“ಶ್ರೇಷ್ಠ ಕವಿ ನಾಡೋಜ ಡಾ.ಸಿದ್ಧಲಿಂಗಯ್ಯ ನಾಡಿನ ಸಾಕ್ಷಿಪ್ರಜ್ಞೆ ” 

ಮೈಸೂರು,ಜುಲೈ,3,2021(www.justkannada.in): ಕನ್ನಡ ನಾಡು ಕಂಡ ಹೆಮ್ಮೆಯ ಸೂಕ್ಷ್ಮಪ್ರಜ್ಞಾ ಸಾಹಿತಿ ಡಾ. ಸಿದ್ಧಲಿಂಗಯ್ಯ ಅಸ್ತಂಗತರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.jk

ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ  ಸಿದ್ಧಲಿಂಗಯ್ಯನವರು ದಲಿತ ಬಂಡಾಯ ಸಾಹಿತಿ ಎಂದೇ ಖ್ಯಾತಿ ಪಡೆದವರು. ಸಿದ್ಧಲಿಂಗಯ್ಯನವರು 3 ಫೆಬ್ರವರಿ 1954 ರಲ್ಲಿ ತಂದೆ ದೇವಯ್ಯ ಮತ್ತು ತಾಯಿ ಶ್ರೀಮತಿ ವೆಂಕಮ್ಮ ರವರ ಮಗನಾಗಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದರು. ಸಿದ್ದಲಿಂಗಯ್ಯನವರ ಅಜ್ಜಿ  ಬಾಲ್ಯದಲ್ಲಿ ಹೇಳಿಕೊಡುತ್ತಿದ್ದ ಜಾನಪದ ಗೀತೆಗಳು, ಸ್ವಾರಸ್ಯಕರ ಕತೆಗಳು,  ಹಳ್ಳಿಗಳಲ್ಲಿ ನಡೆಯುತ್ತಿದ್ದ ವಿವಾಹ, ಜಾತ್ರೆ, ದೇವರ ಉತ್ಸವ ಮುಂತಾದ ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿದ್ದ ರಿಂದ ಸಿದ್ದಲಿಂಗಯ್ಯನವರಿಗೆ ಆ ಗ್ರಾಮದ ಜನರು ಅನುಸರಿಸುತ್ತಿದ್ದ ಆಚರಣೆ, ಕಟ್ಟುಪಾಡುಗಳು  ಹಾಗೂ ಜನರು ಬದುಕು ಸಾಗಿಸುತ್ತಿದ್ದ ಸ್ಥಿತಿಗತಿಯ ಅರಿವು ಬಾಲ್ಯದಲ್ಲಿಯೇ ಬಂದಿತ್ತು.

ಬಾಲ್ಯದಿಂದಲೂ  ಜಾಣ್ಮೆಯನ್ನು ಮೈಗೂಡಿಸಿಕೊಂಡಿದ್ದ ಸಿದ್ಧಲಿಂಗಯ್ಯನವರು ಪ್ರೌಢಶಾಲಾ ಹಂತದಲ್ಲಿಯೇ  ಭಾಷಣ ಮಾಡುವುದು ಮತ್ತು ಸಾಹಿತ್ಯ ಬರೆಯುವುದು ಹೀಗೆ ಕೆಲವು ವಿಷಯಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಈ ಆಸಕ್ತಿ ಹೆಚ್ಚಾಗಿ ಕಾಲೇಜು ದಿನಗಳಲ್ಲಿಯೆ ಕಾರ್ಲ್ ಮಾರ್ಕ್ಸ್, ಲೋಹಿಯಾ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಜ್ಯೋತಿಬಾ ಫುಲೆ, ಭಗವಾನ್ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ರಂತಹ ಧೀಮಂತರ ವಿಚಾರಗಳನ್ನು ಓದಿಕೊಂಡು ಇವರ ವಿಚಾರಧಾರೆಗಳಿಂದ ಆಕರ್ಷಣೆಗೆ ಒಳಗಾಗಿ ಪ್ರಭಾವಿತರಾದರು.

ಇವರೆಲ್ಲರ ಚಿಂತನೆಗಳ ಒಟ್ಟು ಸಾರ ಸಮಾನತಾ ಸಮಾಜದ ನಿರ್ಮಾಣದ ಗುರಿಯನ್ನರಿತು ಅಸಮಾನತೆಯ ವಿರುದ್ಧ ಸಮಾಜದಲ್ಲಿ ಸಾಹಿತ್ಯಿಕ ಕ್ರಾಂತಿಯನ್ನು ಮಾಡಿದರು.

