ಕೊರೋನಾ 3ನೇ ಅಲೆ ಭೀತಿ: ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟ.

ಬೆಂಗಳೂರು, ಜುಲೈ,31,2021(www.justkannada.in):  ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೋನಾ ಸೋಂಕು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು, ಎರಡು ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಂತೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಮಾಡಿಸಿರುವ  ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕು. ಮೊದಲನೇ ಹಾಗೂ ಎರಡನೇ ಡೋಸ್ ಪಡೆದಿದ್ದರೂ ಅಥವಾ ಪಡೆಯದೇ ಇದ್ದರೂ 72 ಗಂಟೆಗಳ ಒಳಗೆ ಆರ್‍ಟಿಪಿಸಿಆರ್ ಮಾಡಿಸಿರುವ ನೆಗೆಟೀವ್ ವರದಿ ಕಡ್ಡಾಯಗೊಳಿಸಲಾಗಿದೆ.

ವಿಮಾನ, ರೈಲು ಹಾಗೂ ರಸ್ತೆ ಮಾರ್ಗಗಳಲ್ಲಿ ಸಂಚರಿಸುವವರು ಕಡ್ಡಾಯವಾಗಿ ಈ ವರದಿಯನ್ನು ಹಾಜರಿಪಡಿಸಲೇಬೇಕು. ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ, ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ದೈನಂದಿನವಾಗಿ ಭೇಟಿ ನೀಡುವವರು ಪ್ರತಿ 15 ದಿನಗಳಿಗೊಮ್ಮೆ ಆರ್‍ ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೇರಳದ ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳು. ಮಹಾರಾಷ್ಟ್ರ ಗಡಿಯ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ವಾಹನಗಳ ಪ್ರಯಾಣಿಕರು, ಚಾಲಕರು, ಸಹಾಯಕರುಗಳನ್ನು ತಪಾಸಣೆಗೊಳಪಡಿಸಲು ಚೆಕ್‍ಪೋಸ್ಟ್‍ ಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಹಾಗೆಯೇ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಸಾಂವಿಧಾನಿಕ ಕಾರ್ಯಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು, ಸಂಬಂಧಿಕರು ಮರಣ ಹೊಂದಿದ ಸಂದರ್ಭದಲ್ಲಿ ಆಗಮಿಸುವವರಿಗೆ ಆರ್‍ ಟಿ ಪಿಸಿಆರ್ ನೆಗೆಟೀವ್ ವರದಿಯಿಂದ ವಿನಾಯ್ತಿ ನೀಡಲಾಗಿದೆ.

Key words: Corona -3rd wave – New Guidelines- travelers – Maharashtra – Kerala