ರಿವಲ್ವಾರ್ ತೋರಿಸಿ 500 ರೂ ಕೊಟ್ಟಿದ್ದ ಪ್ರೀತಿಯ ಮಾಂತ್ರಿಕ ರವಿ ಬೆಳಗೆರೆ ..!

ಬೆಂಗಳೂರು,ನವೆಂಬರ್,13,2020(www.justkannada.in):

ರಿವಲ್ವಾರ್ ತೋರಿಸಿ 500 ರೂ ಕೊಟ್ಟಿದ್ದ ಪ್ರೀತಿಯ ಮಾಂತ್ರಿಕ ರವಿ ಬೆಳಗೆರೆ ..!

ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ

ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ ತಾರೀಖು. ಪತ್ರಿಕೋದ್ಯಮ‌ ಮುಗಿಸಿದ ಬಳಿಕ ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಿದ್ದವನು. ಬೆಂಗಳೂರಲ್ಲಿ ಕೆಲಸ ಮಾಡಬೇಕೆಂದು ಹಿಂದಿನ ದಿನ TV9 ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ, ಒಲ್ಲದ ಮನಸು ಅಲ್ಲಿ ಕೆಲಸ ಬೇಡವೆಂದು ಮರುದಿನ ನನ್ನನ್ನ ಹಾಯ್ ಬೆಂಗಳೂರು ಕಚೇರಿ ಕಡೆಗೆ ಸೆಳೆಯುತ್ತಿತ್ತು. ಕಾರಣ, ನನಗೆ ಮೊದಲಿನಿಂದಲೂ ರವಿ ಬೆಳಗೆರೆ ಎಂದರೆ ಏನೋ ಒಂಥರ ಹುಚ್ಚು – ಪ್ರೀತಿ..! ಕಾಲೇಜು ದಿನಗಳಲ್ಲಿ ಅವರ ಹಲವು ಅಂಕಣಗಳ ಓದಿ ಅಭಿಮಾನಿಯಾಗಿದ್ದ ನನಗೆ ಅವರೊಟ್ಟಿಗೆ ಕೆಲಸ ಮಾಡುವ ಹೆಬ್ಬಯಕೆ. ಆ ಹೊತ್ತಿಗೆ ನನ್ನ ಪಾಲಿಗೆ ಅಕ್ಷರಬ್ರಹ್ಮನಂತೆ ಕಾಣುತ್ತಿದ್ದ ಅವರನ್ನ ಭೇಟಿ ಮಾಡಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಮಹದಾಸೆ. ಆ ಕಾರಣದಿಂದಲೇ TV9 ಅಲ್ಲಿ ಕೆಲಸ ಸಿಕ್ಕಿದ್ದರೂ, ಮರು ದಿನವೇ ಹಾಯ್ ಬೆಂಗಳೂರು ಕಚೇರಿಯಲ್ಲಿ ಕೆಲಸಕ್ಕಾಗಿ ಕಾದು ಕುಳಿತಿದ್ದೆ.

ಆರಂಭದಲ್ಲಿ ಕಾವಲುಗಾರ ನನ್ನನ್ನ ಗೇಟ್ ಒಳಗೂ ಕೂಡ ಬಿಟ್ಟಿರಲಿಲ್ಲ.‌ ಬೆಳಗ್ಗೆ 10 ಗಂಟೆಗೆ ಹೋದವನು ಬೇಸರದಿಂದಲೇ ಗೇಟ್ ಹೊರಗೆ ನಿಂತಿದ್ದೆ. ಮಧ್ಯಾಹ್ನ 2.30 ರ ಸುಮಾರಿಗೆ ಕಪ್ಪು‌ಬಣ್ಣದ ಕಾರಲ್ಲಿ ಬಂದ ರವಿ‌ಬೆಳಗೆರೆ ಸರ್,

ದೂರದಲ್ಲಿ ನಿಂತಿದ್ದ ನನ್ನನ್ನ ಕರೆದು ಏನು ಎಂದು ಕಪಾಳಕ್ಕೆ ಬಾರಿಸುವ ಧಾಟಿಯಲ್ಲೆ ಪ್ರಶ್ನಿಸಿದರು. ನಾನೋ ದಡ್ಡನಂತೆ,  ಸರ್ ನಿಮ್ಮನ್ನ ಭೇಟಿಯಾಗಬೇಕು ಎಂದುಬಿಟ್ಟಿದ್ದೆ.( ಬಹುಶಃ ಕೆಲಸ ಬೇಕು ಎಂದಿದ್ದರೆ ಒಳಗೂ ಸೇರಿಸುತ್ತಿಲ್ಲ ಅನಿಸುತ್ತೆ )

ಕಾವಲುಗಾರನಿಗೆ ‘ನೋಡಪ್ಪಾ, ಆ‌ ಹುಡುಗನನ್ನ 15 ನಿಮಿಷ ಬಿಟ್ಟು ಡೈರೆಕ್ಟಾಗಿ ನನ್ ಹತ್ರ ಕಳ್ಸು’ ಅಂತ ಹೇಳಿ ಒಳಗೆ ಹೋದರು.