ಈ ಸಾಮಾಜಿಕ ಕ್ರಾಂತಿ ಏಕೆ ನಡೆಯಬೇಕೆಂದರೆ ಸಮಾಜದಲ್ಲಿ ಆಳವಾಗಿ ನೆಲೆಯೂರಿರುವ  ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಮಾನವೀಯತೆ ಮತ್ತು ಸಮಾನತೆಯ ಆಧಾರದ ಮೇಲೆ  ಒಂದು ಸಮಾಜ ನಿರ್ಮಾಣವಾಗಬೇಕೆಂದು ಪ್ರತಿಪಾದಿಸುವ ಭರದಲ್ಲಿ  ಸಾಮಾಜಿಕ ಕ್ರಾಂತಿ ಆಗಬೇಕೆಂದು ಪ್ರತಿಪಾದಿಸಿದರು.  ವ್ಯಕ್ತಿಯಲ್ಲಿ ಸುಪ್ತವಾಗಿ ಅಡಗಿರುವ ತನ್ನ ಅಸಹನೆ, ಸಿಟ್ಟು ಮತ್ತು ಆಕ್ರೋಶಕ್ಕೂ ಹಕ್ಕು ಇದೆ ಎಂಬ ಸಂದೇಶವನ್ನು ಸೂಚಿಸುತ್ತದೆ.

ನಾಗರಿಕ ಸಮಾಜದಲ್ಲಿ ಗಟ್ಟಿಯಾಗಿ ಬೇರುಬಿಟ್ಟಿರುವ ಅಸಮಾನತೆ, ಅಜ್ಞಾನ,  ಮೂಢನಂಬಿಕೆ, ಗುಲಾಮಗಿರಿ, ಜಾತಿ ಪದ್ಧತಿ, ಬಡತನ,  ಶೋಷಣೆ, ದಬ್ಬಾಳಿಕೆ ಇನ್ನೂ ಮುಂತಾದ ಪಿಡುಗುಗಳು ಸಾಮಾಜಿಕ ವ್ಯಾಧಿಯಾಗಿ ಬಾಧಿಸುತ್ತಿರುವ ಸಂದರ್ಭದಲ್ಲಿ  ಇವುಗಳ ವಿರುದ್ಧ ಗಟ್ಟಿ ಧ್ವನಿಯಲ್ಲಿ  “ಇಕ್ಕರ್ಲಾ ಒದಿರ್ಲಾ ಈ ನನ್ನ ಮಕ್ಕಳ ಚರ್ಮ ಎಬ್ರಲಾ”  ಎಂದು ಆಕ್ರೋಶ ಭರಿತರಾಗಿ ಹಾಗೂ “ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ”  ಎಂದು ಹತಾಶೆಯಿಂದ ನಿರಾಶಾವಾದಿಯಗಿ

ನಲವತ್ತೇಳರ ಸ್ವಾತಂತ್ರ್ಯ ಯಾರಿಗೆ ಬಂದಿದೆ ? ದೇಶದಲ್ಲಿರುವ ದೀನ ದಲಿತರಗೆ ಸ್ವಾತಂತ್ರ್ಯ ಇನ್ನೂ ಬಂದಿಲ್ಲ ಎಂಬ ಸಂದೇಶವನ್ನು  ಸಾರುತ್ತದೆ.  ಸ್ವಾಂತತ್ರ್ಯ ಎಂಬುವುದು ಶ್ರೀಮಂತರಿಗೆ,  ರಾಜಕೀಯವಾಗಿವಾಗಿ ಸದೃಢರಾದವರಿಗೆ, ಸಮಾಜೋ ಆರ್ಥಿಕ ಅಂತಸ್ತನ್ನು ಹೊಂದಿರುವವರಿಗೆ, ಟಾಟಾ ಬಿರ್ಲಾ, ಅಂಬಾನಿ ಅದಾನಿ, ಮುಂತಾದ ಕಾರ್ಪೊರೇಟ್ ಸಂಸ್ಥೆಗಳಿಗೆ ಸ್ವಾತಂತ್ರ್ಯ ಬಂದಿದೆ. ದೀನ ದಲಿತರು ಹಿಂದುಳಿದವರು, ಶೋಷಿತರಿಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಸ್ವಾತಂತ್ರ್ಯ ಎಂಬುದು ಕೇವಲ ಬೆರಳೆಣಿಕೆಯಷ್ಟು ಸೀಮಿತ ಜನರಿಗೆ ಮಾತ್ರ ಬಂದಿದೆ. ಈ ಸೀಮಿತ ಸ್ವಾತಂತ್ರ್ಯದಿಂದ ಸರ್ವ ಜನರ ಉದ್ಧಾರ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ವಶಾಹತುಶಾಹಿ ವ್ಯವಸ್ಥೆಯಿಂದ ನೊಂದ ಭಾರತೀಯರಿಗೆ ದಿವ್ಯ ಔಷಧಿಯಾಗಬೇಕಿದ್ದ ಸ್ವಾತಂತ್ರ್ಯ ಬ್ರಿಟಿಷರ ನಿರ್ಗಮನದ ನಂತರ ಭಾರತದ ಕೆಲವು ಭ್ರಷ್ಟ  ಜನರ ಕಪಿಮುಷ್ಟಿಯಲ್ಲಿ ಸಿಲುಕಿ ಭ್ರಷ್ಟಾಚಾರವನ್ನು ಬೆಳೆಸುವ ಮತ್ತು ಅಸಮಾನತೆಯನ್ನು ಪೋಷಿಸುವ ಒಂದು ಸಾಧನವಾಗಿ ಪರಿವರ್ತನೆಯಾಗಿ ತನ್ನ ಅರ್ಥವನ್ನು ಕಳೆದುಕೊಂಡಿತು ಎಂಬ ನೋವು ಸಿದ್ದಲಿಂಗಯ್ಯರವರಿಗೆ ಇತ್ತು. ಅಲ್ಲದೆ ಇದು ಕಾಲಕಾಲಕ್ಕೂ ದೃಢಪಡುತ್ತಲೆ ಸಾಗಿತು ಹಾಗಾಗಿ ಸ್ವಾತಂತ್ರ್ಯವೆಂಬುದು ಶೋಷಿತ ಸಮುದಾಯದ ಪ್ರಯೋಜನಕ್ಕೆ ಬಾರದ ಒಂದು ಗಗನ ಕುಸುಮವಾಗಿದೆ.jk

“ಗುಡಿಸಿಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯ ನನ್ನ ಈ ಕವನ”

ಒಂದು ಗುಲಾಬಿ ಅರಳಲು ನಿಸರ್ಗದತ್ತವಾಗಿ ದೊರೆಯುವ ಗಾಳಿ, ನೀರು, ಬೆಳಕು ಮತ್ತು ಮಣ್ಣು ಬೇಕು. ನಿಸರ್ಗದ ದೃಷ್ಠಿಯಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ. ಗುಲಾಬಿ ಅರಮನೆಯಲ್ಲಿ ಅರಳುವಷ್ಟು ಸಹಜವಾಗಿಯೇ ಗುಡಿಸಲಿನಲ್ಲಿಯೂ ಅರಳಬಲ್ಲದು.  ಹಾಗೆಯೇ ಸಿದ್ದಲಿಂಗಯ್ಯನವರ ಕವನಕ್ಕೆ ಬಡವ ಶ್ರೀಮಂತ, ಶ್ರೇಷ್ಠ ಕನಿಷ್ಠತೆಗಳ ತಾರತಮ್ಯದ ಅರಿವಿಲ್ಲದೆ ಸಹಜವಾಗಿ ಅರಳುತ್ತದೆ. ಯಾವಾಗ ಮನುಷ್ಯನಿಗೆ ಅರಿವಿನ ಕೊರತೆ ಇರುತ್ತದೆಯೋ ಆಗ ಬದುಕಿನಲ್ಲಿ ಕತ್ತಲೆ ಆವರಿಸುತ್ತದೆ. ನಿಸರ್ಗದ ದೃಷ್ಠಿಯಲ್ಲಿ ಸರ್ವರೂ ಸಮನರು ಆದರೆ ಕೆಲವರ ದೃಷ್ಟಿಯಲ್ಲಿ ಯಾಕೆ ತಾರತಮ್ಯ ಭಾವನೆ ಬರುತ್ತದೆ. ಈ ಬದುಕು ಸಹಜವಾಗಿ ಬಂದಿದ್ದಲ್ಲ ಇದರ ಹಿಂದೆ ಮನುಷ್ಯನ ದುರಾಸೆ, ಲೋಭ, ಕಪಟತನ ಮತ್ತು ಹೀನರಾಜಕಾರಣವಿದೆ. ಯಾವಾಗ ಇದರ ಕುರಿತು ನಮಗೆ ಅರಿವಾಗುತ್ತದೆ ಆಗ ಈ ಅನ್ಯಾಯದ ಕುರಿತು ನಾವು ಧ್ವನಿ ಎತ್ತಿ ಪ್ರತಿಭಟಿಸಲು ಆರಂಭಿಸುತ್ತೇವೆ ಅದಕ್ಕಾಗಿ ಸಿದ್ದಲಿಂಗಯ್ಯನವರ ಈ  ಕವನವು ಬಂಡಾಯ ಕವನವು ಹೌದು ಎಂಬ ಸಂದೇಶವನ್ನು ನೀಡುತ್ತದೆ.

“ಬದುಕ ಪ್ರೀತಿಸುವ ಬಡವರ ಮಗಳು ನಿರಾಭರಣೆ ಕವನ ಜನಗಳು ತಿನ್ನುವ ಅನ್ನದ ಅಗುಳು ಜೀವ ನನ್ನ ಕವನ”

ಶೋಷಿತ ಸಮುದಾಯ ಬಡತನದ  ಬೇಗುದಿಯ ಬದುಕಿನಲ್ಲಿಯೂ ಬಡವನ ಮಗಳಿಗೆ ಹೇಗೆ ಆಭರಣಗಳ ಚೆಲುವು ಇಲ್ಲದೆ ಬದುಕಿನ ಪ್ರೀತಿ ಇರುತ್ತದೆಯೋ ಹಾಗೆ ಬದುಕಿನಲ್ಲಿ ಹಸಿವು ಮತ್ತು ಪ್ರೀತಿಯ ಪಾತ್ರದ ದೊಡ್ಡದು ಅದೇ ರೀತಿ ಈ  ಕವನದ ಸಾಲುಗಳು ಸಹ ವಾಸ್ತವ ಎಂಬುದನ್ನು ಬಿಂಬಿಸುತ್ತದೆ.

