ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಕಣ್ಣೀರಾದರು ನಾ ಡಿಸೋಜಾ 

kannada t-shirts

ಕಣ್ಣೀರಾದರು
ನಾ ಡಿಸೋಜಾ
——
‘ಸಾರ್ ಹೀಗೆ ಬನ್ನಿ…’ ಅಂತ ನಾನು ಆಸರೆಯ ಕೈ ಚಾಚಿದೆ.

ಹಾಗೆ ನಾನು ಕೈ ಚಾಚಿದ್ದು ಇನ್ಯಾರಿಗೂ ಅಲ್ಲ. ಕನ್ನಡದ ಮನಸ್ಸಿಗೆ ಸಮಾಜದ ಸಂಕಟಗಳನ್ನು ಮೊಗೆದುಕೊಟ್ಟ ನಾ ಡಿಸೋಜ ಅವರಿಗೆ.

ಹಾಗೆ ನಾನು ಅವರ ಕೈ ಹಿಡಿದು ನಡೆಸಿಕೊಂಡು ಹೋದದ್ದು ನೀರಿನಲ್ಲಿ ತೇಲುತ್ತಿದ್ದ ತೆಪ್ಪದತ್ತ.

ಇಬ್ಬರು ಮಾತ್ರವೇ ಕುಳಿತುಕೊಳ್ಳಲು ಸಾಧ್ಯವಿದ್ದ ತೆಪ್ಪದಲ್ಲಿ ನಾವು ಇನ್ನೂ ಹರಿದಾರಿ ಸಹಾ ಹೋಗಿರಲಿಲ್ಲ, ನಾ ಡಿಸೋಜ ಅವರ ಮುಖದಲ್ಲಿ ನೋವಿನ ಗೆರೆಗಳು ಮೂಡಲು ಆರಂಭವಾಯ್ತು.

‘ಮೋಹನ್, ಈ ನೀರಿದೆಯಲ್ಲಾ, ಜುಳು ಜುಳು ಸದ್ದು ಮಾಡುತ್ತಾ, ನಮ್ಮ ಎದೆಯೊಳಗೆ ಸಂಭ್ರಮ ಉಂಟುಮಾಡುತ್ತಿರುವ ಈ ನೀರಿನ ಒಳಗೆ ಹತ್ತು ಹಲವು ಗ್ರಾಮಗಳು ಸತ್ತು ಬಿದ್ದಿವೆ. ನನಗೆ ಆ ನೋವು, ಆಕ್ರಂದನ ಕೇಳಿಬರುತ್ತಿದೆ. ಇದು ಸಂಕಟದ ಪಯಣ. ಈ ನೀರಿನೊಳಗಣ ನೋವೇ ನನ್ನ ಬರವಣಿಗೆಗೆ ಕಾರಣವಾಗಿ ಹೋಯಿತು’ ಎಂದು ಕಣ್ಣೀರಾದರು.

ಶರಾವತಿಯ ನೀರಿನಲ್ಲಿ ತೆಪ್ಪದೊಳಗೆ ತೇಲುತ್ತಾ ತೇಲುತ್ತಾ ಅವರೊಳಗಿನ ಕಥೆಗಳಿಗೆ ಕೈ ಹಾಕಿದೆ.

ನಾವು ತೆಪ್ಪದಲ್ಲಿ ತೇಲುತ್ತಾ ದಂಡೆಯಿಂದ ದೂರ ದೂರ ಸಾಗುತ್ತಿದ್ದಂತೆಯೇ ದಂಡೆಯ ಆ ಕಡೆ ಇದ್ದ ದ್ವೀಪದಲ್ಲಿ ತೆಂಗಿನ ಮರಗಳು ಕಾಣಿಸಿಕೊಂಡವು.

‘ಸರ್ ಅಲ್ಲಿ ನೋಡಿ ತೆಂಗಿನಮರ ಕುಳ್ಳಗಿದೆ..’ ಎಂದೆ.

ತಕ್ಷಣ ನಾನು ಅವರ ಬಾಯಿಂದ ಏನು ಮಾತು ಹೊರಡಿಸಲು ಸಜ್ಜಾದೆ ಎನ್ನುವುದು ಗೊತ್ತಾಗಿ ಹೋಯಿತು ಎನ್ನುವಂತೆ ನಕ್ಕರು.

