ವೋಟರ್ ಐಡಿ ಅಕ್ರಮ ಹಗರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್‌ ಪಿನ್:  ಸಿಎಂ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಿ- ಸಿದ್ಧರಾಮಯ್ಯ ಆಗ್ರಹ.

Promotion

ಬೆಂಗಳೂರು, ನವೆಂಬರ್,19,2022(www.justkannada.in):  ವೋಟರ್ ಐಡಿ ಪರಿಷ್ಕರಣೆ ಅಕ್ರಮ ಹಗರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್‌ ಪಿನ್. ಮುಖ್ಯಮಂತ್ರಿ ಆದವರು ಯಾವ ಹಗರಣವನ್ನು ಬೇಕಾದರೂ ಮಾಡಬಹುದಾ? ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದುಕೊಂಡು ಇಂಥದ್ದೊಂದು ಅಕ್ರಮಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇರುತ್ತದಾ? ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.

ಪ್ರಕರಣ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ  ಮಾಜಿ ಸಿಎಂ ಸಿದ್ದರಾಮಯ್ಯ,  ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು:

ಅಮೇರಿಕಾದಲ್ಲಿ ವಾಟರ್‌ ಗೇಟ್‌ ಪ್ರಕರಣ ಎಂದು ಕರೆಯುತ್ತಿದ್ದೆವು, ಅದೇ ರೀತಿ ಇದು ವೋಟರ್‌ ಗೇಟ್‌ ಪ್ರಕರಣ. ಜಗತ್ತಿನಲ್ಲಿ ಇಂಥಾ ಪ್ರಕರಣಗಳು ನಡೆಯುವುದು ಬಹಳ ಅಪರೂಪ, ನಮ್ಮ ರಾಜ್ಯದಲ್ಲಿ ನಡೆದಿದೆ. ಈ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ. ಅವರೇ ಪ್ರಮುಖ ಅಪರಾಧಿ. ಜನರ ಮತದಾನದ ಹಕ್ಕನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿರುವುದು ಒಂದು ಗಂಭೀರ ಅಪರಾಧ. ಚುನಾವಣಾ ಆಯೋಗ ಒಂದು ಸಂವಿಧಾನಬದ್ಧವಾದ ಸಂಸ್ಥೆ, ಇದು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸಬೇಕು. ಚುನಾವಣೆಯಲ್ಲಿ ಅವ್ಯವಹಾರಗಳು ನಡೆದರೆ ಅದು ಪ್ರಜಾ ಪ್ರತಿನಿಧಿಕ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದರು.

ಈ ಹಗರಣದಲ್ಲಿ ಅಬ್ಬೆಪಾರಿಗಳ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ಬಂಧಿಸಿದರೆ ಅದರಿಂದ ಉಪಯೋಗ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ನಗರದ ಉಸ್ತುವಾರಿ ಸಚಿವರು. ಅವರೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು, ಅವರು ನನಗೆ ಮತ್ತು ಈ ಹಗರಣಕ್ಕೆ ಸಂಬಂಧ ಇಲ್ಲ ಎಂದು ಹೇಳಲು ಬರಲ್ಲ. ಈಗ ಬೊಮ್ಮಾಯಿ ಅವರು ನಮ್ಮ ಆರೋಪಕ್ಕೆ ಮತ್ತೆ ಸುಳ್ಳು ಉತ್ತರಗಳನ್ನು ನೀಡಿದ್ದಾರೆ. ಎಲ್ಲದಕ್ಕೂ ಹಿಂದಿನ ಸರ್ಕಾರ ಮಾಡಿಲ್ವಾ? ಎಂದು ಕೇಳುತ್ತಾರೆ, ಆಗ ಬೊಮ್ಮಾಯಿ ಅವರು ವಿರೋಧ ಪಕ್ಷದಲ್ಲಿದ್ದು ಮಾತನಾಡದೆ ಸುಮ್ಮನಿದ್ದಿದ್ದು ಏಕೆ? ನಮ್ಮ ಸರ್ಕಾರದ ವಿರುದ್ಧ ಬಂದ ಎಲ್ಲಾ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಿದ್ದೆ, ಆಗ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲೂ ಇರಲಿಲ್ಲ. 2008 ರಿಂದ 2013ರ ವರೆಗೆ ಯಡಿಯೂರಪ್ಪ, ಸದಾನಂದ ಗೌಡರು ಮತ್ತು ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ನಾವು ವಿರೋಧ ಪಕ್ಷವಾಗಿ ಕೆಲವು ಪ್ರಕರಣಗಳನ್ನು ಸಿಬಿಐ ಗೆ ವಹಿಸುವಂತೆ ಒತ್ತಾಯ ಮಾಡಿದ್ದಕ್ಕೆ ಸಿಬಿಐ ಅನ್ನು ಕಾಂಗ್ರೆಸ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ ಎಂದು ಲೇವಡಿ ಮಾಡುತ್ತಿದ್ದರು. ಬಸವರಾಜ ಬೊಮ್ಮಾಯಿ ಅವರು ಒಂದು ತಪ್ಪನ್ನು ಮುಚ್ಚಿಕೊಳ್ಳಲು ನೂರು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.

ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಕೇಂದ್ರ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೂ ದೂರು ನೀಡಿದ್ದೇವೆ. ನಾನು ಅವರ ಬಳಿ ಹೀಗೆ ಲಕ್ಷಾಂತರ ಜನ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದೀರಿ, ಇದಕ್ಕೆ ಕಾರಣ ಯಾರು? ಬಿಬಿಎಂಪಿ ಮಾಡಿರುವ ಬೂತ್‌ ಲೆವೆಲ್‌ ಆಫಿಸರ್‌ ಗಳು ಯಾರೂ ಕೂಡ ಸರ್ಕಾರಿ ಅಧಿಕಾರಿಗಳಲ್ಲ, ಇವರು ಕಾನೂನಿಗೆ ವಿರುದ್ಧವಾಗಿ ಪರಿಷ್ಕರಣೆ ಮಾಡಿದ್ದಾರೆ. ಕೃಷ್ಣಪ್ಪ ರವಿಕುಮಾರ್‌ ಅವರ ಚಿಲುಮೆ ಸಂಸ್ಥೆಯ ಮೇಲೆ ಈ ವರೆಗೆ ಕೇಸ್‌ ದಾಖಲಿಸಿ, ಅವರ ಬಂಧನ ಮಾಡಿಲ್ಲ ಏಕೆ? ಕಚೇರಿ ಸಿಬ್ಬಂದಿಗಳನ್ನು ಬಂಧಿಸಿಲ್ಲ ಏಕೆ? ಬಿಬಿಎಂಪಿ ಕಮಿಷನರ್‌ ಅವರ ಬಂಧನವಾಗಿಲ್ಲ ಏಕೆ? ರಾಜ್ಯ ಮುಖ್ಯಚುನಾವಣಾಧಿಕಾರಿ ಅವರು ಜಂಟಿ ಆಯುಕ್ತರ ಮೂಲಕ ತನಿಖೆ ಮಾಡಿಸುತ್ತೇನೆ ಎನ್ನುತ್ತಿದ್ದಾರೆ, ಓರ್ವ ಜಂಟಿ ಆಯುಕ್ತ ತನಗಿಂತ ಮೇಲಿನ ಅಧಿಕಾರದಲ್ಲಿ ಇರುವ ಮುಖ್ಯಮಂತ್ರಿಗಳ ಮೇಲೆ ತನಿಖೆ ಮಾಡಿ ಶಿಕ್ಷೆ ಕೊಡೋಕೆ ಆಗುತ್ತದಾ?

