ಬಿಎಸ್ ವೈ ಹತ್ತಿಕ್ಕಲು ಕೇಂದ್ರದಿಂದಲೇ ಐಟಿ ದಾಳಿ:  ವೀರಶೈವ ಲಿಂಗಾಯತರಿಗೆ ಮಾಡಿದ ಅಪಮಾನ-ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.

ಮೈಸೂರು,ಅಕ್ಟೋಬರ್,9,2021(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಹತ್ತಿಕ್ಕಲು ಕೇಂದ್ರ ಸರ್ಕಾರ ಐಟಿ ದಾಳಿ ಮಾಡಿಸಿದೆ. ಬಿಎಸ್ ವೈ ಗುರಿಯಾಗಿಸಿ ಐಟಿ ದಾಳಿ ಮಾಡಿಸುವ ಮೂಲಕ ವೀರಶೈವ ಲಿಂಗಾಯತರಿಗೆ ಅಪಮಾನ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಲೇವಡಿ ಮಾಡಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಹಲವು ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರವೇ ಐಟಿ ದಾಳಿ ಮಾಡಿಸಿದೆ. ಯಡಿಯೂರಪ್ಪರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುವ ಮೂಲಕ ವೀರಶೈವ ಲಿಂಗಾಯತರಿಗೆ ಅಪಮಾನ ಮಾಡಲಾಗಿದೆ. ಒಂದೆಡೆ ಅದೇ ಸಮುದಾಯದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡುವ ಮೂಲಕ, ಮತ್ತೊಂದೆಡೆ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರನ್ನು ಮೂಲೆಗುಂಪು ಮಾಡಲು ಬಿಜೆಪಿ ಹೊರಟಿದೆ. ವೀರಶೈವ ಲಿಂಗಾಯರನ್ನು ಬಿಜೆಪಿ ಯೂಸ್ ಅಂಡ್ ತ್ರೋ (ಬಳಸಿಕೊಂಡು ಬಿಸಾಡುತ್ತಿದೆ) ರೀತಿ ನಡೆಸಿಕೊಳ್ಳುತ್ತಿದೆ. ಐಟಿ ದಾಳಿ ವೇಳೆ 300 ಕೋಟಿ ಅಕ್ರಮ ಹಣ ಪತ್ತೆಯಾಗಿರುವ ಬಗ್ಗೆ ಮಾಹಿತಿಯಿದೆ ಎಂದು ಹೇಳಿದರು.dont-look-your-crossover-mysore-addanda-karyappa-kpcc-spokesperson-m-lakshan

ಕಾಂಗ್ರೆಸ್ ಸೋಲಿಸುವ ಏಕೈಕ ಉದ್ದೇಶದಿಂದಲೇ ಜೆಡಿಎಸ್ ನಿಂದ ಮುಸ್ಲೀಂ ಅಭ್ಯರ್ಥಿಗಳು ಕಣಕ್ಕೆ.

ಬಿಜೆಪಿಯಿಂದ ಸುಫಾರಿ ಪಡೆದಿರುವ ಜೆಡಿಎಸ್ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಅನ್ನು ಸೋಲಿಸುವ ಏಕೈಕ ಉದ್ದೇಶದಿಂದ ಜೆಡಿಎಸ್ ಮುಸ್ಲಿಂ  ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಮಂಡ್ಯ, ಮೈಸೂರು ಭಾಗದಲ್ಲೇಕೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಇತ್ತೀಚೆಗೆ ಮಾಜಿ ಸಿಎಂ  ಹೆಚ್ ಡಿ ಕುಮಾರಸ್ವಾಮಿ ಆರ್ ಎಸ್ ಎಸ್ ನ್ನು ಟೀಕಿಸುತ್ತಿರುವುದು ಅವರ ಹೃದಯದಿಂದ ಬಂದಿದ್ದರೆ ನಾವು ಸ್ವಾಗತಿಸುತ್ತೇವೆ. ಆದರೆ ಇದು ಉಪ ಚುನಾವಣೆವರೆಗೆ ಮಾತ್ರ ಇರುತ್ತದೆ. ಜೆಡಿಎಸ್ ಮಾಡಿದ ತಪ್ಪಿನಿಂದ ರಾಜ್ಯದಲ್ಲಿ ಬಿಜೆಪಿ ಬಲವರ್ಧನೆ ಆಯಿತು ಎಂದು ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರದ  ಅವಧಿಯಲ್ಲಿ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ಹೋದದ್ದನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬಂತು. ಜೆಡಿಎಸ್ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದೆ ಎಂದು ಹೇಳಿಕೊಂಡು ಬಿಜೆಪಿ ದೊಡ್ಡಮಟ್ಟದಲ್ಲಿ ಬೆಳೆದಿದೆ. ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು  ಎಂದು ಎಂ.ಲಕ್ಷ್ಮಣ್ ಹೇಳಿದರು.

ಬಿಜೆಪಿಯಿಂದ ಐಟಿ, ಇಡಿ ದುರ್ಬಳಕೆ- ಮಂಜುಳ ಮಾನಸ

ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಮಂಜುಳ ಮಾನಸ,  ಐಟಿ ಇಡಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಐಟಿ ಇಡಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಷ್ಟು ಬೇರೆ ಯಾರು ಇಷ್ಟೊಂದು ದುರ್ಬಳಕೆ ಮಾಡಿಕೊಂಡಿರಲಿಲ್ಲ. ಐಟಿ ಇಡಿ ದಾಳಿ ವಿಚಾರದಲ್ಲಿ ನಾವು ಆಡಳಿತ ಪಕ್ಷದವರನ್ನು ಬಿಡುವುದಿಲ್ಲ ಎನ್ನುವುದರ ಜೊತೆಗೆ, ಯಡಿಯೂರಪ್ಪ ಅವರನ್ನು ಮುಗಿಸಲು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದರು.

ಸಿಂಧಗಿ, ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ನವರ ವಾಹನಗಳನ್ನು ಮಾತ್ರ ವ್ಯಾಪಕವಾಗಿ ತಪಾಸಣೆ ಮಾಡಲಾಗುತ್ತಿದೆ. ಆಡಳಿತ ಪಕ್ಷದ ಮಂತ್ರಿಗಳು, ಶಾಸಕರು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತ ಪಕ್ಷದವರು ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಎರಡೂ ಕ್ಷೇತ್ರದಲ್ಲಿ ಅಕ್ರಮವಾಗಿ ಹಣ ಸಾಗಣೆ ಮಾಡಲಾಗುತ್ತಿದೆ. ಆದರೂ ಎರಡೂ ಕ್ಷೇತ್ರದಲ್ಲಿ ಗೆಲ್ಲಲು ಕಾಂಗ್ರೆಸ್ ಶ್ರಮ ವಹಿಸುತ್ತಿದೆ ಎಂದು ಮಂಜುಳ ಮಾನಸ ತಿಳಿಸಿದರು.

Key words: IT- attacks- targeting-: BS Yeddyurappa-KPCC spokesperson-M. Laxman.