ಹೌದು
‘ತೆಂಗಿನ ಮರಗಳು ಕುಳ್ಳಾಗಿದ್ದು
ಕಾಯ್ಗಳು ಕೈಗೆ ಸಿಗುವಂತಿದ್ದು
ಎಳೆ ನೀರಿನ ಮುಚ್ಚಳ ತೆಗೆದಿರಲು
ಕೊಬ್ಬರಿಯೆಲ್ಲಾ ಮೇಲ್ಗಡೆ ಇರಲು
ಎಷ್ಟೋ ಚೆನ್ನಾಗಿರುತಿತ್ತು. ಇನ್ನೂ ಚೆನ್ನಾಗಿರುತಿತ್ತು’
ಈ ಪದ್ಯ ನನ್ನನ್ನು ಒಂದೇ ಕ್ಷಣಕ್ಕೆ ಮೋಡಿ ಮಾಡಿಬಿಟ್ಟಿತ್ತು.

‘ಆ ಪದ್ಯದ ಲಯ, ಅಲ್ಲಿಯ ಭಾಷೆ, ಅಲ್ಲಿಯ ಸರಳತೆ ಮತ್ತು ಅದು ಹೇಳುವಂತಹ ವಿಷಯ, ಆ ಕಲ್ಪನೆ ನನ್ನೊಳಗೊಬ್ಬ ಬರಹಗಾರ ಮೂಡುವಂತೆ ಮಾಡಿತು’.

‘ನನ್ನ ತಂದೆಯವರು ಪ್ರೈಮರಿ ಶಾಲೆ ಉಪಾಧ್ಯಾಯರಾಗಿದ್ದರು. ಅವರು ಮಕ್ಕಳಿಗೆ ಕಲಿಸಲಿಕ್ಕೆ ಅಂತ ಹೇಳಿ ಒಂದು ಸಣ್ಣ ಪುಸ್ತಕದಲ್ಲಿ ಸುಮಾರು ಕವಿತೆಗಳನ್ನ ಬರೆದಿಟ್ಟುಕೊಂಡಿದ್ದರು. ಪುಟ್ಟಪ್ಪ, ರಾಜರತ್ನಂ, ಹೊಯ್ಸಳ, ನಾ. ಕಸ್ತೂರಿ ಅವರ ಕವಿತೆ.’

‘ನಾನು ಮೊಟ್ಟ ಮೊದಲು ಓದಿದ ಪುಸ್ತಕ ಅದು. ಆಗ ನನಗಿನ್ನೂ ಐದು ವರ್ಷ. ಅದರಲ್ಲಿರುವ ಎಷ್ಟೋ ಹಾಡುಗಳನ್ನ ನಾನು ಹಾಡುತ್ತಾ ಇದ್ದೆ ಕೂಡಾ’ ಎಂದು ತಮ್ಮ ಬಾಲ್ಯಕ್ಕೆ ಜಾರಿ ಹೋದರು.

ಹೊನ್ನೆಮರಡುವಿನ ಆ ಪ್ರಶಾಂತ ವಾತಾವರಣದಲ್ಲಿ ಬೀಸುತ್ತಿದ್ದ ಗಾಳಿಗೆ ಓಲಾಡುತ್ತಾ ನಮ್ಮ ತೆಪ್ಪ ಸಾಗಿರುವಾಗ ನೀರೊಳಗಿಂದ ಪುಳಕ್ ಎಂದು ಮೀನೊಂದು ಮೇಲಕ್ಕೆ ಜಿಗಿಯಿತು.

‘ಸಾರ್, ಮೀನು’ ಎಂದು ಅವರ ಧ್ಯಾನಕ್ಕೆ ಭಂಗ ತಂದೆ.

‘ಹೌದು ಈ ಮೀನೇ ನಾನು ಕಥೆಗಾರನಾಗಲು ಕಾರಣವಾಗಿದ್ದು’ ಎಂದರು. ನಾನು ಅಚ್ಚರಿಯಿಂದ ಬೆಳ್ಳಿ ಮೀಸೆಯ ಡಿಸೋಜಾರ ಮುಖವನ್ನೇ ನೋಡಿದೆ.

