ಆಂಗ್ಲಭಾಷಾ ಕಾದಂಬರಿಗಳನ್ನು ಡಿಜಿಟಲೀಕರಣ ಮಾಡುವ ನೆಪದಲ್ಲಿ ಜನರಿಗೆ ಲಕ್ಷಾಂತರ ರೂ. ಪಂಗನಾಮ..

Promotion

ಬೆಂಗಳೂರು, ನವೆಂಬರ್ 14, 2022 (www.justkannada.in): ಬೆಂಗಳೂರಿನಲ್ಲಿ ಜನರು ಹಣ ಗಳಿಸುವುದಕ್ಕಾಗಿ ಯಾವ ಯಾವ ರೀತಿಯಲ್ಲೋ ಅಮಾಯಕರಿಗೆ ಮೋಸ ಮಾಡುತ್ತಿರುತ್ತಾರೆ. ಇಂತಹ ಅನೇಕ ಪ್ರಕರಣಗಳನ್ನು ನಾವು ಬಹುತೇಕ ದಿನ ನಿತ್ಯ ದಿನಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಜನಪ್ರಿಯ ಆಂಗ್ಲ ಭಾಷಾ ಕಾದಂಬರಿಗಳನ್ನು ಡಿಜಿಟಲೀಕರಣಗೊಳಿಸುವ ನೆಪದಲ್ಲಿ ಸುಮಾರು 32 ಜನರಿಂದ ಲಕ್ಷಾಂತರ ರೂಪಾಯಿ ಹಣವನ್ನು ತೆಗೆದುಕೊಂಡು ಪಂಗನಾಮ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹಳೆಯ ಜನಪ್ರಿಯ ಆಂಗ್ಲ ಭಾಷಾ ಕಾದಂಬರಿಗಳನ್ನು ಡಿಜಿಟಲೀಕರಣಗೊಳಿಸಿ ಆ ಮೂಲಕ ಹಣ ಗಳಿಸಬಹುದೆಂದು ನಂಬಿಸಿ ಈ ೩೨ ಜನರಿಂದಲೂ, ಪ್ರತಿಯೊಬ್ಬರಿಂದಲೂ ಸುಮಾರು ರೂ.೩.೫೦ ಲಕ್ಷಕ್ಕೂ ಹೆಚ್ಚು ಹಣ ತೆಗೆದುಕೊಂಡು ಮೋಸ ಮಾಡಿರುವ ಪ್ರಕರಣ ತಿಳಿದು ಬಂದಿದೆ.

ಈ ಹಗರಣದಲ್ಲಿ ನೂರಾರು ಜನರು ಮೋಸ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮೋಸ ಹೋಗಿರುವವರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಸ್ವಲ್ಪ ಸಮಯ ಬೇಕಾಗಬಹುದು ಎನ್ನುವುದು ಪೋಲಿಸರ ಅಭಿಪ್ರಾಯವಾಗಿದೆ.

“ನನಗೆ ಈಗ ಏನು ಮಾಡಬೇಕೆಂದೇ ತೋಚುತ್ತಿಲ್ಲ. ನನಗೆ ‘ಟ್ರುವಿಸರಿ ಕೋಡ್ ಕೋರ್ ಪ್ರೈ. ಲಿ.’ ಎಂಬ ಕಂಪನಿ ಇರುವುದು ಶ್ರೀ ರವಿ ಎನ್ನುವವರ ಮೂಲಕ ತಿಳಿಯಿತು. ಕೋವಿಡ್ ಸಾಂಕ್ರಾಮಿಕದಿಂದಾಗಿ ನಾನು ಉದ್ಯೋಗ ಕಳೆದುಕೊಂಡು ಮತ್ತೊಂದು ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದೆ. ನಾನು ಮೊದಲು ಕೆಲಸ ಮಾಡುತ್ತಿದ್ದಂತಹ ಕಂಪನಿಯಿಂದ ಲಾಕ್‌ಡೌನ್‌ ಗೂ ಮುಂಚೆ ರೂ.೩.೫೦ ಲಕ್ಷ ಪರಿಹಾರ ದೊರೆಯಿತು. ಆ ರೂ.೩.೫೦ ಲಕ್ಷವನ್ನು ಮಾರ್ಚ್ 19, 2022ರಂದು ‘ಟ್ರುವಿಸರಿ ಕೋಡ್ ಕೋರ್ ಪ್ರೈ. ಲಿ.’ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಈ ಕಂಪನಿಯು ಜನಪ್ರಿಯ ಆಂಗ್ಲ ಕಾದಂಬರಿಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ವೆಬ್‌ ಸೈಟ್‌ ನಲ್ಲಿ ಅಳವಡಿಸಿ, ಅದರಿಂದ ಹಣ ಗಳಿಸುವುದಾಗಿ ತಿಳಿಸಿತ್ತು. ಆದರೆ ನಾನು ಹಣ ಹೂಡಿಕೆ ಮಾಡಿದ ಮೇಲೆ ನನಗೆ ಒಂದು ರೂಪಾಯಿಯೂ ಸಹ ಹಿಂದಿರುಗಿ ಬರಲಿಲ್ಲ,” ಎನ್ನುತ್ತಾರೆ ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಬಡಾವಣೆಯ ನಿವಾಸಿ ಹೇಮಾವತಿ ವಿ. ಭಟ್.

