ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಕಾರಂತ ಎನ್ನುವ ದುಡಿ ನನ್ನೊಳಗೆ ನುಡಿಯುತ್ತಲೇ ಇದೆ..

“..ಈ ದಿನವೂ ಗುಡಿ ಬಂದೊಡನೆ ಬಾಡು ನಾಯಿ ನಿಂತಿತು. ಚೋಮನೂ ತಟಸ್ಥನಾಗಿ ಮೊಣಕಾಲುಗಳನ್ನು ಕೇವಲ ಅಭ್ಯಾಸ ಬಲದಿಂದಲೇ ಊರಿದ. ಎದೆ ಜುಮ್ಎಂದಿತು. ತಾನು ಪಾದ್ರಿಮಠವನ್ನು ಸೇರಲಿರುವವನು. ಇನ್ನು ಪಂಜುರ್ಲಿಗೆ ಡೊಗ್ಗಾಲು ಹಾಕುವುದೇ ಎಂದು ಅನಿಸಿತು. ಕಾಲನ್ನು ನೀಡಲು ನೋಡಿದ ಆಗಲಿಲ್ಲ. ಪಂಜುರ್ಲಿ ಭೂತ ತನ್ನ ಎದುರಿಗೆ ನಿಂತಂತೆ ಕಾಣಿಸಿತು..”

‘ಚೋಮನ ದುಡಿ’ಯಲ್ಲಿ ಮತ್ತೆ ಕಣ್ಣಾಡಿಸುತ್ತಿದ್ದೆ.

ತಕ್ಷಣ ಏನೋ ನೆನಪಾಗಿ ಹಾಗೇ ನಿಂತೆ.

ಸುಮಾರು ನಾಲ್ಕು ದಶಕದ ಹಿಂದಿನ ಮಾತು.

‘ನಾನಾಗಿದ್ದಿದ್ದರೆ ಚೋಮ ದೇವರ ಗುಡಿಗೆ ಕೈ ಮುಗಿಯುವ ಹಾಗೆ ಮಾಡುತ್ತಿರಲಿಲ್ಲ ಆತ ಪಂಜುರ್ಲಿಯನ್ನು ದಾಟಿಕೊಂಡೇ ತಾನು ಬಯಸಿದ ಕಡೆ ಹೋಗುವಂತೆ ಮಾಡುತ್ತಿದ್ದೆ..’ ಎನ್ನುವ ಅರ್ಥದ ಮಾತು ಚಂದ್ರಶೇಖರ ಪಾಟೀಲರ ಸಂಪಾದಕತ್ವದ ‘ಸಂಕ್ರಮಣ’ದಲ್ಲಿತ್ತು.

ಚೋಮನ ದುಡಿಯನ್ನು ಓದಿ ಅದರ ಸೆಳೆತಕ್ಕೆ ಸಿಕ್ಕಿದ್ದ ನನಗೆ ಕಾರಂತರು ಬರೆದದ್ದನ್ನು ಹೀಗೆ ಇನ್ನೊಂದು ರೀತಿ ನೋಡಬಹುದಲ್ಲಾ ಅನಿಸಿತು.

ಅದುವರೆಗೂ ಕಾರಂತರು ಎಂದರೆ ದೇವರಿಗೆ ಒಂದಿಷ್ಟು ಕಡಿಮೆ ಅಷ್ಟೇ ಎಂದು ಮನದಲ್ಲಿ ಅವರನ್ನು ಪ್ರತಿಷ್ಠಾಪಿಸಿಕೊಂಡಿದ್ದ ನನಗೆ ಕಾರಂತರನ್ನೂ ಪ್ರಶ್ನೆ ಮಾಡಬಹುದು ಎನ್ನುವುದೂ ಗೊತ್ತಾಯಿತು.

ಆಮೇಲೆ.. ಆಮೇಲಾಮೇಲೆ.. ಪ್ರಶ್ನೆ ಮಾಡುವ, ಕಾರಂತರನ್ನೂ ಪ್ರಶ್ನೆ ಮಾಡುವ, ಸಕಲ ಚರಾಚರಗಳನ್ನೂ ಪ್ರಶ್ನೆ ಮಾಡುವ, ದೇವರಿಗೇ ಸವಾಲು ಎಸೆಯುವ, ಪ್ರಭುತ್ವವನ್ನು ಜಗ್ಗಿ ಮಾತನಾಡಿಸುವ.. ಎಲ್ಲವನ್ನೂ ಕಲಿಸಿದ್ದು ಕಾರಂತರೇ ಎಂದು ಗೊತ್ತಾಯಿತು.

ಶಿವರಾಮ ಕಾರಂತರು ನನ್ನ ಮನದೊಳಗೆ ನೆಟ್ಟು ನಿಂತದ್ದು ಹೀಗೆ..

ಶಿವರಾಮ ಕಾರಂತ ಹೆಸರು ನಾನು ಅದೀಗ ಕೇಳಿದ್ದೇನೂ ಅಲ್ಲ

ಅವರು ನನ್ನ ಬಾಲ್ಯಕ್ಕೂ, ಯೌವನಕ್ಕೂ ಜತೆ ಜತೆಯಾಗಿಯೇ ಸಾಥ್ ನೀಡಿದ್ದರು.