ಇದಾದ 15-20 ನಿಮಿಷದ ಬಳಿಕ ಒಳಗೆ ಹೋದ ನನಗೆ ಅವರ ಕೊಠಡಿಗೆ ಹೋಗುವ ಅವಕಾಶ ಸಿಕ್ಕಿತ್ತು. ನನಗೋ, ಅವರ ಎದುರು ದೊಡ್ಡ ಆಲದ‌ಮರದ ಬಳಿ ಕುಳಿತ ಅನುಭವ.

ಅಷ್ಟೊತ್ತಿಗೆ ಮಾತು ಆರಂಭಿಸಿದ ರವಿ ಸರ್ ಬಾಯಲ್ಲಿ ಸಿಗರೇಟ್ ಇತ್ತು. ‘ಏಯ್ ಹೇಳೋ, ಯಾರೋ‌ ನೀನು, ಏನೋ‌ ನಿನ್ ಪ್ರಾಬ್ಲಂ, ಎಲ್ಲಿಂದ‌ ಬಂದಿದಿಯೋ ಅಂದವರೇ‌ ದುರುಗುಟ್ಟಿ ನೋಡಲು ಆರಂಭಿಸಿದರು.journalist-ravi-belagere-revolver-show-rs-500-writing-ravi-pandavapura

ನನಗೆ ಅವರ ಮಾತು, ನಡವಳಿಕೆ ವಿಚಿತ್ರ ಅಂತ ಅನಿಸಿದರೂ ಅವರ ಅಭಿಮಾನದ ಮೇಲಿನ ಹುಚ್ಚು ಇದೆಲ್ಲವನ್ನೂ ಮರೆಸಿತ್ತು. ನಾನು ಸರ್ ಒಂದ್ ಕೆಲಸ ಬೇಕು. ಪತ್ರಿಕೋದ್ಯಮ ಮುಗಿಸಿದ್ದೀನಿ. ಟಿರ್ವಿ ಅಲ್ಲಿ ಸದ್ಯ ಕೆಲಸ ಮಾಡ್ತಿದೀನಿ ಅಂದೆ.

ಬಾಯ್ ಮೇಲೆ ಬೆರಳಿಟ್ಟುಕೊಂಡು,‌ ಅಲೆಲೆಲೆ ಲೇ,‌ ಎಷ್ಟೋ‌ ನಿಂಗ್ ವಯಸ್ಸು, ನೋಡಿದ್ರೆ ಒಂದ್ ಮೂವತ್ ಮೂವತ್ತೈದ್ ಕೆಜಿ‌ ತೂಕ‌ ಬರ್ತಿಯಾ..ಏನ್ ಓದಿದಿಯಾ, ಯಾವ್ ಊರಿಂದ‌ ಬಂದಿದಿಯಾ ಅಂದ್ರು.

ನನಗೋ ಈ‌ ಸರಿ ಬೇಸರದ ನಡುವೆ ಅವಮಾನ, ನಾನ್ ಮಂಡ್ಯದ ಪಾಂಡವಪುರದಿಂದ ಬಂದಿದೀನಿ, ನಾನು ಪತ್ರಿಕೋದ್ಯಮದಲ್ಲಿ ಸ್ನಾತ್ತಕ‌ ಮುಗಿಸಿದೀನಿ, ಈ ರಿಸ್ಯೂಮ್‌ ನೋಡಿ‌ ಸರ್ ಅಂದೆ.

ಎಲ್ಲವನ್ನೂ ನೋಡಿದ ಅವರು ‘ಮಾಸ್ಟರ್ ಡಿಗ್ರಿ ಮುಗಿಸಿದ್ದೀಯಾ,  ಮುಖದಲ್ಲಿ ಮೀಸೇನೆ ಬಂದಿಲ್ಲವಲ್ಲೋ’ ಎಂದವರೇ ಮೇಲೆದ್ದು ನಿಂತು ತಮ್ಮ ಪ್ಯಾಂಟಿನ ಜೇಬಿಗೆ ಕೈ ಹಾಕಿದ್ರು.