ಈ ಟ್ರುವಿಸರಿ ಕೋಡ್ ಕೋರ್ ಕಂಪನಿ ಪ್ರೈ. ಲಿ.ನಿಂದ ಕಾನೂನು ಸಲಹಾಗಾರರೂ ಸಹ ಮೋಸ ಹೋಗಿರುವುದು ಕಾಳಜಿ ಉಂಟು ಮಾಡುವ ವಿಷಯವಾಗಿದೆ. ಉದಾಹರಣೆಗೆ, ದಿನೇಶ್ ಕುಮಾರ್ ಬಿ. ಎಂಬ ಹೆಸರಿನ ಓರ್ವ ಕಾನೂನು ಸಲಹಾಗಾರರು ಬೆಂಗಳೂರಿನ ಗಿರಿನಗರ ನಿವಾಸಿಯಾಗಿದ್ದಾರೆ. ಇವರಿಗೆ ಟ್ರುವಿಸರಿ ಕೋಡ್ ಕೋರ್ ಪ್ರೈ. ಲಿ.ನ ಸಿಇಒ ಎಂದು ಹೇಳಿಕೊಂಡಿದ್ದ ಸಂಜಯ್ ಸಿನ್ಹಾ ಎಂಬ ಹೆಸರಿನವರ ಪರಿಚಯವಾಯಿತು. ಈ ಸಂಜಯ್ ಸಿನ್ಹಾ ಈ ಹಿಂದೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ‘ಶೆಫ್’ ಆಗಿ ಕೆಲಸ ನಿರ್ವಹಿಸುತ್ತಿದ್ದರಂತೆ. ಆ ಉದ್ಯೋಗ ಕಳೆದುಕೊಂಡ ನಂತರ ಒಂದು ‘ಚಾಟ್’ ಸೆಂಟರ್ ಅನ್ನು ತೆರೆದಿದ್ದನಂತೆ.

“ನನಗೆ ಈ ವ್ಯಕ್ತಿ ಹಲವು ವರ್ಷಗಳಿಂದ ಪರಿಚಯವಿದ್ದ ಕಾರಣ ಆತನ ಮೇಲೆ ನನಗೆ ವಿಶ್ವಾಸ ಮೂಡಿತ್ತು. ಆತ ನನಗೆ ಒಂದು ಹೊರಗುತ್ತಿಗೆ ಕೆಲಸವನ್ನು ಕೊಡಿಸುವುದಾಗಿಯೂ, ಅದರಿಂದ ಮಾಸಿಕ ಉತ್ತಮ ಆದಾಯ ಬರುವುದಾಗಿಯೂ ನಂಬಿಸಿದ. ಆ ನಂತರದಲ್ಲಿ ನಾನು, ಅಂದರೆ ಮಾರ್ಚ್ ೨೦೨೨ರಲ್ಲಿ ಆತನ ಕಂಪನಿಯಲ್ಲಿ ರೂ.೩.೫೦ ಲಕ್ಷ ಹಣ ಹೂಡಿಕೆ ಮಾಡಿದೆ. ಜೊತೆಗೆ, ಆಂಗ್ಲ ಭಾಷೆಯ ಕಾದಂಬರಿಗಳನ್ನು ಡಿಜಿಟಲೀಕರಣಗೊಳಿಸಲು ಒಂದು ಸ್ಕ್ಯಾನರ್ ಹಾಗೂ ಒಂದು ಲ್ಯಾಪ್‌ ಟಾಪ್ ಅನ್ನೂ ಸಹ ಖರೀದಿಸಿದೆ. ಆದರೆ ಈವರೆಗೂ ನನಗೆ ಒಂದೇ ಒಂದು ರೂಪಾಯಿಯೂ ಆದಾಯ ಬಂದಿಲ್ಲ. ಸಂಜಯ್ ಸಿನ್ಹಾಗೆ ನನ್ನ ಹಣ ಹಿಂದಿರುಗಿಸುವಂತೆ ಕೇಳಿದೆ. ಆದರೆ ಆತ ಪ್ರತಿಕ್ರಿಯೆ ನೀಡಲಿಲ್ಲ. ನಂತರ ನಾನು ಮೋಸ ಹೋಗಿರುವುದು ನನಗೆ ತಿಳಿಯಿತು. ಅಂದಿನಿಂದ ನನ್ನ ರೀತಿ ಮೋಸ ಹೋಗಿರುವವರನ್ನು ಹುಡುಕಾಡಲು ಆರಂಭಿಸಿದೆ,” ಎನ್ನುತ್ತಾರೆ ಕುಮಾರ್.

