ಕಾಗದದ ಸರಬರಾಜು ಕೊರತೆಯಿಂದಾಗಿ ಕರ್ನಾಟಕ ಪಠ್ಯಪುಸ್ತಕ ಮುದ್ರಣ ಕಾರ್ಯಾಚರಣೆ ಸ್ಥಗಿತ: ವರದಿ

ಬೆಂಗಳೂರು, ಮೇ 5, 2022 (www.justkannada.in): ಕಚ್ಚಾವಸ್ತುಗಳ ಅಲಭ್ಯತೆ, ಏರುತ್ತಿರುವ ವೆಚ್ಚಗಳಿಂದಾಗಿ ಕರ್ನಾಟಕದಲ್ಲಿ ಹಲವು ಶಾಲಾ ಪಠ್ಯಪುಸ್ತಕಗಳ ಮುದ್ರಕರು ಪಠ್ಯಪುಸ್ತಕಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಸುದ್ದಿ ವರದಿಯಾಗಿದೆ.

ಕೆಲವು ವಾರಗಳಿಂದ ಅನೇಕ ಮುದ್ರಣ ಸಂಸ್ಥೆಗಳಿಗೆ ಪುಸ್ತಕಗಳನ್ನು ಮುದ್ರಣ ಮಾಡಲು ಮಿಲ್‌ ಗಳಿಂದ ಕಾಗದದ ಸರಬರಾಜು ಆಗಿಲ್ಲ. ಕರ್ನಾಟಕ ಪಠ್ಯಪುಸ್ತಕಗಳ ಮುದ್ರಕರ ಸಂಘದ ಅಧ್ಯಕ್ಷ ಬಿ.ಆರ್. ಸತ್ಯಕುಮಾರ್ ಅವರು ತಿಳಿಸಿರುವಂತೆ, “ಉತ್ತಮ ಲಾಭ ದೊರೆಯುವ ಕಾರಣದಿಂದಾಗಿ ಕಾಗದವನ್ನು ರಫ್ತು ಮಾಡಲಾಗುತ್ತಿದೆ,” ಎಂದಿದ್ದಾರೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದೇ ಇದ್ದರೆ, ಪಠ್ಯಪುಸ್ತಕಗಳ ಸರಬರಾಜಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನಾವು ಈಗಾಗಲೇ ಶೇ.೫೦ರಷ್ಟು ಮುದ್ರಣವನ್ನು ಪೂರ್ಣಗೊಳಿಸಿದ್ದೇವೆ. ಕಾಗದದ ಸರಬರಾಜು ನಿಯಮಿತವಾಗಿ ಆಗುತ್ತಿದ್ದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ಪುನರಾರಂಭಗೊಳ್ಳುವ ವೇಳೆಗೆ ಸರಿಯಾಗಿ ಮುದ್ರಣ ಕಾರ್ಯ ಪೂರ್ಣಗೊಳಿಸಬಹುದು,” ಎಂದಿದ್ದಾರೆ.

ರಾಜ್ಯದಲ್ಲಿ ಶಾಲೆಗಳು ಮೇ ೧೬ರಿಂದ ಆರಂಭಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಸಂಘವು ಈ ಸಮಸ್ಯೆಯ ಕುರಿತು ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದಿನಾಂಕ ಏಪ್ರಿಲ್ ೨೭ರ ಒಂದು ಪತ್ರದಲ್ಲಿ ಸಂಘವು ಮುದ್ರಣ ವೆಚ್ಚ ಶೇ.೪೦ರಷ್ಟು ಹೆಚ್ಚಾಗಿರುವುದಾಗಿ ಸಂಘ ತಿಳಿಸಿದೆ. “ಈ ಹಿಂದೆ ನಾವು ಟೆಂಡರ್ ಹೊರಡಿಸಿದಾಗ ಒಂದು ಟನ್‌ಗೆ ರೂ.೬೦,೦೦೦ದಷ್ಟಿದ್ದ ಬೆಲೆ ಈಗ ಪ್ರತಿ ಟನ್‌ಗೆ ರೂ.೯೦,೦೦೦ ತಲುಪಿದೆ,” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸುವ ಅಂದಾಜು ೨೧ ಮುದ್ರಣ ಸಂಸ್ಥೆಗಳಿವೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಕಾಗದವನ್ನು ಸರಬರಾಜು ಮಾಡುವಂತೆ ನೆರೆಯ ತಮಿಳುನಾಡು ರಾಜ್ಯ ಸರ್ಕಾರ ಸ್ವಾಮ್ಯದ ಪೇಪರ್ ಮಿಲ್‌ ಗೆ ಮನವಿ ಮಾಡಿದಲ್ಲಿ ಸಮಸ್ಯೆ ಬಗೆಹರಿಯಬಹುದು ಎನ್ನಲಾಗಿದೆ.

ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (ಕೆಟಿಬಿಎಸ್) ತಿಳಿಸಿರುವಂತೆ ಹಾಲಿ ಸಮಸ್ಯೆ ಸದ್ಯಕ್ಕೆ ಪಠ್ಯಪುಸ್ತಕಗಳ ಸರಬರಾಜಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಈಗಾಗಲೇ ಶೇ.೬೪ರಷ್ಟು ಮುದ್ರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ.೫೭ರಷ್ಟು ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ.

ಆದಾಗ್ಯೂ, ಮೇ ೧೬-೨೦ರ ನಡುವೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಲಭ್ಯವಾಗುತ್ತದೆ ಎನ್ನುವುದು ಕೆಟಿಬಿಎಸ್‌ ನ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಅವರ ವಿಶ್ವಾಸವಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Karnataka-textbook-printing-stalled-due -shortage – paper- supplies.