ಇನ್ನೂ ನಾಲ್ಕನೇ ತರಗತಿಯಲ್ಲಿರುವಾಗಲೇ ನಾನು ‘ವಾಸನ್ ಸರ್ಕ್ಯುಲೇಟಿಂಗ್ ಲೈಬ್ರರಿ’ಯ ಮುಚ್ಚಿದ ಶಟರ್ ಯಾವಾಗ ತೆರೆಯುವುದೋ ಎಂದು ಕಾಯುತ್ತಾ ನಿಂತಿರುತ್ತಿದ್ದೆ.

ಅಲ್ಲಿದ್ದ ‘ಅಮರಚಿತ್ರ ಕಥಾ ಮಾಲಿಕೆ’ಯ ಎಲ್ಲಾ ಪುಸ್ತಕಗಳನ್ನೂಒಂದೇ ಗುಕ್ಕಿಗೆ ಓದಿ ಮುಗಿಸುವ ಹಸಿವಿನಲ್ಲಿರುತ್ತಿದ್ದೆ.

ಶಿವರಾಮ ಕಾರಂತ ಎನ್ನುವ ಹೆಸರು ನನಗೆ ಸಿಕ್ಕಿದ್ದು ಇಲ್ಲಿಯೇ. ಅಮರ ಚಿತ್ರ ಕಥಾ ಮಾಲಿಕೆಯ ಕನ್ನಡದ ಬಹುತೇಕ ಅನುವಾದ ಇವರದ್ದೇ. ಅದಕ್ಕೆ ಮುದ್ದಾದ ಕೈಬರಹದ ಜೊತೆ ನೀಡುತ್ತಿದ್ದವರು ಕಮಲೇಶ್.

ಆಮೇಲೆ ಅವರು ನನಗೆ ಸಿಕ್ಕಿದ್ದು ಅಣ್ಣ ತಂದುಕೊಡುತ್ತಿದ್ದ ಅನೇಕ ಕೃತಿಗಳ ಮೂಲಕ. ನರಗುಂದದ ಮಾಳಿಗೆಯ ಮನೆಯಲ್ಲಿ, ಅಣ್ಣ ಅಲ್ಲಿ ಕೃಷಿ ಅಧಿಕಾರಿಯಾಗಿದ್ದಾಗ ‘ಚೋಮನ ದುಡಿ’ ಕಾದಂಬರಿಯನ್ನು ನಾನು ಕೈಗೆತ್ತಿಕೊಂಡೆ.

ಇದನ್ನು ಓದಿದ ಕಾರಣಕ್ಕಾಗಿಯೇ ಇರಬೇಕು ನನಗೆ ಎರಡು ದಿನ ಮೊದಲೇ ಮೀಸೆ ಬಂದಿತ್ತು.

ಕಾರಂತರು ವಿಜ್ಞಾನ ವಿಷಯಗಳನ್ನು ಬರೆದರು. ತಮ್ಮ ಅಪಾರ ಓದನ್ನೆಲ್ಲಾ ಕನ್ನಡ ಜಗತ್ತಿಗೆ ಧಾರೆ ಎರೆದುಬಿಡಬೇಕು ಎನ್ನುವಂತೆ ಬರದೇ ಬರೆದರು.

ಅದನ್ನೆಲ್ಲ ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋಗುತ್ತಿದ್ದಾಗ ತುರ್ತು ಪರಿಸ್ಥಿತಿ ಸದ್ದಿಲ್ಲದೇ ಕಳ್ಳ ಹೆಜ್ಜೆಯಲ್ಲಿ ಒಳಗೆ ಬರಲು ಹವಣಿಸುತ್ತಿತ್ತು.

ಆ ಸಮಯಕ್ಕೆ ಸರಿಯಾಗಿ ಚೋಮನೂ ಬೆಳ್ಳಿ ತೆರೆಯ ಮೇಲೆ ದುಡಿ ಕೈಗೆತ್ತಿಕೊಂಡಿದ್ದ.

ದೇಶಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಸಕಿ ಹಾಕುವ ಹುನ್ನಾರ ನಡೆದಿತ್ತು. ಹಾಗಾಗಿಯೇ ವೈಚಾರಿಕತೆಯ ಬಿರುಗಾಳಿ ಎಲ್ಲೆಲ್ಲೂ ಹರಡಲು ಆರಂಭವಾಗಿತ್ತು.

ಚೋಮನ ದುಡಿ ಈ ಸಮಯಕ್ಕೆ ಉರಿಯುವ ಪಂಜಿಗೆ ಕೀಲೆಣ್ಣೆಯಾಗಿ ಒದಗಿತು

ಹಾಗಾಗಿ ಚೋಮನ ಬಗ್ಗೆ, ಆತನ ನೋವುಗಳ ಬಗ್ಗೆ, ಆತನ ವಿಷಾದದ ಬಗ್ಗೆ ನಮ್ಮದೇ ಆದ ನೋಟಗಳಿತ್ತು

ಅದೇ ನೋಟಗಳನ್ನು ಕಟ್ಟಿಕೊಂಡೇ ಬೆಳೆಯುತ್ತಿದ್ದ ನನಗೆ ‘ಸಂಕ್ರಮಣ’ ಶಾಕ್ ಕೊಟ್ಟಿತ್ತು.

