ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ಪಷ್ಟ: ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ- ಸಚಿವ ಮಾಧುಸ್ವಾಮಿ.

ಮೈಸೂರು,ಮಾರ್ಚ್,20,2022(www.justkannada.in):  ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ಪಷ್ಟ.  ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜೆ.ಸಿ ಮಾಧುಸ್ವಾಮಿ, ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ನೀಡಿದೆ. ಆದರೂ ಪರೀಕ್ಷೆ ಬರೆಯಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ ? ಕೋರ್ಟ್ ತೀರ್ಪನ್ನೇ ಗೌರವಿಸಲ್ಲ ಅಂದ್ರೆ ನ್ಯಾಯಾಂಗದ ಬೆಲೆ ಏನಾಗುತ್ತೆ? ಎಂದು ಪ್ರಶ್ನಿಸಿದರು.

ಈ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ನಾನು ಹೇಳಿದ್ದೇನೆ. ಕೋರ್ಟ್ ಆದೇಶವನ್ನ ನಾವು ತಿರಸ್ಕಾರ ಮಾಡೋಕಾಗಲ್ಲ. ಹಿಂದೆ ಇದೇ‌ ರೀತಿ ಎರಡು ಬಾರಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಡಾ.ರಾಜ್ ಪ್ರಕರಣದಲ್ಲಿ ಹಾಗೂ ಕಾವೇರಿ ನೀರಿನ ವಿಚಾರದಲ್ಲಿ. ಈಗಾಗಿ ನಾವು ಆ ತಪ್ಪು ಮರುಕಳಿಸುವಂತೆ ಮಾಡಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಅಧಿವೇಶನ ಮೊಟುಕು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಅಧಿವೇಶನ ಮೊಟಕು ಮಾಡುವ ಪ್ರಶ್ನೆಯೆ ಇಲ್ಲ. 15 ವರ್ಷದ ಬಳಿಕ ಬೇಡಿಕೆ ಮೇಲೆ ಚರ್ಚೆ ಮಾಡಲಾಗಿದೆ. ಎಲ್ಲಾ ಇಲಾಖೆಗಳ ಮೇಲೆ ಬೇಡಿಕೆ ಇಟ್ಟು ಚರ್ಚೆ ಆರಂಭವಾಗಿದೆ. ಹಾಗಾಗಿ ಅಧಿವೇಶನ ಮೊಟಕುಗೊಳಿಸಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಈ ರೀತಿಯ ಯಾವುದೇ ಪ್ರಯತ್ನ ಇಲ್ಲ. ಶಿಕ್ಷಣ ಮಂತ್ರಿಗಳೂ ಕೂಡ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆ ರೀತಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಶ್ಮೀರ್ ಫೈಲ್ ಸಿನಿಮಾ ಹೆಸರಲ್ಲಿ ರಾಜಕೀಯ ಸಲ್ಲದು. ನಮ್ಮ ಇಷ್ಟ ನಾವು ಸಿನಿಮಾ ನೋಡಿದ್ದೇವೆ. ಅವರಿಗೆ ಇಷ್ಟ ಇಲ್ಲ ನೋಡಿಲ್ಲ ಅಷ್ಟೇ. ಸಿನಿಮಾಗಳು ಮಾಧ್ಯಮ ಅಂತಲೇ ನಾನು ಭಾವಿಸಿದ್ದೇನೆ. ನೈಜತೆಯನ್ನ ಬಿಂಬಿಸಿದರೆ ಆ ಭಾವನೆಗಳನ್ನ ಅರ್ಥ ಮಾಡಿಕೊಂಡ್ರೆ ಸರಿ. ಅದನ್ನ ಬಿಟ್ಟು ಅತಿರೇಕದಿಂದ ವರ್ತಿಸಿದ್ರೆ ಎಷ್ಟು ಸರಿ ಎಂದು  ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.

Key words: government-decision -hijab Minister -Madhuswamy.