ಬಿಬಿಎಂಪಿ ವಾರ್ಡುಗಳ ನಡುವೆ ತಾರತಮ್ಯತೆ ಮಾಡುತ್ತಿರುವುದೇ?

ಬೆಂಗಳೂರು, ಅಕ್ಟೋಬರ್, 20, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಧಾಕೃಷ್ಣ ದೇವಸ್ಥಾನ ಹಾಗೂ ಸಂಜಯನಗರಗಳಂತಹ ವಾರ್ಡುಗಳಲ್ಲಿ ಕಸ ಸಂಗ್ರಹ ಹಾಗೂ ಸಾಗಣೆಯ (ಸಿ&ಟಿ) ಶುಲ್ಕವನ್ನು, ಆ ವಾರ್ಡುಗಳು ಇತರೆ ವಾರ್ಡುಗಳಿಗಿಂತ ಪ್ರದೇಶ ಅಳತೆಯಲ್ಲಿ ಚಿಕ್ಕದಾಗಿದ್ದರೂ ಸಹ ಎರಡು ಪಟ್ಟು ಹೆಚ್ಚು ಹಣ ವೆಚ್ಚ ಮಾಡುತ್ತಿದೆಯಂತೆ. ಬಿಬಿಎಂಪಿ ಇತರೆ ವಾರ್ಡುಗಳಲ್ಲಿ ಇದೇ ಕೆಲಸವನ್ನು ನಿರ್ವಹಿಸಲು ಮಾಸಿಕ ಸರಾಸರಿ ತಲಾ ರೂ.೨೦ ಲಕ್ಷ ಬಿಲ್ ಮಾಡಿದರೆ, ವಾರ್ಡ್ ಸಂಖ್ಯೆ ೧೮ ಹಾಗೂ ೧೯ರ ಮಾಸಿಕ ಬಿಲ್ ಮೊತ್ತ ತಲಾ ರೂ.೫೦ ಲಕ್ಷವಂತೆ.

ಬಿಬಿಎಂಪಿ ವತಿಯಿಂದ ಪಡೆಯಲಾಗಿರುವ ದತ್ತಾಂಶಗಳ ಪ್ರಕಾರ ರಾಧಾಕೃಷ್ಣ ದೇವಸ್ಥಾನದ ವಾರ್ಡ್ ನ (ವಾರ್ಡ್ ೧೮) ಮಾಸಿಕ ಕಸ ಸಂಗ್ರಹದ ಬಿಲ್ ರೂ.೪೩.೫೦ ಲಕ್ಷವಾದರೆ, ಸಂಜಯನಗರ ವಾರ್ಡ್ ನ (ವಾರ್ಡ್ ೧೯) ಬಿಲ್ ಮೊತ್ತ ರೂ.೫೦.೪೦ ಲಕ್ಷವಂತೆ. ಬಿಬಿಎಂಪಿ ಕಳೆದ ಒಂದೂವರೆ ವರ್ಷದಿಂದಲೂ ಈ ಎರಡೂ ವಾರ್ಡುಗಳಲ್ಲಿ ಈ ರೀತಿ ಬೃಹತ್ ಬಿಲ್ ಮೊತ್ತವನ್ನು ಬಿಡುಗಡೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಎರಡೂ ವಾರ್ಡ್  ಗಳು ಭೌಗೋಳಿಕವಾಗಿ ತಲಾ ೨ ಕಿ.ಮೀ.ಗಳಗಿಂತಲೂ ಕಡಿಮೆ ಅಳತೆಯನ್ನು ಹೊಂದಿವೆ.

