ಮೊಬೈಲ್ ಫೋನ್ ಒಳಗೆ ನುಸುಳಿ ‘ SPYWARE PEGASUS’ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದುರ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ..!

Promotion

 

ನವದೆಹಲಿ, ಜುಲೈ ೨೩, ೨೦೨೧ (www.justkannada.in): ಜಾಗತಿಕ ಮಟ್ಟದಲ್ಲಿ ಕೈಗೊಳ್ಳಲಾಗಿದ್ದಂತಹ ಒಂದು ಸಂಘಟಿತ ತನಿಖಾ ಯೋಜನೆಯಿಂದ, ಇಸ್ರೇಲ್ ಮೂಲದ ಗುಪ್ತಚರ ತಂತ್ರಾಂಶ ‘ಪೆಗಾಸಸ್’ ಅನ್ನು ಬಳಸಿಕೊಂಡು ವಿಶ್ವದಾದ್ಯಂತ ಸಾವಿರಾರು ಜನರನ್ನು ಗುರಿಯಾಗಿಸಲಾಗಿದೆ ಎಂಬ ಸುದ್ದಿ ಬಹಿರಂಗಗೊಂಡಿದೆ.

ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿರುವ ಇಬ್ಬರು ಹಾಲಿ ಸಚಿವರು, ಮೂವರು ಪ್ರತಿಪಕ್ಷ ನಾಯಕರು, ಓರ್ವ ಸಾಂವಿಧಾನಿಕ ಪ್ರಾಧಿಕಾರಿ ಹಾಗೂ ಹಲವು ಪತ್ರಕರ್ತರು ಹಾಗೂ ವ್ಯಾಪಾರಸ್ಥರು ಒಳಗೊಂಡಂತೆ ಕನಿಷ್ಠ ೩೦೦ ಜನರನ್ನು ಗುರಿಯಾಗಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

ಹಾಗಾದರೆ ಈ ಪೆಗಾಸಸ್ ಎಂದರೇನು? ಇದು ಉಪಕರಣಗಳ ಮೇಲೆ ಹೇಗೆ ಪರಿಣಾಮ ಉಂಟು ಮಾಡುತ್ತದೆ? ನಮ್ಮ ಮೊಬೈಲ್ ಅನ್ನು ಇದು ಹೇಗೆ ನಿಯಂತ್ರಿಸುತ್ತದೆ ಎಂದು ತಿಳಿದುಕೊಳ್ಳಲು ಕುತೂಹಲವೇ? ಹಾಗಾದರೆ ಈ ಸುದ್ದಿಯನ್ನು ಒಮ್ಮೆ ಓದಿ:

jk

ಪೆಗಾಸಸ್, ಇಸ್ರೇಲ್ ಮೂಲದ ಎನ್‌ಎಸ್‌ಒ ಕಂಪನಿ ನಿರ್ಮಿಸಿ ಮಾರಾಟ ಮಾಡುತ್ತಿರುವಂತಹ ಒಂದು ಗುಪ್ತಚರ ತಂತ್ರಾಂಶವಾಗಿದ್ದು, ಇದು ನಾವು ಬಳಸುವ ಮೊಬೈಲ್ ಹಾಗೂ ಕಂಪ್ಯೂಟರ್‌ಗಳ ಒಳಗೆ ನಮಗೆ ಅರಿವಿಲ್ಲದಂತೆಯೇ ನುಸುಳಿ, ನಮ್ಮ ಎಲ್ಲಾ ಮಾಹಿತಿಯನ್ನು ಅನಧಿಕೃತ ಮಾಸ್ಟರ್ ಸರ್ವರ್‌ಗೆ ರವಾನೆ ಮಾಡುತ್ತದೆ. ಈ ತಂತ್ರಾಂಶವನ್ನು ತಯಾರಿಸುವ ಕಂಪನಿಯ ಪ್ರಕಾರ ಈ ತಂತ್ರಾಂಶವನ್ನು ಕೇವಲ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದಂತೆ! ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ ಈ ತಂತ್ರಾಂಶವನ್ನು ವಿಶೇಷವಾಗಿ ಉಘ್ರ ಚಟುವಟಿಕೆಗಳ ಮೇಲೆ ಕಣ್ಣಿಡಲೆಂದೇ ಅಭಿವೃದ್ಧಿಪಡಿಸಲಾಗಿದೆಯಂತೆ!

