ಈ ಬಾರಿ ಬಜೆಟ್‌ ನಲ್ಲಿ ಅಕ್ಷರ, ಆರೋಗ್ಯ,,ಅನ್ನ ಕಡೆಗಣನೆ: ಕೇಂದ್ರದ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ.

Promotion

ಮೈಸೂರು,ಫೆಬ್ರವರಿ,4,2023(www.justkannada.in): ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ ನಲ್ಲಿ ಅಕ್ಷರ, ಆರೋಗ್ಯ, ಅನ್ನವನ್ನು ಕಡೆಗಣಿಸಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ದೇಶದ ಅಭಿವೃದ್ಧಿಗಾಗಿ ಅಕ್ಷರ ಅನ್ನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇವೆಲ್ಲವನ್ನೂ ಕಡೆಗಣಿಸಿದೆ‌. ಅಲ್ಲದೇ ವಿವಿಧ ಇಲಾಖೆಗಳಿಗೆ ನೀಡುವ ಅನುದಾನವನ್ನು ಈ ಬಾರಿಯ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆ. ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ನಿರ್ಲಕ್ಷ್ಯ ಮಾಡಿದ್ದು, ಉಳ್ಳವರ ಪರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಭದ್ರಾವತಿಯಲ್ಲಿರುವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಹೊರಟಿದೆ. ಭದ್ರಾವತಿ ಉಕ್ಕು ಕಾರ್ಖಾನೆ ಲಾಭದಲ್ಲಿದ್ದರೂ ಮುಚ್ಚಲು ಹೊರಟಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಏನು ಮಾಡುತ್ತಿದ್ದೀರಿ. ಆ ಭಾಗದ ಸಂಸದರು ಶಾಸಕರು ಏಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್,  ಮೋದಿ ಅಮಿತ್ ಶಾ ಸೇರಿಕೊಂಡು ಕರ್ನಾಟಕದ ಎಲ್ಲಾ ಆಸ್ತಿಗಳನ್ನು ಒಂದೊಂದಾಗಿ ಗುಜರಾತ್ ನ ಮಾರ್ವಾಡಿಗಳಿಗೆ ಕೊಡುತ್ತಿದ್ದಾರೆ. ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೂ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ. ಹಾಗಾಗಿ ಭದ್ರಾವತಿ ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ. ಮೋದಿ ಅಮಿತ್ ಶಾ ಬಂದಾಗ ಶಿವಮೊಗ್ಗದ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಈ ಬಗ್ಗೆ ಪ್ರಶ್ನೆ ಮಾಡಬೇಕು. ಇದಕ್ಕೇನಾ ರಾಜ್ಯದಲ್ಲಿ 26 ಎಂಪಿಗಳನ್ನು ರಾಜ್ಯದ ಜನರು ಬಿಜೆಪಿಗೆ ಕೊಟ್ಟಿರೋದು ಎಂದು ಗುಡುಗಿದರು.

ಸಿಡಿ ರಾಜಕಾರಣ ತಾರಕಕ್ಕೇರಿರುವುದಕ್ಕೆ ಬೇಸರ‌ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್, ನೀನು ಅಧಿಕಾರದಲ್ಲಿದ್ದಾಗ, ಮಂತ್ರಿ ಆಗಿದ್ದಾಗ ಏನು ಮಾಡಿದೆ ಎಂದು ಪ್ರಶ್ನೆ ಮಾಡಿ‌. ಅದು ಬಿಟ್ಟು ನೀನು ಅಲ್ಲಿ ಮಲಗಿದ್ದೆ, ಇಲ್ಲಿ ಮಲಗಿದ್ದೇ ಎಂದು ತೀರಾ ವೈಯುಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಎಲ್ಲರಿಗೂ ಅವರದ್ದೇ ಆದ ವೈಯುಕ್ತಿಕ ಬದುಕು ಇರುತ್ತದೆ. ವೈಯುಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಟೀಕಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

Key words: Ignoring –literacy-health-central budget –MLC-H. Vishwanath