ನನಗೋ ಅಚ್ಚರಿ.. ಎರಡೂ‌ ಜೇಬಿಗೆ ಏಕಕಾಲಕ್ಕೆ ಕೈ ಹಾಕಿದ ಅವರು ಒಂದ್ ಕೈಯ್ಯಲ್ಲಿ ರಿವಲ್ವಾರ್ ತೆಗೆದು ಟೇಬಲ್‌ ಮೇಲೆ ಇಟ್ಟರೆ. ಮತ್ತೊಂದು‌‌ ಜೇಬಿಂದ ಪರ್ಸ್ ತೆಗೆದು 500 ರೂಪಾಯಿ ನೋಟು ತೆಗೆದು ತಗೋ ಇದನ್ನ ಎಂದು ಕೈಗೆ ಕೊಟ್ಟರು.

ಈ ಬಾರಿ ನನಗೆ ಅಚ್ಚರಿ..!,  ಯಾಕ್ ಸರ್ ಎಂದು ಪ್ರಶ್ನಿಸಿದ ನನಗೆ,

‘ನೋಡೋ ರವಿ, ನಮ್ಮಲ್ಲಿ ಸದ್ಯಕ್ಕೆ‌ ಕೆಲಸ ಇಲ್ಲ. ಇದ್ರು ನಿನಗೆ ಕೊಡಲ್ಲ ಅಂದ್ರು’ ನನಗೆ ಸಿಟ್ಟು ಬರತೊಡಗಿತು. ಮತ್ತೆ ಮಾತು ಮುಂದುವರಿಸಿ, ನಿನ್ನನ್ನ ನೋಡಿದ್ರೆ ಅಮಾಯಕನಂತೆ ಕಾಣ್ತೀಯ.‌ ಈ ಟ್ಯಾಬ್ಲೈಡ್ ಪತ್ರಿಕೆಯಲ್ಲಿ ಕೆಲಸ ಕಲಿಯೋಕೆ ಆಗಲ್ಲ. ಅದರಲ್ಲೂ ನಿನಗಿಲ್ಲಿ‌ ಭವಿಷ್ಯವಿಲ್ಲ. ನೀನು ಮಾಡುತ್ತಿರುವ ಸಂಸ್ಥೆಯಲ್ಲೇ ಮುಂದುವರಿ. ಇಲ್ಲಾಂದ್ರೆ ಊರಿಗೆ ಹೋಗಿ ಬೇರೆ ಏನಾದ್ರು ಮಾಡು.‌ಚೆನ್ನಾಗ್ ಬದುಕು ಅಂದ್ರು.

ನಾನು ಕೆಲಸವೇ ಕೊಡದ ಮೇಲೆ 500 ರೂಪಾಯಿ ಏಕೆ ಅಂತ ವಾಪಸ್ ಕೊಡಲು ಮುಂದಾದೆ. ರವಿ‌ಸರ್ ತಕ್ಷಣ ರಿವಲ್ವಾರ್ ಕೈಗೆ ಇಟ್ಕೊಂಡು ಶೂಟ್ ಮಾಡಿಬಿಡ್ತೀನಿ ಈಡಿಯಟ್, ದುಡ್ಡು ಕೊಟ್ಟದ್ದು ಊಟ ಮಾಡು ಅಂತ. ನನಗೆ ನೀನು ಬೆಳಗ್ಗಿನಿಂದ‌ ಇಲ್ಲೇ ಇದ್ದೀಯ ಅಂತ ಗೊತ್ತು. ನಿನಗೆ ಊಟ ಕೊಡಿಸೋಣ ಅಂದ್ರೆ ನಾನ್ ಹೊರಗೆ ಬರಲ್ಲ. ಮನೆಯಿಂದ ಈವತ್ತು ಊಟ ಕೂಡ ತಂದಿಲ್ಲ. ಇಲ್ಲಿ‌ ಕೆಲಸ ಮಾಡೋ ಎಲ್ಲರೂ ಅವರವರ ಬಾಕ್ಸ್ ಅಲ್ಲಿ ಊಟ ಮಾಡಿಕೊಂಡಿದ್ದಾರೆ. ಆ ಕಾರಣಕ್ಕೆ ದುಡ್ಡು ಕೊಟ್ಟದ್ದು ಎಂದವರ ಹೃನ್ಮನದಲ್ಲಿ ಪ್ರೀತಿಯ ಹೊಳೆಯೇ ಹರಿದಿತ್ತು.