ಸಿದ್ಧಲಿಂಗಯ್ಯನವರ ಸುಂಟರಗಾಳಿ ಕವನದಲ್ಲಿ

ವಿಶ್ವಮಾನವತೆ ಮತ್ತು  ಸರ್ವಧರ್ಮಗಳ ಸಮನ್ವಯತೆಯ ಆಶಯವನ್ನು ಈ ಕವನ ಹೊಂದಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ದೌರ್ಜನ್ಯಗಳ ಕುರಿತಾಗಿ ಸಿದ್ಧಲಿಂಗಯ್ಯನವರು,  ಹಿಂದೂ, ಕ್ರೈಸ್ತ, ಮುಸಲ್ಮಾನ, ವೀರಶೈವ, ದಲಿತ, ಹೀಗೆ ಅನೇಕ ಆಯಾಮಗಳಲ್ಲಿ ಧರ್ಮವೆಂಬ ಹೆಸರಿನ ಮತೀಯ ವ್ಯವಸ್ಥೆ ಸುಂಟರಗಾಳಿಗೆ ಸಿಲುಕಿ  ನಲುಗುತ್ತಿದೆ. ಏಕೆಂದರೆ ಭಾರತದಲ್ಲಿ ಇರುವ ಸಾಧು ಸಂತರು, ಮಠಮಾನ್ಯಗಳು ಸಾಮಾನ್ಯ ಜನರಿಗೆ ದಾರಿ ದೀಪವಾಗಬೇಕು ಮನುಷ್ಯ ಮನುಷ್ಯರನ್ನು ಬೆಸೆದು ಮಾನವ ಧರ್ಮವನ್ನು ಕಾಪಾಡಬೇಕಾದ ಮಠ ಮಾನ್ಯಗಳೇ ಜಾತಿ ಧರ್ಮಕ್ಕೆ ಅಂಟಿಕೊಂಡು ಸಮುದಾಯಗಳನ್ನು ಒಡೆದು ಆಳುತ್ತಿವೆ ಎಂದು ನೋವಿನಿಂದ ಅಳಲು ತೋಡಿಕೊಂಡಿದ್ದಾರೆ.

ಬಡ ಜನರ ಬವಣೆಯನ್ನು ಬಿಂಬಿಸುವ “ಹಸಿವಿನಿಂದ ಸತ್ತೋರು,

ಸೈಜುಗಲ್ಲು ಹೊತ್ತೋರು,

ಒದೆಸಿಕೊಂಡು ಬದುಕಿದೋರು

ನನ್ನ ಜನಗಳು”

ದಲಿತರು ಮತ್ತು ಶೋಷಿತ ಸಮುದಾಯದ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅತ್ಯಗತ್ಯವಿರುವ  ಆಹಾರ, ಬಟ್ಟೆ ಮತ್ತು ವಸತಿ ಹಾಗೂ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲಾಗದ ದುಸ್ಥಿತಿಗೆ ಬಂದು ತಲುಪಿದೆ. ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದೆ ಅಸಹಾಯಕವಾಗಿ ಹಸಿವಿನಿಂದ ಅದೆಷ್ಟೋ ಅಮಾಯಕರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಒಂದು ಹೊತ್ತಿನ ಊಟ ದಕ್ಕಿಸಿಕೊಳ್ಳಲು ಶ್ರೀಮಂತರ ಮನೆಯ ಕೂಲಿಯಾಳುಗಳಾಗಿ ನಿಂದಿಸಿದರೆ ನಿಂದಿಸಿಕೊಂಡು, ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಯನ್ನು ಸಹಿಸಿಕೊಂಡು ತನ್ನ  ಶ್ರಮದಲ್ಲಿ ನನ್ನ ಜನರು  ಬೆವರು ಮತ್ತು ನೆತ್ತರನ್ನು ಹರಿಸಿ ಸೈಜುಕಲ್ಲು ಹೊತ್ತುಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಹೆಣಗಾಡುತ್ತಿರುವುದು ನನ್ನ ಜನ ಎಂದು ಕವಿ ಶೋಷಿತ ಸಮುದಾಯ ಎದುರಿಸುತ್ತಿರುವ ಹಸಿವು, ಮತ್ತು ದೌರ್ಜನ್ಯದ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.

