ಸರ್ಕಾರಿ ಖಜಾನೆಗೇ ಕನ್ನ

Promotion

ಬೆಂಗಳೂರು:ಆ-15: ದೇಶದ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಕದಿಯಲು, ಉಗ್ರ ಜಾಲ ವಿಸ್ತರಿಸಲು ಸರ್ಕಾರಿ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುತ್ತಿದ್ದ ಹ್ಯಾಕರ್​ಗಳೀಗ ಹೈ ಸೆಕ್ಯುರಿಟಿ ಹೊಂದಿರುವ ಸರ್ಕಾರಿ ಖಜಾನೆಗೇ ಕನ್ನ ಹಾಕಿದ್ದಾರೆ. ಸರ್ಕಾರಿ ಭದ್ರತೆ ಭೇದಿಸಿ ಕೋಟ್ಯಂತರ ರೂಪಾಯಿ ಎಗರಿಸಿರುವ ಕಳ್ಳರ ಕೈಚಳಕದಿಂದಾಗಿ ಆರ್ಥಿಕ ಭದ್ರತೆಯ ಬಗ್ಗೆಯೇ ಆತಂಕ ಸೃಷ್ಟಿಯಾಗಿದೆ.

ಸರ್ಕಾರಿ ಯೋಜನೆಗಳ ಟೆಂಡರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಇ-ಸಂಗ್ರಹಣ ತಂತ್ರಾಂಶ (ಇ-ಪ್ರಕ್ಯೂರ್​ವೆುಂಟ್) ಹ್ಯಾಕ್ ಆಗಿದೆ. ಹ್ಯಾಕರ್​ಗಳು ಆಗಸ್ಟ್ ಮೊದಲ ವಾರದಲ್ಲಿ 7 ಕೋಟಿ ರೂ. ಲೂಟಿ ಮಾಡಿದ್ದಾರೆ. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ಅದೃಷ್ಟವೆಂಬಂತೆ ಹಣವನ್ನು ಮರಳಿ ಪಡೆಯುವಲ್ಲಿ ಸಫಲರಾಗಿದ್ದಾರೆ. ಸಾವಿರಾರು ಕೋಟಿ ಹೊಂದಿರುವ ಇ- ಪ್ರಕ್ಯೂರ್​ವೆುಂಟ್ ತಂತ್ರಾಂಶವನ್ನು ಈ ಹಿಂದೆಯೂ ಐದಾರು ಬಾರಿ ಹ್ಯಾಕ್ ಮಾಡಿ ಹಣ ಲೂಟಿಗೆ ಯತ್ನಿಸಲಾಗಿತ್ತೆಂಬುದು ಆತಂಕದ ವಿಷಯ. ಅದರಲ್ಲಿ 1.5 ಕೋಟಿ ರೂ. ಲಪಟಾಯಿಸಿರುವುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ. ಸೈಬರ್ ಕ್ರೖೆಂ ಅಧಿಕಾರಿಗಳು ಆರಂಭಿಸಿರುವ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಕಳೆದುಕೊಂಡಿರುವ ಹಣದ ಸ್ಪಷ್ಟ ಮಾಹಿತಿ ದೊರೆಯಲಿದೆ.