ಲೇಖಕರು ಚೋಮನನ್ನೂ, ಆ ಮೂಲಕ ಶಿವರಾಮ ಕಾರಂತರನ್ನೂ ಪ್ರಶ್ನಿಸಿದ್ದರು.

ಚೋಮನ ದುಡಿ ಮತ್ತೆ ಓದಿದೆ. ‘ಹೌದಲ್ಲಾ ಚೋಮ ವ್ಯವಸ್ಥೆಗೆ ಬಲಿಯಾಗಿ ಕುಸಿಯುವ ಬದಲು…??’ ಎಂದು ನನಗೂ ಅನ್ನಿಸಿತು. ಆಗ ಮತ್ತೆ ಶಿವರಾಮ ಕಾರಂತರನ್ನು ಭೂತಗನ್ನಡಿಯ ಮೂಲಕ ನೋಡಲಾರಂಭಿಸಿದೆ.

ಶಿವರಾಮ ಕಾರಂತರು ಇದ್ದ ವ್ಯವಸ್ಥೆಗೆ ಸಡ್ಡು ಹೊಡೆದವರು. ಎಲ್ಲರೂ ಒಪ್ಪಿಕೊಂಡು ‘ಮಂದೆಯೊಳಗೊಂದಾಗಿ..’ ಹೋಗುತ್ತಿದ್ದಾಗ ಭಿನ್ನ ಪ್ರಶ್ನೆಗಳನ್ನು ಎತ್ತಿದವರು. ರೇಗುತ್ತಲೇ ವಿಷಯದ ಮೊನಚನ್ನು ಅರ್ಥ ಮಾಡಿಸುತ್ತಿದ್ದವರು.

ಪ್ರಶ್ನಿಸಲೇಬೇಕು ಎಲ್ಲವನ್ನೂ ಎಂದು ದೃಢವಾಗಿ ನಂಬಿದ್ದವರು.
ತಾವೊಬ್ಬರೇ ಅಲ್ಲ, ಎಲ್ಲರೂ.. ಎಂದು ಹಾತೊರೆಯುತ್ತಿದ್ದವರು.

ಅಲೆಯ ವಿರುದ್ಧ ಈಜುವುದು ಕಾರಂತರಿಗೆ ತೀರಾ ಸಹಜ ಕ್ರಿಯೆಯಾಗಿತ್ತು.

ಒಂದು ಸಲ ಹೀಗಾಯ್ತು-

ಬಾಲವನದಲ್ಲಿದ್ದೆ. ‘ನಿರತ ನಿರಂತ’ದ ಗೆಳೆಯರೆಲ್ಲರೂ ಕೂಡಿ ಮಕ್ಕಳೊಡನೆ ಗಮ್ಮತ್ತು ಮಾಡುತ್ತಿದ್ದರು. ಅದಕ್ಕೆ ಶಿವರಾಮ ಕಾರಂತರು ಕಣ್ಣಾಗಿದ್ದರು.

ಆ ವೇಳೆಗೆ ಕುಂದಾಪುರ ತಲುಪಿಕೊಂಡಿದ್ದ ಕಾರಂತರಿಗೆ ‘ಬಾಲವನ’ಕ್ಕೆ ಬಂದಾಗ ಮುಖದಲ್ಲಿ ತವರಿಗೆ ಬಂದ ಸಂಭ್ರಮವಿತ್ತು.

ಅವರು ಮಕ್ಕಳಿಗೆ ಕಥೆ ಹೇಳುತ್ತಾ.. ನಗುತ್ತಾ ಕುಳಿತಿದ್ದಾಗ ಅರೆ ಸಿಂಹಕ್ಕೂ ನಗು ಇದೆ ಎಂದು ನಾವೆಲ್ಲರೂ ಕಿಸಪಿಸ ಮಾತಾಡಿಕೊಂಡಿದ್ದೆವು.

ಆಗಲೇ ಗೋಪಾಡ್ಕರ್ ಎನ್ನುವ ಗೆಳೆಯ ಅವರ ಮುಂದೆ ಸ್ವರೂಪ ಎನ್ನುವ ಬಾಲಕನನ್ನು ನಿಲ್ಲಿಸಿದ. ನೆನಪಿನ ಶಕ್ತಿಯ ಬಗ್ಗೆ ಏನೇನೋ ಪ್ರಯೋಗ ನಡೆಸುತ್ತಿದ್ದ ಯುವಕ ಆತ.

ಆ ಮಗುವನ್ನು ಕಾರಂತರ ಮುಂದೆ ನಿಲ್ಲಿಸಿ ‘ಸಾರ್ ಇವನು ಯಾವ ದೇಶದ ಬಾವುಟ ಬೇಕಾದರೂ ಗುರುತಿಸುತ್ತಾನೆ, ದೇಶದ ಚರಿತ್ರೆಯ ದಿನಾಂಕಗಳನ್ನು ಪಟಪಟನೆ ಹೇಳುತ್ತಾನೆ, ಜಗತ್ತಿನ ಎಲ್ಲಾ ರಾಜಧಾನಿಗಳ ಹೆಸರೂ ಗೊತ್ತು, ಪ್ರಧಾನಿ.. ಅಧ್ಯಕ್ಷರು.. ರಾಷ್ಟ್ರಪತಿ.. ಪಕ್ಷಗಳು.. ಹೀಗೆ ಎಲ್ಲವೂ..’ ಎಂದು ಉತ್ಸಾಹದಿಂದ ಬಣ್ಣಿಸುತ್ತಿದ್ದ.