ಪೆಗಾಸಸ್ ತಂತ್ರಾಂಶ ಮೂಲಭೂತವಾಗಿ ಇಂಟೆರ್‌ನೆಟ್ ಸಂಪರ್ಕ ಇರುವ ಯಾವುದೇ ಉಪಕರಣಗಳ ಒಳಗೆ ನುಸುಳಬಹುದು. ತಜ್ಞರ ಪ್ರಕಾರ ಈ ತಂತ್ರಾಂಶದ ಅಪ್‌ಡೇಟ್ ಆಗಿರುವ ಆವೃತ್ತಿಗಳು, ನಾವು ಯಾವುದೇ ಲಿಂಕ್‌ಗಳು ಅಥವಾ ಸಂದೇಶಗಳನ್ನು ಕ್ಲಿಕ್ ಮಾಡದೇ ಇದ್ದರೂ ಸಹ ನಮ್ಮ ಉಪಕರಣದಲ್ಲಿ ಅದು ಇನ್‌ಸ್ಟಾಲ್ ಆಗಿಬಿಡುತ್ತದೆ!

ಬಹುಪಾಲು ಇಂತಹ ಸ್ಪೈವೇರ್ ಆ್ಯಪ್‌ಗಳು (ಗುಪ್ತಚರ ತಂತ್ರಾಂಶ) ಕದ್ದ ಅಥವಾ ಕಳೆದಹೋಗಿರುವ ಉಪಕರಣಗಳನ್ನು ಪತ್ತೆ ಹಚ್ಚುವ ಆ್ಯಂಟಿ-ಥೇಫ್ಟ್ ತಂತ್ರಾಂಶದ ರೂಪದಲ್ಲಿರುತ್ತವೆ. ಆ್ಯಂಟಿ-ವೈರಸ್ ಸಾಫ್ಟ್ವೇರ್ ಬಳಸಿ ವೈರಸ್ ಹಾಗೂ ಮಾಲ್‌ವೇರ್‌ಗಳನ್ನು ಪತ್ತೆಹಚ್ಚಬಹುದು. ಆದರೆ ಇಂತಹ ಸ್ಪೈವೇರ್ ಹಾಗೂ ಸ್ಟಾಕರ್‌ವೇರ್ ಆ್ಯಪ್‌ಗಳು ನಮ್ಮ ಅರಿವಿಲ್ಲದಂತೆಯೇ ನಮ್ಮ ಉಪಕರಣಗಳ ಒಳಗೆ ನುಸುಳಿ ನಮ್ಮ ಎಲ್ಲಾ ಗುಪ್ತ ಮಾಹಿತಿಯನ್ನು ಕದ್ದು ನಮ್ಮ ಅರಿವಿಲ್ಲದೆಯೇ ಕೇಂದ್ರ ಸರ್ವರ್‌ಗಳಿಗೆ ರವಾನಿಸುತ್ತವೆ!

ಇಂತಹ ಗುಪ್ತಚರ ತಂತ್ರಾಂಶದ ಆ್ಯಪ್‌ಗಳಲ್ಲಿ ಗುಪ್ತಚರ ಕೋಡ್ ಅನ್ನು, ಪ್ರೀಮಿಯಂ ಆ್ಯಪ್‌ಗಳ ಅನಧಿಕೃತ ಆವೃತ್ತಿಗಳಲ್ಲಿ ಅಡಗಿಸಲಾಗುತ್ತದೆ. ಮತ್ತೊಂದೆಡೆ, ಸ್ಟಾಕರ್‌ವೇರ್ ಆ್ಯಪ್‌ಗಳು ಉಪಕರಣದಲ್ಲಿ ಇನ್‌ಸ್ಟಾಲ್ ಮಾಡಬೇಕಾದರೆ ಅನುಮತಿಯನ್ನು ಕೋರುತ್ತವೆ.