ಉಳಿಯಿತು 7 ಕೋಟಿ ರೂ.!: ಆಗಸ್ಟ್ ಮೊದಲ ವಾರದಲ್ಲಿ ಬಿಡ್​ದಾರರೊಬ್ಬರ ಖಾತೆಗೆ 7 ಕೋಟಿ ರೂ. ಠೇವಣಿ ಮರುಪಾವತಿ ಹಣ ವರ್ಗಾವಣೆ ಆಗಿತ್ತು. ಅಧಿಕಾರಿಗಳಿಗೆ ಬ್ಯಾಂಕ್ ಖಾತೆ ಬಗ್ಗೆ ಅನುಮಾನ ಬಂದು ಪರಿಶೀಲಿಸಿದಾಗ ತಂತ್ರಾಂಶ ಹ್ಯಾಕ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಆ.8ರಂದು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳನ್ನು ಸಂರ್ಪಸಿ ವರ್ಗಾವಣೆಯಾಗಿದ್ದ ಅಷ್ಟೂ ಹಣವನ್ನು ವಾಪಸ್ ಇ ಪ್ರಕ್ಯೂರ್​ವೆುಂಟ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಒಂದು ವೇಳೆ ಹ್ಯಾಕರ್​ಗಳು ತಮ್ಮ ಖಾತೆಗೆ ಬಂದಿದ್ದ ಹಣವನ್ನು ತಕ್ಷಣ ಬೇರೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದರೆ ಅಥವಾ ಡ್ರಾ ಮಾಡಿಕೊಂಡಿದ್ದರೆ ಶಾಶ್ವತವಾಗಿ ಕೈತಪ್ಪಿ ಹೋಗುತ್ತಿತ್ತು. ಖಾತೆಯಲ್ಲೇ ಹಣ ಇದ್ದದ್ದರಿಂದ ಮರಳಿ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಸಿಐಡಿ ಸೈಬರ್ ಕ್ರೖೆಂ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರಿ ಕೆಲಸ ಸ್ತಬ್ಧ: ಹ್ಯಾಕ್ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಇ-ಪ್ರಕ್ಯೂರ್​ವೆುಂಟ್ ತಂತ್ರಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಆದರೆ, ಪೋರ್ಟಲ್ ಸ್ಥಗಿತಗೊಂಡು ಈಗಾಗಲೇ 14 ದಿನಗಳಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಇಲಾಖೆಯ ಆನ್​ಲೈನ್ ಟೆಂಡರ್ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳು ಸ್ತಬ್ಧವಾಗಿವೆ. ಇ ವ್ಯವಸ್ಥೆ ಇಲ್ಲದ ಕಾರಣ ಗುತ್ತಿಗೆದಾರರಿಗೂ ಸಮಸ್ಯೆಯಾಗಿದೆ.

8 ವರ್ಷಗಳಿಂದ ಕಾರ್ಯ: ಕಳೆದ 8 ವರ್ಷಗಳಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳ ಅನ್ವಯ ಎಲ್ಲ ಟೆಂಡರ್​ಗಳನ್ನು ಇ- ಸಂಗ್ರಹಣಾ ತಂತ್ರಾಂಶ https://eproc.karanataka.
gov.in ವೆಬ್​ಸೈಟ್ ಮುಖಾಂತರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಹ್ಯಾಕ್ ಆಗಿದೆ.

ಸಿಇಆರ್​ಟಿ ವರದಿ ಬಳಿಕ ಪುನರಾರಂಭ

ಕೇಂದ್ರ ಸರ್ಕಾರ ಅಧೀನದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್)ಕ್ಕೆ ಈಗಾಗಲೇ ದೂರು ಕೊಡ ಲಾಗಿದೆ. ಪರಿಶೀಲನೆ ನಡೆಸುತ್ತಿದ್ದು, ಸಿಇಆರ್​ಟಿ ವರದಿ ಕೊಟ್ಟ ನಂತರ ಇ ಪ್ರಕ್ಯೂರ್​ವೆುಂಟ್ ಪುನಾರಂಭಿಸಲಾಗುವುದು ಎಂದು ಇ- ಆಡಳಿತ ಕೇಂದ್ರ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವಿಜಯವಾಣಿಗೆ ತಿಳಿಸಿದ್ದಾರೆ.