“ಹಸಿವಿನಿಂದ ಸತ್ತೋರು,

ಸೈಜುಗಲ್ಲು ಹೊತ್ತೋರು,

ಒದೆಸಿಕೊಂಡು ಬದುಕಿದೋರು

ನನ್ನ ಜನಗಳು” ಎಂಬ ಸಾಲಿನಲ್ಲಿ

ದಲಿತರು ಮತ್ತು ಶೋಷಿತ ಸಮುದಾಯದ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅತ್ಯಗತ್ಯವಿರುವ  ಆಹಾರ, ಬಟ್ಟೆ ಮತ್ತು ವಸತಿ ಇಲ್ಲದೆ ಹಾಗೂ ಮೂಲಭೂತ ಅಗತ್ಯತೆಗಳನ್ನು ಪೂರೈಸಿಕೊಳ್ಳಲಾಗದ ದುಸ್ಥಿತಿಗೆ ಬಂದು ತಲುಪಿದೆ. ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದೆ ಅಸಹಾಯಕವಾಗಿ ಹಸಿವಿನಿಂದ ಅದೆಷ್ಟೋ ಅಮಾಯಕರು ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಒಂದು ಹೊತ್ತಿನ ಊಟ ದಕ್ಕಿಸಿಕೊಳ್ಳಲು ಶ್ರೀಮಂತರ ಮನೆಯ ಕೂಲಿಯಾಳುಗಳಾಗಿ ನಿಂದಿಸಿದರೆ ನಿಂದಿಸಿಕೊಂಡು, ದಬ್ಬಾಳಿಕೆ, ದೌರ್ಜನ್ಯ ಮತ್ತು ಶೋಷಣೆಯನ್ನು ಸಹಿಸಿಕೊಂಡು ತನ್ನ  ಶ್ರಮದಲ್ಲಿ ನನ್ನ ಜನರು  ಬೆವರು ಮತ್ತು ನೆತ್ತರನ್ನು ಹರಿಸಿ ಸೈಜುಕಲ್ಲು ಹೊತ್ತುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿರುವರು ನನ್ನ ಜನ ಎಂದು ಕವಿ ಶೋಷಿತ ಸಮುದಾಯ ಎದುರಿಸುತ್ತಿರುವ ಹಸಿವು ಮತ್ತು ದೌರ್ಜನ್ಯದ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.

ಸಿದ್ಧಲಿಂಗಯ್ಯನವರು ತನ್ನ ಸಮುದಾಯ ಅನುಭವಿಸಿದ ನೋವುಗಳ ಸಂವೇದನೆಯನ್ನು ಸಮಾಜ ಮತ್ತು  ಸಮುದಾಯ ಆಶೋತ್ತರಗಳಿಗೆ ಅಭಿವ್ಯಕ್ತಿ ನೀಡಿದ್ದಾರೆ. ಇವರ ಸಾಹಿತ್ಯಗಳು ಅನೇಕ ಪ್ರಗತಿಪರ ಯುವ ಮನಸ್ಸುಗಳನ್ನು ತನ್ನೆಡೆಗೆ ಆಕರ್ಷಿಸಿಕೊಂಡು ಅವರ ಮನಸ್ಸಿನೊಳಗೆ ಪ್ರಗತಿಪರವಾದಂಥ ಚಿಂತನೆಗಳನ್ನು ಬಿತ್ತುವಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ವಿಚಾರಧಾರೆಗಳು ಪ್ರೇರಣೆಯ ಸೆಲೆಯಾಗಿದ್ದಾರೆ.

“ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ

ಆಕಾಶದ ಅಗಲಕ್ಕೂ ನಿಂತ ಆಲವೆ” ಶೋಷಿತ ಸಮುದಾಯಕ್ಕೆ  ಇತರ ಸಮುದಾಯದ ಜನರು ನೀಡುತ್ತಿದ್ದ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ, ಶೋಷಣೆ,  ತಮ್ಮ ಜೀವ ಮತ್ತು ಹಕ್ಕು ರಕ್ಷಣೆಗಾಗಿ ಹೆಣಗಾಡುತ್ತಿರುವ ಸ್ಥಿತಿಗತಿಗಳನ್ನು ಕಂಡು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರು ಶೋಷಿತ ಸಮುದಾಯದ ಮೇರುಧ್ವನಿಯಗಿ ಇಡೀ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಲು ಇಡೀ ಭಾರತದಾದ್ಯಂತ ತನ್ನ ಧ್ವನಿಯನ್ನು ಎತ್ತಿ ಶೋಷಿತ ಸಮುದಾಯದ ಹಕ್ಕು ರಕ್ಷಣೆಗೆ  ಆಲದ ಮರದಂತೆ ನೆರಳಾಗಿನಿಂತು ರಕ್ಷಿಸಿದ ಭಾರತದ ಶ್ರೇಷ್ಠ ಮಾನವ ಹಕ್ಕುಗಳ ಸಂರಕ್ಷಕ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಸಿದ್ದಲಿಂಗಯ್ಯನವರು ಈ ರೀತಿ  ಸಾಹಿತ್ಯದ ಮೂಲಕ ಶೋಷಿತ ಸಮುದಾಯಗಳ ಸುಪ್ತ ಪ್ರಜ್ಞೆಗೆ ಜೀವಂತಿಕೆ ನೀಡಿ ಜಾಗೃತಗೊಳಿಸಿದ್ದಾರೆ.

