ಭೀಕರ ಪ್ರವಾಹ, ಅತಿವೃಷ್ಠಿ ಹಿನ್ನೆಲೆ: ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ನಿರ್ಧಾರ…

ಬೆಂಗಳೂರು,ಆ,14,2019(www.justkannada.in):  ರಾಜ್ಯದಲ್ಲಿ ಭೀಕರ ಪ್ರವಾಹ ಅತಿವೃಷ್ಟಿ ಉಂಟಾದ ಹಿನ್ನೆಲೆ  ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ದಸರಾ ಪೂರ್ವಸಿದ್ಧತೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮೈಸೂರು ಭಾಗದ ಸಂಸದರು ಮತ್ತು ಶಾಸಕರು ಭಾಗಿಯಾಗಿದ್ದಾರೆ. ಸ‌ಂಸದರಾದ ಶ್ರೀನಿವಾಸ್ ಪ್ರಸಾದ್, ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಯತೀಂದ್ರ ಸಿದ್ಧರಾಮಯ್ಯ, ಬಿಜೆಪಿ ಶಾಸಕ ನಾಗೇಂದ್ರ, ರಾಮದಾಸ್ ಸೇರಿ ಹಲವರು ಭಾಗಿಯಾಗಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಹ ಪಾಲ್ಗೊಂಡಿದ್ದಾರೆ. ದಸರಾ ಆಚರಣೆಗೆ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಪ್ರವಾಹ, ಅತಿವೃಷ್ಠಿ ಹಿನ್ನೆಲೆ ಈ ಬಾರಿ ಸರಳಾ ದಸರಾ ಆಚರಣೆ ಆಚರಣೆ ಮಾಡಲು ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಈ ಬಗ್ಗೆ ಸಭೆಯಲ್ಲಿ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ,  ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ ವಿಜೃಂಬಣೆಯ ದಸರಾ ಆಚರಣೆ ಬೇಡ. ಆದರೆ ದಸರಾದಲ್ಲಿ  ವಸ್ತುಪ್ರದರ್ಶನ ಎಂದಿನಂತೆ ನಡೆಯಲಿವೆ. ಕಲಾವಿದರಿಗೆ ಯಾವುದೇ ತೊಂದರೆ ಇಲ್ಲ. ವಿದೇಶಿಯರಿಗೆ ವ್ಯವಸ್ಥೆಯಲ್ಲಿ  ಲೋಪವಾಗಬಾರದು ಎಂದು ತಿಳಿಸಿದ್ದಾರೆ.

ಹಾಗೆಯೇ ಸಾಂಪ್ರದಾಯಕ ದಸರಾ ಆಚರಣೆಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಸೆಪ್ಟಂಬರ್ 28ರಿಂದ ದಸರಾ ಮಹೋತ್ಸವ ಆರಂಭವಾಗಲಿದೆ. ದಸರಾ ಆಚರಣೆಯ ಸಂಬಂಧ ಎರಡು ತಿಂಗಳು ಮುನ್ನವೇ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಬೇಕಿತ್ತು. ಜೂನ್ ಅಥವಾ ಜುಲೈ ನಲ್ಲಿ ದಸರಾ ಆಚರಣೆ ಕುರಿತು ಉನ್ನತ ಮಟ್ಟದ ಸಭೆ ನಡೆಸಬೇಕಿತ್ತು. ಆದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ, ಬಿಜೆಪಿಯಿಂದ ಹೊಸ ಸರ್ಕಾರ ರಚನೆ ಹಾಗೂ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಸಭೆ ಆಗಿರಲಿಲ್ಲ. ಇದೀಗ ಪ್ರವಾಹ ಕಡಿಮೆ ಆಗಿರುವುದರಿಂದ ಸಭೆ ನಡೆಸಲಾಗುತ್ತಿದೆ.

 

Key words: flood-government- decision – celebrate- simple-mysore dasara