ಬೆಂಗಳೂರು, ಜನವರಿ.5,2024(www.justkannada.in): ಶ್ರೀಕಾಂತ್ ಪೂಜಾರಿಯನ್ನು ಬಂಧನ ಖಂಡಿಸಿ ಬಿಜೆಪಿ ನಾಯಕರು ‘ನಾನು ಕರಸೇವಕ-1992, ನನ್ನನ್ನೂ ಬಂಧಿಸಿ’ ಅಭಿಯಾನ ನಡೆಸುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ಈ ಸಂಬಂಧ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ. ಬಿಜೆಪಿಗರೆಲ್ಲರೂ ನನ್ನನ್ನೂ ಬಂಧಿಸಿ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೆ, ಕಾಂಗ್ರೆಸ್ ಹಂಚಿಕೊಂಡ ವಿಜಯೇಂದ್ರ ಅವರ ಎಡಿಟೆಡ್ ಪೋಸ್ಟರ್ನಲ್ಲಿ, ನಾನು RTGS ಮೂಲಕ ಲಂಚ ಪಡೆದಿದ್ದೇನೆ, 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ, ನನ್ನನ್ನು ಬಂಧಿಸಿ ಎಂದು ಬರೆಯಲಾಗಿದೆ.
ರಾಜ್ಯ ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು. ಸಿಟಿ ರವಿ ಅವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ? ಎಂದು ಟ್ವೀಟ್ ಮಾಡಿದೆ. ಅಲ್ಲದೆ, ಕಾಂಗ್ರೆಸ್ ಹಂಚಿಕೊಂಡ ಸಿಟಿ ರವಿ ಅವರ ಎಡಿಟೆಡ್ ಪೋಸ್ಟರ್ನಲ್ಲಿ, ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ, ನನ್ನನ್ನೂ ಬಂಧಿಸಿ ಎಂದು ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದೆ.
ನನ್ನನ್ನೂ ಬಂಧಿಸಿ ಎನ್ನುತ್ತಿರುವ ಸುನಿಲ್ ಕುಮಾರ್ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿ ಸುನಿಲ್ ಕುಮಾರ್ ವಿರುದ್ಧ ಪೋಸ್ಟರ್ ಹಂಚಿಕೊಂಡಿದೆ.
Key words: Congress – BJP -people – demanding -arrest – their – scams.