ಜಿ.ಎನ್.ಮೋಹನ್ ಸ್ಪೆಷಲ್: ಷೇಕ್ಸ್ ಪಿಯರ್ ನನ್ನೊಳಗೂ ಬಂದ…

kannada t-shirts

ಷೇಕ್ಸ್ ಪಿಯರ್
ನನ್ನೊಳಗೂ ಬಂದ..
—-
ಆತ ಥೇಟ್ ಹಾಗೇ.. ನನ್ನ ಮನಸ್ಸಿನೊಳಗೆ ನುಗ್ಗಿದ- ಕಳ್ಳನ ಹಾಗೆ.
‘ಷೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ನೋಡುತ್ತಾ ಕುಳಿತಿದ್ದ ನನಗೆ ಅಂದಿನವರೆಗೂ ಬಿಡಿಸಲಾಗದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಹೋಯಿತು
ಷೇಕ್ಸ್ ಪಿಯರ್, ಮಹಾನ್ ನಾಟಕಕಾರ ಷೇಕ್ಸ್ ಪಿಯರ್ ಸ್ತ್ರಾಟ್ ಫೋರ್ಡ್ ಗೆ ಬರುತ್ತಾನೆ ಎನ್ನುವ ಊರ ಘೋಷಣೆಯ ಮಧ್ಯೆ ಆತ ಬರುತ್ತಾನೆ.
ಎಲ್ಲರೂ ಬಾಜಾಭಜಂತ್ರಿ ಸಮೇತ, ತಲೆಗೆ ತುರಾಯಿ ಸಿಕ್ಕಿಸಿಕೊಂಡು ಕೋಟು ಬೂಟಿನ ಶೇಕ್ಸ್ ಪಿಯರ್ ನ ಆಗಮನವನ್ನು ಕಾಯುತ್ತಿದ್ದರೆ, ಆತ ಆಹೋರಾತ್ರಿಯಲ್ಲಿ ಗೋಡೆ ಹಾರಿ, ಹಿಂಬಾಗಿಲ ಮೂಲಕ ಬರುತ್ತಾನೆ.. ಥೇಟ್ ಕಳ್ಳನ ಹಾಗೆ..
ನಟರಾಜ ಹುಳಿಯಾರ್ ಬರೆದ, ನಟರಾಜ ಹೊನ್ನವಳ್ಳಿ ಕಟ್ಟಿಕೊಟ್ಟ ‘ಷೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ನೋಡುತ್ತಾ ನೋಡುತ್ತಾ ನನಗೂ ಗೊತ್ತಾಗಿ ಹೋಯಿತು, ಯಸ್, ಆತ ನಿಜಕ್ಕೂ ಕಳ್ಳನಂತೆಯೇ ನನ್ನೊಳಗೆ ಬಂದ.
ಷೇಕ್ಸ್ ಪಿಯರ್ ಎಂದಾಕ್ಷಣ ನನಗೆ ಆ ರಂಗದ ಮೇಲಿನ ಕತ್ತಲೆ ಬೆಳಕುಗಳೇ ನೆನಪಾಗುತ್ತದೆ.
‘ಒಳ್ಳೆ ಸಮಯ, ಒಳ್ಳೆ ಸಮಯ, ಒಳ್ಳೆ ಸಮಯವೂ.. ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವೂ..’ ಎನ್ನುವ ಸದಾರಮೆಯ ಕಳ್ಳನ ಹಾಗೆ ಷೇಕ್ಸ್ ಪಿಯರ್ ರಂಗದ ಮೇಲಿನ ಕತ್ತಲೆಯಲ್ಲೇ ನನ್ನೊಳಗೆ ನುಗ್ಗಿಬಿಟ್ಟ.
ನನಗಿನ್ನೂ ಚೆನ್ನಾಗಿ ನೆನಪಿದೆ. ಪ್ರಸನ್ನ ಮ್ಯಾಕ್ ಬೆತ್ ನಿರ್ದೇಶಿಸುವುದರೊಂದಿಗೆ ಆ ಕಳ್ಳ ಷೇಕ್ಸ್ ಪಿಯರ್ ನನ್ನು ನನ್ನೊಳಗೆ ಆಳವಾಗಿ ಕೂರಿಸಿಬಿಟ್ಟರು.
