ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹ: ಭಾರತ್ ಜೋಡೋ ಯಾತ್ರೆ ಹತ್ತಿಕ್ಕಲು ಯತ್ನ- ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ.

ಮಂಡ್ಯ,ಅಕ್ಟೋಬರ್,6,2022(www.justkannada.in): ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೊಡೋ ಯಾತ್ರೆ ರಾಜ್ಯದ ಮಂಡ್ಯದಲ್ಲಿ ಸಾಗುತ್ತಿದ್ದು  ಯಾತ್ರೆಯನ್ನ ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದರು.

ಕಾಂಗ್ರೆಸ್ ನಾಯಕರಾದ  ರಣದೀಪ್ ಸಿಂಗ್ ಸುರ್ಜೇವಾಲ, ಸಿದ‍್ಧರಾಮಯ್ಯ, ಡಿ.ಕೆ ಶಿವಕುಮಾರ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಮಂಡ್ಯದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆಯೇ ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ,  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಹಾಗೂ ಸಾವಿರಾರು ಜನರ ಜತೆ ಸೇರಿ ಹೆಗಲಿಗೆ ಹೆಗಲು ಕೊಟ್ಟು ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಸೋನಿಯಾ ಗಾಂಧಿ ಅವರ ಬಲ ಎಂದರೆ ಅವರ ವಿಶ್ವಾಸ, ತ್ಯಾಗ, ಭಾವನೆ, ಕಾಂಗ್ರೆಸ್ ಹಾಗೂ ದೇಶಕ್ಕಾಗಿ ಅವರಲ್ಲಿರುವ ಸಂಕಲ್ಪ.  ಇಂದು ಅವರು 10 ಕಿ.ಮೀ ಗೂ ಹೆಚ್ಚು ದೂರ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಸಾವಿರರಾರು ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತುಂಬಿದ್ದಾರೆ ಎಂದರು.

ಈ ಯಾತ್ರೆಯಿಂದ ಬಿಜೆಪಿ ಸರ್ಕಾರ ವಿಚಲಿತಗೊಂಡಿದ್ದು, ಇಂದಿನ ಪಾದಯಾತ್ರೆ ಬಳಿಕ ಮತ್ತಷ್ಟು ವಿಚಲಿತವಾಗಲಿದೆ. ಪರಿಣಾಮ ಈ ಯಾತ್ರೆ ಹತ್ತಿಕ್ಕಲು ರಾಹುಲ್ ಗಾಂಧಿ ಅವರ ಸಿಬ್ಬಂದಿ ಪತ್ರಕರ್ತ ಮಿತ್ರರ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲವೊಮ್ಮೆ ಪೋಸ್ಟರ್ ಕಿತ್ತುಹಾಕಿದರೆ, ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಾರೆ. ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡುತ್ತಾರೆ. ಆದರೆ ಅವರು ಒಂದು ವಿಚಾರ ಅರಿಯಬೇಕು. ಅವರ ಈ ಕುತಂತ್ರದಿಂದ ರಾಹುಲ್ ಗಾಂಧಿ ಅವರನ್ನಾಗಲಿ, ಸಮಾಜದ ಎಲ್ಲ ವರ್ಗದ ಜನರನ್ನಾಗಲಿ, ಈ ಯಾತ್ರೆಯನ್ನಾಗಲಿ ತಡೆಯಲು ಸಾಧ್ಯವಿಲ್ಲ. ಸುಳ್ಳು ಪ್ರಕರಣಗಳ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸಲು ಆಗುವುದಿಲ್ಲ ಎಂದು ಬಿಜೆಪಿಗೆ ಕುಟುಕಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚಿಸಿತ್ತು. ಪರಿಶಿಷ್ಟ ವರ್ಗದವರಿಗೆ ಪೂರ್ಣ ಪ್ರಮಾಣದ ರಕ್ಷಣೆ ಸಿಗುತ್ತಿಲ್ಲ ಎಂದು ಈ ಸಮಿತಿ ತನ್ನ ವರದಿ ಸಲ್ಲಿಸಿದ್ದು, ಅದರಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ.3ರಿಂದ ಶೇ.7ರಷ್ಟು ಏರಿಕೆ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಈ ಮೀಸಲಾತಿ ಹೆಚ್ಚಳ ವಿಚಾರವಾಗಿ ಹಲವು ತಿಂಗಳುಗಳಿಂದ ಈ ಸಮುದಾಯದ ಸ್ವಾಮೀಜಿಗಳು ಧರಣಿ ಮಾಡುತ್ತಿದ್ದರೂ ಬೊಮ್ಮಾಯಿ ಅವರ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಈ ವಿಚಾರವಾಗಿ ಸದನದಲ್ಲಿ ನಮ್ಮ ನಾಯಕರು ಪ್ರಸ್ತಾಪಿಸಿದ್ದಾರೆ ಅದಕ್ಕೆ ಉತ್ತರ ನೀಡುವುದಿಲ್ಲ. ಕಾರಣ, ಬಿಜೆಪಿ ಪರಿಶಿಷ್ಟ ವರ್ಗದವರ ವಿರೋಧಿಯಾಗಿದೆ. ಮಾನ್ಯ ಬೊಮ್ಮಾಯಿ ಅವರು ಈ ವಿಚಾರವಾಗಿ ಮತ್ತೆ ಸಮಿತಿ ರಚಿಸುತ್ತೇವೆ ಎಂಬ ನಾಟಕವನ್ನು ನಿಲ್ಲಿಸಿ. ಕಳೆದ ಎರಡೂವರೆ ವರ್ಷಗಳಿಂದ ಈ ಸಮಿತಿಯ ವರದಿ ನಿಮ್ಮ ಮುಂದೆಯೇ ಇದೆ. ಆದರೂ ಏನೂ ಮಾಡದೆ, ಈಗ ಚುನಾವಣೆ ಹತ್ತಿರ ಬಂದಿದೆ ಎಂಬ ಭಯಕ್ಕೆ ಮತ್ತೆ ಸಮಿತಿ ರಚನೆ ಎಂಬ ನೆಪ ಹೇಳುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದರು.