‘ನಾನು ಕಥೆಗೆ ಕೈ ಹಾಕಲು ಕಾರಣರಾದದ್ದು ನನ್ನ ತಾಯಿ’ ಎಂದು ಅವರು ತಮ್ಮ ಬರಹ ಲೋಕದ ಬಾಗಿಲು ತೆರೆದರು.

‘ಅವರು ತುಂಬಾ ಕಥೆಗಳನ್ನ ಹೇಳ್ತಾ ಇದ್ದರು. ನಾನು ‘ಮೀನುಗಾರ ದೊರೆ’ ಅಂತ ನಮ್ಮ ತಾಯಿ ಹೇಳಿದ ಒಂದು ಕಥೆಯನ್ನ ಇತ್ತೀಚಿಗೆ ಪುಸ್ತಕ ರೂಪದಲ್ಲಿ ತಂದೆ. ತುಂಬಾ ಸ್ವಾರಸ್ಯವಾದ ಕಥೆಗಳು. ನನ್ನೊಳಗೆ ಹೊಕ್ಕ ಈ ಕಥೆಗಳೇ ಕಥೆಗಾರ ನಾ ಡಿಸೋಜಾಗೆ ಜನ್ಮ ನೀಡಿತು’ ಎಂದರು.

‘ನನಗೆ ಹತ್ತು ವರ್ಷ ಆದಾಗ ನಮ್ಮ ತಂದೆ ತೀರಿಕೊಂಡ್ರು. ತಾಯಿ ಒಂಟಿ ಆಗಿ ಹೋದರು. ಆಗ ನನ್ನ ಅಣ್ಣ ಅಕ್ಕಂದಿರು ಶಾಲಾ ಲೈಬ್ರರಿಯಿಂದ ಪುಸ್ತಕಗಳನ್ನ ತಂದು ನನ್ನ ಮುಂದೆ ರಾಶಿ ಹಾಕುತ್ತಿದ್ದರು. ಇದನ್ನ ಓದಿ ಹೇಳಬೇಕು ಅಮ್ಮನಿಗೆ ಅಂತ.

‘ನಾನು ಆ ಕಥೆ, ಕಾದಂಬರಿಗಳನ್ನ ತಾಯಿಗೆ ಓದಿ ಹೇಳ್ತಾ ಹೇಳ್ತಾ ತಾಯಿಯವರು ಒಂದು ಕಡೆ ಕಣ್ಣೀರು ಒರೆಸಿಕೊಳ್ತಿದ್ರು. ನಾನು ಒಂದು ಕಡೆ ಕಣ್ಣು ಒರೆಸಿಕೊಳ್ತಿದ್ದೆ’ ಎಂದು ಹನಿಗಣ್ಣಾದರು ನಾರ್ಬರ್ಟ್ ಡಿಸೋಜ.

ಮೈಸೂರಿನಲ್ಲಿದ್ದ ನಾರ್ಬರ್ಟ್ ಡಿಸೋಜಾ ನೀರಿನ ಪ್ರದೇಶಕ್ಕೆ ಬಂದರು.

೧೯೫೯ ರಲ್ಲಿ ಶರಾವತಿ ಯೋಜನೆ ಪ್ರಾರಂಭ ಆದಾಗ ಆಗ ತಾನೆ ಎಸ್ ಎಸ್ ಎಲ್ ಸಿ ಮುಗಿಸಿ ಟೈಪ್ ರೈಟಿಂಗ್, ಶಾರ್ಟ್ ಹ್ಯಾಂಡ್ ಮುಗಿಸಿದ್ದ ಡಿಸೋಜಾ ಅರ್ಜಿ ಹಾಕಿದರು. ಸೀದಾ ಶರಾವತಿಗೆ ಬಂದರು.

ಅಲ್ಲಿಂದ ನೀರು ಅವರ ಬದುಕಿನ ಅಂಗವಾಗಿ ಹೋಯಿತು.

‘ಪ್ರಾರಂಭದಲ್ಲಿ ನನಗೆ ಬಹಳ ಹೆಮ್ಮೆ ಇತ್ತು, ಶರಾವತಿ ಯೋಜನೆಗಳ ಬಗ್ಗೆ. ನಂತರದ ದಿನಗಳಲ್ಲಿ ನನಗೆ ಬಹಳ ನಿರಾಶೆ ಆಯಿತು. ಹಲವಾರು ಸಮಸ್ಯೆಗಳನ್ನು ಆಣೆಕಟ್ಟು ಹುಟ್ಟು ಹಾಕಿತು’.