ಈ ‘ಟ್ರುವಿಸರಿ ಕೋಡ್ ಕೋರ್ ಪ್ರೈ.ಲಿ.’ ಕಂಪನಿಯು ಮೊದಲಿಗೆ ಸಂಭವನೀಯ ಹೂಡಿಕೆದಾರರು ಹಾಗೂ ನಿರುದ್ಯೋಗಿಗಳನ್ನು ಪತ್ತೆ ಹಚ್ಚಿನ, ಅವರೊಂದಿಗೆ ಸ್ನೇಹ ಬೆಳೆಸುತ್ತದೆ. ಈ ಕಂಪನಿಯ ತಂಡದ ಸದಸ್ಯರು ಇದೇ ರೀತಿ ಬೆಂಗಳೂರಿನ ಹನುಮಂತನಗರದ ಸುರೇಶ್ ಕುಮಾರ್ ಎಂಬುವವರಿಗೆ ರೂ.೪೨.೫೦ ಲಕ್ಷ ಪಂಗನಾಮ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ.

“ಆರಂಭದಲ್ಲಿ ಏನೂ ಸಮಸ್ಯೆ ಇರಲಿಲ್ಲ. ನಾನು ಆರಂಭದಲ್ಲಿ ಟ್ರುವಿಸರಿ ಕೋಡ್ ಕೋರ್  ಪ್ರೈ. ಲಿ.’ ನೊಂದಿಗೆ ಕೆಲಸ ಆರಂಭಿಸಿ ರೂ.೧.೩೦ ಲಕ್ಷ ಗಳಿಸಿದೆ. ನಂತರದಲ್ಲಿ ಅವರು ಸಣ್ಣ ಯೋಜನೆಗಳನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿದರು. ಹೆಚ್ಚಿನ ಆದಾಯ ಗಳಿಸುವ ಸಲುವಾಗಿ ದೊಡ್ಡ ಯೋಜನೆಗಳನ್ನು ಪಡೆಯಲು ರೂ.೪೨.೫೦ ಲಕ್ಷ  ಹೂಡಿಕೆ ಮಾಡುವಂತೆ ತಿಳಿಸಿದರು. ನಾನು ಈ ಕೆಲಸಕ್ಕಾಗಿ ಆರು ಜನರನ್ನು ನೇಮಕ ಮಾಡಿಕೊಂಡಿದ್ದಷ್ಟೇ ಅಲ್ಲದೆ, ಮೂರು ಲ್ಯಾಪ್‌ ಟಾಪ್‌ಗಳು ಹಾಗೂ ನಾಲ್ಕು ಸ್ಕ್ಯಾನರ್  ಗಳನ್ನೂ ಖರೀದಿಸಿದೆ. ಆದರೆ ಈಗ ನನಗೆ ನನ್ನ ಹಣ ವಾಪಸ್ ಬರುತ್ತದೆ ಎಂದು ನಂಬಿಕೆಯೇ ಹೊರಟು ಹೋಯಿತು,” ಎಂದು ಸುರೇಶ್ ಕುಮಾರ್ ಅವರು ತಮ್ಮ ಅಳಲನ್ನು ತೋಡಿಕೊಂಡರು.

ಕಬ್ಬನ್ ಪಾರ್ಕ್ ಪೋಲಿಸರು ಈ ಸಂಬಂಧ ಅಕ್ಟೋಬರ್ ೨೦ರಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ ೪೨೦ರಡಿ, ಸಂಜಯ್ ಸಿನ್ಹಾ ಒಳಗೊಂಡಂತೆ ೧೦ ಜನರ ವಿರುದ್ಧ. ಎಫ್‌ ಐಆರ್ ದಾಖಲಿಸಿಕೊಂಡು ತಪಾಸಣೆ ಮುಂದುವರೆಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words:  digitizing -English language- novels-fraud