ಎಪಿಎಂಸಿ ಸೆಸ್ ಇಳಿಕೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ- ಸಚಿವ ಎಸ್ ಟಿ ಸೋಮಶೇಖರ್…

ಹುಬ್ಬಳ್ಳಿ,ಜೂ,20,2020(www.justkannada.in):  ಎಪಿಎಂಸಿ ಮಾರುಕಟ್ಟೆಯಲ್ಲಿ ಹಾಕಲಾಗುತ್ತಿರುವ ಶೇ. 1.5 ಸೆಸ್ ಅನ್ನು ತೆಗೆಯುವ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಆದರೆ, ಎಪಿಎಂಸಿಗೆ ಬರುವ ಈ ಹಣವನ್ನು ಸಂಬಳ, ಸ್ವಚ್ಛತೆ ಸೇರಿದಂತೆ ಇನ್ನಿತರ ಅವಶ್ಯಕತೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂಬುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ವ್ಯಾಪಾರಸ್ಥರ ಸಂಘದಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಮಾರ್ಕೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿದರು. ಜಗದೀಶ್ ಶೆಟ್ಟರ್ ಅವರು ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಇರುವವರಾಗಿದ್ದಾರೆ. ಅವರು ಪ್ರಾಮಾಣಿಕರಿಗೆ ಬೆಲೆ ಕೊಡುವವರು. ಜೊತೆಗೆ ತಮ್ಮ ಮೇಲೆ ಬಹಳ ವಿಶ್ವಾಸವನ್ನಿಟ್ಟವರಾಗಿದ್ದಾರೆ ಎಂದು ಹೇಳಿದರು.

ಮೈಸೂರಿನ ಜ್ಯೂಬ್ಲಿಯೆಂಟ್ ಫ್ಯಾಕ್ಟರಿಯಲ್ಲಿ 83 ಜನಕ್ಕೆ ಪಾಸಿಟಿವ್ ಬಂದಾಗ ದೊಡ್ಡ ತಲೆನೋವಾಗಿತ್ತು. ಆದರೆ, ಆ ಸಮಯದಲ್ಲಿ ಫ್ಯಾಕ್ಟರಿಯನ್ನು ಮುಚ್ಚಬೇಕೋ ಬೇಡವೋ ಎಂಬ ಗೊಂದಲವೂ ಸೃಷ್ಟಿಯಾಗಿತ್ತು. ಆಗ ನನ್ನ ಮನವಿ ಮೇರೆಗೆ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ಮೈಸೂರಿಗೆ ಬಂದು ಸಮಸ್ಯೆ ಬಗೆಹರಿಸಿದರಲ್ಲದೆ, ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸುತ್ತಮುತ್ತ ಇರುವ 10 ಹಳ್ಳಿಯನ್ನು ದತ್ತು ತೆಗೆದುಕೊಳ್ಳುವ ಹಾಗೂ 50 ಸಾವಿರ ಆಹಾರ ಕಿಟ್ ಗಳನ್ನು ವಿತರಣೆ ಮಾಡುವಲ್ಲಿ ಸಹ ಜಗದೀಶ್ ಶೆಟ್ಟರ್ ಅವರ ಪಾತ್ರ ಬಹಳ ದೊಡ್ಡದಿದೆ. ಈಗ ಪಾಸಿಟಿವ್ ಬಂದವರೂ ಗುಣಮುಖರಾಗಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.discussion-apmc-cess-decision-minister-s-t-somashekhar

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಮಾತನಾಡಿ, ಸಹಕಾರ ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ದಕ್ಷ ಮಂತ್ರಿ ಎಂದು ಹೇಳಲು ನಾನು ಬಯಸುತ್ತೇನೆ ಎಂದರು.

ಎಪಿಎಂಸಿಯಲ್ಲಿ ಟ್ಯಾಕ್ಸ್ ಸಮಸ್ಯೆ ಬಹಳ ಕಷ್ಟವಾಗುತ್ತಿದೆ. ಇದು ಬಹಳ ವರ್ಷಗಳ ಸಮಸ್ಯೆಯಾಗಿದೆ. ಕೆಲವು ಹಳೇ ಬಾಕಿಯನ್ನು ಮನ್ನಾ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಹಕಾರ ಸಚಿವರಾದ ಸೋಮಶೇಖರ್ ಅವರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಿದ್ದೇವೆ. ಬಳಿಕ ಸಂಪುಟ ಸಭೆಯ ಗಮನಕ್ಕೆ ತಂದು ರಾಜ್ಯಾದ್ಯಂತ ಇರುವ ಎಪಿಎಂಸಿಯ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಕೆಲಸವನ್ನು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಕೆಎಲ್ಇ ನಿರ್ದೇಶಕರು, ವರ್ತಕರ ಸಂಘದ ಹಿರಿಯ ಅನುಭವಿಯಾಗಿರುವ ಪರಣ್ಣ ಮುನವಳ್ಳಿ, ವರ್ತಕರ ಸಂಘದ ಅಧ್ಯಕ್ಷರಾದ ಬಸವರಾಜ ಪಂ. ಯಕಲಾಸಪೂರ ಇತರರು ಇದ್ದರು.

Key words: Discussion – APMC- Cess –Decision- Minister- S T Somashekhar.