ಮಾತನ್ನು ಅರ್ಧಕ್ಕೆ ತುಂಡರಿಸಿದವರೇ ಕಾರಂತರು ‘ಅದೆಲ್ಲಾ ಸರಿ, ಆ ಮಗುವಿಗೆ ಮಣ್ಣಲ್ಲಿ ಆಡಲು ಬರುತ್ತದಾ ..?’ ಎಂದರು.

ಹುಡುಗನ ಶಕ್ತಿ ಬಣ್ಣಿಸುತ್ತಿದ್ದವರು ಕಕ್ಕಾಬಿಕ್ಕಿ. ಕಾರಂತರು ಹೇಳಿದರು- ಮಗು ಮಗುವಾಗಿರಲಿ ಅವನನ್ನು ಈ ವಯಸ್ಸಿನಲ್ಲೇ ಬೋನ್ಸಾಯ್ ಆಗಿಸಬೇಡಿ ಅಂತ.

ಇದೇ ಗೋಪಾಡ್ಕರ್ ಇನ್ನೊಂದು ದಿನ ನನ್ನೆದುರು ಕುಳಿತು ಕಾರಂತರು ನನ್ನನ್ನು ಮಂಗ ಮಾಡಿದ್ದು ಹೇಗೆ ಎಂದು ವಿವರಿಸುತ್ತಿದ್ದ.

ಒಂದು ಸಲ ಗೋಪಾಡ್ಕರ್ ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದರು. ಅದೇ ರೈಲಿನಲ್ಲಿ ಕಾರಂತರು.

ಗೋಪಾಡ್ಕರ್ ಹುಮ್ಮಸ್ಸು ಮೂರು ಪಟ್ಟು ಅಯಿತು. ಆಗ ಗೋಪಾಡ್ಕರ್ ಗೆ ಒಂದು ಹವ್ಯಾಸವಿತ್ತು. ಉಗುರಿನಲ್ಲಿ ಚಿತ್ರ ಬಿಡಿಸುವುದು.

ಸೀದಾ ಹೋಗಿ ಕಾರಂತರ ಎದುರು ಕುಳಿತಿದ್ದಾನೆ. ಅವರನ್ನೇ ಒಂದಷ್ಟು ಹೊತ್ತು ದಿಟ್ಟಿಸಿ ನೋಡಿದ್ದಾನೆ

ಬ್ಯಾಗಿನಿಂದ ಒಂದು ಡ್ರಾಯಿಂಗ್ ಹಾಳೆ ತೆಗೆದಿದ್ದಾನೆ. ಅವರನ್ನು ನೋಡುವುದು.. ಕಾಗದದಲ್ಲಿ ಉಗುರು ಉಜ್ಜುವುದು..
ಹೀಗೆ ಸುಮಾರು ಅರ್ಧ ಗಂಟೆ ಆಗಿದೆ.

ಆಮೇಲೆ ‘ಆಹಾ..’ ಅಂದುಕೊಂಡು ತಾನು ಹಾಳೆಯ ಮೇಲೆ ಉಗುರಿನಿಂದ ರಚಿಸಿದ ಕಾರಂತರ ಭಾವಚಿತ್ರವನ್ನು ಅವರ ಕೈಗಿರಿಸಿದ್ದಾನೆ.

ಕಾರಂತರ ಮೆಚ್ಚುಗೆಗಾಗಿ ಕಿವಿಯೆಲ್ಲಾ ದೊಡ್ಡದು ಮಾಡಿಕೊಂಡು ಕುಳಿತಿದ್ದಾನೆ.

ಕಾರಂತರು ಆ ಚಿತ್ರವನ್ನು ಆ ಕಡೆಯಿಂದ ಈ ಕಡೆಯಿಂದ ಹತ್ತು ಬಾರಿ ನೋಡಿದವರೇ ‘ಸರಿ ಈ ರೀತಿ ಇರೋದಿಕ್ಕೆ ಪ್ರಯತ್ನಿಸ್ತೀನಿ’ ಎಂದಿದ್ದಾರೆ.

ಗೋಪಾಡ್ಕರ್ ಗೆ ಉಗುರು ಎಬ್ಬಿಹೋದ ಹಾಗಾಗಿತ್ತು.

ಕಾರಂತರೆಂದರೆ ಹಾಗೆ..
ಯಾರನ್ನೂ ಮೆಚ್ಚಿಸುತ್ತಾ ಕೂರುವ ಮಾತೇ ಇಲ್ಲ, ಮೆಚ್ಚಿದ್ದನ್ನೇ ಮೆಚ್ಚಬೇಕೆಂಬುದಂತೂ ಇಲ್ಲವೇ ಇಲ್ಲ.

