ಈ ವರ್ಷದಿಂದಲೇ ಡಿಪ್ಲೊಮೋ ಪಠ್ಯ ಪರಿಷ್ಕರಣೆ: ಡಿಸಿಎಂ ಅಶ್ವಥ್ ನಾರಾಯಣ್ ಘೋಷಣೆ….

Promotion

ಚಿಕ್ಕಬಳ್ಳಾಪುರ,ಸೆಪ್ಟಂಬರ್,16,2020(www.justkannada.in):  ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಡಿಪ್ಲೊಮೋ ಕೋರ್ಸುಗಳ ಪಠ್ಯವನ್ನು ಅಮೂಲಾಗ್ರವಾಗಿ ಪರಿಷ್ಕರಣೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಪ್ರಕಟಿಸಿದರು.diploma-text-revision-dcm-ashwath-narayan-announces

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟೂರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಮಂಗಳವಾರ ವಿಶ್ವೇಶ್ವರಯ್ಯ ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ಸೂಪರ್ ಟ್ರೇನರ್ಸ್ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ, ಅದರಲ್ಲೂ ಏನನ್ನು ಕಲಿಯಬೇಕೋ ನಿರ್ದಿಷ್ಟವಾಗಿ ಆ ಪಠ್ಯವನ್ನೇ ಕಲಿಯುವ ನಿಟ್ಟಿನಲ್ಲಿ ಡಿಪ್ಲೊಮೋ ಪಠ್ಯ ಬದಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕೌಶಲ್ಯಪೂರ್ಣ ಶಿಕ್ಷಣ ನೀಡುವುದು ಮತ್ತು ಅದು ವಿದ್ಯಾರ್ಥಿಯ ಭವಿಷ್ಯದ ಜತೆಗೆ ದೇಶ ಕಟ್ಟುವುದಕ್ಕೂ ಸಹಕಾರಿ ಆಗಬೇಕು. ವಿನಾಕಾರಣ ಅಗತ್ಯವಿಲ್ಲದ ವಿಷಯಗಳನ್ನು ಓದಿಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವೇ ಇಲ್ಲ. ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿರಬೇಕು. ಈ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ. ಅದನ್ನು ಕೂಡ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿ ಮಾಡಲು ಸರಕಾರ ಮುಂದಾಗಿದೆ. ಶಿಕ್ಷಣ ಮತ್ತು ಕೌಶಲ್ಯತೆ ಜತೆ ಜತೆಯಾಗಿಯೇ ನಡೆಯಬೇಕು. ಅಭಿವೃದ್ಧಿಗೆ ಇದೇ ಬುನಾದಿ ಎಂದು ಡಿಸಿಎಂ ಹೇಳಿದರು.

ಜಾಗತಿಕ ಮಟ್ಟದ ಸುಧಾರಣೆ:

ಅತ್ಯುತ್ತಮ ಕೌಶಲ್ಯತೆ ಇದ್ದರೆ ಯಾವುದೇ ಕ್ಷೇತ್ರದಲ್ಲಿಯೂ ವೇಗವಾಗಿ ಮುಂದುವರಿಯಬಹುದು ಎಂದು ಬಲವಾಗಿ ಪ್ರತಿಪಾದಿಸಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾಗತಿಕ ಗುಣಮಟ್ಟದ ಸುಧಾರಣೆಗಳನ್ನು ಕೈಗೊಳ್ಳಲಿದೆ. ಉತ್ತಮ ರೀತಿ ಕೌಶಲ್ಯವಿದ್ದರೆ ಉತ್ತಮ ಸಾಧನೆ ಮಾಡಬಹುದು. ಎಂತಹ ದುಃಸ್ಥಿತಿಯಲ್ಲಿ ಇದ್ದರೂ ಉನ್ನತ ಮಟ್ಟ ತಲುಪಬಹುದು. ಇದಕ್ಕೆ ಜಪಾನ್ ಮತ್ತು ಜರ್ಮನಿ ದೇಶಗಳೇ ಸಾಕ್ಷಿ. ಎರಡನೇ ಜಾಗತಿಕ ಯುದ್ಧದಲ್ಲಿ ಬಹುತೇಕ ನಿರ್ನಾಮವಾಗಿದ್ದ ಇವೆರಡೂ ದೇಶಗಳು ಕೆಲವೇ ದಶಕಗಳಲ್ಲಿ ಮುಂದುವರಿದ ದೇಶಗಳಾದವು. ಇದಕ್ಕೆ ಕಾರಣ ಆ ದೇಶದ ಜನರಲ್ಲಿದ್ದ ಕೌಶಲ್ಯತೆ ಎಂದು ನುಡಿದರು.diploma-text-revision-dcm-ashwath-narayan-announces