ಹಾಗೆ ಬಂದವನು ಯಾಕೆ ನನ್ನೊಳಗೆ ಪ್ರಶ್ನೆಗಳನ್ನು ಬಿತ್ತುತ್ತಾ ಹೋದ? ಸಂಭ್ರಮಕ್ಕೂ, ನೋವಿಗೂ, ವಿಷಾದಕ್ಕೂ, ರಾಗಕ್ಕೂ, ದ್ವೇಷಕ್ಕೂ ಎಲ್ಲಕ್ಕೂ ಆತ ಒದಗಿ ಬಂದುಬಿಟ್ಟ.
‘ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ…’ ನನ್ನೊಳಗೆ ಷೇಕ್ಸ್ ಪಿಯರ್ ನಾಟಕದ ಸಾಲುಗಳು ಸಿ ಅಶ್ವತ್ ಹಾಡಿದ ಭಾವಗೀತೆಗಳೇನೋ ಎನ್ನುವಂತೆ ಮತ್ತೆ ಮತ್ತೆ ಸುಳಿಯುತ್ತಲೇ ಇರುತ್ತದೆ.
ರಾಮಚಂದ್ರ ದೇವ ಮಾಡಿದ ಅನುವಾದಕ್ಕೆ ಅಂತ ಶಕ್ತಿಯಿತ್ತೋ ಅಥವಾ ಪ್ರಸನ್ನ ಅದನ್ನು ನಾಟುವ ಹಾಗೆ ಆಡಿಸಿದರೋ, ಇಲ್ಲಾ ಜಿ ಕೆ ಗೋವಿಂದ ರಾವ್, ಪ್ರೇಮಾ ಕಾರಂತ್ ಮ್ಯಾಕ್ ಬೆತ್- ಲೇಡಿ ಮ್ಯಾಕ್ ಬೆತ್ ಆಗಿ ನಮ್ಮೊಳಗೇ ಷೇಕ್ಸ್ ಪಿಯರ್ ನನ್ನು ಎಳೆದುಕೊಂಡು ಬಂದು ಬಿಟ್ಟರೋ ಗೊತ್ತಿಲ್ಲ.
ಆದರೆ ಆ ಮ್ಯಾಕ್ ಬೆತ್, ಆ ಷೇಕ್ಸ್ ಪಿಯರ್ ಇನ್ನೂ ಸುತ್ತುತ್ತಲೇ ಇದ್ದಾರೆ.
‘ಗಿರಿಗಿಟ್ಟಿ ಗಿಟ್ಟಿಗರ ಆದಲ್ಲಿ ಮುಗಿದಲ್ಲಿ ಗೆದ್ದಲ್ಲಿ ಸೋತಲ್ಲಿ ಕದನದಲ್ಲಿ.. ಎಲ್ಲಿ.. ಮ್ಯಾಕ್ ಬೆತ್ ಬರುವಲ್ಲಿ’ ಎನ್ನುವ ಜಕ್ಕಿಣಿಯರ ಆರ್ಭಟ ನೆನಪಾಗುತ್ತದೆ.
ಮ್ಯಾಕ್ ಬೆತ್ ನೀಡಿದ ಔತಣ ಕೂಟದಲ್ಲಿ ಊಟ ಮಾಡುತ್ತಿದ್ದ ಅತಿಥಿಗಳ ಮಧ್ಯದಿಂದ ಎದ್ದು ನಿಲ್ಲುವ ಪ್ರೇತ ನೆನಪಾಗುತ್ತದೆ.
ಬರ್ನಂ ವನಕ್ಕೆ ಕೈ ಕಾಲು ಬರಿಸಿದ್ದು ನೆನಪಾಗುತ್ತದೆ.
ಆ ಲೇಡಿ ಮ್ಯಾಕ್ ಬೆತ್ ಕೈಯಲ್ಲಿ ದೀಪದ ಬುಟ್ಟಿ ಹಿಡಿದು ನಿದ್ದೆಯಲ್ಲೇ ನಡೆಯುವ ಘಟನೆ ನೆನಪಾಗುತ್ತದೆ.
ಯಾಕೆ ಆ ಷೇಕ್ಸ್ ಪಿಯರ್ ನನ್ನೊಳಗೆ ಇಷ್ಟೊಂದು ನಿಡುಸುಯ್ಯುವಿಕೆಯನ್ನು ಬಿಟ್ಟು ಹೋದ?
‘ಗತ್ತು ಗಮ್ಮತ್ತಿನಲ್ಲಿ ರೆಕ್ಕೆ ಬಡಿಯುತ್ತಿದ್ದ ಹಕ್ಕಿಯನ್ನು ಹೆಗ್ಗಣ ತಿನ್ನುವ ಸಾಮಾನ್ಯ ಗೂಗೆ ಹೊಡೆದು ಕೊಂದಿತ್ತು’ ಎನ್ನುವ ಮಾತು ನನಗೆ ಎಚ್ಚರದ ದೀಪವಾಗಿ ಉಳಿದಿದ್ದು ಹೇಗೆ?
