ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ರಾಮನಗರ ಬಂದ್: ಕನಕಪುರದಲ್ಲಿ ತೀವ್ರಗೊಂಡ ಪ್ರತಿಭಟನೆ….

ರಾಮನಗರ, ಸೆ,5,2019(www.justkannada.in):  ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿಯಿಂದ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಬಂಧನ ವಿರೋಧಿಸಿ ರಾಮನಗರ ಜಿಲ್ಲೆಯಲ್ಲಿ  ಕಾಂಗ್ರೆಸ್  ಬಂದ್‌ ಗೆ ಕರೆ ನೀಡಿದೆ.

ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಕನಕಪುರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇಲ್ಲಿನ ಚೆನ್ನಬಸಪ್ಪ ಸರ್ಕಲ್ ಬಳಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿ ಬಂದ್ ಆಚರಿಸುತ್ತಿದ್ದಾರೆ. ಇನ್ನು ರಾಮನಗರ –ಕನಕಪುರ ಬಸ್ ಸಂಚಾರ ಸ್ಥಗಿತಗೊಂಡಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಮೂವರು ಐಪಿಎಸ್, ಹತ್ತು ಡಿವೈಎಸ್‌ಪಿ, ಮೂವತ್ತು ಇನ್‌ಸ್ಪೆಕ್ಟರ್, 15 ಕೆಎಸ್‌ಆರ್‌ಪಿ, 21 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ತೀವ್ರವಾದರೆ ಭದ್ರತೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಜಿಲ್ಲೆಯ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಳಿಗ್ಗೆ 9 ಗಂಟೆಗೆ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ಆರಂಭವಾಗಲಿದೆ. ಹಾಗೆಯೇ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದಾರೆ.

Key words: dk shivakumar-arrest-Ramanagar –bandh- Protest -congress