ಇಂತಹ ಸ್ಟಾಕರ್‌ವೇರ್ ಅಪ್ಲಿಕೇಷನ್‌ಗಳು ಒಮ್ಮೆ ನಮ್ಮ ಉಪಕರಣದಲ್ಲಿ ಇನ್‌ಸ್ಟಾಲ್ ಆದರೆ, ನಮ್ಮ ಉಪಕರಣದಲ್ಲಿ, ನಮ್ಮ ಕಣ್ಣಿಗೆ ಕಾಣದಿರುವ ಹಾಗೆ ಅಡಗಿ ಕುಳಿತುಕೊಂಡು ಅಲ್ಲಿಂದಲೇ ಕಾರ್ಯನಿರ್ವಹಿಸುತ್ತವೆ. ಇದೇ ರೀತಿ ಪೆಗಾಸಸ್ ತಂತ್ರಾಂಶವೂ ಸಹ ಸಂತ್ರಸ್ತರ ಮೊಬೈಲ್ ಉಪಕರಣಗಳು ಹಾಗೂ ಕಂಪ್ಯೂಟರ್‌ಗಳ ಒಳಗೆ ಸೇರಿಕೊಂಡಿದೆ. ಬಹುತೇಕ ಬಾರಿ ನಾವು ಬಳಸುವಂತಹ ವಾಟ್ಸ್ಆ್ಯಪ್, ಐಮೆಸೇಜ್ ಅಥವಾ ಎಸ್‌ಎಂಎಸ್‌ಗಳಂತಹ ಆ್ಯಪ್‌ಗಳ ಮೂಲಕವೇ ಒಳಗೆ ನುಸುಳುತ್ತವೆ. ಈ ಸಾಫ್ಟ್ವೇರ್ ನಮ್ಮ ಉಪಕರಣದ ಮೇಲೆ ಹಿಡಿತ ಸಾಧಿಸಲು ‘ರೂಟ್ ಪ್ರಿವಿಲೇಜಸ್’ (ಮೂಲ ಸವಲತ್ತುಗಳು) ಅನ್ನು ಹೊಂದಲು ಪ್ರಯತ್ನಿಸುತ್ತವೆ.

ನಂತರ ಏನಾಗುತ್ತದೆ?

ಈ ಸಾಫ್ಟ್ವೇರ್, ರಿಮೋಟ್ ಸರ್ವರ್ (ದೂರದ ಸ್ಥಳದಿಂದ ನಿರ್ವಹಿಸಲ್ಪಡುವ) ನಿಂದ ಬರುವಂತಹ ಸೂಚನೆಗಳನ್ನು ಆಧರಿಸಿ ನಮ್ಮ ಉಪಕರಣದ ಕ್ಯಾಮೆರಾ ಹಾಗೂ ಮೈಕ್ರೊಫೋನ್ ಅನ್ನು ಸ್ವಯಂಚಾಲಿತವಾಗಿ ಚಾಲನೆಗೊಳಿಸುತ್ತವೆ. ನಾವು ಮಾಡುವ ಚಾಟ್ ಸಂದೇಶಗಳು, ನಮ್ಮ ಉಪಕರಣದಲ್ಲಿರುವ ಸಂಪರ್ಕ ವಿಳಾಸಗಳು, ದೂರವಾಣಿ ಸಂಖ್ಯೆಗಳು ಎಲ್ಲವನ್ನೂ ಕದಿಯುತ್ತವೆ! ಇಷ್ಟೇ ಅಲ್ಲ, ನಮ್ಮ ಮಾತುಗಳನ್ನೂ ಸಹ ರೆಕಾರ್ಡ್ ಮಾಡಬಲ್ಲದು,

jk

ನಮ್ಮ ಉಪಕರಣದಲ್ಲಿರುವ ಕ್ಯಾಲೆಂಡರ್ ಹಾಗೂ ಎಸ್‌ಎಂಎಸ್, ಇ-ಮೇಲ್‌ಗಳನ್ನೂ ಸಹ ಓದಬಲ್ಲವಂತೆ!! ಈ ಸ್ಪೈವೇರ್ ಸಾಫ್ಟ್ವೇರ್ ಇರುವುದು ನಮ್ಮ ಗಮನಕ್ಕೆ ಬರವುವರೆಗೂ ಅಥವಾ ಅದನ್ನು ನಾಶಪಡಿಸದೇ ಇರುವವರೆಗೂ ಇದು ಕಾರ್ಯನಿರ್ವಹಿಸುತ್ತಲೇ ಇರುತ್ತವೆ! ಹೇಗಿದೆ ತಂತ್ರಾಂಶ! ಇದನ್ನೇ ಬಳಸಿಕೊಂಡು ರಾಜಕಾರಣಿಗಳು, ಪತ್ರಕರ್ತರ ಮಾಹಿತಿಯನ್ನು ಕದ್ದಾಲಿಸಲಾಗುತ್ತಿದೆ ಎನ್ನುವುದೇ ಈಗ ದೊಡ್ಡ ಸುದ್ದಿ ಆಗಿರುವುದು.

 

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

key words: explained-project-pegasus-india-spyware-controversy-karnatka