ಇನ್ನೈದು ದಿನದಲ್ಲಿ ಕೆಆರ್‌ಎಸ್‌ನಲ್ಲಿ ನೀರೇ ಮಾಯ!

Promotion

ಮಂಡ್ಯ:ಆ-3: ಕಾವೇರಿ ನೀರು ನಿರ್ವಹಣಾ ಮಂಡಳಿಯ ಸೂಚನೆಯ ಮೇರೆಗೆ ಕಾವೇರಿ ಮತ್ತು ಕಬಿನಿ ಜಲಾಶಯಗಳಿಂದ ಪ್ರತಿನಿತ್ಯ ತಮಿಳುನಾಡಿಗೆ ಒಂದು ಟಿಎಂಸಿ ನೀರನ್ನು ಹರಿಯಬಿಡಲಾಗುತ್ತಿದ್ದು, ಇನ್ನೈದು ದಿನ ಹೀಗೇ ಮುಂದುವರಿದರೆ ಕೆಆರ್‌ಎಸ್‌ ಬರಿದಾಗುವ ಆತಂಕ ಎದುರಾಗಿದೆ.

ತಮಿಳುನಾಡಿನ ಮನವಿ ಮೇರೆಗೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಆದೇಶದಂತೆ ಕಳೆದ 35 ದಿನಗಳಲ್ಲಿ, ನೆರೆ ರಾಜ್ಯಕ್ಕೆ 26 ಟಿಎಂಸಿ ನೀರು ಹರಿದಿದೆ. ಆದರೆ, ಇಷ್ಟು ದಿನಗಳಲ್ಲಿ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಿಗೆ ಬಂದ ನೀರು ಮಾತ್ರ 28 ಟಿಎಂಸಿ. ಹೀಗಾಗಿ, ಅಲ್ಪಸ್ವಲ್ಪ ಮಳೆಯಿಂದಾಗಿ ಬಂದಿದ್ದ ನೀರನ್ನೂ ತಮಿಳುನಾಡಿಗೆ ಹರಿಸಲಾಗಿದೆ.

ರೈತರ ಆಕ್ರೋಶ: ಮಳೆ ಕೊರತೆ ಹಿನ್ನೆಲೆಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಮುಂಗಾರು ಬೆಳೆಯನ್ನು ಆರಂಭಿಸದಂತೆ ತಾಕೀತು ಮಾಡಿರುವ ಜಿಲ್ಲಾಡಳಿತ, ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿರುವ ನೀರನ್ನು ತಮಿಳುನಾಡಿನ ಕುರುವೈ ಬೆಳೆಗೆ ಹರಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಕೃಷ್ಣರಾಜಸಾಗರದ ಒಳಹರಿವು 6512 ಕ್ಯುಸೆಕ್‌ ಇದ್ದು, 9933 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಪ್ರಸ್ತುತ ಕೆಆರ್‌ಎಸ್‌ನಲ್ಲಿ 83.90 ಅಡಿ ನೀರು ಸಂಗ್ರಹವಾಗಿದೆ. ಕೆಆರ್‌ಎಸ್‌ನ ನೀರಿನ ಪ್ರಮಾಣ 96 ಅಡಿ ತಲುಪುವವರೆಗೆ ರಾಜ್ಯದಿಂದ ನೀರಿನ ಬೇಡಿಕೆಯ ಪ್ರಸ್ತಾವವನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತ.ನಾಡಿಗೆ ನೀರು ಬಿಡಬೇಡಿ: ಬೆಳೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತ ಸಂಘ, ಮತ್ತಿತರ ಜನಪರ ಸಂಘಟನೆಗಳು ಹೋರಾಟ ನಡೆಸಿದ ನಂತರ ನಾಲೆಗಳಿಗೆ ನೀರು ಹರಿಸಲಾಯಿತು. ಆದರೆ, ಅದರ ಜೊತೆಯಲ್ಲೇ ತಮಿಳುನಾಡಿಗೂ ನೀರನ್ನು ಹರಿಯಬಿಟ್ಟ ಪರಿಣಾಮ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕರ್ನಾಟಕಕ್ಕೆ ನಿರಂತರ ಅನ್ಯಾಯ: ಕಾವೇರಿ ವಿಚಾರದಲ್ಲಿ ಬಹುಕಾಲದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದು, ನ್ಯಾಯಮಂಡಳಿ ರಚನೆ ನಂತರವೂ ಅದೇ ಪ್ರಕ್ರಿಯೆ ಮುಂದುವರಿದಿರುವುದರ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದು, ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೂ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಮುಂಗಾರು ಕೈಕೊಟ್ಟಿದ್ದು, ನೀರಿನ ಅಭಾವ ಸೃಷ್ಠಿಯಾಗುವ ಸ್ಪಷ್ಟ ಸಾಧ್ಯತೆಗಳು ಇದ್ದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿನ ಬೆಳೆಗಳ ರಕ್ಷಣೆಗೆ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಬರುವ 6 ಜಿಲ್ಲೆಗಳಲ್ಲಿ ಮಾಸಿಕ 4 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕಾಗಿ ಬಳಕೆಯಾಗಲಿದ್ದು, ಹೀಗೇ ತಮಿಳುನಾಡಿಗೆ ನೀರು ಬಿಟ್ಟರೆ, ನೀರಿಗಾಗಿ ಹಾಹಾಕಾರ ಏರ್ಪಡಬಹುದು ಎಂಬುದು ರೈತರ ಆತಂಕ.

ಡೆಡ್‌ ಸ್ಟೋರೇಜ್‌ ಹಂತಕ್ಕೆ ಕೆಆರ್‌ಎಸ್‌
ಜು.18ರಿಂದಲೇ ಕೆಆರ್‌ಎಸ್‌ನಿಂದ ನಿರಂತರವಾಗಿ ತಮಿಳು ನಾಡಿಗೆ ನೀರು ಹರಿಸಲಾಗುತ್ತಿದೆ. ನಿತ್ಯ ಅಣೆಕಟ್ಟೆಯಿಂದ 7ರಿಂದ 8 ಸಾವಿರ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದೆ. ಹಾಲಿ 83 ಅಡಿ ನೀರು ಇದ್ದು, ಪ್ರಾಧಿಕಾರದ ಆದೇಶದಂತೆ ಮುಂದಿನ ಐದು ದಿನಗಳ ವರೆಗೆ ನೀರು ಹರಿಸಿದರೆ ಜಲಾಶಯದ ನೀರಿನ ಮಟ್ಟ 75 ಅಡಿಗಳಿಗೆ ಕುಸಿಯಲಿದೆ. ಇದರೊಂದಿಗೆ ನೀರು ಖಾಲಿಯಾಗಿ ಡೆಡ್‌ ಸ್ಟೋರೇಜ್‌ ಹಂತ ತಲುಪಲಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಬೇಕಾಗುತ್ತದೆ. ಆದರೂ ಮಂಡ್ಯ ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.
– ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ
ಕೃಪೆ:ಉದಯವಾಣಿ

ಇನ್ನೈದು ದಿನದಲ್ಲಿ ಕೆಆರ್‌ಎಸ್‌ನಲ್ಲಿ ನೀರೇ ಮಾಯ!
fifth-you-disappear-at-krs-during-the-day