ಇವರ ಹೇಳಿಕೆ ಎಷ್ಟು ಹಾಸ್ಯಾಸ್ಪದವಾಗಿದೆ ಅಲ್ಲವೇ? ಅದಕ್ಕೆ ನಾವು ರಾಜ್ಯ ಹೈಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ಒಂದು ನ್ಯಾಯಾಂಗ ಸಮಿತಿ ರಚನೆ ಮಾಡಿ, ಅದರ ಮೂಲಕ ತನಿಖೆ ನಡೆಸಿ ಎಂದು ಒತ್ತಾಯ ಮಾಡಿದ್ದೇವೆ. ಆದರೆ ಬೊಮ್ಮಾಯಿ ಅವರು ಇದು ಆಧಾರ ರಹಿತ ಆರೋಪ, ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುತ್ತಾರೆ. ಇವು ಆಧಾರ ರಹಿತ ಆರೋಪಗಳಾಗಿದ್ದರೆ ಕೆಲವರ ಬಂಧನ ಯಾಕೆ ಆಗಿದೆ? ಮತ ಪಟ್ಟಿ ಪರಿಷ್ಕರಣೆಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿದ್ದು ಯಾಕೆ? ಇಲ್ಲಿ ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಇಷ್ಟೆಲ್ಲಾ ಆದಮೇಲೆ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಅರ್ಹರೇ? ಬಸವರಾಜ ಬೊಮ್ಮಾಯಿ ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು. ಹಗರಣಗಳ ಮೇಲೆ ಹಗರಣ ಮಾಡಿ ಬಚಾವಾಗುತ್ತೇವೆ ಎಂದು ಬೊಮ್ಮಾಯಿ ಅವರು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ನಾವು ನೀಡಿರುವ ದೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ದೂರು ದಾಖಲಿಸಿ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ. ನಮ್ಮ ಪಕ್ಷದ ಹಲವು ಶಾಸಕರು ಇಂದು ಬಂದು ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕ?

ನ್ಯೂಸ್‌ ಮಿನಿಟ್‌, ಪ್ರತಿಧ್ವನಿ ಮುಂತಾದ ಮಾಧ್ಯಮ ಮಿತ್ರರು ಮೂರು ತಿಂಗಳ ಕಾಲ ಕಷ್ಟಪಟ್ಟು ಶ್ರಮ ಹಾಕಿ ಈ ಹಗರಣವನ್ನು ಹೊರಗೆಡವಿದ್ದಾರೆ. ಈ ಹಗರಣದಲ್ಲಿ ಇನ್ನಷ್ಟು ಸಾಕ್ಷಿಗಳನ್ನು ನಾವು ಸಂಗ್ರಹ ಮಾಡುತ್ತಿದ್ದೇವೆ. ಇದು ಚಿಕ್ಕ ಹಗರಣ ಅಲ್ಲ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಯಾರಾದರೂ ಸಾವಿರಾರು ಜನರಿಗೆ ಸಂಬಳ ನೀಡಿ ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಸಾಧ್ಯವೇ? ಬಿಜೆಪಿಯವರು ಚುನಾವಣೆಯಲ್ಲಿ ಸೋಲುವ ಭಯದಿಂದ ಈ ರೀತಿ ವಾಮ ಮಾರ್ಗ ಹಿಡಿದ್ದಿದ್ದಾರೆ, ಆದರೂ ಇಂಥಾ ಷಡ್ಯಂತ್ರಗಳನ್ನು ಎದುರಿಸಿ ನಾವು ಗೆಲ್ಲುತ್ತಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ. ಆದರೆ ಜನರಿಗೆ ಸತ್ಯ ಗೊತ್ತಾಗಬೇಕು ಮತ್ತು ಚುನಾವಣಾ ಆಯೋಗ ಮತ್ತು ವ್ಯವಸ್ಥೆಯ ಬಗ್ಗೆ ನಂಬಿಕೆ ಬರಬೇಕು ಎಂಬ ಕಾರಣಕ್ಕಾಗಿ ಈ ಹಗರಣದಲ್ಲಿ ಭಾಗಿಯಾದವರೆಲ್ಲರೂ ಹೊರಬರಬೇಕು ಎಂದರು.

ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ನೀವೆ ಒಪ್ಪಿಸಬಹುದು ಎಂದು ಅವರಿಗೆ ಒತ್ತಾಯ ಮಾಡಿದ್ದೇವೆ. ಅದಕ್ಕವರು ನಾನು ಕೇಂದ್ರ ಚುನಾವಣಾ ಆಯೋಗದವರ ಜೊತೆ ಮಾತನಾಡಿ ಮತ್ತೆ ನಿಮ್ಮನ್ನು ಸಂಪರ್ಕ ಮಾಡುತ್ತೇನೆ ಎಂದಿದ್ದಾರೆ. ರಾಜ್ಯ ಚುನಾವಣಾ ಆಯೋಗ ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಮುಂದೆ ಕೇಂದ್ರ ಚುನಾವಣಾ ಆಯೋಗದ ಬಳಿ ಹೋಗುತ್ತೇವೆ ಎಂದು ತಿಳಿಸಿದರು.

Key words: CM- king pin – illegal -voter ID- scam- Siddaramaiah