ನಾಟಕ ಪ್ರದರ್ಶನ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಅವಹೇಳನ:  ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ.

ಮೈಸೂರು,ಜನವರಿ,3,2022(www.justkannada.in): ಮೈಸೂರಿನ ರಂಗಾಯಣದಲ್ಲಿ ಒಂದು ನಾಟಕ ಪ್ರದರ್ಶನದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಅವಹೇಳನ,ಅಪಮಾನವಾಗುವ ಕೆಲಸ ಮಾಡಲಾಗಿದೆ. ಒಬ್ಬ ಕಾಮನ್ ಸೆನ್ಸ್ ಇಲ್ಲದ ವ್ಯಕ್ತಿಯನ್ನ  ರಂಗಾಯಣ ನಿರ್ದೇಶಕರಾಗಿ ನೇಮಿಸಿದ್ದಾರೆ. ಇದು ನಮ್ಮ ದುರಂತ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ನಾಟಕ ಪ್ರದರ್ಶನದ ವೇಳೆ ಮಾನ್ಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ವಿರುದ್ಧ ಅವಹೇಳನ ಮಾಡುವಂತ ಘಟನೆ ನಡೆದಿರುವುದಕ್ಕೆ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಮೈಸೂರಿನಲ್ಲಿ ಬಿಜೆಪಿ ಒಂದು ಅಶಾಂತಿ ವಾತಾವರಣ ಸೃಷ್ಟಿಯಾಗುವಂತ ಕೆಲಸ ಮಾಡತ್ತಿದೆ. ಇತ್ತೀಚಿಗೆ ಟಿಪ್ಪು ಕುರಿತ ನಾಟಕ ನಡೆಯಿತು. ಇದರ ಮೂಲಕ ಟಿಪ್ಪುವಿಗೆ ಅವಹೇಳನ ಮಾಡಿದರು. ಇದಕ್ಕೆಲ್ಲ ಇಲ್ಲಿನ ಸಂಸದ ಪ್ರತಾಪ್ ಸಿಂಹ ಕುಮ್ಮಕ್ಕಿನಿಂದ ಈ ಅಡ್ಡಂಡ ಕಾರ್ಯಪ್ಪ ಈ ರೀತಿ ಆಟ ಆಡುತ್ತಿದ್ದಾರೆ. ಈ ಅಡ್ಡಂಡ ಕಾರ್ಯಪ್ಪನಿಗೆ ಬುದ್ದಿ ಕಲಿಸುವ ಕೆಲಸ ಕಾಂಗ್ರೆಸ್ ಪಕ್ಷ ಶೀಘ್ರದಲ್ಲೇ ಮಾಡುತ್ತದೆ ಎಂದು ಕಿಡಿಕಾರದರು.

ಪಂಚಮಸಾಲಿ ಹಾಗು ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ನಿಗದಿ ಮಾಡಿರುವ ಸರ್ಕಾರದ ನಿರ್ಧಾರ ಬಿಜೆಪಿಯ ಚುನಾವಣೆ ಗಿಮಿಕ್. ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ನೀಡುವ ಸರ್ಕಾರದ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಮಾಡಲಾಗಿದೆ. ಆದರೆ ಮೀಸಲಾತಿ ನೀಡುವ ಸರ್ಕಾರದ ನಿಲುವು ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲ. ಮೀಸಲಾತಿ ಪ್ರಮಾಣ 50% ಮೀರಲು ಸಾಧ್ಯವಿಲ್ಲ. ಏನೇ ಆದರೂ ಕಾಂಗ್ರೆಸ್ ವಿರುದ್ಧ ದೂರುತ್ತಾರೆ. ಮೀಸಲಾತಿ ಅನುಷ್ಠಾನ ವಿಚಾರದಲ್ಲಿ ಏನೇ ಆದರೂ ಅದನ್ನು ಕಾಂಗ್ರೆಸ್ ತಲೆಗೆ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.

ಅಮುಲ್ ಜೊತೆ ಕೆಎಂಎಫ್ ವಿಲೀನ ಮಾಡುವ ಸಂಬಂಧ ಚರ್ಚೆ ನಡೆದಿದೆ. ಅಮಿತ್ ಶಾ ನೇತೃತ್ವದಲ್ಲಿ ಅಸ್ಸಾಂನಲ್ಲಿ ನಡೆದ ಸಭೆಯಲ್ಲಿ ದೇಶದ ನಾಲ್ಕು ಪ್ರಮುಖ ಹಾಲು ಒಕ್ಕೂಟಗಳನ್ನು ವಿಲೀನ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಬಿಜೆಪಿ ನಾಯಕರು ವಿಲೀನ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವ ಪರಿಸ್ಥಿತಿಯೇ ಬೇರೆಯಿದ್ದು, ವಿಲೀನಕ್ಕೆ ಹುನ್ನಾರ ನಡೆದಿದೆ. ಕೆಎಂಎಫ್ ಅನ್ನು ಅದಾನಿ ಅಥವಾ ಅಂಬಾನಿ ಒಡೆತನಕ್ಕೆ ಕೊಡಲು ಕೇಂದ್ರ ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ. ಇನ್ನು ಮುಂದಾದರೂ ರಾಜ್ಯ ಬಿಜೆಪಿ ನಾಯಕರು ಧೈರ್ಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ರಾಜ್ಯಕ್ಕೆ ಆಗುವ ಅನ್ಯಾಯವನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದರು.

Key words: Insulting- Siddaramaiah – DK Shivakumar – play- KPCC spokesperson- M. Laxman