ತಕ್ಷಣ ನನಗೆ ಅವರು ಹುಲಿ ಬಗ್ಗೆ, ಆನೆ ಬಗ್ಗೆ ಮಕ್ಕಳೊಂದಿಗೆ ಸಂವಾದ ಮಾಡುತ್ತಾ ’ಹುಲಿಗಳು ಮೈಸೂರು ನೋಡಬೇಕು ಅಂತ ಪೇಟೆಗೆ ಬರೋದಿಲ್ಲ’ ಅಂದಿದ್ದು ನೆನಪಾಯಿತು.

‘ಹೌದು, ಅಣೆಕಟ್ಟು ಕಟ್ಟಿದ ನಂತರ ಕೆಲವೇ ತಿಂಗಳಲ್ಲಿ ಲಿಂಗನಮಕ್ಕಿಗೆ ಒಂದು ಚಿರತೆ ಬಂತು. ಮೊಟ್ಟ ಮೊದಲ ಬಾರಿಗೆ. ಅಣೆಕಟ್ಟಿನಲ್ಲಿ ನೀರು ನಿಲ್ತಾ ನಿಲ್ತಾ ಮೊಲಗಳು ಮೇಲೆ ಹೋದವು. ಹೀಗೆ ಹೋದ ಮೊಲಗಳು ಒಂದು ದೊಡ್ಡ ಗುಡ್ಡದ ನೆತ್ತಿಯ ಮೇಲೆ ನಿಂತವು. ಅಲ್ಲಿ ಸಾವಿರಾರು ಮೊಲಗಳು ಸೇರಿದ್ದರಿಂದ ಗುಡ್ಡದ ನೆತ್ತಿ ಬೆಳ್ಳಗೆ ಕಾಣತ್ತಾ ಇತ್ತು’.

‘ಈ ಥರ ಸರ್ಕಾರದ ಗಮನಕ್ಕೆ ಬಾರದ, ಸಾಮಾನ್ಯ ಜನರಿಗೆ ನೋವುಂಟು ಮಾಡಿದ ಸಾವಿರಾರು ಘಟನೆಗಳಿವೆ’.

ನಾವು ಹಾಗೆ ಮಾತನಾಡುತ್ತಲೇ ಆ ನೀರಿನೊಳಗೂ ಛಲ ಬಿಡದೆ ಉಳಿದುಕೊಂಡಿದ್ದ ನಡುಗಡ್ಡೆಯ ಮೇಲೆ ಕಾಲಿಟ್ಟೆವು.

ಸುತ್ತಾ ನೀರು. ಅದರ ಜುಳು ಜುಳು ನಿನಾದ, ಬೀಸುವ ತಂಗಾಳಿ ನಮ್ಮೊಳಗೇ ಸಂಭ್ರಮ ಹುಟ್ಟು ಹಾಕಬಹುದಾಗಿತ್ತು. ಆದರೆ ನಾನು ಇದ್ದದ್ದು ನಾ ಡಿಸೋಜಾರ ಜೊತೆ.

ಆ ಜುಳು ಜುಳು ನೀರು ನಮ್ಮಿಬ್ಬರೊಳಗೂ ಕಾಣದ ಒಂದು ನೋವನ್ನು ಹರಡುತ್ತಾ ಹೋಯಿತು. ನೇರವಾಗಿ ಕೇಳಿಯೇಬಿಟ್ಟೆ. ‘ಯಾಕೆ ನೀರು ನಿಮ್ಮೊಳಗೆ ಕಣ್ಣೀರಾಗಿ ಬದಲಾಯ್ತು?’

‘ನಮ್ಮ ದೇಶ ವಿಭಜನೆಯಾದಾಗ ನಿರಾಶ್ರಿತರಾದವರಿಗಿಂತ ಮೂರು ಪಟ್ಟು ಹೆಚ್ಚು ಜನ ಅಣೆಕಟ್ಟೆಗಳ ನಿರ್ಮಾಣದಿಂದ ನಿರಾಶ್ರಿತರಾಗಿದ್ದಾರೆ. ಇದು ನನ್ನನ್ನ ಕಾಡುತ್ತಾ ಇರುವ ಒಂದು ದೊಡ್ಡ ದುರಂತ’.

