವೆ. ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ನಾಗಮೋಹನ್ ದಾಸ್ ಸಮಿತಿ 2019 ರ ಜುಲೈನಲ್ಲಿ ರಚಿಸಲಾಯಿತು. ಆಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. 7-6-2020 ಕ್ಕೆ ನಾಗಮೋಹನ್ ದಾಸ್ ಸಮಿತಿ ವರದಿ ನೀಡಿತ್ತು. ಅಂದಿನಿಂದ ವರದಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಪರಿಣಾಮ ಪ್ರಸನ್ನಾನಂದಪುರಿಸ್ವಾಮಿಗಳು ನಿರಂತರ ಹೋರಾಟ ಮಾಡುತ್ತಾ ಬಂದಿದ್ದರು. ಸಿದ್ದರಾಮಯ್ಯ ಕೂಡ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವರದಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದರು. ಇದೀಗ ಸರ್ಕಾರ ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯನ್ನು ಒಪ್ಪಿದ್ದೇವೆ ಎಂದಷ್ಟೇ ಹೇಳಿದೆ. ರಾಮಜೋಯಿಸ್ ಕೂಡ ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರದ ದಿನಗಳಲ್ಲಿ ಮಂಡಲ ಆಯೋಗದ ವರದಿಯನ್ನು ವಿರೋಧಿಸಿ ಬಿಜೆಪಿಯ ಕೆಲವರು ಸ್ವಯಂ ಆತ್ಮಹತ್ಯೆ ಮಾಡಿಕೊಂಡರು. ಹಾಗಾಗಿ ಬಿಜೆಪಿಯವರು ಮೀಸಲಾತಿ ವಿರೋಧಿಗಳು. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಆರ್ ಎಸ್ ಎಸ್ ನವರು ಒಪ್ಪುವುದಿಲ್ಲ ಎಂದು ಟೀಕಿಸಿದರು.

ಮೀಸಲಾತಿ ಹೆಚ್ಚಳ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆಯಿದ್ದಂತೆ ಕಾಣುತ್ತಿಲ್ಲ. ಈ ಬಗ್ಗೆ ಸರ್ಕಾರ ಸೂಕ್ತವಾದ ಸ್ಪಷ್ಟನೆ ಕೊಡಬೇಕು. ಮೀಸಲಾತಿ ಹೆಚ್ಚಳ ಅನುಷ್ಟಾನಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆಗ್ರಹಿಸಿದರು.

ಪಂಚಮಸಾಲಿ ಸಮುದಾಯದವರು 2ಎಗೆ ಸೇರಿಸುವಂತೆ ಕೇಳುತ್ತಿದ್ದಾರೆ. ಕುರುಬರು ಎಸ್ ಟಿ ಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಹಾಗಾಗಿ ಖಾಸಗಿ ವಲಯದಲ್ಲೂ ಮೀಸಲಾತಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಎಂ ಲಕ್ಷ್ಮಣ್  ಸಲಹೆ ನೀಡಿದರು.

ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾಯಿಸಿದ್ಧೇ ಸಿಂಹರ ಬಹು ದೊಡ್ಡ ಸಾಧನೆ

ಟಿಪ್ಪು ಎಕ್ಸ್‌ಪ್ರೆಸ್ ಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ್ದೇ ಸಂಸದ ಪ್ರತಾಪ್ ಸಿಂಹರ ಬಹು ದೊಡ್ಡ ಸಾಧನೆಯಾಗಿದೆ. ಪರಿಸ್ಥಿತಿ ಹೀಗೇ ಇರುವುದಿಲ್ಲ. ಇವರು ಏನೆಲ್ಲಾ ಬದಲಾವಣೆ ಮಾಡಿದರೂ ಮುಂದೆ ತಿರುವು ಮುರುವಾಗಲಿದೆ. ಮುಂದಿನ ದಿನಗಳಲ್ಲಿ ಮತ್ತೆ ಎಲ್ಲವೂ ಬದಲಾಗಲಿದೆ. ನಮ್ಮ ಸರ್ಕಾರ ಬಂದಾಗ ಇವರು ಮಾಡಿರುವ ಬದಲಾವಣೆಗಳನ್ನು ನಾವು ಮತ್ತೆ ಬದಲಾಯಿಸುತ್ತೇವೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ಬಿಜೆಪಿ ನಾಯಕರ ವಿರುದ್ಧ ಅವರದ್ಧೇ ಪಕ್ಷದ ಶಾಸಕರು ಟೀಕಿಸುತ್ತಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ‌. ಯಡಿಯೂರಪ್ಪ ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಸೋಲುತ್ತೀರಿ ಎಂದು ಬಿಜೆಪಿಗರಿಗೆ ಕರೆ ಕೊಡುತ್ತಿದ್ದಾರೆ. ಈ ರೀತಿ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ಮೊದಲು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಿ. ಆ ನಂತರ ಬೇರೆಯವರ ಬಗ್ಗೆ ಮಾತನಾಡಿ ಎಂದು ಟಾಂಗ್ ನೀಡಿದರು.

Key words: BJP- RSS -opponents – reservation – KPCC spokesperson -M. Laxman