ನಾಗಮೋಹನ್ ದಾಸ್ ಅವರ ವರದಿ ಶಿಫಾರಸ್ಸನ್ನು ಕೂಡಲೇ ವಿಧಾನಮಂಡಲದಲ್ಲಿ ಮಂಡಿಸಿ, ಅನುಮೋದಿಸಿ 15 ದಿನಗಳ ಒಳಗಾಗಿ ಕೇಂದ್ರದ ಮೋದಿ ಸರ್ಕಾರದಿಂದ ಅನುಮೋದನೆ ಪಡೆಯಿರಿ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ. ಇಲ್ಲದಿದ್ದರೆ ಅವರು ಪರಿಶಿಷ್ಟರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ರಾಹುಲ್ ಗಾಂಧಿ ಅವರು ಇಂದು ರೈತ ಸಮುದಾಯದ ಜನರ ಜತೆ ಚರ್ಚೆ ನಡೆಸಿದ್ದಾರೆ. ಮಂಡ್ಯ ಕೃಷಿ ಆಧಾರಿತ ಜಿಲ್ಲೆಯಾಗಿದ್ದರೂ ಇಲ್ಲಿನ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.

 

ನಾಗಮೋಹನ್ ದಾಸ್ ಅವರ ವರದಿ ಜಾರಿ ಆಗಬೇಕು -ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದು., ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಗೆ ಬಂದು ಭಾಗವಹಿಸಿದ್ದಾರೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಬಂದು ಸಣ್ಣ ಗ್ರಾಮದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಮ್ಮ ಪರವಾಗಿ ಪ್ರಾರ್ಥಿಸಿದ್ದಾರೆ. ಜತೆಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಎಲ್ಲ ವರ್ಗದ ಜನರ ಜತೆ ಹೆಜ್ಜೆ ಹಾಕಿ ನಮಗೆ ಶಕ್ತಿ ತುಂಬಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ರಾಜ್ಯದ ಜನತೆ ಪರವಾಗಿ ಧನ್ಯವಾದ ಸಲ್ಲಿಸಿ ಅಭಿನಂದನೆ ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ಆ ಹೆಣ್ಮುಮಗಳು ಪಕ್ಷದ ಪರವಾಗಿ ನಿಂತು ಶಕ್ತಿ ತುಂಬಿದ್ದರು ಎಂದು ಬಣ್ಣಿಸಿದರು.