ನಿತ್ಯ 80 ವೆಬ್​ಸೈಟ್ ಹ್ಯಾಕ್

ಸಿಇಆರ್​ಟಿ-ಇನ್ ವರದಿ ಪ್ರಕಾರ ಪ್ರತಿನಿತ್ಯ ಸರಾಸರಿ 80 ಸರ್ಕಾರಿ ಹಾಗೂ ಖಾಸಗಿ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಗೌಪ್ಯ ಮಾಹಿತಿ ಕದಿಯುವ ಉದ್ದೇಶದಿಂದ 2017ರಲ್ಲಿ 172 ಸರ್ಕಾರಿ ವೆಬ್​ಸೈಟ್​ಗಳ ಮೇಲೆ ಸೈಬರ್ ದಾಳಿಯಾಗಿತ್ತು. ಸೈಬರ್ ದಾಳಿ ಮಾಡುವವರಲ್ಲಿ ಗರಿಷ್ಠ ಪ್ರಮಾಣದ ಹ್ಯಾಕರ್​ಗಳು (ಶೇ.35) ಚೀನಾದವರಾಗಿದ್ದಾರೆ. ನಂತರ ಅಮೆರಿಕ ಶೇ.17, ರಷ್ಯಾ ಶೇ.15, ಪಾಕಿಸ್ತಾನ ಶೇ.9, ಕೆನಡಾ ಶೇ.7 ಹಾಗೂ ಶೇ.5. ಜರ್ಮನಿಯವರಾಗಿದ್ದಾರೆ.

ಹೇಗಾಯ್ತು ಹ್ಯಾಕ್?

ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಇ-ಪ್ರಕ್ಯೂರ್​ವೆುಂಟ್ ಮುಖಾಂತರ ಟೆಂಡರ್ ಆಹ್ವಾನಿಸಲಾಗುತ್ತದೆ. ಟೆಂಡರ್​ನಲ್ಲಿ ಭಾಗಿಯಾಗುವ ಬಿಡ್​ದಾರರು ಒಟ್ಟಾರೆ ಯೋಜನಾ ಮೊತ್ತದ ಶೇ.2 ಹಣವನ್ನು (ಅರ್ನಡ್ ಮನಿ ಡೆಪಾಸಿಟ್) ಠೇವಣಿ ಇರಿಸಬೇಕಾಗುತ್ತದೆ. ಯೋಜನೆ ಜಾರಿಗೊಂಡ ಬಳಿಕ ಆ ಮೊತ್ತವನ್ನು ಬಿಡ್​ದಾರರ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲಾಗುತ್ತದೆ. ಅಲ್ಲಿವರೆಗೆ ಆ ಠೇವಣಿ ಇ-ಪ್ರಕ್ಯೂರ್​ವೆುಂಟ್​ನಲ್ಲೇ ಇರುತ್ತದೆ. ಇ-ಪ್ರಕ್ಯೂರ್​ವೆುಂಟ್ ತಂತ್ರಾಂಶ ಹ್ಯಾಕ್ ಮಾಡಿ ಒಳನುಗ್ಗಿರುವ ಹ್ಯಾಕರ್​ಗಳು, ಟೆಂಡರ್ ದಾಖಲಾತಿ ವೇಳೆ ಬಿಡ್​ದಾರರು ಕೊಟ್ಟಿರುವ ಅಸಲಿ ಬ್ಯಾಂಕ್ ಖಾತೆಯ ನಂಬರ್​ಗಳನ್ನು ಡೇಟಾಬೇಸ್​ನಿಂದ ತೆಗೆದು ಆ ಜಾಗದಲ್ಲಿ ತಮ್ಮ ಬ್ಯಾಂಕ್ ಖಾತೆ ನಂಬರ್ ನಮೂದು ಮಾಡಿದ್ದರು. ಠೇವಣಿ ಮರುಪಾವತಿ ಹಣ ಬಿಡ್​ದಾರರ ಖಾತೆಗೆ ಹೋಗುವ ಬದಲಿಗೆ ಹ್ಯಾಕರ್​ಗಳು ನಮೂದು ಮಾಡಿರುವ ಖಾತೆಗೆ ವರ್ಗಾವಣೆಯಾಗುತ್ತದೆ. ಬ್ಯಾಂಕ್ ಖಾತೆ ನಂಬರ್ ಬದಲಾವಣೆ ವಿಚಾರ ಅಧಿಕಾರಿಗಳಿಗಾಗಲಿ ಬಿಡ್​ದಾರರಿಗಾಗಲಿ ಗೊತ್ತಾಗುವುದಿಲ್ಲ. ಖಾತೆಗೆ ಹಣ ಬಂದರಷ್ಟೇ ಬಿಡ್​ದಾರರಿಗೆ ತಿಳಿಯುತ್ತದೆ. ಇಲ್ಲವಾದರೆ ಸರ್ಕಾರದಿಂದ ರೀಫಂಡ್ ಆಗಿಲ್ಲವೆಂದು ಸುಮ್ಮನಿರುತ್ತಾರೆ.

