ಡಿಸಿ ಸಭೆಗೆ ಹೊಸ ರೂಪ

Promotion

ಬೆಂಗಳೂರು:ಜೂ-7: ಚರ್ವಿತಚರ್ವಣ ರೀತಿಯಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಭೆಗೆ ಹೊಸ ರೂಪ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಆಡಳಿತ ಚುರುಕುಗೊಳಿಸುವ ಸಲುವಾಗಿ ಜೂ.12 ಮತ್ತು 13ರಂದು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ಸಿಎಂ 6 ತಿಂಗಳಿಗೊಮ್ಮೆ ಡಿಸಿ ಹಾಗೂ ಜಿಪಂ ಸಿಇಒಗಳ ಸಭೆ ನಡೆಸುತ್ತಾರೆ.

ರಾಜ್ಯದಲ್ಲಿ ಈಗ ತೀವ್ರ ಬರ ಇರುವುದರಿಂದ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದುವರೆಗೂ ಸಭೆಯಲ್ಲಿ ಇಲಾಖೆವಾರು ಯೋಜನೆಗಳು ಹೇಗೆ ಅನುಷ್ಠಾನಗೊಂಡಿವೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿತ್ತು. ಆಡಳಿತ ಸುಧಾರಣಾ ಇಲಾಖೆ ಇಲಾಖಾವಾರು ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿತ್ತು. ಎರಡು ದಿನಗಳ ಕಾಲ ಈ ಅಂಕಿ-ಅಂಶಗಳ ಆಧಾರದಲ್ಲಿಯೇ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿತ್ತು. ಇದರಿಂದ ಆಡಳಿತದ ಮೇಲೆ ಯಾವುದೇ ದೊಡ್ಡ ಮಟ್ಟದ ಪರಿಣಾಮವೇನು ಬೀರುತ್ತಿರಲಿಲ್ಲ. ಹೀಗಾಗಿ ಸಭೆ ಸ್ವರೂಪವನ್ನೇ ಬದಲಾವಣೆ ಮಾಡಲು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಸಿಎಂ ಸೂಚಿಸಿದ್ದಾರೆ.

ಬದಲಾವಣೆ ಸ್ವರೂಪ ಹೇಗಿರಲಿದೆ?: ಸಭೆಯಲ್ಲಿ ಇಡೀ ಸಂಪುಟ ಹಾಗೂ ಹಿರಿಯ ಅಧಿಕಾರಿಗಳ ದಂಡೇ ಇರುವಾಗ ಜಿಲ್ಲಾ ಮಟ್ಟದ ಸಮಸ್ಯೆಗಳಿಗೆ ಒಂದಿಷ್ಟಾದರೂ ಪರಿಹಾರ ಸಿಗದೆ ಹೋದರೆ, ಇಂತಹ ಸಭೆ ನಡೆಸುವುದರಲ್ಲಿ ಯಾವುದೇ ಉಪಯೋಗ ಇಲ್ಲ. ಪ್ರತಿ ಜಿಲ್ಲೆಯ ಐದು ಪ್ರಮುಖ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ತೀರ್ಮಾನ ಮಾಡಲಾಗಿದೆ. ಆಯಾ ಜಿಲ್ಲೆಗಳಲ್ಲಿನ ಪ್ರಮುಖ ಸಮಸ್ಯೆಗಳೇನು? ಅವು ಯಾವ ಇಲಾಖೆಯಿಂದ ಪರಿಹಾರ ಆಗಬೇಕು ಎಂಬ ಬಗ್ಗೆ ವಿವರವಾದ ವರದಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆದು ಕ್ರೋಡೀಕರಿಸಿ ಸಭೆ ಮುಂದಿಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಡಿಸಿಗಳಿಂದ ಬರುವ ವರದಿಗಳನ್ನು ಕ್ರೋಡೀಕರಿಸಿ ಪುಸ್ತಕ ರೂಪದಲ್ಲಿ ಸಿದ್ದಪಡಿಸಲಾಗುತ್ತದೆ. ಅದರ ಆಧಾರದಲ್ಲಿಯೇ ಚರ್ಚೆ ನಡೆಯಲಿದೆ ಎಂದು ಸಿಎಂ ಕಚೇರಿ ಉನ್ನತ ಮೂಲಗಳು ತಿಳಿಸಿವೆ. ಈ ಪ್ರಯೋಗ ಯಶಸ್ವಿಯಾದರೆ ಮುಂದೆಯೂ ಇದೇ ಸ್ವರೂಪದಲ್ಲಿಯೇ ಸಭೆ ನಡೆಸಲಾಗುತ್ತದೆ. ಇಲಾಖಾವಾರು ಪರಿಶೀಲನೆಯೂ ಸಭೆಯ ಒಂದು ಭಾಗವಾಗಿರುತ್ತದೆ. ಹೆಚ್ಚಾಗಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಕೃಪೆ:ವಿಜಯವಾಣಿ

ಡಿಸಿ ಸಭೆಗೆ ಹೊಸ ರೂಪ

cm h-d-kumaraswamy-is-ready-to-new-design-for-dc-meeting