ಗ್ರಾಮವಾಸ್ತವ್ಯ: ಚಂಡರಕಿ ಗ್ರಾಮಕ್ಕೆ ಆಗಮಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ

Promotion

ಯಾದಗಿರಿ,ಜೂನ್ 21,2019(www.justkannada.in):  ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ  ಮಾಡಲಿದ್ದು ಕಾರ್ಯಕ್ರಮಕ್ಕೆ  ಜಿಲ್ಲಾಡಳಿತ ಸನ್ನದ್ಧವಾಗಿದೆ.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಚಂಡರಕಿ ಗ್ರಾಮಕ್ಕೆ ಬಂದಿಳಿದಿದ್ದು ಗ್ರಾಮಕ್ಕೆ ಆಗಮಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು.  ಇನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ  ಸಮಾರಂಭದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಜನತಾ ದರ್ಶನಕ್ಕೆ ಅರ್ಜಿ ಸಲ್ಲಿಸಲು ಇಂದು ಬೆಳಿಗ್ಗೆ ಏಳು ಗಂಟೆಯಿಂದಲೇ ಸಾರ್ವಜನಿಕರು ಬರುತ್ತಿದ್ದಾರೆ, ಇದಕ್ಕಾಗಿ ಜಿಲ್ಲಾಡಳಿತ ಕೌಂಟರ್ ಗಳನ್ನು ತೆರೆದಿದ್ದು, ಅರ್ಜಿ ಸಲ್ಲಿಸಿದವರಿಗೆ ಟೋಕನ್ ನೀಡಲಾಗುತ್ತಿದೆ.

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವೂ ಜರುಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಮುಖ್ಯಮಂತ್ರಿಗಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಯಾದಗಿರಿಯಿಂದ ಗುರುಮಠಕಲ್ ಮಾರ್ಗವಾಗಿ ಚಂಡ್ರಕಿ ಗ್ರಾಮಕ್ಕೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ  ಸಾರಿಗೆ ಸಂಸ್ಥೆಯ ಬಸ್ ಮೂಲಕ ಆಗಮಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದ ಈ ಭಾಗದ ಜನತೆ ಮುಖ್ಯಮಂತ್ರಿಗಳ ಈ ಐತಿಹಾಸಿಕ ಕಾರ್ಯಕ್ರಮವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಇನ್ನು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಸುಮಾರು 15 ಕೌಂಟರುಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರು, ವಿಕಲಚೇತನರಿಗೆ ಪ್ರತ್ಯೇಕ ಕೌಂಟರುಗಳಿವೆ. ವಿವಿಧ ಇಲಾಖೆಗಳ ಯೋಜನೆಗಳನ್ನು ಬಿಂಬಿಸುವ ಪ್ರದರ್ಶನ  ಮಳಿಗೆಗಳು, ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಗಳ ಫಲಕಗಳು, ದೃಶ್ಯ  ಮಾಹಿತಿಗಳೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಥಾಪಿಸಿರುವ ಮಳಿಗೆ ಕಾರ್ಯಕ್ರಮದ ಜನಾಕರ್ಷಣೆಯ ಕೇಂದ್ರವಾಗಿದೆ.

Key words: Chandarakki –village-  Welcome – CM HD Kumaraswamy –Gramavastavya