‘ಈ ಅರೇಬಿಯಾದ ಸುಗಂಧ ದ್ರವ್ಯಗಳೆಲ್ಲವೂ ನನ್ನ ಕೈಯಿನ ರಕ್ತದ ಕಲೆಗಳನ್ನು ಹೋಗಲಾಡಿಸಲಾರವೇ?’ ಎಂದು ಲೇಡಿ ಮ್ಯಾಕ್ ಬೆತ್ ಕತ್ತಲ ಆ ರಾತ್ರಿಯಲ್ಲಿ ಆಕ್ರಂದನದ ರಾಗ ತೆಗೆದಾಗ ಅವಳಿರಲಿ, ನಾನೂ ನನ್ನ ಕೈಯನ್ನು ನೋಡಿಕೊಂಡದ್ದಾದರೂ ಏಕೆ?
ಹೌದು ಹಾಗಾಗಿಯೇ ನಾನು ಆ ಷೇಕ್ಸ್ ಪಿಯರ್ ನನ್ನು ಎಳೆದುಕೊಂಡು ನನ್ನೆದುರು ನಿಲ್ಲಿಸಿಕೊಳ್ಳಬೇಕಾಗಿ ಬಂದದ್ದು. ಕೇಳಬೇಕಾಗಿ ಬಂದದ್ದು ಅವನಿಗೆ ಪ್ರಶ್ನೆಗಳನ್ನು.
‘ಒಂದಿಷ್ಟು ಪ್ರಶ್ನೆ ಕೇಳಬೇಕಾಗಿದೆ
ಇನ್ನಾರಿಗೂ ಅಲ್ಲ
ನೇರ ಷೇಕ್ಸ್ ಪಿಯರನಿಗೇ;
ಏಕೆ ಹಾಗಾಯಿತು
ಒಬ್ಬೊಬ್ಬರದೂ ಒಂದೊಂದು ರೀತಿಯ ಅಂತ್ಯ?
ಕತ್ತಿ ಸೆಣಸಿ ರಾಜನಿಗಾಗಿ ಯುದ್ಧ
ಗೆಲ್ಲುವುದೊಂದೇ ಮುಖ್ಯ ಎಂದುಕೊಂಡಿದ್ದ
ಮ್ಯಾಕ್ ಬೆತ್ ನಿಗೆ ಏಕೆ ಮುಖಾಮುಖಿಯಾಗಿಸಿದೆ
ಆ ಮೂರು ಜಕ್ಕಿಣಿಯರನ್ನು?
ಜೋಡಿಯಾಗಿಸಿದೆ ಇನ್ನಷ್ಟು ಮತ್ತಷ್ಟು
ಆಕಾಂಕ್ಷೆಗಳ ನೀರೆರೆವ
ಆ ಲೇಡಿ ಮ್ಯಾಕ್ ಬೆತ್ ಳನ್ನು?”
ನನ್ನ ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕವನ ಸಂಕಲನ ಎದ್ದು ಬಂದದ್ದೆ ಆ ಷೇಕ್ಸ್ ಪಿಯರ್ ನ ನಾಟಕಗಳಿಂದ, ಆತನ ಕಳ್ಳಾಟಗಳಿಂದ.
ನನಗೋ ಷೇಕ್ಸ್ ಪಿಯರನಿಗೆ ಕೇಳಬೇಕಾದ ಪ್ರಶ್ನೆಗಳ ಪಟ್ಟಿ ಮುಗಿಯಲೇ ಇಲ್ಲ.
ಷೇಕ್ಸ್ ಪಿಯರ್ ಸಿಗುವ ಎಲ್ಲಾ ಕಡೆ ಹುಡುಕುತ್ತಲೇ ಹೋದೆ. ಬಿ ವಿ ಕಾರಂತರು ಮ್ಯಾಕ್ ಬೆತ್ ಅನ್ನು ಯಕ್ಷಗಾನಕ್ಕೆ ಅಳವಡಿಸಿ ‘ಬರ್ನಂ ವನ’ವಾಗಿಸಿದ್ದರು. ಧಾರವಾಡದ ಬಯಲು ರಂಗದಲ್ಲಿ ಪ್ರದರ್ಶನವಿತ್ತು. ಅಲ್ಲಿಗೂ ಹೋದೆ.