‘ಇದೇನು ಶೋಕ ಗೀತೆ ಏನ್ರೀ’ ಅಂತ ಅತಿ ಅಸಹನೆಯಿಂದ ಸಭಿಕರನ್ನು ಪ್ರಶ್ನಿಸಿದರು.

ಅದು ಬಂಟವಾಳದಲ್ಲಿ ನಡೆದ ಕಾರ್ಯಕ್ರಮ. ಅವತ್ತು ಅಲ್ಲಿ ರಾಷ್ಟ್ರಗೀತೆ ಹಾಡಿದ್ದರು. ಕಾರಂತರು ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ತಮ್ಮದು ಕೊನೆಯಲ್ಲಿ ಆಗಬೇಕಾದ ಅಧ್ಯಕ್ಷ ಭಾಷಣ ಎನ್ನುವುದನ್ನೂ ಮರೆತಂತೆ ಎದ್ದು ನಿಂತವರೇ ‘ಅಲ್ಲ ರಾಷ್ಟ್ರ ಗೀತೆ ಎಂದರೆ ಉತ್ಸಾಹದಿಂದ ಹಾಡಬೇಕು, ಕುಣಿಯುವ ಹುಮ್ಮಸ್ಸು ಬರುವಂತೆ ಹಾಡಬೇಕು. ಅದು ಬಿಟ್ಟು ಈ ದೇಶಕ್ಕೆ ಏನಾಗಿದೆ? ರಾಷ್ಟ್ರ ಗೀತೆಯನ್ನ ಶೋಕ ಗೀತೆಯ ಥರಾ ಹಾಡ್ತಾರೆ ತಲೆ ತಗ್ಗಿಸಿ, ಕೈ ಕಟ್ಟಿ ಛೆ!’ ಎಂದರು.

‘ನಾವು ರಾಷ್ಟ್ರ ಗೀತೆಗೆ ಮಿಲಿಟರಿ ಶಿಸ್ತು ತಂದುಬಿಟ್ಟಿದ್ದೇವೆ’ ಎಂದು ತೀರಾ ಬೇಸರಪಟ್ಟುಕೊಂಡರು.

ಕಾರಂತರೆಂದರೆ ಹಾಗೇ..

ಅವರಿಗೆ ಬೇರೆಯವರಂತೆ ಸುಮ್ಮನೆ ಕೂರಲು ಆಗುತ್ತಿರಲಿಲ್ಲ ಹಾಗೂ ಬೇರೆಯವರಂತೆ ಮನಸ್ಸಿಗೆ ಮುಸುಕು ಹಾಕಲೂ ಸಾಧ್ಯವಾಗುತ್ತಿರಲಿಲ್ಲ.

ಒಂದು ವಿಷಯ ನಿಮಗೆ ಹೇಳಲೇಬೇಕು.

ನಾನು ‘ಪ್ರಜಾವಾಣಿ’ ವರದಿಗಾರನಾಗಿ ಮಂಗಳೂರನ್ನು ತಲುಪಿಕೊಂಡೆ.

ಹೋದ ಕೆಲ ದಿನಕ್ಕೇ ಶಿವರಾಮ ಕಾರಂತರ ಫೋನ್ ನಂಬರ್ ಬೇಕಲ್ಲಾ ಅಂದೆ.

ಆಗ ಟೆಲಿಕಾಂ ಪಿ ಆರ್ ಓ ಆಗಿದ್ದ ಎಂ ಜಿ ಹೆಗಡೆ ನಂಬರ್ ಕೊಟ್ಟರು.

ತಿರುಗಿಸಿದರೆ ಅದು ‘ಕೊಂಯ್’ ಅಂತ ಕೂಡಾ ಅನ್ನಲಿಲ್ಲ.

ನಾನು ಹೆಗಡೆ ಅವರಿಗೆ ಫೋನ್ ತಿರುಗಿಸಿ ಯಾವುದೋ ರಾಂಗ್ ನಂಬರ್ ಕೊಟ್ಟಿರಬೇಕು ಅಂದೆ.

ಅವರು ಇಲ್ಲ ಅದೇ ನಂಬರ್ ಅಂದರು. ನೀವೇ ತಿರುಗಿಸಿ ನೋಡಿ ಅದು ಸದ್ದೇ ಮಾಡುತ್ತಿಲ್ಲ ಎಂದೆ.

ಆಗ ಅವರು ಜೋರಾಗಿ ನಕ್ಕವರೇ ‘ಕಾರಂತರು ಒನ್ ವೇ ಸ್ವಾಮಿ’ ಅಂದರು.

ನನಗೆ ಅರ್ಥ ಆಗಲಿಲ್ಲ ‘ಏನು’ ಅಂದೆ.

‘ಕಾರಂತರು ಬೇರೆಯವರಿಗೆ ಫೋನ್ ಮಾಡಬಹುದೇ ಹೊರತು ಕಾರಂತರಿಗೆ ನೀವು ಮಾಡೋದಿಕ್ಕೆ ಆಗೋದಿಲ್ಲ’ ಅಂದರು.

