ಕೇಂದ್ರ ಬಜೆಟ್  ಗೆ ಜನಸಾಮಾನ್ಯರು ಸೇರಿ ಹಲವರಿಂದ ವಿರೋಧ.

ಮೈಸೂರು,ಫೆಬ್ರವರಿ,1,2022(www.justkannada.in):  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಿದ್ದು ಇದಕ್ಕೆ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ಮಧ್ಯೆ ಜನಸಾಮಾನ್ಯರು ಸೇರಿ ಹಲವ ಮುಖಂಡರು ಈ ಬಜೆಟ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದಿನ ಬಜೆಟ್ ೨ ಮತ್ತು ೩ನೇ ಶ್ರೇಣಿ ನಗರಗಳಿಗೆ ಸಹಾಯಕವಲ್ಲ..

ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ‘ಟ್ಯಾಕ್ಸಿವಾಲ’ ವ್ಯವಸ್ಥಾಪಕ ನಿರ್ದೇಶಕ ಚೇತನ್ ಅವರು, ಇಂದಿನ ಬಜೆಟ್ 2 ಮತ್ತು 3ನೇ ಶ್ರೇಣಿ ನಗರಗಳಿಗೆ ಸಹಾಯಕವಲ್ಲ. ಕೇಂದ್ರ ಸರ್ಕಾರ ೨೦೨೨-೨೩ರ ಆಯವ್ಯಯದಲ್ಲಿ ನವೋದ್ಯಮಗಳು ಮತ್ತು ಹೊಸ ಹೂಡಿಕೆದಾರರ ಕುರಿತು ಮಾತನಾಡುತ್ತಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ? ಇಲ್ಲಿ ಜನರು ಈಗಾಗಲೇ ಸಣ್ಣ ವ್ಯಾಪಾರಗಳಲ್ಲಿ ಹೂಡಿಕೆ ಮಾಡಿ ದೊಡ್ಡ ಪ್ರಮಾಣ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಈ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ರಸ್ತೆಗಳಿಗೆ ಅಷ್ಟು ದೊಡ್ಡ ಮೊತ್ತ ವ್ಯಯಿಸುವುದು ಸರಿಯಲ್ಲ. ಜನರ ಬಳಿ ಹಣವೇ ಇಲ್ಲದಿರುವಾಗ ಓಡಾಡುವುದೆಲ್ಲಿ? ಸಂಪರ್ಕ ಮತ್ತು ಅಭಿವೃದ್ಧಿಗೆ ಹೈ ಸ್ಪೀಡ್ ರೈಲುಗಳು ಅಗತ್ಯ, ಆದರೆ ಈ ಸಾಂಕ್ರಾಮಿಕದ ಸಂದರ್ಭದಲ್ಲಲ್ಲ. ಒಟ್ಟಾರೆಯಾಗಿ ಕೇಂದ್ರ ಸರ್ಕಾರ ಕಾರ್ಪೊರೇಟ್‌ಗಳಂತೆ ವರ್ತಿಸುತ್ತಿದೆ. ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರದಲ್ಲಿ ತೊಡಗಿರುವವರು ಈಗಾಗಲೆ ರಸ್ತೆ ತೆರಿಗೆ, ಜಿಎಸ್‌ಟಿ, ಇ-ತೆರಿಗೆ ಒಳಗೊಂಡಂತೆ ಎಷ್ಟೊಂದು ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ದೊಡ್ಡವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದೆ ಎಂದು ಟೀಕಿಸಿದ್ದಾರೆ.