‘ಒಂದು ಪ್ರದೇಶವನ್ನ ಬಿಟ್ಟು ಹೋಗುವುದು ಮನುಷ್ಯನಿಗೆ ಅಷ್ಟು ಸುಲಭ ಅಲ್ಲ. ಅವನು ಹುಟ್ಟಿ ಬೆಳೆದಂತಹ ಪ್ರದೇಶವನ್ನ ಬಿಟ್ಟು ಹೋಗುವುದು, ಜಮೀನು ಮಾಡಿದಂತಹ ಪ್ರದೇಶವನ್ನು ಬಿಟ್ಟು ಹೋಗುವುದು ಬಹಳ ಕಷ್ಟದ ಕೆಲಸ.’

‘ಶರಾವತಿಯಲ್ಲಿ ಮುಳುಗಡೆಯಾದಾಗ ಜನ ತಮ್ಮ ಹಸುಕರುಗಳನ್ನ ದೂರದ ಶಿವಮೊಗ್ಗದಲ್ಲಿ ಹೊಸದಾಗಿ ಕೊಟ್ಟ ಜಮೀನಿನಲ್ಲಿ ಬಿಟ್ಟು ಬಂದರು. ಎರಡು ಮೂರು ದಿವಸಗಳ ನಂತರ ನೋಡಿದರೆ ಅಷ್ಟೂ ಹಸು ಕರು ಇಲ್ಲಿಗೇ ವಾಪಸು ಬಂದಿತು.’

‘ಎಂತಹ ದುರಂತ. ೮೫ ಕಿಮಿ ದೂರದಿಂದ ಆ ದಾರಿಯನ್ನ ನೆನಪಿಟ್ಟುಕೊಂಡು ಆ ಹಸು ಕರುಗಳು ವಾಪಸು ಬಂದಿದೆ ಅಂದ್ರೆ.. ಒಂದು ಪ್ರಾಣಿಗೆ ಅಷ್ಟೊಂದು ವ್ಯಾಮೋಹ ಇರಬೇಕಾದರೆ ಮನುಷ್ಯನಿಗೆ ಎಂತಹ ಮೋಹ ಇರಲಿಕ್ಕಿಲ್ಲ?’

‘ಈ ನೋವನ್ನ ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ ಅನ್ನುವುದು ನನ್ನ ಸಂಕಟ. ಸರ್ಕಾರ ಪರಿಹಾರ ಕೊಟ್ಟು ಬಿಡ್ತು. ಆದರೆ ಪರಿಹಾರವೇ ಎಲ್ಲಾ ಅಲ್ಲ. ಅವರನ್ನ ಮಾನವೀಯವಾಗಿ ನಡೆಸಿಕೊಳ್ಳಬೇಕಿತ್ತು. ಪೋಲಿಸರನ್ನ ಬಿಟ್ಟು ಅವರನ್ನ ಮನೆಗಳಿಂದ ಹೊರ ಹಾಕಿಸಿದರು. ಕಚೇರಿಯಲ್ಲಿ ಕಿರುಕುಳ ಕೊಟ್ಟರು. ಯಾವ ತಪ್ಪಿಗೋಸ್ಕರ?

‘ದೇವರಿಗೂ ಎತ್ತಂಗಡಿಯಾಯ್ತು’ ಎಂದು ನಾನು ದನಿ ಸೇರಿಸಿದೆ. ಇಲ್ಲಿ ಕೂಡ್ಲಿ ಅಂತ ದೇವಸ್ಥಾನ ಇತ್ತು ಅದೂ ಮುಳುಗಡೆಯಾಯ್ತು. ಪೂಜಾರಿಗಳು ಹೋಗಿ ದೇವರಿಗೆ ಕೇಳಿದರು, “ನೀನು ಬರ್ತೀಯಾ ಅಥವಾ ಇಲ್ಲೇ ಇರ್ತೀಯಾ?” ಅಂತ. ‘ನಾನು ದೇವರು, ನಾನು ಇಲ್ಲೇ ಇರ್ತೀನಿ’ ಅಂತು.