ದಕ್ಷಿಣ ಕನ್ನಡ ಟೆಲಿಕಾಂ ಕಾರಂತರಿಗಾಗಿ ಹೊರಹೋಗುವ ಕರೆ ಸೌಲಭ್ಯ ಮಾತ್ರವಿರುವ ಸೆಟ್ ಕೊಟ್ಟಿತ್ತು, ಅವರ ಕೋರಿಕೆಯ ಮೇರೆಗೆ..

ಒಂದು ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಸೂಕ್ತರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಕಾರಂತರಿಗೆ ವಹಿಸಿತ್ತು

ಕಾರಂತರನ್ನು ಉಡುಪಿಯ ಕು ಶಿ ಹರಿದಾಸ ಭಟ್ಟರ ಸಂಶೋಧನಾ ಕೇಂದ್ರದಲ್ಲಿ ಭೇಟಿ ಮಾಡಿ ‘ಹೇಗಿದೆ ಪ್ರಶಸ್ತಿ ಆಯ್ಕೆ ಕೆಲಸ’ ಎಂದೆ.

ಕಾರಂತರು ಪ್ರಶಸ್ತಿಯನ್ನೂ, ಪ್ರಶಸ್ತಿಗಾಗಿಯೇ ಬದುಕಿರುವವರನ್ನು ಒಂದು ಕೆ ಜಿ ಹುಣಿಸೆ ಹಣ್ಣು ಹಾಕಿ ತೊಳೆದರು

ಮೊದಲ ಬಾರಿಗೆ ಕಾರಂತರಿಗೆ ಪ್ರಶಸ್ತಿಗಾಗಿ ಜೊಲ್ಲು ಸುರಿಸಿವವರ ನೇರ ಪರಿಚಯ ಆಗಿ ಹೋಗಿತ್ತು.

ಕಾರಂತರು ಬರೆದ ‘ಓದುವ ಆಟ’ವನ್ನು ಸರ್ಕಾರ ಪಠ್ಯ ಪುಸ್ತಕವನ್ನಾಗಿ ಮಾಡಿತ್ತು.

ಅದರಲ್ಲಿ ‘ಲಟಪಟ ಆಚಾರಿ’ ಎನ್ನುವ ಒಂದು ಲೇಖನವಿತ್ತು.

ಇಡೀ ರಾಜ್ಯದ ಅಕ್ಕಸಾಲಿಗರು ಆ ಲೇಖನದ ವಿರುದ್ಧ ಎದ್ದು ನಿಂತರು. ಈ ಬರಹ ನಮ್ಮನ್ನು ಕೀಳಾಗಿ ಕಾಣುತ್ತದೆ ಎಂದು.

ಬಹುಷಃ ಕಾರಂತರು ತಮ್ಮ ಬರಹಕ್ಕೆ ಈ ರೀತಿ ಪ್ರತಿಕ್ರಿಯೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ.
ವ್ಯಗ್ರರಾದರು.

ಇದೇ ಸಮಯದಲ್ಲಿ ನಾನು ಉಡುಪಿಯಲ್ಲಿ ಅವರಿಗೆ ಈ ವಿವಾದದ ಬಗ್ಗೆ ಕೇಳಿದ್ದೆ.

ಅವರು ಉರಿದೆದ್ದು ಹೋದರು. ‘ಈ ಬಗ್ಗೆ ಯಾರಿಗಾದರೂ ಚರ್ಚೆ ಮಾಡುವ ತಾಖತ್ತಿದೆಯೇ?’ ಎಂದು ಕೇಳಿದರು.

ಒಂದೆರಡು ದಿನದ ನಂತರ ಮಂಗಳೂರಿನ ಗಣಪತಿ ಕಾಲೇಜಿನಲ್ಲಿ ಒಂದು ವಿಚಾರ ಸಂಕಿರಣವಿತ್ತು

ಅಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಮಹಾಬಲೇಶ್ವರ ಹೆಬ್ಬಾರ್ ಅವರು ನನ್ನ ಸಂದರ್ಶನ ಉಲ್ಲೇಖಿಸಿ-
‘ಕಾರಂತರ ಸವಾಲನ್ನು ಸ್ವೀಕರಿಸಲು ನಾನು ಸಿದ್ಧ, ಚರ್ಚೆ ಆಗಿಯೇ ಹೋಗಲಿ..’ ಎಂದರು.

ಕಾರಂತರು ಬುಸುಗುಟ್ಟಿದ್ದನ್ನು ನೋಡಿದ್ದು ಆಗ.

ಶಿವರಾಮ ಕಾರಂತರ ಪೀಠ ಮಂಗಳೂರಿನಲ್ಲಿ ಸ್ಥಾಪನೆಯಾಯಿತು.

ಬಿ ಎ ವಿವೇಕ ರೈ ಹಾಗೂ ಕಾರಂತರ ನಡುವಣ ನಂಟು ಗಾಢವಾದದ್ದು. ‘ವಿವೇಕ’ ಎನ್ನುವ ಹೆಸರನ್ನು ಸೂಚಿಸಿದ್ದೇ ಶಿವರಾಮ ಕಾರಂತರು.