ಕೆಳ ಮತ್ತು ಮಧ್ಯಮ ವರ್ಗದ ಜನರು ಕೆಲಸ ಕಳೆದಕೊಳ್ಳುತ್ತಿದ್ದಾರೆ, ವ್ಯಾಪಾರದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿದ್ದಾರೆ, ಬಾಡಿಗೆ ಹೆಚ್ಚಾಗಿದೆ, ಆಹಾರ ಪದಾರ್ಥಗಳ ವೆಚ್ಚಗಳೆಲ್ಲಾ ಹೆಚ್ಚಾಗಿವೆ, ಶಾಲಾ ಶುಲ್ಕಗಳು ಮಿತಿ ಮೀರಿವೆ, ಇಷ್ಟೆಲ್ಲಾ ದೊಡ್ಡ ಸಮಸ್ಯೆಗಳ ಕಡೆ ಸರ್ಕಾರ ಮೊದಲು ಗಮನ ನೀಡಬೇಕು. ಸರ್ಕಾರ ಎಲ್ಲಾ ಹೊಸ ಯೋಜನೆಗಳನ್ನು ರದ್ದುಪಡಿಸಿ ಉದ್ಯಮಿಗಳಿಗೆ ನೆರವಾಗಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ ಚೇತನ್.

ಶ್ರೀಮಂತರ ಪರವಾದ ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿರುವ ಕೇಂದ್ರ ಸರ್ಕಾರದ ಬಜೆಟ್ – ಕುರುಬೂರು ಶಾಂತಕುಮಾರ್

ಕೇಂದ್ರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ರೈತಮುಖಂಡ  ಕುರುಬೂರು ಶಾಂತಕುಮಾರ್,  ರೈತರು ಒಂದು ವರ್ಷ ಹೋರಾಟ ಮಾಡಿ 700 ಜನ ಪ್ರಾಣಾರ್ಪಣೆ ಮಾಡಿದರು, ಗಂಭೀರವಾಗಿ ಪರಿಗಣಿಸದೆ ಕೇಂದ್ರ ಸರ್ಕಾರ ಈಗ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡದೆ, ಹಾಲಿ ಇರುವ ಎಂ ಎಸ್ ಪಿ ಅನುದಾನವನ್ನು ಕಡಿಮೆ ಮಾಡಿ ಬೆಂಬಲ ಬೆಲೆ ಪದ್ಧತಿಯನ್ನು ರದ್ದು ಮಾಡಲು ಯತ್ನಿಸುತ್ತಿರುವುದು ಕಂಡುಬರುತ್ತಿದೆ,

ಟ್ಯಾಕ್ಟರ್ ಪವರ್ ಟಿಲ್ಲರ್ ರಸಗೊಬ್ಬರ ಕೀಟನಾಶಕ ಮೇಲಿನ ಜಿಎಸ್ಟಿ ತೆರಿಗೆ ರದ್ದುಪಡಿಸುವಂತೆ ಕೋರಲಾಗಿತ್ತು  ಆದರೆ ಚಿನ್ನ  ವಜ್ರಾಭರಣಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿರುವುದು ಶ್ರೀಮಂತರ ಮೇಲಿನ ಕಾಳಜಿ ತೋರಿಸುತ್ತದೆ

ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಜಾರಿ, 2022 ಕೆ ರೈತರ ಆದಾಯ ದ್ವಿಗುಣ, ಎಂದು ಹೇಳಿ ರೈತರನ್ನು ಮೋಸಗೊಳಿಸಿ ಈಗ ಮತ್ತಷ್ಟು ಆಘಾತ ಗೊಳಿಸಿದೆ ಬಜೆಟ್ ನಲ್ಲಿ ಪ್ರಕಟಿಸಿರುವ ನದಿ ಜೋಡಣೆ ಸಿರಿಧಾನ್ಯಗಳಿಗೆ ಒತ್ತು ನೀಡುವ ಯೋಜನೆ ದೀರ್ಘಾವಧಿ ಕಾರ್ಯವಾಗಿದೆ ಇದರಿಂದ ಕರೋನಾ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣಕ್ಕೆ ಯಾವುದೇ ಅನುಕೂಲವಿಲ್ಲ ಇದು ನಿರಾಸೆಯ ಬಜೆಟ್ ಎಂದು ಟೀಕಿಸಿದ್ದಾರೆ.