‘ಇಂತಹ ನೂರಾರು ಘಟನೆಗಳನ್ನು ನಾನು ಕೇಳಿದವನು. ಇದನ್ನ ಎಲ್ಲೋ ಒಂದು ಕಡೆ ಬೇರೆಯವರ ಗಮನಕ್ಕೆ ತರಬೇಕು, ಆ ಜನಕ್ಕೆ ಒಂದು ಸಾಂತ್ವನ ಕೊಡಬೇಕು ಅಂತ ಬರೆಯಲು ಶುರು ಮಾಡಿದೆ.’

‘ನಾನು ಬರವಣಿಗೆ ಮಾಡಿದ ಮೇಲೆ ಮುಳುಗಡೆ ಪ್ರದೇಶದ ಬಹಳ ಜನ ನಮ್ಮನೆಗೆ ಬರ್ತಾ ಇದ್ದರು’.

‘ನಿಮ್ಮ ಕಥೆಯ ಪಾತ್ರಗಳೇ ಬಂದು ನಿಮ್ಮ ಮನೆಯ ಬಾಗಿಲು ತಟ್ಟುತ್ತಾ ಇದ್ದರಾ?’ ಎಂದು ನಾನು ಬೆರಗಿನಿಂದ ಕೇಳಿದೆ.

‘ಏನು ಬಂದಿರಿ ಅಂದರೆ ನಮ್ಮ ನೋವನ್ನು ಅರ್ಥ ಮಾಡಿಕೊಂಡವರು ನೀವೊಬ್ಬರೇ, ನಿಮ್ಮನ್ನು ನೋಡಲು ಬಂದೆವು ಅಂತಿದ್ರು.’

ನಾನು ನಾ ಡಿಸೋಜಾರನ್ನು ಅವರ ಊರಿನಲ್ಲಿಯೇ ಕೈಕುಲುಕಲು ಒಂದು ಕಾರಣವಿತ್ತು.

ನಾಡಿನ ಮನಸ್ಸು ಗೆದ್ದ ‘ದ್ವೀಪ’ ಬರೆದ ನಾ ಡಿಸೋಜ, ನಿರ್ದೇಶಿಸಿದ ಗಿರೀಶ್ ಕಾಸರವಳ್ಳಿ, ಅವರನ್ನು ಅವರ ಚಿತ್ರದ ಪಾತ್ರಗಳ ಎದುರು ಕುಳ್ಳಿರಿಸಲು ನಾವು ಮನಸ್ಸು ಮಾಡಿದ್ದೆವು.

ತಾಳಗುಪ್ಪದಲ್ಲಿ ‘ದ್ವೀಪ’ ಸಿನೆಮಾವನ್ನು ಈ ಎಲ್ಲರೂ ಒಟ್ಟಾಗಿ ಕುಳಿತು ನೋಡುವಂತೆ ಮಾಡಿದ್ದೆವು.

ಹಾಗಾಗಿ ‘ದ್ವೀಪ’ ಮಾತಿನೊಳಗೆ ತೇಲಿಬಂತು.

ನಾನು ಮುಳುಗಡೆ ಬಗ್ಗೆ ಬರೆದ ಕಾದಂಬರಿಗಳಲ್ಲಿ ’ದ್ವೀಪ’ ಮೊದಲನೆಯದು. ಇದಕ್ಕಿಂತ ಮುಂಚೆ ನಾನು ಕೆಲವು ಸಣ್ಣಕಥೆಗಳನ್ನು ಬರೆದಿದ್ದೆ.’

’’ದ್ವೀಪ’ ಬರೆಯಲು ಏನು ಕಾರಣ ಅಂದ್ರೆ, ಶರಾವತಿ ಅಣೆಕಟ್ಟೆ ಮಗಿದು ನೀರು ನಿಧಾನವಾಗಿ ನಿಲ್ಲಲು ಆರಂಭವಾಗಿತ್ತು. ಸುಮಾರು ೫-೧೦ ಅಡಿ ಎತ್ತರಕ್ಕೆ ಡ್ಯಾಂ ನಿಂತಿತ್ತು. ಅದಕ್ಕೆ ತಾಗಿಕೊಂಡಂತೆ ನೀರು ನಿಂತಿತ್ತು’.

