ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ  ಭಾರತಿ ಸ್ವಾಮೀಜಿ ಅವರಿಂದ ಮೈಸೂರಿನಲ್ಲಿ ಸರ್ಕಾರಿ ಭೂ ಅಕ್ರಮ- ವಕೀಲ ಅ.ಮ ಭಾಸ್ಕರ್

ಮೈಸೂರು,ಅಕ್ಟೋಬರ್,5,2021(www.justkannada.in): ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ  ಭಾರತಿ ಸ್ವಾಮೀಜಿ ಅವರಿಂದ ಮೈಸೂರಿನಲ್ಲಿ ಸರ್ಕಾರಿ ಭೂ ಅಕ್ರಮ ನಡದಿದೆ ಎಂದು ಹಿರಿಯ ವಕೀಲ ಅ.ಮ ಭಾಸ್ಕರ್ ಆರೋಪಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕೀಲ ಅ.ಮ ಭಾಸ್ಕರ್, ಮೈಸೂರಿನ ಬೋಗಾದಿ ರೈಲ್ವೆ ಬಡಾವಣೆಯ ಸಮೀಪದಲ್ಲಿ ಶ್ರೀ ಸಾಯಿ ಸರಸ್ವತಿ ವಿದ್ಯಾಕೇಂದ್ರ ವೆಂಬ ಸಂಸ್ಥೆಯೊಂದಿದ್ದು,  ಮೂಲತವಾಗಿ ಶ್ರೀ ಕೃಷ್ಣ ಭಟ್ ಮತ್ತು ಶ್ರೀ ನಾರಾಯಣ ಮುಂತಾದವರು 29-12-1990 ರಲ್ಲಿ ಗುರುಕುಲ ಯೋಗಾಶ್ರಮ ಟ್ರಸ್ಟ್ ಎನ್ನುವ ನ್ಯಾಸವೊಂದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ರಚಿಸಿದ್ದಾರೆ.

ಶ್ರೀ ಕೃಷ್ಣ ಭಟ್ ಅವರು ಮೈಸೂರಿನ ಬೋಗಾದಿಯ ಸರ್ವೆ, ನಂ. 10/1ಬಿ ರಲ್ಲಿ 2 ಎಕರೆ 10 ಗುಂಟೆಯ ಮಾಲೀಕರಾಗಿದ್ದರು. ಸದರಿ ಜಮೀನಿನಲ್ಲಿ ನಗರ ಭೂ ಮಿತಿ ಕಾಯ್ದೆಯ ಅನ್ವಯ 7908 ಚದರ ಮೀಟರ್ ಆಸ್ತಿಯು ಸರ್ಕಾರದಲ್ಲಿ ನಿಗದಿಗೊಂಡಿತ್ತು. ಸದರಿ ಸರ್ಕಾರದ ನಿಗದಿಯಾಗಿದ್ದ ವಿಸ್ತೀರ್ಣವನ್ನು ಸದರಿ ಕೃಷ್ಣ ಭಟ್ ಅವರು ಗುರುಕುಲ ಯೋಗಾಶ್ರಮ ಟ್ರಸ್ಟ್ ನ ಶೈಕ್ಷಣಿಕ ಮತ್ತಿತರ ಚಾರಿಟೆಬಲ್ ಉದ್ದೇಶಗಳಿಗೆ ನಗರ ಭೂ ಮಿತಿ ಕಾಯ್ದೆಯ ವಿನಾಯಿತಿಯನ್ನ ಜಮೀನನ್ನು ಬಳಸುವ ಸಲುವಾಗಿ ಅರ್ಜಿಯನ್ನು ದಿನಾಂಕ:19-7-1991 ರಂದು ಸರ್ಕಾರಕ್ಕೆ ಸಲ್ಲಿಸಿದ್ದರು. ಸದರಿ ಅನ್ವಯ ಜಿಲ್ಲಾಧಿಕಾರಿಗಳು ಯುಎಲ್ ಎ 8/1991-92 ದಿನಾಂಕ: 16-11-1991 ರಂದು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದ್ದು, ವಸತಿ ಮತ್ತು ನಗರಾಭಿವೃದ್ದಿ ಇಲಾಖೆಯು ದಿನಾಂಕ: 13-10-1992 ರಂದು ಯು.ಇ.ಎಂ.91ರ ಅನ್ವಯ ಶೈಕ್ಷಣಿಕ ಮತ್ತಿತರ ಉದ್ದೇಶಗಳಿಗಾಗಿ ನಗರ ಭೂ ಪರಿಮಿತ ಕಾಯ್ದೆಯ ಅನ್ವಯ ಅಂದರೆ ಕಲಂ 20 ರ ಅನ್ವಯ ವಿನಾಯಿತಿಯನ್ನು ನೀಡಿದ್ದರು. ಅಲ್ಲದೆ ಸದರಿ ಆದೇಶದಲ್ಲಿ ಆದೇಶದ ದುರ್ಬಳಕೆಯಾದರೆ ಸದರಿ ಜಮೀನನ್ನು ಹಿಂಪಡೆಯುವ ಷರತ್ತನ್ನು ನಮೂದಿಸಿದ್ದರು.

