ರಾಜ್ಯದ ಐತಿಹಾಸಿಕ – ಪಾರಂಪರಿಕ ದೇವಾಲಯಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆದೇಶ

ಬೆಂಗಳೂರು, ಜೂನ್ 07,2019(www.justkannada.in):  ಧಾರ್ಮಿಕ ದತ್ತಿ ಇಲಾಖೆ ಅಧೀನದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು  ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯದ ಐತಿಹಾಸಿಕ ಹಾಗೂ ಪಾರಂಪರಿಕ ದೇವಾಲಯಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೆಳಕಂಡ ಸೂಚನೆಗಳನ್ನು  ನೀಡಿದರು.

  • ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 21 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸುವುದು.
  • ಟಿ. ಟಿ.ಡಿ ಟ್ರಸ್ಟ್ ವತಿಯಿಂದ ರಾಮನಗರ ಜಿಲ್ಲೆಯಲ್ಲಿ ವೆಂಕಟೇಶ್ವರ ದೇವಸ್ಥಾನ ಹಾಗೂ ಸಮುದಾಯದ ಭವನ ನಿರ್ಮಾಣ ಕ್ಕೆ 15 ಎಕರೆ ಜಮೀನು ಗುರುತಿಸುವುದು
  • ಲೋಕೋಪಯೋಗಿ ಇಲಾಖೆ ವತಿಯಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು 40 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಹಾಗೂ ದೇವಸ್ಥಾನದ ಮೆಟ್ಟಿಲುಗಳ ದುರಸ್ತಿ ಕಾರ್ಯವನ್ನು ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ಕೈಗೊಳ್ಳುವುದು.
  • ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವುದು.
  • ತಿರುಮಲ ತಿರುಪತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ 26 ಕೋಟಿ ರೂ. ವೆಚ್ಚದಲ್ಲಿ ಛತ್ರ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದು ಮತ್ತು
  • ಮುಂದಿನ ವರ್ಷದಲ್ಲಿ ತಲಕಾಡು ಪಂಚಲಿಂಗದರ್ಶನ ಆಚರಣೆ ನಡೆಯಲಿರುವುದರಿಂದ, ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅವಶ್ಯವಿರುವೆಡೆ ಸೌಲಭ್ಯವನ್ನು ನಿರ್ಮಿಸಲು ಸೂಚನೆಗಳನ್ನು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ನೀಡಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆ ಚ್.ಡಿ.ರೇವಣ್ಣ, ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್, ಸಂಬಂಧಪಟ್ಟ  ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: CM HD Kumaraswamy orders to develop state-of-the-art historical infrastructure facilities

#CMHDKumaraswamy #develop #historical #temple #infrastructurefacilities