ಕುರೋಸೋವನ ಬೆನ್ನತ್ತಿ ಆತನ ‘ಥ್ರೋನ್ ಆಫ್ ಬ್ಲಡ್’ ನೋಡಿದೆ. ಇತ್ತೀಚಿನ ‘ಮಕ್ಬೂಲ್’ ಸಿನೆಮಾ ಸಹಾ ನೋಡಿದೆ.
ಬಸವಲಿಂಗಯ್ಯ ನಿರ್ದೇಶಿಸಿದ ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನಾಟಕ ನೋಡಿದ್ದೂ ಆಯ್ತು. ಉಹೂ ತೃಪ್ತಿಯಾಗಲಿಲ್ಲ. ನೇರಾನೇರ ಅವನು ಹುಟ್ಟಿದ ಸ್ಥಳವನ್ನೇ ಹುಡುಕಿ ಲಂಡನ್ ಗೆ ಹಾರಿದೆ.
ನನ್ನಲ್ಲಿದ್ದ ಪ್ರಶ್ನೆಗಳ ಬತ್ತಳಿಕೆ ಬರಿದಾಗಲೇ ಇಲ್ಲ.
‘ಪ್ರಶ್ನೆ ಇರುವುದು ಷೇಕ್ಸ್ ಪಿಯರನಿಗೆ
ಇರಲೇ ಇಲ್ಲದೇ ಇರಲೇ ಎನ್ನುವ
ರಾಜಕುಮಾರನನ್ನು ಸೃಷ್ಟಿ ಮಾಡಿದವನಿಗೆ
ಗತ್ತಿನಲ್ಲಿ ಹಾರುತ್ತಿದ್ದ ಹಕ್ಕಿಯನ್ನು
ಒಂದು ಸಾಮಾನ್ಯ ಗೂಗೆಯಿಂದ
ಹೊಡೆದು ಕೊಂದವನಿಗೆ
ಬರ್ನಂ ವನಕ್ಕೂ ಕೈ ಕಾಲು ಬರಿಸಿದವನಿಗೆ
ಊಟದ ಬಟ್ಟಲುಗಳ ನಡುವೆ
ಎದ್ದು ನಿಲ್ಲುವ ಪ್ರೇತಗಳನ್ನು ಸೃಷ್ಟಿಸಿದವನಿಗೆ
ಕಪ್ಪಿಗೂ ಬಿಳುಪಿಗೂ ನಡುವೆ
ಒಂದು ಗೋಡೆ ಎಬ್ಬಿಸಿದವನಿಗೆ
ಸುಂದರ ಕನಸುಗಳ ಮಧ್ಯೆಯೂ
ಒಂದೊಂದು ನಿಟ್ಟುಸಿರು ಹೆಣೆದವನಿಗೆ..”
ಕಳ್ಳನಂತೆ ಒಳಗೆ ಇಣುಕಿದ ಆ ಷೇಕ್ಸ್ ಪಿಯರ್ ನನ್ನನ್ನು ತೊರೆದಂತೂ ಹೋಗಿಲ್ಲ. ಎಲ್ಲೆಲ್ಲೂ ಸಿಗುತ್ತಾ ಕಳ್ಳಾಟವಾಡುತ್ತಲೇ ಇದ್ದಾನೆ.
ಮೊನ್ನೆ ಮೊನ್ನೆಯೇನೋ ‘ರಂಗಶಂಕರ’ದ ಅಂಗಳಕ್ಕೆ ಹೆಜ್ಜೆ ಇಟ್ಟರೆ ಒಂದು ಟ್ರಾಲಿಯ ಮೇಲೆ ಗೊಂಬೆಯಾಗಿ ಕುಳಿತಿದ್ದ, ಇನ್ನೊಂದು ದಿನ ಅದೇ ಅಂಗಳದಲ್ಲಿ ನೋಡಿದರೆ ಶೇಕ್ಸ್ ಪಿಯರ್ ಲ್ಯಾಂಪ್ ಗಳನ್ನ ಮಾರಾಟ ಮಾಡುತ್ತಿದ್ದರು.
ಲಂಡನ್ ನ ಮೇಡಂ ತುಸಾಡ್ ಸೃಷ್ಟಿಸಿದ ಮೇಣದ ಗುಹೆ ಹೊಕ್ಕರೆ ಅಲ್ಲಿ ಇದೇ ಬೊಕ್ಕ ತಲೆಯ ಶೇಕ್ಸ್ ಪಿಯರ್ ತಲೆ ಕುಣಿಸುತ್ತಾ ಏನನ್ನೋ ಬರೆಯುತ್ತಿದ್ದ.