ಹೊರಮಾವು (ರೂ.೪೯ ಲಕ್ಷ), ವರ್ತೂರು (ರೂ.೪೪.೨೦ ಲಕ್ಷ), ಬೆಳ್ಳಂದೂರು (ರೂ.೩೮.೭೪ ಲಕ್ಷ), ಹೆಮ್ಮಿಗೆಪುರ (ರೂ.೪೨.೨೪ ಲಕ್ಷ)ಗಳಂತಹ ಇತರೆ ವಾರ್ಡ್ ಗಳಿಗೆ ಬಿಬಿಎಂಪಿ ಮಾಡುತ್ತಿರುವ ಕಸ ಸಂಗ್ರಹದ ಬಿಲ್ ಮೊತ್ತದ ಪಾವತಿ ನ್ಯಾಯುತವಾಗಿವೆ. ಏಕೆಂದರೆ ಈ ವಾರ್ಡ್ ಗಳು, ವಾರ್ಡ್ ೧೮ ಹಾಗೂ ೧೯ರ ಹೋಲಿಕೆಯಲ್ಲಿ ೧೦-೧೫ ಪಟ್ಟು ದೊಡ್ಡದಾಗಿವೆ. ಹೆಮ್ಮಿಗೆಪುರ ವಾರ್ಡ್ ೩೦.೫ ಚದರ ಕಿ.ಮೀ. ವ್ಯಾಪ್ತಿ ಹೊಂದಿದ್ದರೆ, ಬೆಳ್ಳಂದೂರು ೨೬.೪ ಚದರ ಕಿ.ಮೀ.ಗಳ ಅಳತೆಯನ್ನು ಹೊಂದಿದೆ.

ಮಲ್ಲೇಶ್ವರಂ, ರಾಜಾಜಿನಗರ, ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್ ಹಾಗೂ ಬೊಮ್ಮನಹಳ್ಳಿಗಳಡಿ ಬರುವ ವಾರ್ಡುಗಳೂ ಸಹ ಇದೇ ಕೆಲಸಕ್ಕೆ ರೂ.೧೩ ಲಕ್ಷದಿಂದ ರೂ.೨೦ ಲಕ್ಷದವರೆಗೆ ಖರ್ಚು ಮಾಡುತ್ತಿವೆ.

ಮೂಲಗಳ ಪ್ರಕಾರ, ವಾರ್ಡ್ ೧೮ ಹಾಗೂ ೧೯ರಲ್ಲಿ ಕಸ ಸಂಗ್ರಹ ಹಾಗೂ ಸಾಗಣೆಗೆ ಬಿಬಿಎಂಪಿ ಗುತ್ತಿಗೆ ನೀಡಿರುವ ಸೇವಾದಾರರು, ರಸ್ತೆಗಳ ಮೇಲೆ ಬಿದ್ದಿರುವ ಎಲೆಗಳನ್ನು ತೆಗೆದು ಸ್ವಚ್ಛಗೊಳಿಸುವುದು ಹಾಗೂ ದೈನಂದಿನ ಆಧಾರದಲ್ಲಿ ಎರಡು ಪಾಳಿಗಳಲ್ಲಿ ಕಸ ಸಂಗ್ರಹ ಮಾಡುತ್ತಿರುವುದಾಗಿ ಕಾರಣ ನೀಡಿ ಹೆಚ್ಚು ಮೊತ್ತವನ್ನು ಸುಲಿಗೆ ಮಾಡುತ್ತಿದ್ದಾರೆ. ಮೇಲಾಗಿ ಈ ವಾರ್ಡುಗಳಲ್ಲಿ ಯಾಂತ್ರಿಕ ಕಸ ಗುಡಿಸುವ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಬಳಸಲಾಗುತ್ತಿದೆಯಂತೆ. ಇದರಿಂದಾಗಿ ಖರ್ಚು ಹೆಚ್ಚಾಗಿದೆಯಂತೆ.

ಈ ಸಂಬಂಧ ಮಾತನಾಡಿದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು, “ಈ ಕುರಿತು ನಮಗೆ ದೂರು ಬಂದಿದೆ. ನಾನು ಸಂಬಂಧಪಟ್ಟ ಇಂಜಿನಿಯರುಗಳಿಗೆ ಬಿಲ್ ಪಾವತಿಯನ್ನು ತಡೆಹಿಡಿಯುವಂತೆ ಸೂಚನೆ ನೀಡಿದ್ದೇವೆ ಎಂದರು. ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಅವರು ಈ ಕುರಿತು ಪ್ರತಿಕ್ರಿಯಿಸಲು ಲಭ್ಯವಾಗಲಿಲ್ಲ.