ಕೌಶಲ್ಯತೆ ಅಥವಾ ಕಸುಬುದಾರಿಕೆಯೇ ಗೊತ್ತಿಲ್ಲದಿದ್ದರೆ ಅಭಿವೃದ್ಧಿ ಎಲ್ಲಿಂದ ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ಯುವಜನರಲ್ಲಿ ಆ ರೀತಿಯ ಕೌಶಲ್ಯತೆ ಬರಲೇಬೇಕು. ಈ ನಿಟ್ಟಿನಲ್ಲಿ ಸರಕಾರ ಮಹತ್ತ್ವದ ಹೆಜ್ಜೆಗಳನ್ನು ಇಡುತ್ತಿದ್ದು, ಕೌಶಲ್ಯ ವೃದ್ಧಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಖ್ಯವಾಗಿ ಜಪಾನ್ ಮತ್ತು ಜರ್ಮನಿ ದೇಶಗಳಲ್ಲಿ ಇರುವಂತೆ ಗುಣಮಟ್ಟದ ಕೌಶಲ್ಯ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಜಗತ್ತೇ ಊರು:

ನಮ್ಮಲ್ಲಿ ಒಂದು ಮಾತಿದೆ. ಕೆಲಸ ಬಲ್ಲವನಿಗೆ ಜಗತ್ತೇ ಊರು. ಕಸುಬು ಗೊತ್ತಿಲ್ಲದವನಿಗೆ ಹುಟ್ಟಿದೂರಷ್ಟೇ ಊರು. ಪ್ರತಿಭೆಗೆ ಗಡಿ ಎಂಬುದೇ ಇಲ್ಲ. ಹೀಗಾಗಿ ಯುವಜನರು ತಮ್ಮ ಹಾಗೂ ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೌಶಲ್ಯತೆಯನ್ನು ಕರಾರುವಕ್ಕಾಗಿ ಕಲಿಯಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ಹೊರಬರುತ್ತದೆ, ಅವರೂ ಬೆಳೆಯುತ್ತಾರೆ ಎಂದು ಉಪ ಮುಖ್ಯಮಂತ್ರಿ  ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

ಕೌಶಲ್ಯತೆ ಸಾಧಿಸುವುದು ಎಂದರೆ ಕಚೇರಿಯಲ್ಲಿ ಕೂತು ಕೆಲಸ ಮಾಡುವ ಅಥವಾ ಕಂಪ್ಯೂಟರಿನಲ್ಲಿ ಮೂಲಕ ಉದ್ಯೋಗ ಮಾಡುವುದಲ್ಲ. ಬೇಸಾಯ ಮಾಡುವುದರಲ್ಲಿಯೂ ಕೌಶಲ್ಯತೆ ಸಾಧಿಸಬಹುದು. ಗಾರೆ ಕೆಲಸ, ಹೈನುಗಾರಿಕೆ, ಪುಷ್ಪೋದ್ಯಮ ಸೇರಿದಂತೆ ಯಾವುದೇ ಕಸುಬಿನಲ್ಲಿ ಬೇಕಾದರೂ ಕೌಶಲ್ಯತೆಯನ್ನು ಸಾಧಿಸಿ ಉತ್ತಮ ಬೆಳವಣಿಗೆ ಸಾಧಿಸಬಹುದು. ಅದು ಯಾವುದೇ ವೃತ್ತಿ ಆಗಬಹುದು. ಅದಕ್ಕೆ ಕೌಶಲ್ಯತೆ ಇಲ್ಲದಿದ್ದರೆ ನಿರುಪಯೋಗ. ಹಾಗೆ ನೋಡಿದರೆ ಚಿಕ್ಕಬಳ್ಳಾಪುರ ಬೇಸಾಯದ ತೊಟ್ಟಿಲು. ಹೈನುಗಾರಿಕೆ, ಪುಷ್ಪೋದ್ಯಮ, ರೇಷ್ಮೆ ಇತ್ಯಾದಿಗಳಲ್ಲಿ ಸಮೃದ್ಧವಾಗಿದೆ. ಇದರ ಜತೆಗೆ ಕೌಶಲ್ಯವೂ ಸೇರಿಕೊಂಡರೆ ಅದ್ಭುತಗಳನ್ನೇ ಸಾಧಿಸಬಹುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ. ಕೆ.ಸುಧಾಕರ್ ಸೇರಿದಂತೆ ಜಿಲ್ಲೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.

Key words: Diploma -Text Revision- DCM- Ashwath Narayan- Announces