ನಾಗಮೋಹನ್ ದಾಸ್ ಅವರ ವರದಿ ಜಾರಿ ಆಗಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇದು ಭಾರತ ಜೋಡೋ ಯಾತ್ರೆಯ ಪ್ರಮುಖ ವಿಚಾರಗಳಲ್ಲಿ ಒಂದಾದ ಸಾಮಾಜಿಕ ನ್ಯಾಯದ ಭಾಗವಾಗಿದೆ. ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬಲು ರಾಹುಲ್ ಗಾಂಧಿ ಅವರು ಎಲ್ಲ ವರ್ಗದ ಜನರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ. ಎಲ್ಲರೂ ಕೂತು ಚರ್ಚಿಸಿ ಪಕ್ಷದ ನಿಲುವು ಪ್ರಕಟಿಸಿದ್ದು, ಸರ್ಕಾರ ಸಂಸತ್ ಅಧಿವೇಶನಕ್ಕೆ ಕಾಯದೆ, ಒಂದು ತಿಂಗಳಲ್ಲಿ ರಾಜ್ಯದಲ್ಲಿ ಜಾರಿ ತಂದು ನಂತರ ಕೇಂದ್ರ ಮಟ್ಟದಲ್ಲಿ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿಗೆ ತರಬಹುದು. ಈಗಾಗಲೇ ಹಲವು ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸಿದ್ದು, ರಾಜ್ಯದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ವಿಚಾರವನ್ನು ಜಾರಿಗೆ ತರಬೇಕು ಎಂದು ಪಕ್ಷದ ಪರವಾಗಿ ಒತ್ತಾಯಿಸುತ್ತೇನೆ ಎಂದರು.

ಇನ್ನು ಇಡಿ ವಿಚಾರಣೆಗೆ ಸಂಬಂದಿಸಿದಂತೆ ಅಧಿಕಾರಿಗಳು ನಮ್ಮ ಮೇಲಿದ್ದ ಪ್ರಕರಣಗಳ ಜತೆಗೆ ಬೇರೆ ಪ್ರಕರಣಗಳ ವಿಚಾರವಾಗಿಯೂ ಸಮನ್ಸ್ ನೀಡಿದ್ದು, ಈ ಯಾತ್ರೆ ಮುಗಿದ ನಂತರ ವಿಚಾರಣೆಗೆ ಹಾಜರಾಗುವುದಾಗಿ ನಾವು ಕಾಲಾವಕಾಶ ಕೋರಿದ್ದೆವು. ಆದರೆ ಇಂದು ಮತ್ತೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಇಡಿ ಕಚೇರಿಗೆ ಬಂದು ಹೇಳಿಕೆ ನೀಡಬೇಕು ಎಂದು ತಿಳಿಸಿದ್ದಾರೆ. ನಾನು ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದು, ನಮ್ಮ ನಾಯಕರು ವಿಚಾರಣೆಗೆ ಹಾಜರಾಗುವಂತೆ ಸಲಹೆ ನೀಡಿದ್ದಾರೆ. ನಾವು ಕಾನೂನು ರೂಪಿಸುವವರಾಗಿದ್ದು, ನಾವು ಕಾನೂನಿಗೆ ಗೌರವ ನೀಡಬೇಕಿದೆ. ಈ ಯಾತ್ರೆಯನ್ನು ಜನರು ನಡೆಸುತ್ತಾರೆ ಎಂದು ಪಕ್ಷ ಆದೇಶ ನೀಡಿದ್ದು, ನಾನು ಹಾಗೂ ನನ್ನ ಸಹೋದರ ಇಂದು ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತೇವೆ ಎಂದರು.

ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಸ್ಥರು ರಾಹುಲ್ ಗಾಂಧಿ ಅವರ ಜತೆ ಚರ್ಚೆ ಮಾಡುವಾಗ ಹಳ್ಳಿಗಳಲ್ಲಿ ಸಾಲಭಾಧೆ, ಬಡ್ಡಿ, ಚಕ್ರಬಡ್ಡಿ ಹೊರೆ ವಿಚಾರವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಹಾಲು ಉತ್ಪಾದಕರ ವಿಚಾರದಲ್ಲಿ ಮೇವಿನ ಬೆಲೆ ಹೆಚ್ಚಾಗುತ್ತಿದ್ದು, ಸರ್ಕಾರದ ಹಾಲು ಖರೀದಿ ಬೆಲೆ ಹೆಚ್ಚಾಗಿಲ್ಲ ಎಂದು ರೈತರು ನೋವು ತೋಡಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಅನುಗುಣವಾಗಿ ಅವರಿಗೆ ಮೀಸಲಾತಿ ನೀಡಬೇಕು ಎಂದು ಬಹಳ ವರ್ಷಗಳಿಂದ ಒತ್ತಾಯ ಇದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಸ್ ಸಿ ಮತ್ತು ಎಸ್ ಟಿಗಳಿಗೆ ಮೀಸಲಾತಿ ಎಸ್ ಸಿಗಳಿಗೆ ಶೇ.15 ಹಾಗೂ ಎಸ್.ಟಿ ಗಳಿಗೆ ಶೇ.7.5 ರಷ್ಟು ಮೀಸಲಾತಿ ನೀಡಲಾಗಿದೆ. ಎರಡೂ ಸೇರಿಸಿದರೆ ಶೇ.22.5ರಷ್ಟು ಇದೆ. ಕರ್ನಾಟಕದಲ್ಲಿ ಎಸ್.ಸಿ ಗಳಿಗೆ ಶೇ.15 ಹಾಗೂ ಎಸ್.ಟಿಗಳಿಗೆ ಶೇ.3ರಷ್ಟು ಮೀಸಲಾತಿ ಇದ್ದು, ಒಟ್ಟು ಶೇ.18ರಷ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೀಸಲಾತಿ ನಡುವೆ ಶೇ.4.5ರಷ್ಟು ವ್ಯತ್ಯಾಸವಿದೆ.

ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಈ ವರ್ಗಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಿಸಿ ಹೋರಾಟ ಮಾಡುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಎಸ್.ಸಿಗಳು ಶೇ.17.15ರಷ್ಟಿದ್ದು, ಎಸ್.ಟಿಗಳು ಶೇ.6.95 ರಷ್ಟಿಸಿದ್ದಾರೆ. ಎರಡೂ ವರ್ಗ ಸೇರಿಸಿ, ಶೇ.24.10 ರಷ್ಟು ಜನರಿದ್ದಾರೆ. ಆದರೆ ಮೀಸಲಾತಿ ಕೇವಲ ಶೇ.18ರಷ್ಟಿದೆ. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿದೆ.

ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಅವರು 02-07-2020ರಲ್ಲಿ ವರದಿ ನೀಡಿದ್ದು, ಆಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ವರದಿ ಕೊಟ್ಟು ಎರಡು ವರ್ಷ ಮೂರು ತಿಂಗಳಾಗಿದ್ದು, ಇಂದಿನವರೆಗೂ ಈ ವರದಿ ಒಪ್ಪಿ ಅದನ್ನು ಜಾರಿ ಮಾಡಿಲ್ಲ. ಅದಕ್ಕಾಗಿ ಎಸ್ ಟಿ ಜನಾಂಗದ ವಾಲ್ಮೀಕಿ ಮಠದ ಸ್ವಾಮಿಜಿ ಧರಣಿ ಆರಂಭಿಸಿದ್ದಾರೆ. ನಾನು ಹಾಗೂ ಪರಿಶಿಷ್ಟ ಸಮುದಾಯದ ಶಾಸಕರು, ಅಧ್ಯಕ್ಷರು ಚರ್ಚೆ ಮಾಡಿದ್ದು, ಈ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ಈ ಸಮಿತಿಯು ಎಸ್.ಟಿ ಜನಾಂಗದವರಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯನ್ನು ಶೇ.3ರಿಂದ ಶೇ.7ರಷ್ಟು ಹೆಚ್ಚಿಸಬೇಕು. ಎಸ್.ಸಿ ಜನಾಂಗದವರಿಗೆ ಶೇ.15ರಿಂದ ಶೇ.17ರಷ್ಟು ಹೆಚ್ಚಾಗಬೇಕು. ಒಟ್ಟಾರೆ ಮೀಸಲಾತಿಯು ಶೇ.6ರಷ್ಟು ಹೆಚ್ಚಾಗಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ. ನಾಗಮೋಹನ್ ದಾಸ್ ಅವರು ಮೀಸಲಾತಿ ಬಗ್ಗೆ ಅಧ್ಯಯನ ಮಾಡಿದ್ದು, ಸಂವಿಧಾನದ ಮೇಲೆ ನಂಬಿಕೆ ಹೊಂದಿರುವವರಾಗಿದ್ದಾರೆ. ಈ ವರದಿ ಬಂದು 2 ವರ್ಷವಾಗಿದ್ದರೂ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಬಿಜೆಪಿ ದಲಿತ ವಿರೋಧಿಗಳಾಗಿದ್ದು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲದವರಾಗಿದ್ದಾರೆ.

ಸಾಮಾನ್ಯ ವರ್ಗದ ಬಡವರಿಗೆ ಒಂದೇ ದಿನದಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅನುಮತಿ ನೀಡಿ ಶೇ.10ರಷ್ಟು ಮೀಸಲಾತಿ ನೀಡಿದ್ದಾರೆ. ಆದರೆ ಇವರು 2 ವರ್ಷದಿಂದ ವರದಿ ನೀಡಿದ್ದರೂ ಅವರಿಗೆ ಯಾಕೆ ನೀಡಿಲ್ಲ? ಅವರಿಗೆ ಯಾವ ವರದಿ ಮೇಲೆ ನೀಡಿದರು, ಇವರಿಗೆ ಯಾಕೆ ನೀಡುತ್ತಿಲ್ಲ.

ನಮ್ಮ ಸರ್ಕಾರ ಎಸ್ ಸಿಪಿ ಟಿಎಸ್ ಪಿ ಕಾನೂನು ಮಾಡಿ ಜನಸಂಖ್ಯೆ ಅನುಗುಣವಾಗಿ ಬಜೆಟ್ ಅನುದಾನ ನೀಡಿದ್ದೇವೆ. ಕೇಂದ್ರ ಸರ್ಕಾರ ಈ ಕಾನೂನು ಮಾಡಿದೆಯೇ? ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಇದನ್ನು ಮಾಡಿದ್ದಾರಾ? ಬಿಜೆಪಿಯವರಿಗೆ ದಲಿತರ ಬಗ್ಗೆ ಮೊಸಳೆ ಕಣ್ಣೀರು ಇದ್ದು, ಯಾವುದೇ ಕಾಳಜಿ ಇಲ್ಲ. ಹೀಗಾಗಿ ನಾವು ಕಾನೂನು ತಂದಿದ್ದೇವೆ.  ಹೀಗಾಗಿ ಬಹಳ ಬಾರಿ ನಾವು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದರೂ ಸ್ಪಂದಿಸಿಲ್ಲ.

