ದೇಶದ ಸ್ವಾತಂತ್ರ್ಯಕ್ಕೆ ಪತ್ರಿಕೆಗಳ ಕೊಡುಗೆ ಅಪಾರ- ಪ್ರೊ.ಮಂಜುನಾಥ್

ಮೈಸೂರು,ಮಾರ್ಚ್,23,2022(www.justkannada.in): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ  ನಡೆದ  ಸ್ವಾತಂತ್ರ್ಯ ಹೋರಾಟದಲ್ಲಿ   ಪತ್ರಿಕೆಗಳ  ಕೊಡುಗೆ  ಅಪಾರ  ಎಂದು ಮೈಸೂರು  ಕಾಲೇಜ್ ಆಫ್  ಎಂಜಿನಿಯರಿಂಗ್  ಮತ್ತು  ಮ್ಯಾನೇಜ್‌ಮೆಂಟ್ ನ  ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ.ಎಂ. ಮಂಜುನಾಥ್ ಹೇಳಿದರು.

ಟಿ. ನರಸೀಪುರ ರಸ್ತೆಯ ದೊಡ್ಡಾಲಮರದ ಬಳಿ ಇರುವ ಕಾಲೇಜಿನಲ್ಲಿ ಬುಧವಾರ ನಡೆದ ಮೈಸೆಮ್- ಅಂತರಂಗ  ಎಂಬ  ದ್ವಿಭಾಷಾ ಮಾಸಿಕ ವಾರ್ತಾ ಪತ್ರಿಕೆಯ  ಬಿಡುಗಡೆ  ಸಮಾರಂಭದಲ್ಲಿ  ಮಾತನಾಡಿದ ಅವರು,  ಸ್ವತಃ ಮಹಾತ್ಮ ಗಾಂಧಿಜಿ ಅವರೇ ಎರಡು ಪತ್ರಿಕೆಗಳನ್ನು ಆರಂಭಿಸಿದ್ದರು. ಆಗ ಈಗಿನಂತೆ ದೃಶ್ಯ ಮಾಧ್ಯಮಗಳಿರಲಿಲ್ಲ. ಪತ್ರಿಕೆಗಳ ಮೂಲಕವೇ ಜನರನ್ನು ತಲುಪಬೇಕಿತ್ತು. ಪತ್ರಿಕೆಗಳು ಮೂಡಿಸಿದ ಜನಜಾಗೃತಿಯಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಯಿತು ಎಂದರು.

ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಐಎಎಸ್, ಕೆಎಎಸ್ ಮೊದಲಾದ ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ ತಯಾರಾಗಬಹುದು. ಅಲ್ಲಿ ಸಾಮಾನ್ಯ ಜ್ಞಾನದ ಜೊತೆಗೆ ಇತರೆ ವಿಷಯಗಳು ಪ್ರಕಟವಾಗುವುದರಿಂದ ನಮ್ಮ ಬುದ್ಧಿಮತ್ತೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಪ್ರಭುಸ್ವಾಮಿ ಮಾತನಾಡಿ, ಮಾಧ್ಯಮಗಳಿಗೆ ಭಾರಿ ಮಹತ್ವವಿದೆ. ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿಯಬೇಕಾದರೆ ಮಾಧ್ಯಮಗಳನ್ನು ಅವಲಂಬಿಸಬೇಕಾಗುತ್ತದೆ. ಹಿಂದೆ ಪತ್ರಿಕೆಗಳನ್ನು ಓದದಿದ್ದರೆ ದಿನ ಆರಂಭವಾಗುತ್ತಲೇ ಇರಲಿಲ್ಲ ಎಂಬ ಪರಿಸ್ಥಿತಿ ಇತ್ತು ಎಂದರು.

ಮೈಸೆಮ್ ಅಂತರಂಗ ವಾರ್ತಾ ಪತ್ರಿಕೆ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ,ಹಿಂದೆ ಕಾಲೇಜಿನಲ್ಲಿ ಗೋಡೆ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಈಗ ಮುದ್ರಣದಲ್ಲಿಯೇ ಆಂತರಿಕ ಪತ್ರಿಕೆಗಳನ್ನು ಪ್ರಕಟಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತದೆ. ಸಾಂಸ್ಥಿಕ ವರದಿಗಾರಿಕೆ ಕಲಿಯಲು ಸಹಕಾರಿಯಾಗುತ್ತದೆ  ಎಂದರು.

ಜ್ಞಾನದ ಪರಿಧಿ ವಿಸ್ತರಣೆಯಾಗುತ್ತದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡುತ್ತದೆ. ಭವಿಷ್ಯಕ್ಕೆ ದಾರಿದೀಪ ಕೂಡ ಆಗುತ್ತದೆ ಎಂದ ಅವರು, ಎಂಜಿನಿಯರಿಂಗ್ ಓದಿದವರು ಸಾಹಿತಿಗಳು, ಚಲನಚಿತ್ರ ನಿರ್ದೇಶಕರು ಆಗಿದ್ದಾರೆ ಎಂದರು.

ಆಡಳಿತ ಮಂಡಳಿಯ ಖಜಾಂಚಿ ಪೂರ್ಣಿಮಾ ಕಿರಣ್, ಪ್ಲೇಸ್‌ಮೆಂಟ್  ಅಧಿಕಾರಿ  ಪ್ರೊ.ಎಲ್. ಪ್ರಭು,  ಪ್ರೊ.ಹರ್ಷಕುಮಾರ್  ಸೇರಿದಂತೆ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಇದ್ದರು.

Key words: contribution – newspapers – independence – Prof. Manjunath