‘ಹಾಗೆ ನಿಂತ ನೀರಿನಲ್ಲಿ ಒಂದು ಕುಟುಂಬ ಮುಳುಗಿದ್ದನ್ನು ನಾನು ನೋಡಿದೆ. ಆ ಕುಟುಂಬದ ಪರಿಹಾರದ ರೆಕಾರ್ಡುಗಳ ತೀರ್ಮಾನವಾಗಿರಲಿಲ್ಲ. ಬರಬೇಕಿದ್ದ ಪರಿಹಾರ ಸಿಕ್ಕಿರಲಿಲ್ಲ. ಆದರೆ ನೀರು ಬಂದು ಮನೆಬಾಗಿಲಿಗೆ ನಿಂತಿತ್ತು. ಅ ದಂಪತಿಗಳು ಬಹಳ ಕಷ್ಟದಲ್ಲಿದ್ದರು. ಬಹಳ ನೋವಿನಲ್ಲಿದ್ದರು. ಎಲ್ಲಿಗೆ ಹೋಗಬೇಕು ಅಂತ ಗೊತ್ತಿರಲಿಲ್ಲ.’

‘ನಾನು ಅದನ್ನ ನೋಡಿ ’ದ್ವೀಪ’ ಕಾದಂಬರಿ ಬರೆದೆ. ’ದ್ವೀಪ’ ಇಷ್ಟು ದೊಡ್ಡ ಇತಿಹಾಸವಾಗುತ್ತೆ ಅನ್ನುವ ಕಲ್ಪನೆ ನನಗಿರಲಿಲ್ಲ.

”ದ್ವೀಪ’ ಕೆವಿ ಸುಬ್ಬಣ್ಣನವರು ನಿರ್ದೇಶನ ಮಾಡಬೇಕಾಗಿದ್ದ ಸಿನೆಮಾ ಅಲ್ಲವಾ? ಎಂದು ನಾನು ಅವರ ನೆನಪನ್ನು ತೀಡಿದೆ.

“ದ್ವೀಪ” ಸಿನಿಮಾ ಮಾಡಬೇಕು ಅಂತ ತುಂಬಾ ಜನ ಬಂದ್ರು. ನಾನು ಕೊಟ್ಟಿರಲಿಲ್ಲ. ಮೊದಲು ಕೆ ವಿ ಸುಬ್ಬಣ್ಣ ಅವರು ಅದನ್ನು ಸಿನಿಮಾ ಮಾಡ್ತೀನಿ ಅಂದ್ರು. ಸ್ಕ್ರಿಪ್ಟ್ ರೆಡಿ ಮಾಡಿ, ಈ ಪ್ರದೇಶಕ್ಕೆ ಬಂದು ನೋಡಿಕೊಂಡು ಹೋದೆವು. ನಂತರ ಸುಬ್ಬಣ್ಣನವರು ’ಇದು ಸ್ವಲ್ಪ ಕಷ್ಟದ ಕೆಲಸ, ಇದನ್ನು ಕಾಸರವಳ್ಳಿಯವರಿಗೆ ಕೊಡ್ತೀನಿ’ ಅಂದ್ರು. ಕಾಸರವಳ್ಳಿಯವರು ಸುಮಾರು ೧೨ ವರ್ಷ ಆ ಕಾದಂಬರಿಯನ್ನು ಇಟ್ಟುಕೊಂಡಿದ್ದರು. ಕೊನೆಗೆ ಸೌಂದರ್ಯ ಅವರು ಸಿನಿಮಾ ಮಾಡೋಣ ಅಂದಮೇಲೆ ಇದು ಜಾರಿಗೆ ಬಂತು.’

‘ಈ ’ದ್ವೀಪ’ ಶರಾವತಿಯ ದ್ವೀಪ ಮಾತ್ರ ಅಲ್ಲ, ಜಗತ್ತಿನ ಎಲ್ಲಾ ದ್ವೀಪಗಳ ಪ್ರತಿನಿಧಿ’ ಅಂದೆ.

ನಮ್ಮ ಮಾತು ಮೇಧಾ ಪಾಟ್ಕರ್ ಅವರಿಂದ ಹಿಡಿದು ಕಾಗೋಡಿನ ಸತ್ಯಾಗ್ರಹ, ಹಸಲರಿಂದ ಹಿಡಿದು ಈಗಿನ ಧರ್ಮ ರಾಜಕಾರಣದವರೆಗೆ ಹರಿಯುತ್ತಾ ಹೋಯಿತು.

