ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ- ಮಾಜಿ ಸಿಎಂ ಸಿದ್ಧರಾಮಯ್ಯ

ಬೆಂಗಳೂರು,ಜನವರಿ,16,2023(www.justkannada.in): ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33 ಪರ್ಸೆಂಟ್ ಮೀಸಲಾತಿ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದ ಮುಖ್ಯದ್ವಾರ ಬಳಿ ಕಾಂಗ್ರೆಸ್​ ಆಯೋಜಿಸಿರುವ ‘ನಾ ನಾಯಕಿ’ ಸಮಾವೇಶದಲ್ಲಿ ಮಾತನಾಡಿದ  ಸಿದ್ಧರಾಮಯ್ಯ,  ಬಿಜೆಪಿಯವರು  ಮಹಿಳೆಯರ ಪರವಾಗಿಲ್ಲ. ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಮಹಿಳೆಯರ ಪರವಾಗಿ ಯೋಜನೆಗಳನ್ನು ನೀಡಿಲ್ಲ. ಬಿಜೆಪಿ ಸರ್ಕಾರ ಇವತ್ತು ದೊಡ್ಡದಾಗಿ ಜಾಹೀರಾತು ನೀಡಿದೆ. ಇವರು ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಮಹಿಳಾ ಪರ ಯೋಜನೆಗಳನ್ನು ನೀಡಿಲ್ಲ. ನಾವು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದೇವೆ. ನಾವು ಈ ಭರವಸೆ ನೀಡಿದ ಬಳಿಕ ಬಿಜೆಪಿಯವರಿಗೆ ಈಗ ಎಚ್ಚರವಾಗಿದೆ. ಅವರು ನೀಡಿದ ಭರವಸೆಗಳ ಪೈಕಿ ಈವರೆಗೆ ಕೇವಲ 50-60ರಷ್ಟು ಮಾತ್ರ ಈಡೇರಿವೆ. ಉಳಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

 ಎಲ್ಲಿಯವರೆಗೆ ದೇಶದ ಮಹಿಳೆಯರ ಅಭಿವೃದ್ಧಿ ಆಗುವುದಿಲ್ಲವೋ, ಅಲ್ಲಿಯವರೆಗೂ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್​ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಉದ್ಯೋಗದಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿಯನ್ನು ಶೇ 30ರಿಂದ 33 ಹೆಚ್ಚಳ ಮಾಡಿದ್ದೇವೆ. ಮತ್ತೆ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ. ಮಹಿಳೆಯರಿಗೆ ರಾಜಕೀಯದಲ್ಲಿ ಶೇ 33 ಮೀಸಲಾತಿ ನೀಡುತ್ತೇವೆ. ವಿಧಾನಸಭೆ, ಪರಿಷತ್, ಲೋಕಸಭೆಯಲ್ಲಿ ಕೂಡ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿದರು.

Key words: congress-comes – power- reservation -women – Former CM Siddaramaiah