ನಾಗಮೋಹನ್ ದಾಸ್ ಸಮಿತಿ ವರದಿ ಜತೆಗೆ ಹಿಂದುಳಿದ ವರ್ಗಗಳ ಆಯೋಗವೂ ಇದೆ. ಇದರ ಜತೆಗೆ ಸುಭಾಶ್ ಆಡಿ ಅವರ ಸಮಿತಿಯನ್ನು ಕಾನೂನು ಬಾಹೀರವಾಗಿ ಸಂವಿಧಾನ ಬಾಹೀರವಾಗಿ ರಚಿಸಿದರು. ಈಗ ಒತ್ತಡ ಹೆಚ್ಚಾದ ಬಳಿಕ ಮುಖ್ಯಮಂತ್ರಿಗಳು ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದು, ನಮ್ಮ ಪಕ್ಷದ ನಿಲುವಿನ ಬಗ್ಗೆ ಸುರ್ಜೆವಾಲ ಅವರು ಸ್ಪಷ್ಟಪಡಿಸಿದ್ದಾರೆ. ನಾಗಮೋಹನ್ ದಾಸ್ ವರದಿ ಜಾರಿ ಆಗಬೇಕು ಎಂಬುದು ನಮ್ಮ ನಿಲುವು. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದು, ಮೀಸಲಾತಿ ಹೆಚ್ಚಳ ಆಗಬೇಕು ಇದನ್ನು ನಾವು ನಾಳೆ ಸರ್ವಪಕ್ಷ ಸಭೆಯಲ್ಲಿ ಮಾಡುತ್ತೇವೆ ಎಂದರು.

ಡಬಲ್ ಇಂಜಿನ್ ಸರ್ಕಾರದಲ್ಲಿ ರೈತರಿಗೆ ಡಬಲ್ ದೋಖಾ ಆಗಿದೆ -ಪ್ರಿಯಾಂಕ್ ಖರ್ಗೆ:

ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಮಾತನಾಡಿ,  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರೈತರ ಹೆಸರಲ್ಲಿ ಸಾಕಷ್ಟು ಪ್ರಮಾಣ ಮಾಡಿತ್ತು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಮತ ಹಾಕಿಸಿಕೊಂಡು, ಎಂಟು ವರ್ಷದಲ್ಲಿ ಯಾವುದೇ ಆದಾಯ ಹೆಚ್ಚಳ ಮಾಡಿಲ್ಲ. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ರೈತರಿಗೆ ಡಬಲ್ ದೋಖಾ ಆಗಿದೆ ಎಂದು ಬಹಳ ಸ್ಪಷ್ಟವಾಗಿದೆ ಎಂದರು.

ಇಂದು ರಾಹುಲ್ ಗಾಂಧಿ ಅವರು ಮಂಡ್ಯ ರೈತರ ಜತೆ ಮಾತನಾಡಿದ್ದು, ರೈತರು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಇಲ್ಲಿನ ರೈತರು ನಮಗೆ Free Trade ಬದಲಿಗೆ Faire Trade ಬೇಕು ಎಂದು ಆಗ್ರಹಿಸಿದ್ದಾರೆ. ಅಂದರೆ ನಾವು ಬೆಳೆಯುತ್ತಿರುವ ಬೆಳೆಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಕೇಂದ್ರದ ಕರಾಳ ಕಾನೂನಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆಯೇ ಹೊರತು ರೈತರ ಬದುಕು ಸುಧಾರಿಸಿಲ್ಲ ಎಂದರು. ಇಂದು ಈ ಚರ್ಚೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರು ಕೂಡ ಆಗಮಿಸಿ ತಮ್ಮ ನೋವು ಹಂಚಿಕೊಂಡರು. ಮಂಡ್ಯದಲ್ಲಿ 150ಕ್ಕೂ ಹೆಚ್ಚು ರೈತರು ಕಳೆದ ನಾಲ್ಕು ವರ್ಷಗಳಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಬಹುತೇಕರಿಗೆ ಪರಿಹಾರವೂ ಸಿಕ್ಕಿಲ್ಲ.