ಇದ್ದಕ್ಕಿದ್ದಂತೆ ನಾನು ಅವರಿಗೆ ‘ನೀವು ಈ ಶರಾವತಿಯ ದಡಕ್ಕೆ ಬಂದು ನಿಲ್ಲದೆ ಹೋಗಿದ್ದರೆ ಏನಾಗಿರುತ್ತಿದ್ದಿರಿ’ ಎಂದೆ. ನಾ ಡಿಸೋಜಾ ಒಂದು ಕ್ಷಣವೂ ತಡ ಮಾಡದೆ ‘ನಾನು ಅತ್ಯಂತ ವೇಗವಾಗಿ ಟೈಪ್ ಮಾಡಬಹುದಾದ ಒಬ್ಬ ಟೈಪಿಸ್ಟ್ ಆಗಿರುತ್ತಿದ್ದೆ’ ಎಂದರು.

ನಾನು ಮತ್ತೆ ಅವರ ಕೈಹಿಡಿದು ತೆಪ್ಪ ಏರಲು ಸಹಾಯ ಮಾಡಿದೆ.

‘ನಮ್ಮ ಬದುಕು ಒಂದು ಕೋಳಿ ಮೊಟ್ಟೆ ಅಲ್ಲವಾ ಸಾರ್’ ಎಂದೆ.

ಮತ್ತೆ ನಾ ಡಿಸೋಜಾ ಅವರಿಗೆ ನಾನು ಯಾವ ಮಾತಿನ ತಿದಿ ಒತ್ತಿದ್ದೇನೆ ಎನ್ನುವುದು ಗೊತ್ತಾಯಿತು.

‘ಹೌದು ನನ್ನ ಬರಹ ಎನ್ನುವುದು ಒಂದು ಕೋಳಿಮೊಟ್ಟೆ ಇದ್ದ ಹಾಗೆ’ ಎಂದರು.

‘ಕೋಳಿಯೊಳಗೆ ಒಂದು ಮೊಟ್ಟೆ ಮೂಡಬೇಕಾದರೆ ಬಹಳ ಪ್ರಕ್ರಿಯೆ ನಡೆಯುತ್ತೆ. ಆ ಕೋಳಿ ತನ್ನದೆಲ್ಲವನ್ನೂ ಆ ಮೊಟ್ಟೆಗೆ ಕೊಟ್ಟು ಅದನ್ನ ಗಟ್ಟಿಯಾಗಿ ಬೆಳೆಸಬೇಕಾಗುತ್ತದೆ. ಮೊಟ್ಟೆ ಗಟ್ಟಿಯಾಗಿದೆ ಅಂತ ಖಾತರಿಯಾದರೆ ಮಾತ್ರ ಕೋಳಿ ಮೊಟ್ಟೆ ಇಡುತ್ತೆ. ಇಲ್ಲದಿದ್ದರೆ ಮೊಟ್ಟೆ ಇಡುವುದಿಲ್ಲ. ಅದರಲ್ಲಿ ಮೊಟ್ಟೆಗಳದ್ದೇ ಒಂದು ದೊಡ್ಡ ಗೊಂಚಲು ಇರುತ್ತೆ. ಆ ಗೊಂಚಲಿನಲ್ಲಿ ದೊಡ್ಡ ಮೊಟ್ಟೆ ಮಾತ್ರ ಹೊರಗೆ ಬರುತ್ತೆ’.

‘ನನ್ನ ಕಲ್ಪನೆ, ನನ್ನ ಅನುಭವ, ನನ್ನ ಜೀವನ ದೃಷ್ಟಿ ಎಲ್ಲಕ್ಕೂ ಕಾವು ಕೊಟ್ಟು ಒಂದು ಮೊಟ್ಟೆಗೆ ಜನ್ಮ ನೀಡುತ್ತೇನೆ’ ಎಂದರು.

ತೆಪ್ಪ ನೀರಿನ ಮೇಲೆ ಸಾಗುತ್ತಲೇ ಇತ್ತು. ನಾನು ಮತ್ತೆ ಆ ಶರಾವತಿಯ ಒಡಲೊಳಗೆ ಇಣುಕಿದೆ. ಇನ್ನಷ್ಟು ಕಥೆಗಳನ್ನು ಹುಡುಕಲು..

website developers in mysore