ಬಡವರ ವಿರೋಧಿ ಬಜೆಟ್ – ಎಂಎಲ್ ಸಿ ದಿನೇಶ್ ಗೂಳಿಗೌಡ.

ಇನ್ನು ಎಂಎಲ್ ಸಿ ದಿನೇಶ್ ಗೂಳಿಗೌಡ ಅವರು ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ, ದ್ದು ಇದು ಬಡವರ ವಿರೋಧಿ ಬಜೆಟ್ ಎಂದು ಹೇಳಬಹುದಾಗಿದೆ. ಬಡವರಿಗೆ ಉದ್ಯೋಗ ನೀಡುವ ಮೂಲಕ ಬಡತನ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಪ್ರಾರಂಭವಾಗಿದ್ದ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಈ ಬಾರಿ 25 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಇಳಿಕೆ ಮಾಡಲಾಗಿದೆ. ಈ ಮೂಲಕ ಬಡವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಕೃಷಿ ಕ್ಷೇತ್ರದಲ್ಲೂ ಸಹ ಯಾವುದೇ ಮಹತ್ತರ ಘೋಷಣೆ ಕಂಡಿಲ್ಲ. ರೈತರಿಗೆ ಆಶಾದಾಯಕವಾದ, ಹೇಳಿಕೊಳ್ಳಬಹುದಾದ ಯಾವುದೇ ಕೊಡುಗೆ ಸಿಕ್ಕಿಲ್ಲ. 2022ರ ವೇಳೆಗೆ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿಕೊಳ್ಳುತ್ತಾ ಬಂದಿದ್ದ ಕೇಂದ್ರ ಸರ್ಕಾರದ ಘೋಷಣೆಗಳ ಸ್ಥಿತಿ ಏನಾಯಿತು ಎಂಬ ಬಗ್ಗೆ ಉತ್ತರಿಸಬೇಕಿದೆ. ಇನ್ನು ರಾಜ್ಯದಿಂದ 25 ಸಂಸದರನ್ನು ಕೊಟ್ಟಿರುವ ಕರ್ನಾಟಕಕ್ಕೆ ಯಾವುದೇ ರೀತಿಯ ವಿಶೇಷ ಕೊಡುಗೆ ನೀಡದಿರುವುದೂ ಸಹ ಅಕ್ಷಮ್ಯ. ಜನತೆ ಇದೆಲ್ಲವನ್ನು ಪ್ರಶ್ನೆ ಮಾಡುವ ದಿನ ದೂರವಿಲ್ಲ ಎಂದು ಹರಿಹಾಯ್ದರು.

ಇದೊಂದು ಹೊಸತನವಿಲ್ಲದ ಬಜೆಟ್- ಮೈಸೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ

ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಇದೊಂದು ಅವರೇಜ್ ಬಜೆಟ್. ಹೊಸತನವಿಲ್ಲದ ಬಜೆಟ್. ಯಾರಿಗೂ ಹೊರೆ ಅಲ್ಲ ಅನುಕೂಲವೂ ಅಲ್ಲ. ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಹೋಟೆಲ್ ಉದ್ಯಮಕ್ಕೆ ನೌಕರಿಗೆ ವಿಶೇಷ ಪ್ಯಾಕೆಜ್ ಘೋಷಣೆ, ಜಿಎಸ್ ಟಿ ವಿನಾಯಿತಿ ಬಗ್ಗೆ ನಿರೀಕ್ಷೆ  ಇತ್ತು. ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆ‌ ಇಲ್ಲ. ಬುಲೆಟ್ ಟ್ರೈನ್ , ಏರ್ ಪೋರ್ಟ್ ರನ್ ವೇ ವಿಸ್ತರಣೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಸಹಕಾರಿ ಕ್ಷೇತ್ರಕ್ಕೆ ಕೊಂಚ ಸಹಾಯ ಆಗಿದೆ. ಹೈವೇ ಅಭಿವೃದ್ಧಿ ಹಣ ನೀಡಿರುವುದು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ ಎಂದರು.

Key words: central budget- People –criticize