ಪುರಂದರ ರೈ ಅವರು ಮಗು ಹುಟ್ಟಿದಾಗ ಮೊದಲು ಹೆಜ್ಜೆ ಹಾಕಿದ್ದು ಕಾರಂತರ ಕಡೆಗೆ. ಹೆಸರು ಸೂಚಿಸಿ ಎಂದರು.

ಕಾರಂತರು ವಿವೇಕ ಎಂದು ಹೆಸರಿಡು ಎಂದರು. ಪುರಂದರ ರೈಗಳಿಗೆ ವಿವೇಕಾನಂದ ಎಂದು ಕೇಳಿಸಿತೇನೋ.. ಕಾರಂತರಿಗೆ ಮತ್ತೆ ಪ್ರಶ್ನೆ ಮಾಡಿದರು. ಕಾರಂತರು ‘ವಿವೇಕ ಇದ್ದಲ್ಲಿ ಆನಂದ ತಾನೇ ತಾನಾಗಿ ಬರುತ್ತದೆ. ವಿವೇಕ ಅಂತ ಇಡು ಸಾಕು’ ಎಂದರು.

ಇಂತಹ ವಿವೇಕ ಇದ್ದ ಮಂಗಳೂರು ವಿ ವಿ ಗೆ ಆನಂದ ಮಾತ್ರವಲ್ಲ ಕಾರಂತರೂ ಬಂದರು.

ಹಾಗಾಗಿ ನನಗೆ ಮೇಲಿಂದ ಮೇಲೆ ಕಾರಂತರ ಜೊತೆ ಮಾತನಾಡುವ, ಕೈ ಕುಲುಕುವ, ಅವರೊಟ್ಟಿಗೆ ಓಡಾಡುವ ಪ್ರಸಂಗ ಮೇಲಿಂದ ಮೇಲೆ ಸಿಕ್ಕಿತು.

ಕಾರಂತರ ಲೇಖನಗಳ ಸಮಗ್ರ ಸಂಗ್ರಹದ ಬಹು ಸಂಪುಟಗಳನ್ನು ತರಲು ಮಂಗಳೂರಿನ ಈ ಪೀಠ ಸಜ್ಜಾಯಿತು. ಅದರ ಎಲ್ಲಾ ಹೆಜ್ಜೆಗಳಿಗೂ ನಾನು ಕಣ್ಣಾಗಿದ್ದೆ.

ಪುತ್ತೂರಿನ ಕಾರಂತಜ್ಜರ ಮನೆಯಂತೂ ನನಗೆ ನನ್ನದೇ ಮನೆ ಎನ್ನುವಂತೆ ಆಗಿಹೋಗಲು ಕಾರಣರಾದದ್ದು ಮೋಹನ್ ಸೋನಾ, ಐ ಕೆ ಬೊಳುವಾರು ಹಾಗೂ ಬಾಲವನ ಚಂದ್ರು.

ಮನಸ್ಸಿಗೆ ಒಂದಿಷ್ಟು ಆಯಾಸ ಅನಿಸಿದಾಗೆಲ್ಲಾ ನಾನು ಬಾಲವನ ತಲುಪಿಕೊಳ್ಳುತ್ತಿದ್ದೆ. ಕಾರಂತರ ಪ್ರಿಂಟಿಂಗ್ ಪ್ರೆಸ್, ಕಾರಂತರ ಮನೆ, ತೋಟ ಎಲ್ಲಾ ಅಡ್ಡಾಡುತ್ತ ಅಲ್ಲಿಯೇ ಮಕ್ಕಳ ಜೊತೆ ಚಿಲಿ ಪಿಲಿ ಸದ್ದು ಮಾಡುತ್ತಾ, ಎನ್ ಎಸ್ ಶಂಕರ್ ಕ್ಯಾಮೆರಾ ತಂಡದೊಡನೆ ಬಂದಾಗ ‘ಬಾಲವನ’ ನನ್ನದೇನೂ ಎನ್ನುವಂತೆ ಬಾಗಿಲು ಸರಿಸಿ, ಓಡಾಡಿದ್ದೂ ಉಂಟು.

ಬೋಳಂತಕೋಡಿ ಈಶ್ವರ ಭಟ್ಟರಿಂದಾಗಿ ಲೀಲಾ ಕಾರಂತರ ನೆನಪುಗಳು ದಕ್ಕಿದವು, ನನ್ನ ‘ಈಟಿವಿ’ ಕ್ಯಾಮೆರಾ ಮಗಳು ಕ್ಷಮಾ ರಾವ್ ಅವರ ಒಡಿಸ್ಸಿ ನೃತ್ಯವನ್ನು ಸೆರೆ ಹಿಡಿಯಿತು, ಗೆಳೆಯ ಪ್ರವೀಣ್ ಭಾರ್ಗವ್ ನಿಂದಾಗಿ ಉಲ್ಲಾಸ ಕಾರಂತರ ಸಹವಾಸವೂ ದೊರೆಯಿತು.