“ದಲಿತರು ಬರುವರು ದಾರಿಬಿಡಿ ದಲಿತರ ಕೈಗೆ ರಾಜ್ಯ ಕೊಡಿ”  ಎಂದು ಶೋಷಿತ ಸಮುದಾಯದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದೆ ಉಳಿಯಲು ಮುಖ್ಯ ಕಾರಣ ರಾಜಕೀಯ ಅಧಿಕಾರ ಇಲ್ಲದಿರುವುದು ರಾಜಕೀಯ ಅಧಿಕಾರದಿಂದ ಮಾತ್ರ ಸಮಗ್ರ ಬದಲಾವಣೆ ಸಾಧ್ಯ ಎಂಬುದನ್ನು ಮನಗಂಡು ದಲಿತರ ರಾಜಕೀಯ ಧ್ವನಿಯಾದರು. ಮನುಷ್ಯತ್ವದ ಕುರಿತಾಗಿ “ನಾನು ಸತ್ತರೆ ನೀವು ಅಳುವಿರಿ, ನಿಮ್ಮ ಕೂಗು ನನಗೆ ಕೇಳಿಸದು, ನನ್ನ ನೋವಿಗೆ ಈಗಲೇ ಮುರುಗಲಾಗದೇ, ಮಿಂಚಿ ಹೋಗುವ ಮುನ್ನ ಹಂಚಿ ಬಾಳುವ ಬದುಕು ಸಹ್ಯವಲ್ಲವೇನು” ಎಂದು ಹೇಳುತ್ತಾ ಮನುಷ್ಯನ ಸ್ಥಿತಪ್ರಜ್ಞೆಯನ್ನು ಬಡಿದೆಬ್ಬಿಸಿ  ಕಾವ್ಯವನ್ನೇ ಖಡ್ಗವನ್ನಾಗಿಸಿದ ಸಾಧಕ.  ಇನ್ನೂ ಅನೇಕ ನೋವು ಮತ್ತು  ಆಕ್ರೋಶಭರಿತ  ಸಾಹಿತ್ಯ ರಚಿಸಿ ದಮನಿತ ಸಮುದಾಯದ ಮೇರು  ಧ್ವನಿಯಾಗಿಯಾಗುವ ಮೂಲಕ  ಬರಡು ಭೂಮಿಯಂತಿದ್ದ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಬೀಜ ಬಿತ್ತಿ ಅದರ ಫಲ ಸಮುದಾಯಕ್ಕೆ ದೊರಕುವಂತೆ  ಮಾಡಿದ ಕ್ರಾಂತಿಕಾರಿ ಸಾಹಿತಿ.

ಕ್ರಾಂತಿ ಗೀತೆಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಸಲುವಾಗಿ ಊರು ಕೇರಿಗಳಲ್ಲಿ ದಲಿತ ಚಳವಳಿಯನ್ನು ಕಟ್ಟಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿದ ಮಹಾನುಭವ. ಕೇವಲ ನೋವು, ಅಸಹನೆ, ಹತಾಶೆ ಮತ್ತು ಆಕ್ರೋಶ ಸಾಹಿತ್ಯವನ್ನು ರಚಿಸದೆ ಕನ್ನಡ ಚಿತ್ರರಂಗದಲ್ಲಿ  ಹತ್ತು ಹಲವು ಚಲನಚಿತ್ರ ಗೀತೆಗಳನ್ನು ರಚಿಸಿ ಎಂದೂ ಮರೆಯಲಾಗದ”ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ , ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವೊ ಬೆಳ್ಳಿ ಕಿರಣ” ಹಾಗೂ ಪುಟ್ಟಣ್ಣ ಕಣಗಾಲ್ ರ ಚಿತ್ರಕ್ಕೆ ” ಗೆಳತಿ ಓ ಗೆಳತಿ, ಅಪ್ಪಿಕೋ ನನ್ನ ಒಪ್ಪಿಕೋ, ಬಾಳೆಲ್ಲ ಎನ್ನ ತಬ್ಬಿಕೋ” ಎಂಬ ಅನೇಕ  ಪ್ರೇಮಾಮೃತ ತುಂಬಿದ ಸಾಹಿತ್ಯವನ್ನು ನಾಡಿಗೆ ಪಸರಿಸಿದವರು.

ಸಿದ್ಧಲಿಂಗಯ್ಯನವರು ರಚಿಸಿದ ಅನೇಕ ಕವನ ಸಂಕಲನಗಳಲ್ಲಿ ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಅಲ್ಲೆ ಕುಂತವರೆ, ಮೆರವಣಿಗೆ,ಪ್ರಮುಖವಾದವುಗಳಾಗಿವೆ. ಅವತಾರಗಳು ಮತ್ತು  ಜನಸಂಸ್ಕೃತಿ ಲೇಖನಗಳ ಸಂಕಲನ, ಹಕ್ಕಿನೋಟ, ರಸಗಳಿಗೆಗಳು,  ಎಡ ಬಲ, ಉರಿಕಂಡಾಯ ಮುಂತಾದ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.  ಅಲ್ಲದೆ ಏಕಲವ್ಯ, ನೆಲಸಮ ಮತ್ತು ಪಂಚಮ ಎಂಬ ನಾಟಕಗಳನ್ನು ರಚಿಸಿದ್ದಾರೆ. ಸಿದ್ದಲಿಂಗಯ್ಯನವರ ಆತ್ಮಕತೆಯಾದ “ಊರು ಕೇರಿ”  ವಿವಿಧ ಭಾಷೆಗಳಲ್ಲಿ ವಿವಿಧ ಸಂಪುಟಗಳನ್ನು ಪ್ರಕಟಗೊಂಡಿದೆ.  ಸಿದ್ಧಲಿಂಗಯ್ಯನವರಿಗೆ ಅತ್ಯಂತ ಆಸಕ್ತಿದಾಯಕ ವಿಷಯವಾಗಿದ್ದ   “ಗ್ರಾಮ ದೇವತೆಗಳು” ಎಂಬ ವಿಷಯವನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಆರಾಧಿಸುವ ವಿವಿಧ ದೇವತೆಗಳು ಮತ್ತು ದೇವತೆಗಳ ವಿವಿಧ ಆಯಾಮಗಳನ್ನು ಎಳೆ ಎಳೆಯಾಗಿ ವಿಮರ್ಶಿಸಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

