ರಾಜ್ಯದ ಎಲ್ಲೆಡೆ ರೈತರ ಬೆಳೆ ಮಾರಾಟ ಮಾಡಬಹುದು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

Promotion

ರಾಮನಗರ, ಏಪ್ರಿಲ್ 19, 2020 (www.justkannada.in): ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಭಾನುವಾರ ಮುಂಜಾನೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೈತರಿಗೆ ಬೆಳೆದಂತ ಬೆಳೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಾನು ಪ್ರತಿ ಜಿಲ್ಲೆಯ ಎಪಿಎಂಸಿಗಳಿಗೆ ಭೇಟಿ ಮಾಡುತ್ತಿದ್ದೇನೆ. ಮಾರುಕಟ್ಟೆ ಸೇರಿದಂತೆ ಇನ್ನಿತರ ಕಡೆ ಬೆಳೆ ಸಾಗಾಟ ಮಾಡುವಾಗ ಚೆಕ್ ಪೋಸ್ಟ್, ಪೊಲೀಸರಿಂದ ಇಲ್ಲವೇ ಎಪಿಎಂಸಿಯಲ್ಲಿ ಏನಾದರೂ ಸಮಸ್ಯೆಯಾಗುತ್ತಿದೆಯಾ ಎಂದು ಕೇಳಿ ತಿಳಿದುಕೊಳ್ಳಿತ್ತಿದ್ದೇನೆ. ಇಲ್ಲೂ ವಿಚಾರಿಸಿದ್ದು ಯಾವುದೇ ರಿತಿಯ ಸಮಸ್ಯೆ ಕಂಡುಬಂದಿಲ್ಲ ಎಂದು ಸಚಿವರು ತಿಳಿಸಿದರು.

ಇಲ್ಲಿ ಬೆಳಗಿನ ಜಾವ 3 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ರೈತರಲ್ಲಿ ಸಮಸ್ಯೆ ಬಗ್ಗೆ ವಿಚಾರಿಸಿದಾಗ ದೊಡ್ಡ ಮೆಣಸಿಕಾಯಿ ಮಾರಾಟ ಆಗದಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇದೂ ಸೇರಿದಂತೆ ಸೊಪ್ಪುಗಳು, ಟೊಮ್ಯಾಟೊಗಳ ಸಮಸ್ಯೆ ಇದ್ದಾಗಲೂ ನಾವು ಇತರ ರಾಜಕೀಯ ನಾಯಕರ ಗಮನಕ್ಕೆ ತರುತ್ತಿದ್ದು, ಅವರು ಅವಶ್ಯಕತೆ ನೋಡಿಕೊಂಡು ಇವುಗಳನ್ನು ಕೊಂಡುಕೊಂಡು ತಮ್ಮ ಕ್ಷೇತ್ರಗಳಲ್ಲಿ ಉಚಿತವಾಗಿ ಹಂಚುವ ಏರ್ಪಾಟು ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ರಾಮನಗರ ಎಪಿಎಂಸಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ವಿತರಣೆ ನಿರ್ವಹಣೆ ಅತ್ಯುತ್ತಮವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮೈಕ್ ಮೂಲಕ ಪ್ರಚಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಚಿವರು ತಿಳಿಸಿದರು.

ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದರೆ ಅಂಥವರ ಬಗ್ಗೆ ಗಮನಕ್ಕೆ ತಂದರೆ ಬೆಳೆನಷ್ಟ ಪರಿಹಾರವನ್ನು ಕೊಡಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಸ್ವತಃ ಹೇಳಿದ್ದಾರೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಜಮೀನಿಗೆ ತೆರಳಿ ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸುತ್ತಾರೆ. ಬಳಿಕ ಪರಿಹಾರ ಸಿಗಲಿದೆ ಎಂದು ಸಚಿವರು ತಿಳಿಸಿದರು.

ನಾನು ಎಲ್ಲ ಕಡೆ ಭೇಟಿ ಕೊಟ್ಟ ಸಂದರ್ಭದಲ್ಲಿ ದಪ್ಪಮೆಣಸು ಹಾಗೂ ನಿಂಬೆಹಣ್ಣು ಮಾರಾಟದ ಬಗ್ಗೆ ಮಾತ್ರ ಸಮಸ್ಯೆಗಳು ಕೇಳಿಬಂದಿವೆ. ಅದೂ ಸಹ ಈಗ ಪರಿಹಾರವಾಗುತ್ತಿದೆ ಎಂದರು.

ಇನ್ನು ರೈತರ ಸಾಲದ ವಿಷಯವಾಗಿ ಈಗಾಗಲೇ ಹೇಳಿದಂತೆ ಕಳೆದ ಬಾರಿ ನೀಡಲಾಗಿದ್ದ 13 ಸಾವಿರ ಕೋಟಿ ರೂಪಾಯಿಯಷ್ಟು ಮೊತ್ತವನ್ನು ಈ ಬಾರಿಯೂ ನೀಡುವಂತೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಮಂಗಳವಾರದೊಳಗೆ ಈ ಬಗ್ಗೆ ಅಧಿಕೃತ ಆದೇಶವನ್ನು ನೀಡಲಾಗುವುದು ಎಂದು ತಿಳಿಸಿದರು.

ಲಾಕ್‌ ಡೌನ್ ಸಡಿಲಿಕೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ನಾಳೆ ಕ್ಯಾಬಿನೆಟ್ ಮೀಟಿಂಗ್ ಕರೆದಿದ್ದಾರೆ. ಈಗಾಗಲೇ ಕೃಷಿ ಕ್ಷೇತ್ರಕ್ಕೆ ಸಂಪೂರ್ಣ ಸಡಿಲಿಕೆ ನೀಡಲಾಗಿದೆ ಎಂದರು.

ಈಗ ರೈತರಿಗೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಇಡಿಹಣ್ಣುಗಳನ್ನು ಮಾತ್ರ ಮಾರಾಟ ಮಾಡಬೇಕು. ಕಟ್ ಪೀಸ್ ಮಾಡಿ ಮಾರುವಂತಿಲ್ಲ ಎಂದು ಸಚಿವರು ತಿಳಿಸಿದರು.