ಇನ್ನು ಬೆಂಬಲ ಬೆಲೆಯಲ್ಲಿ ಕಾನೂನು ಪ್ರಕಾರದ ವ್ಯವಸ್ಥೆ ತರಬೇಕು. ಇಲ್ಲದಿದ್ದರೆ ರೈತರಿಗೆ ಬಹಳ ಅನ್ಯಾಯವಾಗಲಿದೆ ಎಂದಿದ್ದಾರೆ. ಇನ್ನು ನೀರಾವರಿ ಕಾಲುವೆಗಾಗಿ ಆಗಿರುವ ಭೂ ಸ್ವಾದೀನ ಪ್ರಕರಣದಲ್ಲಿ ರೈತರಿಗೆ ಹಣ ಪಾವತಿ ಆಗಿಲ್ಲ. ರೈತ ಮಹಿಳೆಯೊಬ್ಬರು, ಕೃಷಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಬೇಕು. ಮಹಿಳಾ ಕೃಷಿ ಕಾರ್ಮಿಕರನ್ನು ಕೃಷಿ ಕಾರ್ಮಿಕರೆಂದು ಪರಿಗಣಿಸುತ್ತಿಲ್ಲ. ಹೈನುಗಾರಿಕೆಯಲ್ಲಿ ಹಸು ಮೇವಿನ ಬೆಲೆ ಹೆಚ್ಚಾಗಿದ್ದು, ಹಾಲು ಖರೀದಿ ದರ ಮಾತ್ರ ಏರಿಕೆಯಾಗಿಲ್ಲ ಎಂದು ಹೇಳಿದರು.

ಮಂಡ್ಯ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬುಬೆಳೆಗಾರರ ಬಳಿ 100 ಕೋಟಿಗೂ ಹೆಚ್ಚು ಬಾಕಿ ಹಣವನ್ನು ಉಳಿಸಿಕೊಂಡಿದ್ದಾರೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಅವರು ಕೃಷಿ ಕ್ಷೇತ್ರವನ್ನು ನಾವು ದೂರದೃಷ್ಟಿಯಿಂದ ನೋಡಬೇಕು. ನಮ್ಮ ಸರ್ಕಾರ ಬಂದಾಗ ಈ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವೈಶುಗರ್ ಸೇರಿದಂತೆ ಇತರೆ ಸಕ್ಕರೆ ಕಾರ್ಖಾನೆಗಳ ಸುವ್ಯವಸ್ಥೆ ಮಾಡಿಕೊಟ್ಟು ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ತಿಳಿಸಿದ್ದಾರೆ. ಮಹಿಳಾ ಕೃಷಿ ಕಾರ್ಮಿಕರಿಗೆ ವಿಶೇಷ ಯೋಜನೆ ಜಾರಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದೆಲ್ಲವನ್ನು ನಮ್ಮ ಪ್ರಣಾಳಿಕೆ ಸಮಿತಿ ಮುಂದೆ ಇಡುತ್ತೇವೆ.

ಡಿ.ಕೆ. ಶಿವಕುಮಾರ್ ಅವ ಮೇಲೆ ಇಡಿ ವಿಚಾರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ರಣದೀಪ್ ಸಿಂಗ್ ಸುರ್ಜೆವಾಲ ಅವರು, ‘ಇದು ಬಿಜೆಪಿಯ ಹುಚ್ಚುತನ ಎಂದಷ್ಟೇ ಹಳಬಹುದು. ಅವರು ಭಯಭೀತರಾಗಿದ್ದು, ರಾಜ್ಯದಲ್ಲಿ ಸೋಲಿನಭೀತಿಗೆ ಸಿಲುಕಿದ್ದಾರೆ. ಹೀಗಾಗಿ ಕಾನೂನು ಸಚಿವರು ನಾವು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿಲ್ಲ ಕೇವಲ ಸಮಯ ತಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಈ 40% ಕಮಿಷನ್ ಸರ್ಕಾರದ ವಿಚಾರ ಅವರದೇ ಸಚಿವರುಗಳಿಂದ ತಿಳಿಯುತ್ತಿದೆ. ಅವರು ನಮ್ಮ ಯಾತ್ರೆ ತಡೆಯಲು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಅವರ ಈ ಬೆದರಿಕೆಗೆ ಡಿ.ಕೆ. ಶಿವಕುಮಾರ್ ಆಗಲಿ, ಡಿ.ಕೆ. ಸುರೇಶ್ ಅವರಗಲಿ, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಆಗಲಿ ಕಾರ್ಯಕರ್ತರಾಗಲಿ ಹೆದರುವುದಿಲ್ಲ. ಅವರ ಈ ಧೋರಣೆಗೆ ನಾವು ಜನತಾ ನ್ಯಾಯಾಲಯದಲ್ಲಿ ತಕ್ಕ ಉತ್ತರ ನೀಡುತ್ತೇವೆ. ಭಾರತ ಐಕ್ಯತಾ ಯಾತ್ರೆಗೆ ಜನ ಬೆಂಬಲ ಕಂಡು ವಿಚಲಿತರಾಗಿ ಬಿಜೆಪಿಯವರು ಈ ದುಸ್ಸಾಹಸಕ್ಕೆ ಮುಂದಾಗಿದ್ದಾರೆ’ ಎಂದರು.

