ಒಂದೇ ವೇದಿಕೆ ಹಂಚಿಕೊಂಡ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್….

ಮೈಸೂರು,ಅ,14,2019(www.justkannada.in): ಮೈಸೂರು ಭಾಗದಲ್ಲಿ ಪರಸ್ಪರ ರಾಜಕೀಯ ವೈರಿಗಳು ಎಂದೇ ಬಿಂಬಿತವಾಗಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಹೌದು ಇಂದು ಟಿ.ನರಸೀಪುರದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಹಳೇ ದೋಸ್ತಿಗಳು ಒಂದೇ ವೇದಿಕೆ ಹಂಚಿಕೊಂಡರು. ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ವಿ.ಶ್ರೀನಿವಾಸ್ ಪ್ರಸಾದ್ ಗಾಗಿ ಕೆಲ ಕಾಲ ಕಾದು ನಿಂತರು. ಶ್ರೀನಿವಾಸ್ ಪ್ರಸಾದ್ ಬಂದ ನಂತರ ಅಂಬೇಡ್ಕರ್  ಪ್ರತಿಮೆಯನ್ನ ಅನಾವರಣಗೊಳಿಸಿದರು. ಬಳಿಕ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಜೊತೆ ನಿಂತು ಮಾಧ್ಯಮಗಳಿಗೆ ಫೋಸ್ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೆ  ಅಂಬೇಡ್ಕರ್ ಯಾವುದೇ ಪಕ್ಷದ ರಾಜಕೀಯ ಮುಖಂಡರಲ್ಲ. ನಾನು ಒಂದು ಪಕ್ಷದಲ್ಲಿ ಇರಬಹುದು, ಮತ್ತೊಬ್ಬರು ಮತ್ತೊಂದು ಪಕ್ಷದಲ್ಲಿ ಇರಬಹುದು ಎಂದರು.

ಅಂಬೇಡ್ಕರ್ ಜಾತಿ, ಪಕ್ಷಗಳನ್ನು ಮೀರಿದ ನಾಯಕ. ದಲಿತರ ಪಾಲಿಗೆ ಅಂಬೇಡ್ಕರ್ ಆಧ್ಯಾತ್ಮಿಕ ನಾಯಕ. ನಮ್ಮಲ್ಲೇ ಜಾತಿ ಇಟ್ಟುಕೊಂಡು ಮತ್ತೊಬ್ಬರಿಗೆ ಜಾತಿ ಬಿಡಿ ಅಂತ ಹೇಳುವುದು ತಪ್ಪು. ನೊಂದ ಸಮುದಾಯಗಳೆಲ್ಲ ಒಂದಾಗಬೇಕು ಅಂತ ನಾನು ಹಲವಾರು ಬಾರಿ ಹೇಳಿದ್ದೇನೆ. ನಮ್ಮನ್ನು ಒಡೆದು ಆಳುವವರು ತುಂಬಾ ಜನ ಇದ್ದಾರೆ. ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಸಮ್ಮುಖದಲ್ಲೇ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾರ್ಮಿಕ ಹೇಳಿಕೆ ನೀಡಿದರು.

ಸಂಸದ ಶ್ರೀನಿವಾಸ್ ಪ್ರಸಾದ್ ಭಾಷಣ ಮಾಡುತ್ತಿದ್ದ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ನಿದ್ರೆಗೆ ಜಾರಿದ ಪ್ರಸಂಗ ನಡೆಯತು.

Key words: Former CM Siddaramaiah -MP Srinivas Prasad –mysore-shared -stage