ತದನಂತರ ಸದರಿ ಗುರುಕುಲ ಯೋಗಾಶ್ರಮ ಟ್ರಸ್ಟ್ ಶ್ರೀ ಸಾಯಿ ಸರಸ್ವತಿ ವಿದ್ಯಾಕೇಂದ್ರ ಎನ್ನುವ ಶೈಕ್ಷಣಿಕ ಸಂಸ್ಥೆಯನ್ನು ಸದರಿ ಟ್ರಸ್ಟ್ ನ ಮುಖ್ಯ ಧರ್ಮದರ್ಶಿಗಳಾಗಿದ್ದ ಶ್ರೀ ನಾರಾಯಣ ಭಟ್ ರವರ ನೇತೃತ್ವದಲ್ಲಿ ಸದರಿ ಜಮೀನಿನಲ್ಲಿ ಸ್ಥಾಪಿಸಿದರು. ಬೋಗಾದಿಯ ಸುತ್ತಮುತ್ತಲಿನ ನೂರಾರು ಬಡಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಇತ್ತೀಚೆಗೆ ಸದರಿ ಕೆ. ನಾರಾಯಣ್ ಭಟ್ ಅವರು ಮುಖ್ಯ ಧರ್ಮದರ್ಶಿ 1ಸ್ಥಾನದಿ೦ದ ನಿವೃತ್ತಿಗೊಂಡು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಎನ್ನುವ ನಾಮಾಂಕಿತರಾದ ರಾಮಚಂದ್ರಾಪುರಮಠದ ಸ್ವಾಮೀಜಿಯವರು ಮುಖ್ಯ ಧರ್ಮದರ್ಶಿಗಳಾದರು.

ಇತ್ತೀಚೆಗಿನ ವರ್ಷಗಳಲ್ಲಿ ಸದರಿ ವಿದ್ಯಾಸಂಸ್ಥೆಯು ಸಂಪೂರ್ಣವಾಗಿ ಕುಂಠಿತಗೊಂಡು ಇಂದು  ವಿದ್ಯಾಸಂಸ್ಥೆಯನ್ನು ವ್ಯವಸ್ಥಿತವಾಗಿ ಮುಚ್ಚಲಾಗಿದೆ. ರಾಜ್ಯದ ಹಲವಾರು ನ್ಯಾಯಾಲಯಗಳಲ್ಲಿ ಕಟ್ಲೆಗಳನ್ನು ಎದುರಿಸುತ್ತಿರುವ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ  ಇತ್ತೀಚೆಗೆ ಸರ್ಕಾರಿ ಆದೇಶವನ್ನು ಮುಚ್ಚಿಟ್ಟು ಶ್ರೀ ಗುರುಕುಲ ಯೋಗಾಶ್ರಮ ಟ್ರಸ್ಟ್ ಗೆ  ಸರ್ಕಾರದಿಂದ ನಿರ್ದಿಷ್ಟ ಉದ್ದೇಶಕ್ಕಾಗಿ ಕೊಟ್ಟಿರುವ ಜಮೀನನ್ನು ವಿಕ್ರಯಿಸಲು ಹೊರಟಿದ್ದಾರೆ. ಈ ವಿಚಾರವನ್ನು ಪರಿಶೀಲಿಸಿದಾಗ ದಿನಾಂಕ: 02-09-2021 ರಂದು ರಾಮಚಂದ್ರಾಪುರ ಮಠದ ಸ್ವಾಮೀಜಿಯವರು ಗುರುಕುಲ ಯೋಗಾಶ್ರಮ ಟ್ರಸ್ಟ್ ಪರವಾಗಿ ತಮ್ಮ ಜಿ.ಪಿ.ಎ. ಮುಖಾಂತರ ಬಿ.ಕೆ. ರಾಜು ಎನ್ನುವವರಿಗೆ ರೂ.6,50,00,000/- ಗಳಿಗೆ ವಿಕ್ರಯಿಸಲು ಕರಾರನ್ನು ನೋಂದಾಯಿಸಿದ್ದರು. ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರದಲ್ಲಿ ನಿಗದಿಯಾದ ಜಮೀನನ್ನು ಪಡೆದುಕೊಂಡು ಸರ್ಕಾರದ ಆದೇಶದ ವಿರುದ್ಧವಾಗಿ ಮಾರಲು ಹೊರಟಿದ್ದಾರೆ ಎಂದು ಅ.ಮ ಭಾಸ್ಕರ್ ಆರೋಪಿಸಿದ್ದಾರೆ.