ಸಿದ್ಧಲಿಂಗಯ್ಯನವರಿಗೆ ನಾಡು ನುಡಿ ಭಾಷೆಯ ಕುರಿತು ಅಪಾರ ಪ್ರೀತಿಯಿತ್ತು. ಆಂಗ್ಲ ಮಾಧ್ಯಮದ ನೆಪದಲ್ಲಿ ಖಾಸಗಿ ಶಾಲೆಗಳು ವ್ಯಾಪಾರ ಮಾಡುತ್ತಿದ್ದು ಮಕ್ಕಳಿಗೆ “ರೈನ್ ರೈನ್ ಗೋ ಅವೇ ಜಾನ್ ವಾಂಟ್ಸ್ ಟು ಪ್ಲೇ” ಎಂದು ಬೋಧಿಸುತ್ತಿರುವುದು ದುರದೃಷ್ಟಕರ ಹಾಗೂ ಇದು ನಮ್ಮ ಸಂಸ್ಕೃತಿಯಲ್ಲ. “ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕೆ ನೀರಿಲ್ಲ” ಎಂಬುವುದು ನಮ್ಮ ಸಂಸ್ಕೃತಿಯಾಗಬೇಕು ಎಂದು ಪ್ರತಿಪಾದಿಸಿ ಸಂಸ್ಕೃತಿ ಪ್ರಜ್ಞೆ ಇಮ್ಮಡಿಗೊಳಿಸಿದ ಮೇರು ಸಂಸ್ಕೃತಿ ಚಿಂತಕ.jk

ಸಿದ್ದಲಿಂಗಯ್ಯನವರು ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯ ಮತ್ತು ಚಳುವಳಿಗಿಂತ  ರಾಜಕೀಯ ರಂಗದ ಪ್ರವೇಶ ಅಂದಿನ ದಲಿತ ಚಳುವಳಿಕಾರರಿಗೆ  ದಿಗ್ಭ್ರಮೆಯನ್ನು ಮೂಡಿಸಿತ್ತು ಎಂದರೆ ತಪ್ಪಾಗದು. ಏಕೆಂದರೆ  ದಲಿತ ಸಂಘರ್ಷ ಸಮಿತಿ ಹುಟ್ಟುವ ಮುಂಚೆ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳುವಳಿ ಹುಟ್ಟಿಕೊಂಡಿತ್ತು. ಆದರೆ ದಲಿತ ಪ್ಯಾಂಥರ್ಸ್ ಚಳುವಳಿಯ ಬಹುತೇಕ ಮುಂಚೂಣಿ ನಾಯಕರುಗಳು ರಾಜಕೀಯ ಪಕ್ಷಗಳ ಹಿಡಿತಕ್ಕೆ ಸಿಲುಕಿ ಆಗಾಗಲೇ ಅಸ್ತಿತ್ವ ಕಳೆದುಕೊಂಡಿತ್ತು. ಹಾಗಾಗಿ ಮಹಾರಾಷ್ಟ್ರದಲ್ಲಿ ಚಳುವಳಿಗಾದ ಸ್ಥಿತಿ  ಕರ್ನಾಟಕದ ದಲಿತ ಸಂಘರ್ಷ ಸಮಿತಿಗೆ ಈ ರೀತಿ ರಾಜಕೀಯದ ಕರಿನೆರಳಿಗೆ ಗುರಿಯಾಗಬಾರದೆಂಬ  ಎಚ್ಚರಿಕೆಯಿಂದ 1979 ರ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ  ಚಳುವಳಿಕಾರ ರೆಲ್ಲಸೇರಿ ಒಂದು ದಿಟ್ಟ ನಿರ್ಣಯ ತೆಗೆದುಕೊಂಡರು. ಅದೇನೆಂದರೆ, ಕರ್ನಾಟಕದಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಸಹ ಆ ಸರ್ಕಾರಗಳ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬಾರದು ಮತ್ತು ಯಾವುದೇ ಸಂಬಂಧಗಳನ್ನು ಇಟ್ಟುಕೊಳ್ಳಬಾರದು ಎಂಬ ಸ್ಪಷ್ಟ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಈ ನಿರ್ಣಯವನ್ನು ದಲಿತ ಸಂಘರ್ಷ ಸಮಿತಿ ಅನುಸರಿಸಿಕೊಂಡು ಬಂದಿತು. ಆದರೆ ಬಂಡಾಯ ಸಾಹಿತ್ಯ ಮತ್ತು ದಲಿತ ಚಳವಳಿಯಿಂದ ಮೊಟ್ಟಮೊದಲು ರಾಜಕಾರಣಕ್ಕೆ ಪ್ರವೇಶ ಮಾಡಿದವರೆ ಸಿದ್ಧಲಿಂಗಯ್ಯನವರು ಆದುದರಿಂದ ಇದು ಅಂದಿನ ಚಳುವಳಿಕಾರರಿಗೆ ಬಹುದೊಡ್ಡ ಆಘಾತವಾಗಿತ್ತು. 1970-80 ರಲ್ಲಿ ಸಿದ್ಧಲಿಂಗಯ್ಯನವರ ಸಾಹಿತ್ಯದಲ್ಲಿ ಮೊಳಗುತ್ತಿದ್ದ ನೋವು, ಸಂಕಟ, ಅಸಹನೆ ಮತ್ತು ಆಕ್ರೋಶದ ಬಂದೂಕಿನ ಗುಂಡುಗಳು ಮತ್ತು ಚಳುವಳಿಯ ಉರುಪು 1980 ರ  ನಂತರ ಸಮುದಾಯವನ್ನು ಬಡಿದೆಬ್ಬಿಸುವಲ್ಲಿ ಮೊನಚು ಕಳೆದುಕೊಂಡಿತೇನೋ ಎಂಬ ಭಾವ ಮೂಡುತ್ತದೆ.

