ಬಸವಣ್ಣನವರ ಆಶಯಕ್ಕೆ ಅಪಚಾರ: ದೋಷಪೂರಿತ ಪಠ್ಯ ಕೂಡಲೇ ಸ್ಥಗಿತಗೊಳಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ.

Promotion

ಮೈಸೂರು,ಜೂನ್,2,2022(www.justkannada.in): ಪರಿಷ್ಕೃತ ಪಠ್ಯದಲ್ಲಿ ಬಸವೇಶ್ವರರ ಬಗ್ಗೆ ತಪ್ಪು ಮಾಹಿತಿ ಅಳವಡಿಕೆ ಮಾಡಲಾಗಿದ್ದು, ಈ ಮೂಲಕ  ಬಸವಣ್ಣನವರ ಆಶಯಕ್ಕೆ ಅಪಚಾರವೆಸಗಲಾಗಿದೆ. ದೋಷಪೂರಿತ ಪಠ್ಯ ಕೂಡಲೇ ಸ್ಥಗಿತಗೊಳಿಸಬೇಕು ಎಂದು  ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕ ಆಗ್ರಹಿಸಿದೆ.

ಮೈಸೂರಿನ ಶ್ರೀ ಹೊಸಮಠದ ಶ್ರೀ ನಟರಾಜ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕದಿಂದ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿಯಲ್ಲಿ ಹೊಸ ಮಠದ ಚಿದಾನಂದ ಸ್ವಾಮೀಜಿ, ಕುದೇರುಮಠದ ಗುರುಶಾಂತ ಸ್ವಾಮೀಜಿ, ಮಡಿವಾಳ ಸ್ವಾಮಿ ಮಠದ ಇಮ್ಮಡಿ ಮಡಿವಾಳ ಸ್ವಾಮೀಜಿ, ದೇವಲಾಪುರ ಮಠದ ಜಡೇಸ್ವಾಮೀಜಿ ಸೇರಿದಂತೆ ಇನ್ನಿತರೆ ಮಠಾಧಿಪತಿಗಳು ಉಪಸ್ಥಿತರಿದ್ದರು.

ಪರಿಷ್ಕೃತ ಪಠ್ಯವನ್ನು ಬ್ರಾಹ್ಮಣೀಕರಿಗೊಳಿಸಲಾಗಿದ್ದು, ಪಠ್ಯ ರಚನಾಕಾರರು ಸತ್ಯವನ್ನು ಮರೆ ಮಾಚಿದ್ದಾರೆ. ಬಸವಣ್ಣನವರ ಆಶಯಕ್ಕೆ ಅಪಚಾರವೆಸಗಿ ವಿದ್ಯಾರ್ಥಿಗಳ ಮನದಲ್ಲಿ ತಪ್ಪು ಅಭಿಪ್ರಾಯಗಳ ಬೀಜ ಭಿತ್ತಿದಂತಾಗಿದೆ. ಪರಿಷ್ಕೃತ ಪಠ್ಯದಲ್ಲಿ ಬಸವೇಶ್ವರರ ಬಗ್ಗೆ ತಪ್ಪು ಮಾಹಿತಿ ಅಳವಡಿಸಲಾಗಿದೆ. ಪಠ್ಯ ಪುಸ್ತಕ ಪರಿಷ್ಕೃತ ಸಮಿತಿ ದುರುದ್ದೇಶದಿಂದ ಇತಿಹಾಸ ತಿರುಚುವ ಪ್ರಯತ್ನ ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಹಳೆಯ ಪಠ್ಯದಲ್ಲಿದ್ದ ಬಸವಣ್ಣನಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ. ಪರಿಷ್ಕೃತ ಪದ್ಯದಲ್ಲಿ ತಪ್ಪು ಮಾಹಿತಿಗಳನ್ನು ಸೇರಿಸಲಾಗಿದೆ‌. ಇದನ್ನು ಜಾಗತಿಕ ಲಿಂಗಾಯತ ಮಹಾಸಭಾ ತೀವ್ರವಾಗಿ ಖಂಡಿಸುತ್ತಿದೆ.

ಆಗಿರುವ ತಪ್ಪನ್ನು ಕೂಡಲೇ ಸರಿಪಡಿಸಬೇಕು. ಪಠ್ಯ ಪುಸ್ತಕಗಳ ಪುನರ್ ಪರಿಷ್ಕರಣೆ ಮಾಡಬೇಕು. ದೋಷಪೂರಿತ ಪಠ್ಯವನ್ನು ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು. ತಜ್ಞರಿಂದ ಸೂಕ್ತ ತಿದ್ದುಪಡಿ ಮಾಡಿಸಿ ದೋಷಮುಕ್ತಗೊಳಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ವಿವಿಧ ಮಠಾಧಿಪತಿಗಳು, ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ,  ಇತ್ತೀಚೆಗೆ ಬ್ರಾಹ್ಮಣೀಕರ ಎಂಬ ಪದ ವಿಶಾಲವಾಗಿ ಬರುತ್ತಿದೆ. ಎಲ್ಲಾ ವರ್ಗದದಲ್ಲೂ ಇದು ಹೈಲೆಟ್ ಆಗ್ತಾ ಇದೆ. ಇವೆಲ್ಲ ವ್ಯಾಪಕ ಆಗಲು ರಾಜಕೀಯ ಪಕ್ಷಗಳೂ ಇನ್ವಾಲ್ವ್ ಆಗಿದ್ದಾವೆ. ವಿರೋಧಿಸಿದಾಗ ಗಲಾಟೆಗಳಿಗೆ ಕಾರಣ ಆಗಿವೆ. ಆಗಾಗಿ ಬ್ರಾಹ್ಮಣೀಕರಣ ವ್ಯಾಪಕ ಆಗ್ತಾ ಇದೆ. ಬ್ರಾಹ್ಮಣೀಕರಣ ಮುಂದೆ ಪ್ರಬಲವಾಗಿ ಬೆಳೆಯುತ್ತೆ‌. ಇತ್ತೀಚೆಗೆ ಬಸವಣ್ಣ ವಿಚಾರ  ವೇಗವಾಗಿ ಬೆಳಯುತ್ತಿದೆ. ಅದರ ವೇಗ ಕಡಿಮೆ ಮಾಡಲು ಹೀಗೆಲ್ಲ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪಾರ್ಲಿಮೆಂಟ್ ಲಿ ಮಾತಾನಾಡಿದಾಗ ಪ್ರಪಂಚದಾದ್ಯಂತ ಹರಡುತ್ತದೆ ಎಂಬುದು ಗೊತ್ತಾಯ್ತು. ಬಸವಣ್ಣ ವಿಶ್ವವಾಪಿ ಆಗುವುದನ್ನ ತಡೆಗಟ್ಟಲು ಹೀಗೆ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Key words: Global Lingayat Maha Sabha –mysore-demands-text-rivision