ಕಲಂ 20 (1) ನಗರ ಭೂ ಪರಿಮಿತಿ ಕಾಯ್ದೆಯ ಮತ್ತು ಷರತ್ತುಗಳಿಗೆ ನಗರ ಭೂ ಪರಿಮಿತಿ (ರಿಪೀಲ್) ಕಾಯ್ದೆ 1999 ಅನ್ವಯಿಸುವುದಿಲ್ಲವೆಂದು ಸದರಿ ಕಾಯ್ದೆಯ ಕಲಂ 3(ಬಿ) ರಲ್ಲಿ ಸೃಷ್ಟಿಕರಣವಿದೆ.  ಅದ್ದರಿಂದ ಜಮೀನು ಬೋಗಾದಿ ರೈಲ್ವೆ ಬಡಾವಣೆಯ ಸಮೀಪದಲ್ಲಿದ್ದು ಈ ಪ್ರದೇಶದಲ್ಲಿ ಚದರ ಮೀಟರ್ ಒಂದಕ್ಕೆ ಸುಮಾರು ರೂ.22,000/- ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ.  ಈ ಅಂಶವನ್ನು ಗಣನೆಗೆ ತೆಗೆದುಕೊಂಡಲ್ಲಿ ಸರ್ಕಾರದಲ್ಲಿ ನಿಗದಿಯಾದಂತಹ  7908 ಚದರ ಮೀಟರ್ ಜಾಗಕ್ಕೆ ಸುಮಾರು ರೂ.17 ಕೋಟಿಗಿಂತಲು ಅಧಿಕ ಮೌಲ್ಯವಿದೆ. ಮಾರುಕಟ್ಟೆಯ ಬೆಲೆ 32 ಕೋಟಿಗೂ ಅಧಿಕ ಇದೆ.

ಹೀಗೆ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾದ ಮತ್ತು ವಸತಿಹೀನ ವರ್ಗಗಳಿಗೆ ಮೀಸಲಾಗಿ ಇಡಬೇಕಾಗಿದ್ದ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಪಡೆದುಕೊಂಡು ಮಾರಲು ಹೊರಟಿರುವುದು ಅಪರಾಧವಾಗಿದೆ. ಸರ್ಕಾರ ತಕ್ಷಣ ಈ ಜಮೀನನ್ನು ಹಿಂಪಡೆಯುವಂತೆ ನಮ್ಮ ಸಂಸ್ಥೆಯು ಸರ್ಕಾರಕ್ಕೆ ನೋಟೀಸನ್ನು ನೀಡಿರುವುದಲ್ಲದೆ ನಮ್ಮ ಸಂಸ್ಥೆಯ ಶೈಕ್ಷಣಿಕ ಉದ್ದೇಶಕ್ಕಾಗಿ ಸದರಿ ಜಮೀನನ್ನು ನೀಡುವಂತೆ  ಕೋರುತ್ತೇವೆ ಎಂದು ಅ.ಮ ಭಾಸ್ಕರ್ ತಿಳಿಸಿದ್ದಾರೆ

ಅಲ್ಲದೆ ಸಾರ್ವಜನಿಕ ನ್ಯಾಸದ ಧೈಯೋದ್ದೇಶಗಳಿಗೆ ವಿರುದ್ಧವಾಗಿ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಶೈಕ್ಷಣಿಕ ಸಂಸ್ಥೆಯನ್ನು ಸಂಪೂರ್ಣವಾಗಿ ಮುಚ್ಚಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಹಣಕ್ಕೆ ಮಾರಲು ಹೊರಟಿರುವ ಶ್ರೀ ಗುರುಕುಲ ಯೋಗಾಶ್ರಮ ನ್ಯಾಸದ ಧರ್ಮದರ್ಶಿಗಳನ್ನು ಅವರ ಸ್ಥಾನದಿಂದ ತೆಗೆಯುವಂತೆ ಜಿಲ್ಲಾ ನ್ಯಾಯಾಲಯವನ್ನು ಕೋರಲು ನಿರ್ಧರಿಸಿರುತ್ತೇವೆ ಎಂದು ಅ.ಮ ಭಾಸ್ಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಾಮುಂಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀನಿವಾಸ್, ವಕೀಲರಾದ ಸಚಿನ್ ಹಾಗೂ ಸೋಮಶೇಖರ್ ಹಾಜರಿದ್ದರು.

Key words: Government- Land – illegality-Mysore-Raghaveshwara shri-Lawyer –a.ma Bhaskar