ಒಟ್ಟಾರೆ ಸಿದ್ದಲಿಂಗಯ್ಯನವರು ರಚಿಸಿರುವ ಸಾಹಿತ್ಯ ಹಸಿವು, ಬಡತನ, ನೋವು, ಸಂಕಟ, ಜಾತಿ ಪದ್ಧತಿ, ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಅನುಭವಿಸುತ್ತಿರುವ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಕಿಚ್ಚನ್ನು ಹೊತ್ತಿಸುವ ಸ್ಫೂರ್ತಿಯ ಸೆಲೆಗಳಾಗಿ ಎಂದರೆ ತಪ್ಪಾಗಲಾರದು.

ಸಿದ್ದಲಿಂಗಯ್ಯರವರನ್ನು   “ದಲಿತ ಕವಿ” ಎಂದು ಕರೆಯುವುದು ನಿಜಕ್ಕೂ ಸಂಕುಚಿತ ವೆಂದೆನಿಸುತ್ತದೆ. ಏಕೆಂದರೆ  ಇವರ ಸಾಹಿತ್ಯ  ಮತ್ತು ಚಳುವಳಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ವರ್ಗದ ಶೋಷಿತರಿಗೂ ತಲುಪುವಂತಿವೆ. ಆದುದರಿಂದ ನಾವು ಡಾ.ಸಿದ್ದಲಿಂಗಯ್ಯ ರವರನ್ನು ನಾಡಿನ  “ಶ್ರೇಷ್ಠ ಕವಿ”ಯೆಂದು ಸಂಬೋಧಿಸಿದರೆ ಇವರ ಸಾಹಿತ್ಯಕ್ಕೆ ನೈಜಾರ್ಥ ಬರುತ್ತದೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಸಿದ್ಧಲಿಂಗಯ್ಯನವರ ಸಾಹಿತ್ಯ ನನ್ನಂತಹ ಅಸಂಖ್ಯಾತ ಜನರಿಗೆ  ಹಾಗೂ ಭವಿಷ್ಯದ ಸಾಹಿತ್ಯಪ್ರೇಮಿಗಳು ಮತ್ತು  ಚಳುವಳಿಗಾರರಿಗೆ ಆದರ್ಶನೀಯವಾಗಿ ನಿಲ್ಲಬಲ್ಲ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ನಿಧನ ಸಾಹಿತ್ಯ ಹಾಗೂ ಚಳವಳಿಕಾರರಿಗೆ ಶೂನ್ಯಭಾವ ಕಾಡಿದಂತಾಗಿದೆ. ಸಿದ್ದಲಿಂಗಯ್ಯನವರು ರಚಿಸಿದ ಅಸಂಖ್ಯಾತ ಲೇಖನಗಳು, ಕವನಗಳು, ಪುಸ್ತಕಗಳು, ಕ್ರಾಂತಿಗೀತೆಗಳು, ಸಾಮಾಜಿಕ ಚಳುವಳಿಗಳು, ವಿಮರ್ಶೆಗಳು ಭವಿಷ್ಯದ ಯುವ ಪೀಳಿಗೆಗೆ ಸ್ಫೂರ್ತಿಯ ಚಿಲುಮೆಗಳಾಗಿ ಮಾರ್ಗದರ್ಶಿಯಾಗಬಲ್ಲವು.

ಡಾ.ದೇವರಾಜು. ಎಸ್.ಎಸ್

 ಯುವ ಲೇಖಕರು

ರಾಜ್ಯಶಾಸ್ತ್ರ ಉಪನ್ಯಾಸಕರು

ಮೈಸೂರು ವಿಶ್ವ ವಿದ್ಯಾನಿಲಯ

 

 

Key words:  great writer-Nadoja –witness- Dr. Siddalingaiah