ಪ್ರಮುಖ ಯೋಜನೆ ಸ್ಥಗಿತ

ಇ-ಪ್ರಕ್ಯೂರ್​ವೆುಂಟ್ ವೆಬ್​ಸೈಟ್ ಸ್ಥಗಿತದಿಂದ ಬಿಬಿಎಂಪಿಯ ಹಲವು ಯೋಜನೆಗಳ ಟೆಂಡರ್ ಪ್ರಕ್ರಿಯೆ ನಿಂತಿದೆ. ಪ್ರಮುಖವಾಗಿ ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿಯಲ್ಲಿ ಕಸ ವಿಲೇವಾರಿ ಮಾಡಲು ಗುತ್ತಿಗೆದಾರರು ನೇಮಕ ಮಾಡಲಾಗದೆ ಕಸದ ಸಮಸ್ಯೆ ಉದ್ಭವವಾಗುವಂತಾಗಿದೆ. ಅದರ ಜತೆಗೆ, ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಕೆ ಮಾಡುವವರನ್ನು ನೇಮಿಸಲು, ನಗರದಲ್ಲಿ 75 ಸಾವಿರ ಸಸಿ ನೆಡಲು ಗುತ್ತಿಗೆದಾರರನ್ನು ನಿಗದಿ ಮಾಡಲಾಗದಂತಾಗಿದೆ. ಅದರ ಜತೆಗೆ ಟೆಂಡರ್​ಶ್ಯೂರ್ ಮಾದರಿ ರಸ್ತೆಗಳ ಅಭಿವೃದ್ಧಿ, ವಾರ್ಡ್ ಮಟ್ಟದ ಚರಂಡಿ, ರಸ್ತೆ ದುರಸ್ತಿಗಳಿಗೂ ಗುತ್ತಿಗೆದಾರರನ್ನು ನೇಮಕ ಮಾಡದಂತಾಗಿದೆ.

ಸಿಇಆರ್​ಟಿ-ಇನ್ ಅಲರ್ಟ್

ವೆಬ್​ಸೈಟ್​ಗಳ ಹ್ಯಾಕ್ ಹಾಗೂ ಫಿಶ್ಶಿಂಗ್​ನಂತಹ ಸೈಬರ್ ಭದ್ರತಾ ಬೆದರಿಕೆಗಳನ್ನು ಸಿಇಆರ್​ಟಿ-ಇನ್ ನಿರ್ವಹಿಸುತ್ತದೆ. ಸಂಭವನೀಯ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ, ವಿಶ್ಲೇಷಿಸುವ, ಸೈಬರ್ ಬೆದರಿಕೆ ಕುರಿತು ಎಚ್ಚರಿಸುವ ಕೆಲಸ ಮಾಡುತ್ತದೆ.

ಇ ಪ್ರಕ್ಯೂರ್​ವೆುಂಟ್ ವೆಬ್​ಸೈಟ್​ಗೆ ಹ್ಯಾಕ್ ಆಗದಂತೆ ಹಲವು ಹಂತದ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಆದರೂ ಹ್ಯಾಕ್ ಮಾಡಿ ಹಣ ಎಗರಿಸಲಾಗಿದೆ. ಅಂತಾರಾಷ್ಟ್ರೀಯ ಹ್ಯಾಕರ್​ಗಳ ಕೃತ್ಯ ಶಂಕೆಯಿದ್ದು, ತನಿಖೆ ನಡೆಸಲಾಗುತ್ತಿದೆ.

| ಸೈಬರ್ ಕ್ರೈಂ ಅಧಿಕಾರಿ
ಕೃಪೆ:ವಿಜಯವಾಣಿ

ಸರ್ಕಾರಿ ಖಜಾನೆಗೇ ಕನ್ನ
government-treasury-theft-cyber-theft-cyber-crime-state-govt