ಈ ಎರಡು ವಾರ್ಡುಗಳಲ್ಲಿ 30ಕ್ಕೂ ಹೆಚ್ಚಿನ ಸಂಖ್ಯೆಯ ಎಂಎಲ್‌ಎಗಳು ಹಾಗೂ ಹಿರಿಯ ಅಧಿಕಾರಿಗಳು ವಾಸಿಸುತ್ತಿದ್ದು, ಈ ಕಾರಣದಿಂದಾಗಿ ಬಿಬಿಎಂಪಿ ಈ ವಾರ್ಡುಗಳ ಸ್ವಚ್ಛತೆಗೆ ಇಷ್ಟೊಂದು ಬೃಹತ್ ಮೊತ್ತವನ್ನು ಖರ್ಚು ಮಾಡುತ್ತಿದೆ ಎನ್ನುವುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ. “ಈ ವಾರ್ಡುಗಳು ಇತರೆ ವಾರ್ಡುಗಳ ಹೋಲಿಕೆಯಲ್ಲಿ ಸ್ವಚ್ಛವಾಗಿವೆ. ಸಚಿವರು ಹಾಗೂ ಅಧಿಕಾರಿಗಳೂ ಒಳಗೊಂಡಂತೆ ಈ ವಾರ್ಡುಗಳಲ್ಲಿ ಅನೇಕ ವಿಐಪಿಗಳು ವಾಸಿಸುತ್ತಿರುವುದೇ ಇದಕ್ಕೆ ಕಾರಣವಿರಬಹುದು. ಆದರೆ ಇದು ನ್ಯಾಯೋಚಿತವಲ್ಲ. ಸಾಮಾನ್ಯ ಜನರೂ ಸಹ ಅವರಷ್ಟೇ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಕೆಲವು ವಾರ್ಡುಗಳಿಗೆ ಮಾತ್ರ ವಿಶೇಷ ಗಮನ ನೀಡುವುದೇಕೆ,” ಎನ್ನುತ್ತಾರೆ ಸಂಜಯನಗರ ನಿವಾಸಿ ಸುಬ್ಬಯ್ಯ ಟಿ.ಎಸ್. ಮೇಲಾಗಿ ಬಿಬಿಎಂಪಿ ನಿಜವಾಗಿಯೂ ಅಷ್ಟೂ ಮೊತ್ತವನ್ನು ಖರ್ಚು ಮಾಡುತ್ತಿದೆಯೋ, ಇಲ್ಲವೋ? ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ನಾವು ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿಯ ವಿಶೇಷ ಆಯುಕ್ತ (ಹಣಕಾಸು) ತುಳಸಿ ಮದ್ದಿನೇನಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಅವರು ಕರೆಗೆ ಲಭ್ಯವಾಗಲಿಲ್ಲ. ಬಿಬಿಎಂಪಿ ಕೇವಲ ೮೫ ವಾರ್ಡುಗಳಿಗೆ ಮಾತ್ರ ಟೆಂಡರ್ ವ್ಯವಸ್ಥೆಯ ಮೂಲಕ ಸೇವಾದರರನ್ನು ನೇಮಕ ಮಾಡಿದೆ. ಉಳಿದ ವಾರ್ಡುಗಳಲ್ಲಿ ಇನ್ನೂ ಟೆಂಡರ್‌ ಗಳನ್ನು ಆಹ್ವಾನಿಸಬೇಕಿದೆ. ಟೆಂಡರ್‌ಗಳನ್ನು ಆಹ್ವಾನಿಸಿದ್ದರೆ ಸ್ಪರ್ಧಾತ್ಮಕ ಬಿಡ್‌ಗಳು ಲಭಿಸುತ್ತಿದ್ದವು ಎನ್ನುವುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: BBMP -discriminating -between -wards