ಈ ಯಾತ್ರೆಯಲ್ಲಿ ಸಾಮಾಜಿಕ ನ್ಯಾಯದ ವಿಚಾರ ಪ್ರಸ್ತಾಪದ ಬಗ್ಗೆ ಕೇಳಿದಾಗ, ‘ಸಾಮಾಜಿಕ ನ್ಯಾಯ ವಿಚಾರವು ಈ ಯಾತ್ರೆಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಸಾಮಾಜಿಕ ನ್ಯಾಯ, ಸಮಾನತೆ, ಆರ್ಥಿಕ ಸಮನಾತೆ ಹೊರತಾಗಿ ಈ ಯಾತ್ರೆ ಇಲ್ಲ. ದೇಶದ ಪ್ರಧಾನಿಯ ಸ್ನೇಹಿತ ಉದ್ಯಮಿಯ ಆಸ್ತಿ ಪ್ರತಿ ನಿತ್ಯ ಸಾವಿರ ಕೋಟಿಯಷ್ಟು ಹೆಚ್ಚುತ್ತಿರುವಾಗ ದೇಶದ ಶೇ.84 ರಷ್ಟು ಕುಟುಂಬಗಳ ಆದಾಯ ಕುಸಿಯುತ್ತಿದೆ. ಈ ಪರಿಸ್ಥಿತಿಯಲ್ಲಿ ಜನ ಬದುಕು ಕಟ್ಟಿಕೊಳ್ಳುವುದು ಹೇಗೆ? ಹೀಗಾಗಿ ರಾಹುಲ್ ಗಾಂಧಿ ಅವರು ಬೆಲೆ ಏರಿಕೆ, ನಿರುದ್ಯೋಗ, ದ್ವೇಷದ ಮೂಲಕ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಣ್ಣುಪಾಲು ಮಾಡಲಾಗುತ್ತಿದೆ’ ಎಂದರು.

ಬಿಜೆಪಿಯ ಸುಳ್ಳು ಜಾಹೀರಾತು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಬಿಜೆಪಿಯವರು ಈ ಪಾದಯಾತ್ರೆಯಿಂದ ಹೆದರಿದ್ದಾರೆ. ರಾಜ್ಯದಲ್ಲಿ ಚುನಾವಣೆ ಆಗಮಿಸುತ್ತಿದ್ದು, ಅವರಿಗೆ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ. ಹೀಗಾಗಿ ನಡುಕ ಹುಟ್ಟಿದ್ದು, ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಹೀಗಾಗಿ ಈ ಜಾಹೀರಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ತಿಳಿಸಿದರು.

ಇದೇ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ಯಾವುದೇ ಸರ್ಕಾರ ಜನರಿಗಾಗಿ ಏನು ಮಾಡಿದೆ, ಯಾವ ಅಭಿವೃದ್ಧಿ ಮಾಡಿದೆ? ಯಾವ ನ್ಯಾಯ ನೀಡಿದೆ ಎಂದು ಮುಖ್ಯವಾಗುತ್ತದೆ. ಬಿಜೆಪಿ ಸರ್ಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೇಳಿಕೊಳ್ಳಲು ಸಾಧ್ಯವಾಗದೇ ಬೇಸತ್ತು ಕಾಂಗ್ರೆಸ್ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ’ ಎಂದರು.

Key words: Demand – implementation -Nagmohan Das –report-Congress leaders