ಗಾಂಧಿವಾದಿ ಡಾ.ಮೀರಾತಾಯಿ ಕೊಪ್ಪೀಕರ್ ಇನ್ನಿಲ್ಲ.

ಬಾಗಲಕೋಟೆ,ಆಗಸ್ಟ್,19,2022(www.justkannada.in): ಹಿರಿಯ ಗಾಂಧೀವಾದಿ ಡಾ.ಮೀರಾತಾಯಿ ಕೊಪ್ಪೀಕರ್(96) ಶುಕ್ರವಾರ ಬೆಳಗ್ಗೆ ನಿಧನರಾದರು.

ಮುಧೋಳ ನಗರದ ಹೊರ ವಲಯದ ಮಹಾಲಿಂಗಪುರ ರಸ್ತೆಯಲ್ಲಿರುವ ರುಕ್ಮಿಣಿ ವಾತ್ಸಲ್ಯಧಾಮದಲ್ಲಿ ಕೊನೆಯುಸಿರೆಳೆದರು. ಮೂಲತಃ ಧಾರವಾಡದ ಶ್ರೀಮಂತ ಕುಟುಂಬದವರಾದ ಮೀರಾತಾಯಿ ಅವರು ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಗಳಿಗೆ ಆಕರ್ಷಣೆಗೊಳಗಾಗಿ ಸಮಾಜಸೇವೆಯಲ್ಲಿ ನಿರತರಾಗಿದ್ದರು. ಪುಣೆಯಲ್ಲಿಯೂ ಕೆಲ ವರ್ಷ ಇದ್ದು  ನಂತರ ಮುಧೋಳಕ್ಕೆ ಆಗಮಿಸಿ ಇಲ್ಲಿನ ರುಕ್ಮಿಣಿ ವಾತ್ಸಲ್ಯಧಾಮದಲ್ಲಿ ೫೧ ವರ್ಷದಿಂದ ಹಲವು ಮಂದಿಗೆ ಆಶ್ರಯವಾಗಿದ್ದರು. ಸರಳ ಬದುಕಿನೊಂದಿಗೆ ಗಾಂಧಿ ಚಿಂತನೆಗಳನ್ನು ಪ್ರಸಾರ ಮಾಡುತ್ತಿದ್ದರು. ನೇಯ್ಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೂರು ವರ್ಷದಿಂದ ಅನಾರೋಗ್ಯ ಇದ್ದರೂ ಸೇವೆ ಬಿಟ್ಟಿರಲಿಲ್ಲ. ಈ ಭಾಗದಲ್ಲಿ ಅವರ ದೊಡ್ಡ ಶಿಷ್ಯ ಬಳಗವೇ ಇದೆ. ಮೀರಾತಾಯಿ ಅವರು ಕನ್ನಡ ರಾಜ್ಯೋತ್ಸವ, ಮಹಾತ್ಮಗಾಂಧಿ ಸೇವಾ ಪುರಸ್ಕಾರ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು. ಮೃತರ ಅಂತ್ಯಕ್ರಿಯೆ ಸಂಜೆ ವಾತ್ಸಲ್ಯಧಾಮದ ಜಮೀನಿನಲ್ಲಿಯೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಗೋವಿಂದ ಕಾರಜೋಳ ಸಂತಾಪ:

ಡಾ.ಮೀರಾತಾಯಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಸಂತಾಪ ಸೂಚಿಸಿದ್ಧಾರೆ.

ತಮ್ಮ ಕ್ಷೇತ್ರ ವ್ಯಾಪ್ತಿಯ ಆಶ್ರಮದಲ್ಲೇ ಹಲವಾರು ವರ್ಷಗಳಿಂದ ನೆಲೆಸಿ ಗಾಂಧಿ ವಿಚಾರಗಳನ್ನು ಜನರಲ್ಲಿ ಪ್ರಚುರಪಡಿಸುತ್ತಿದ್ದರು. ಅವರ ಸೇವೆ ಅನನ್ಯವಾದದು. ವಾತ್ಸಲ್ಯಮಯಿ, ಮಾತೋಶ್ರೀ, ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ತತ್ವಗಳನ್ನು ಅನ್ವರ್ಥಕವಾಗುವಂತೆ ಇಂದಿನ ಆಧುನಿಕ ಯುಗದಲ್ಲೂ ಪರಿಪಾಲಿಸಿಕೊಂಡು ಬಂದ ಮೀರಾತಾಯಿ ಕೊಪ್ಪೀಕರ ಅವರು ಇಂದು ತಮ್ಮ ಇಹಲೋಕ ಯಾತ್ರೆ ಮುಗಿಸಿರುವುದು ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿ ಕಳಚಿದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ವಾತ್ಸಲ್ಯಧಾಮ ಎಂಬ ಆಶ್ರಮದಲ್ಲಿ ಸರಳ ಜೀವನ ಸಾಗಿಸುತ್ತಿದ್ದ ಕೊಪ್ಪೀಕರ ಅವರು ಭೂದಾನ ಚಳವಳಿಯ ನೇತಾರ ವಿನೋಬಾ ಬಾವೆಯವರ ತಾಯಿ ರುಕ್ಮಿಣಿದೇವಿಯವರ ಸ್ಮರಣೆಯಲ್ಲಿ ಈ ವಾತ್ಸಲ್ಯಧಾಮ ಎಂಬ ಆಶ್ರಮದ ಉದ್ಘಾಟನೆಯಾಗಿತ್ತು. ಮುಧೋಳ ತಾಲ್ಲೂಕಿನ ನನ್ನ ಸ್ವಕ್ಷೇತ್ರದ ಈ ಆಶ್ರಮದಲ್ಲಿ ಮೀರಾತಾಯಿಯವರು ಸಾರ್ಥಕ ಬದುಕು ನಡೆಸುತ್ತಿದ್ದರು. ಕನ್ನಡ ಸಂಸ್ಕೃತಿ ಇಲಾಖೆಯು ಕೊಡಮಾಡಿದ್ದ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೀಡಿದ್ದ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ಮೀರಾತಾಯಿ ನಿರಾಕರಿಸಿದ್ದರು. ಮುಖ್ಯಮಂತ್ರಿಗಳ ಆಗ್ರಹದ ಮೇರೆಗೆ ಈ ಚೆಕ್ಕನ್ನು ಸ್ವೀಕರಿಸಿದ ಅವರು ಬಡವರಿಗಾಗಿ ಈ ಮೊತ್ತವನ್ನು ಉಪಯೋಗಿಸಿದರು. ವಾತ್ಸಲ್ಯಧಾಮದಲ್ಲಿ ಶ್ರೀ ಕೃಷ್ಣ ಮಂದಿರ, ಹನುಮಾನ್ ಮಂದಿರ, ಶಿವಲಿಂಗ, ನಾಗದೇವತೆ, ಗೋಶಾಲೆ ಮುಂತಾದವುಗಳ ಜೊತೆಗೆ ಜೀವನ ಸಾಗಿಸುತ್ತಿದ್ದ ಅವರು ಆಶ್ರಮದ ೧೫-೨೦ ಸಾಧಕರು ಉಂಡುಟ್ಟು ಸಂತೃಪ್ತ ಜೀವನ ನಡೆಸುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು ಎಂದು ಕಾರಜೋಳ ನೆನಪಿಸಿಕೊಂಡಿದ್ದಾರೆ.

Key words: Gandhian- Dr. Meeratai Koppikar – no more-Bagalkote