ಕರ್ನಾಟಕ: ಹುಲಿ ಗಣತಿ ಆರಂಭಿಸಲು ಅರಣ್ಯ ಇಲಾಖೆ ಸಿದ್ಧತೆ.

Promotion

ಬೆಂಗಳೂರು, ಅಕ್ಟೋಬರ್ 20, 2021 (www.justkannada.in): ಕರ್ನಾಟಕದ ಅರಣ್ಯ ಇಲಾಖೆಯ ಒಂದು ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳು ಅಕ್ಟೋಬರ್ ತಿಂಗಳ ಕೊನೆಯ ವಾರದಿಂದ ರಾಜ್ಯದಲ್ಲಿ ಹುಲಿ ಗಣತಿಯನ್ನು ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ಮಲೈಮಹದೇಶ್ವರ ಹುಲಿ ಮೀಸಲು ಪ್ರದೇಶ (ಇತ್ತೀಚಿನ ಸೇರ್ಪಡೆ), ಬಂಡಿಪುರ ಹುಲಿ ಮೀಸಲು ಹಾಗೂ ಬಿಳಿಗಿರಿರಂಗನಾಥನ ದೇವಾಲಯದ ಹುಲಿ ಮೀಸಲು ಪ್ರದೇಶಗಳು ಸೇರಿದಂತೆ ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿಯ ಗಣತಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಅರಣ್ಯ ಇಲಾಖೆ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಮಲೈಮಹದೇಶ್ವರ ಬೆಟ್ಟದಲ್ಲಿ ಗಣತಿ ಕಾರ್ಯ ಈಗಾಗಲೇ ಆರಂಭವಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ವಿ. ಏಡುಕೊಂಡಲು ಅವರು ಮಲೈಮಹದೇಶ್ವರ ಹುಲಿ ಮೀಸಲು ಅರಣ್ಯದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. “ನನ್ನ ವಿಭಾಗದಡಿ ೨೫೦ ಅಧಿಕಾರಿಗಳನ್ನು ಹುಲಿಗಣತಿ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಮೊದಲನೇ ಹಂತದಲ್ಲಿ ಕ್ಷೇತ್ರ ದತ್ತಾಂಶವನ್ನು ಸಂಗ್ರಹಿಸಲಾಗುವುದು. ಅದರಲ್ಲಿ ಹುಲಿಗಳ ನೇರ ಹಾಗೂ ಪರೋಕ್ಷ ಕುರುಹುಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಎರಡನೆಯ ಹಂತದಲ್ಲಿ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲಾಗುವ ಚಿತ್ರಗಳನ್ನು ಆಧರಿಸಿ ನಾವು ಹುಲಿಗಳ ಸಂಖ್ಯೆಯನ್ನು ಅಂದಾಜಿಸುತ್ತೇವೆ. ಈ ಕೆಲಸವನ್ನು ಮುಂದಿನ ೨೫ ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು,” ಎಂದು ವಿವರಿಸಿದರು. ಜೊತೆಗೆ, ಈ ಹೊಸ ಹುಲಿ ಮೀಸಲು ಅರಣ್ಯದಲ್ಲಿ ೨೫ ಹುಲಿಗಳಿರಬಹುದು ಎಂದು ಅಂದಾಜಿಸಿದ್ದಾರೆ.

ಮಲೈಮಹದೇಶ್ವರ ಬೆಟ್ಟದ ಅಂಚಿನ ಪ್ರದೇಶಗಳು, ಕಾವೇರಿ ವನ್ಯಜೀವಿ ಧಾಮ, ಬಿಳಿಗಿರಿರಂಗನಾಥನ ಹುಲಿ ಮೀಸಲು ಅರಣ್ಯ ಹಾಗೂ ತಮಿಳುನಾಡಿನ ಸತ್ಯಮಂಗಲಂ ಹುಲಿ ಮೀಸಲು ಪ್ರದೇಶಗಳೊಂದಿಗೆ ಹಂಚಿಕೊಂಡಿವೆ. ಇದರಿಂದಾಗಿ ಹುಲಿಗಳು ನಮ್ಮ ರಾಜ್ಯದಿಂದ ನೆರೆ ರಾಜ್ಯಗಳಿಗೆ ವಲಸೆ ಹೋಗುವ ಸಾಧ್ಯತೆಗಳಿವೆ. ಹುಲಿ ಮೀಸಲು ಪ್ರದೇಶವಿರುವ ಸ್ಥಳ ಪಶ್ಚಿಮ ಹಾಗೂ ಪೂರ್ವ ಘಾಟ್‌ ಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ ಎನ್ನುವುದು ಏಡುಕೊಂಡಲು ಅವರ ವಿಶ್ವಾಸವಾಗಿದೆ.

ಈ ನಡುವೆ ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ (ಕೆಟಿಆರ್) ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆ ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲೇ ಸೈನ್ ಮತ್ತು ಲೈನ್ ಟ್ರ್ಯಾನ್ಸೆಕ್ಟ್ ಸಮೀಕ್ಷೆಗಳನ್ನು (sign and line transect surveys) ಆರಂಭಿಸಲಾಗುವುದು. ಕೆಟಿಆರ್, ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಈ ಮೂರೂ ಜಿಲ್ಲೆಗಳ ಅಂಚುಗಳಿಗೆ ಹೊಂದಿಕೊಂಡಂತಿದೆ. ಈ ಮೀಸಲು ಅರಣ್ಯದಲ್ಲಿ ಕನಿಷ್ಠ ೩೦ ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ವಿಜಯ್‌ ಕುಮಾರ್ ಗೋಗಿ ಅವರು ಈ ಬಾರಿ ಹುಲಿಗಣತಿ ಕಾರ್ಯದಲ್ಲಿ ಸ್ವಯಂ ಸೇವಕರ ಸೇವೆಯನ್ನು ಪಡೆಯಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

೨೦೧೮ರಲ್ಲಿ ಕೈಗೊಂಡಂತಹ ಹುಲಿಗಣತಿಯಲ್ಲಿ ಮಧ್ಯ ಪ್ರದೇಶ ರಾಜ್ಯ ಒಟ್ಟು ೨೫೬ ಹುಲಿಗಳೊಂದಿಗೆ ಭಾರತದ ಅತೀ ಹೆಚ್ಚಿನ ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕರ್ನಾಟಕ ೫೨೪ ರಾಯಲ್ ಬೆಂಗಾಲ್ ಹುಲಿಗಳ ಸಂಖ್ಯೆಯೊಂದಿಗೆ ಎರಡನೆ ಸ್ಥಾನ ಹಾಗೂ ಉತ್ತರಖಾಂಡ್ ೪೪೨ ಹುಲಿಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದವು.

Key words: Karnataka-Forest Department – start –tiger- census