ಕಾರಂತರು ಗೆಜ್ಜೆ ಕಟ್ಟಿ ಕುಣಿದದ್ದನ್ನು ಎದುರಿಗೆ ಕುಳಿತು ನೋಡುವ, ಅವರು ಹಾಗೆ ರೂಪಿಸಿದ ಬ್ಯಾಲೆಗಳು ದೇಶ ವಿದೇಶ ತಿರುಗಿ ಚರ್ಚೆಗೊಳಗಾದದ್ದನ್ನು ಅವರಿಂದಲೇ ಆಲಿಸುವ, ಆ ಪ್ರದರ್ಶನಗಳ ವಿಡಿಯೋಗಳನ್ನು ಅವರ ಜೊತೆ ಕುಳಿತು ನೋಡುವ.. ಅಪರೂಪದ ಕ್ಷಣಗಳು ನನಗೆ ಸಿಕ್ಕಿ ಹೋದವು.

ಕಾರಂತರು ಕೈಗಾ ಅಣುಸ್ಥಾವರ ವಿರೋಧಿಸಿ ಹೇಳಿಕೆ ಕೊಟ್ಟಾಗ ನಾನು ಇನ್ನೂ ಆಗ ತಾನೇ ಕಾಲೇಜು ಅಂಗಳದಿಂದ ಹೊರಗೆ ಹೆಜ್ಜೆ ಇಟ್ಟಿದ್ದೆ.

ಕೈಗಾ ಬಗ್ಗೆ ಬಗ್ಗೆ ನಮಗೆ ನಮ್ಮದೇ ಆದ ನಿಲುವುಗಳಿದ್ದವು. ಇದು ಹಸಿರು ಭಯೋತ್ಪಾದನೆಯೂ ಇರಬಾರದೇಕೆ ಅನಿಸಿ ಇದಕ್ಕೆ ಕಾರಂತರ ಕಡೆಯಿಂದಲೇ ಉತ್ತರ ಪಡೆಯೋಣ ಎಂದು ನೇರಾ ನೇರ ಪತ್ರ ಬರೆದಿದ್ದೆ.

ಕಾರಂತರ ಟಿಪಿಕಲ್ ಮೋಡಿ ಅಕ್ಷರದಲ್ಲಿ ಉತ್ತರವೂ ಸಿಕ್ಕಿಬಿಟ್ಟಿತ್ತು.

‘ನಮ್ಮ ಲಾವಂಚ, ಅಂಟುವಾಳ, ಹರಿಶಿಣವನ್ನೇ ಬಿಡದ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಪತ್ರಿಕೆಗಳನ್ನು ನುಂಗದೆ ಬಿಡುತ್ತದೆ ಎಂದು ಭಾವಿಸಿದ್ದೀರಾ?’ ಎಂದು ಸಭಿಕರಿಗೆ ಪ್ರಶ್ನಿಸಿದ್ದೆ.

ಅದು ಬಂಟವಾಳದಲ್ಲಿ ಜರುಗಿದ ಕನ್ನಡ ಪತ್ರಿಕೋದ್ಯಮದ ೧೫೦ನೆಯ ವರ್ಷಾಚರಣೆ.

ಶಿವರಾಮ ಕಾರಂತರ ಜೊತೆ ನಾನೂ ಭಾಷಣಕಾರ.

‘ವಿದೇಶಿ ಪತ್ರಿಕೆಗಳು ಬಂದರೆ ಇಂಗ್ಲಿಷ್ ಪತ್ರಿಕೆಗಳು ನಾಶವಾಗಬಹುದು ಅಷ್ಟೇ ಬಂಟವಾಳ, ಉಪ್ಪಿನಂಗಡಿ, ಕಾಪುವಿನ ಪತ್ರಿಕೆ ಅಲ್ಲ ಎಂದುಕೊಂಡಿದ್ದೀರಿ. ಆದರೆ ಅವರಿಗೆ ಅದು ಕೇವಲ ಪತ್ರಿಕೆಯಾಗಿ ಕಾಣುವುದಿಲ್ಲ ನಿಮ್ಮ ಅಭಿಪ್ರಾಯ ರೂಪಿಸುವ ಆಯುಧವಾಗಿ ಕಾಣುತ್ತದೆ. ಅದನ್ನು ಇಲ್ಲವಾಗಿಸದೆ ಅವರು ಸುಮ್ಮನಿರುವುದಿಲ್ಲ’ ಎಂದೆ.

ಮಾತು ಮುಗಿಸಿ ಕುಳಿತಾಗ ಕಾರಂತರು ನನ್ನ ಕಿವಿಯಲ್ಲಿ ‘ಜಾಗತೀಕರಣದಿಂದ ನನ್ನ ಚೋಮನಿಗೂ ಒಂದಿಷ್ಟು ಮರ್ಯಾದೆ ಬರಬಹುದಲ್ಲವೇ?’ ಎಂದು ಕೇಳಿದರು.

ಅವರು ಅಂದು ಕೇಳಿದ ಮಾತು ಇಂದೂ ನನ್ನೊಳಗೆ ಆ ಚೋಮ ರೋಷದಿಂದ ಇನ್ನಿಲ್ಲದಂತೆ ಬಾರಿಸಿದ ದುಡಿಯ ಶಬ್ಧದಂತೆ ಕಾಡುತ್ತಲೇ ಇದೆ..

ಕಲೆ: ಪೆರ್ಮುದೆ ಮೋಹನ್ ಕುಮಾರ್