ನನ್ನ ಹಾಗೂ ಆತನ ಜೂಟಾಟ ನಡೆಯುತ್ತಲೇ ಇದೆ.
ಇದೇ ನಟರಾಜ ಹೊನ್ನವಳ್ಳಿ ‘ಪ್ರಮಾಣುವಿಗೆ ಪ್ರಮಾಣು’ಎನ್ನುವ ನಾಟಕ ನಿರ್ದೇಶಿಸಿದ್ದರು. ಷೇಕ್ಸ್ ಪಿಯರ್ ನ ‘ಮೆಷರ್ ಫಾರ್ ಮೆಷರ್ ನಾಟಕ.
ನಾಟಕ ಆರಂಭವಾದದ್ದೇ ನನ್ನ ಕವಿತೆಯ ಮೂಲಕ. ನಟರು ಪ್ರಶ್ನೆಗಳನ್ನು ಷೇಕ್ಸ್ ಪಿಯರ್ ನತ್ತ ತೂರುತ್ತಲೇ ಅವನ ಪಾತ್ರಗಳಾಗಿ ಹೋದರು. ಥೇಟ್ ನನ್ನಂತೇ..
ಅಟ್ಲಾಂಟದ ಸಿ ಎನ್ ಎನ್ ಚಾನಲ್ ನ ಅಷ್ಟುದ್ದ ಮಹಡಿಯನ್ನು ಏರಿ ಇನ್ನೇನು ಒಳಗೆ ಕಾಲಿಡುವವನಿದ್ದೆ.
ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ನನ್ನನ್ನು ನೋಡಿದವನೇ ‘ಏ, ಯು ಶೇಕ್ಸ್ ಪಿಯರ್’ ಎಂದು ನನ್ನತ್ತ ದಾಪುಗಾಲು ಹಾಕುತ್ತಾ ಬಂದ.
ಆ ವೇಳೆಗಾಗಲೇ ನನ್ನ ಹೆಸರು ಅಮೆರಿಕನ್ನರ ನಾಲಿಗೆಗೆ ಸಿಕ್ಕು ಹತ್ತವತಾರ ತಾಳಿ ಸಾಕಷ್ಟು ದಿನವಾಗಿ ಹೋಗಿತ್ತು.
ಹುಬ್ಬೇರಿಸಿ ನಿಂತ ನಾನು ಅವನ ಮುಂದೆ ನನ್ನ ಸಿ ಎನ್ ಎನ್ ಕಾರ್ಡ್ ಹಿಡಿದೆ.
ಆತ ಅದರತ್ತ ಕಣ್ಣೆತ್ತಿಯೂ ನೋಡದೆ ನನ್ನ ಕೈನಲ್ಲಿದ್ದ ನೋಟ್ ಬುಕ್ ನತ್ತ ಕೈ ತೋರಿಸಿದ.
ಹಾಂ, ಅಲ್ಲಿತ್ತು ಷೇಕ್ಸ್ ಪಿಯರ್ ಚಿತ್ರ.
ಅದು ಖಾಸಗಿ ಕಂಪನಿಯೊಂದು ಶೇಕ್ಸ್ ಪಿಯರ್ ಥೀಮ್ ಮೇಲೆ ರಚಿಸಿದ ನೋಟ್ ಬುಕ್.
ಮುಖಪುಟದಲ್ಲಿ ಆತನ ಚಿತ್ರ. ಒಳಗೆ ಆತನ ನಾಟಕದ ನೂರಾರು ಸಾಲುಗಳು.
ಆ ಸೆಕ್ಯುರಿಟಿ ಗಾರ್ಡ್ ನನ್ನಿಂದ ಆ ನೋಟ್ ಬುಕ್ ಪಡೆದವನೇ ತನಗೆ ಬೇಕಾದ ಕೋಟ್ ಹುಡುಕಲು ಹಾಳೆ ತಿರುವತೊಡಗಿದ.
ಆ ಕಳ್ಳ ಷೇಕ್ಸ್ ಪಿಯರ್ ಆ ದೂರದ ಅಮೇರಿಕಾದಲ್ಲೂ ನನಗೂ ಸೆಕ್ಯುರಿಟಿ ಗಾರ್ಡ್ ಗೂ ಒಂದು ನಂಟು ಬೆಸೆದಿದ್ದ.
ಇದು ಹೇಗೆ?
ಆ ಪ್ರಶ್ನೆಯನ್ನೂ ಕೇಳಬೇಕಾಗಿದೆ ಷೇಕ್ಸ್ ಪಿಯರನಿಗೆ ..

website developers in mysore