ಇಷ್ಟೆಲ್ಲ ಘಟನಾವಳಿ ಬಳಿಕ ನಾನು ಮತ್ತೊಮ್ಮೆ  , ನನಗೆ ನಿಮ್ಮ ಬಳಿ ಕೆಲಸ ಮಾಡುವ ಹೆಬ್ಬಯಕೆ ಇದೆ ಎಂದು ಹೇಳಿದೆ. ಅವರು ಮತ್ತದೇ ರಿವಲ್ವಾರ್ ತೋರಿಸಿ, ಅಯ್ಯೋ‌ ಹುಚ್ಚಾ.. ನಿನಗೆ ಈವಾಗ ನಾನ್ ಹೇಳ್ತಾ ಇರೋದು ಅರ್ಥ ಆಗ್ತಿಲ್ಲ. ಅರ್ಥವಾದಾಗ ನೀನೇ ಈ ಕಡೆ ಬರಲ್ಲ. ಹಾಗೂ ಅರ್ಥವಾದರೆ ಒಮ್ಮೆ ಭೇಟಿಯಾಗೋಣ ಎಂದಿದ್ದರು.   ಅಂದೇ ಕೊನೆ ಅವರನ್ನ ಖುದ್ದು ಭೇಟಿ  ಆಗಲು ಸಾಧ್ಯವೇ ಆಗಲಿಲ್ಲ.‌

ಇದಾದ ಭರ್ತಿ ಹತ್ತು ವರ್ಷದ ಬಳಿಕ ಒಮ್ಮೆ ಅವರ ನಂಬರಿಗೆ ಕರೆ ಮಾಡಿ,‌‌ ಘಟನಾವಳಿಗನ್ನೆಲ್ಲ ನೆನಪಿಸಿ, ಸರ್ ನಾನು ನಾಲ್ಕು ಪುಸ್ತಕ ಬರೆದಿರುವೆ.‌ನನ್ನ ನಾಲ್ಕನೇ ಪುಸ್ತಕ ನೀವೇ ಬಿಡುಗಡೆ ಮಾಡಬೇಕು ಎಂದು ಆಹ್ವಾನಿಸಿದ್ದೆ. ಅವರು ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು ಕಣೋ ಎಂದವರು ಸಿಕ್ಕಾಪಟ್ಟೆ  ಖುಷಿ ಆಯ್ತು ಒಳ್ಳೆದಾಗ್ಲಿ ಎಂದು ಹಾರೈಸಿದ್ದರು.

ಸಾರಿ ಕಣೋ, ಬೇಜಾರಾಗಬೇಡ.ಬೆಂಗಳೂರಾದರೆ ಬರ್ತೀನಿ, ಮೈಸೂರಿನವರಗೆ ಆಗಲ್ಲ ಕಣೋ ಎಂದವರು ಮುಂದಿನ ಪುಸ್ತಕವನ್ನ ನನ್ನ ಕಚೇರಿಯಲ್ಲೆ ಬಿಡುಗಡೆ ಮಾಡ್ತೀಸ್ತೀನಿ ಎಂದಿದ್ದರು.

ಅದಕ್ಕಾಗಿ ಸಿದ್ಧತೆ ನಡೆಸಿಕೊಂಡಿದ್ದ ನಾನು‌ಕೂಡ ಸಿದ್ಧತೆ ನಡೆಸಿಕೊಂಡಿದ್ದೆ. ಆ ಕೃತಿಯ ಅಚ್ಚುಪ್ರತಿಯನ್ನ ಕೊರಿಯರ್ ಮಾಡಿದ್ದೆ. ಕಾರಣ , ಆ ಪುಸ್ತಕಕ್ಕೆ  ಅವರೇ ‘ಮುನ್ನುಡಿ’ ಬರೆಯಲು ಮನಸು ಮಾಡಿದ್ದರು. ದುರಂತ,  ಆ ಮುನ್ನುಡಿ ಕೈ ಸೇರುವ ಮುನ್ನವೇ ಅವರ ಅಸ್ತಂಗತದ ಸುದ್ದಿ ಬಂದಿದೆ.

ಕೊನೆಗೂ ಅವರನ್ನ ಭೇಟಿ‌ ಆಗುವ ಹಾಗೂ ಅವರ ಮುನ್ನಡಿ ಜೊತೆಗೆ ಪುಸ್ತಕ‌ ಬಿಡುಗಡೆಯ ಕನಸು ಕನಸಾಗಿಯೇ ಉಳಿದಿದೆ.

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್.journalist-ravi-belagere-revolver-show-rs-500-writing-ravi-pandavapura

ಬರಹ:

ಪತ್ರಕರ್ತ ರವಿ ಪಾಂಡವಪುರ…

Key words:  journalist- ravi belagere- Revolver Show -Rs. 500-writing –Ravi pandavapura